ಬಸವ ಪುತ್ಥಳಿ ಸ್ಥಾಪಿಸಲು ರಾಮನಗರ ನಗರಸಭೆಯಲ್ಲಿ ಮಹತ್ವದ ನಿರ್ಣಯ

ಬಸವ ಮೀಡಿಯಾ
ಬಸವ ಮೀಡಿಯಾ

ಮೇ 8 ಪುತ್ಥಳಿ ಅನಾವರಣ; ಮೊದಲ ಬಾರಿ ಬಸವ ಜಯಂತಿ

ರಾಮನಗರ

ರಾಮನಗರ ನಗರಸಭೆಯ ಆವರಣದಲ್ಲಿ ಮೇ 8 ಬಸವ ಜಯಂತಿಯ ಜೊತೆಗೆ ಬಸವಣ್ಣನವರ ಪುತ್ಥಳಿ ಅನಾವರಣಗೊಳಿಸಲು ನಿರ್ಧರಿಸಲಾಗಿದೆ.

ಗುರುವಾರ ಪುತ್ಥಳಿಗೆ ಗುದ್ದಲಿ ಪೂಜೆ ನಡೆಸಿದ ನಗರಸಭಾ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಲು ನಗರಸಭೆಯಿಂದ 5 ಲಕ್ಷ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಿರುವುದಾಗಿ ತಿಳಿಸಿದರು.

ಅದೇ ದಿನ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶೇಷಾದ್ರಿ ‘ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾತ್ಮ ಬಸವಣ್ಣನವರನ್ನು ನಿರಂತರವಾಗಿ ನೆನೆಯುವ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಬಸವಣ್ಣನವರು 12ನೇ ಶತಮಾನದಲ್ಲಿ ಕಟ್ಟಿದ ಅನುಭವ ಮಂಟಪವು ಎಲ್ಲಾ ಸಂಸತ್ತುಗಳ ತಾಯಿಯಾಗಿದೆ. ರಾಜರ ಆಳ್ವಿಕೆಯ ಕಾಲದಲ್ಲೇ ಎಲ್ಲಾ ಜಾತಿ ಮತ್ತು ವರ್ಗದವರನ್ನು ಒಳಗೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅನುಭವ ಮಂಟಪ ಕಾರ್ಯನಿರ್ವಹಿಸುತ್ತಿತ್ತು’ ಎಂದು ಬಣ್ಣಿಸಿದರು.

‘ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಪಕ್ಷ, ಜನಾಂಗದವವರು ಭಾಗವಹಿಸಿದ್ದರು. ಸಭೆ ಬಸವಣ್ಣನವರ ಸಮಸಮಾಜದ ಆಶಯದಂತೆ ನಡೆಯಿತು,’ ಎಂದು ರಾಮನಗರದ ಬಸವ ಕಾರ್ಯಕರ್ತ ಬಸಪ್ಪ ಹೇಳಿದರು.

ಕಾರ್ಯಕ್ರಮಕ್ಕೆ ತುಮಕೂರಿನ ಸಿದ್ದಗಂಗಾ ಮಠ, ಮೈಸೂರಿನ ಸುತ್ತೂರು ಮಠ ಹಾಗೂ ಬೇವೂರು ಮಠದ ಸ್ವಾಮೀಜಿಗಳ ಸೇರಿದಂತೆ ಹಲವಾರು ಗಣ್ಯರನ್ನು ಆಹ್ವಾನಿಸಲಾಗಿದೆ.

ಅಖಿಲ ಭಾರತ ವೀಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ ಮಾತನಾಡಿ, ಶೇಷಾದ್ರಿ ಎಲ್ಲಾ ಸಮುದಾಯಗಳನ್ನು ಕರೆದೊಯ್ಯುವ ನಾಯಕ. ಅವರ ನೇತೃತ್ವದಲ್ಲಿ ಬಸವಣ್ಣನವರ ಕಾರ್ಯಕ್ರಮ ನಡೆಯುತ್ತಿರುವುದು ಖುಷಿ ತಂದಿದೆ. ಬಸವಣ್ಣ ಯಾವುದೇ ವರ್ಗಕ್ಕೆ ಸೀಮಿತವಲ್ಲ. ಅವರು ಪ್ರಪಂಚದ ಆಸ್ತಿ,’ ಎಂದರು.

‘ಬಸವ ಜಯಂತಿ ಜೊತೆಗೆ ನಗರಸಭೆ ಆವರಣದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪಿಸುವ ಶಶಿ ಅವರ ನಿರ್ಧಾರವು ಐತಿಹಾಸಿಕವಾದುದು. ಕಾರ್ಯಕ್ರಮದ ಯಶಸ್ಸಿಗೆ ನಾವೆಲ್ಲರೂ ಶ್ರಮಿಸುತ್ತೇವೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಪೋಲೀಸ್ ಶಂಕರಪ್ಪ, ಮುಖಂಡರಾದ ರಾಜಶೇಖರ್, ವಿದ್ವಾನ್ ಚಂದ್ರಶೇಖರ್ ಹಾಗೂ ಇತರರು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯಕುಮಾರಿ, ಬಿ.ಸಿ. ಪಾರ್ವತಮ್ಮ, ಅಸ್ಮತ್‌ಉಲ್ಲಾಖಾನ್, ನಾಗಮ್ಮ, ಪೌರಾಯುಕ್ತ ಡಾ. ಜಯಣ್ಣ, ಮುಖಂಡರಾದ ಎಂ.ಆರ್. ಶಿವಕುಮಾರ ಸ್ವಾಮಿ, ರಾಜಶೇಖರ್, ಚಿಕ್ಕೇನಹಳ್ಳಿ ನಾಗರಾಜು, ಗುರುವೇಗೌಡ, ಎ.ಜೆ. ಸುರೇಶ್, ವಿಜಯ್ ಕುಮಾರ್ ಹಾಗೂ ಇತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *