ತೋಂಟದಾರ್ಯ ಸಂಸ್ಥೆಗಳು ಬಡ ವಿದ್ಯಾರ್ಥಿಗಳಿಗೆ ವರದಾನ: ಪ್ರೊ. ಎಸ್.ಎಸ್ ಪಟ್ಟಣಶೆಟ್ಟಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಗದಗ ಶ್ರೀಮಠಕ್ಕೆ ಆಗಮಿಸಿದಾಗ ಶ್ರೀಮಠದ ಹೆಸರಿನಲ್ಲಿ ಕೇವಲ ಒಂದೇ ಒಂದು ಸಂಸ್ಕೃತ ಪಾಠಶಾಲೆ ಇತ್ತು. ಇಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಶ್ರೀಮಠದಿಂದ ನಡೆಯುತ್ತಿದ್ದು ಇದಕ್ಕೆಲ್ಲ ಲಿಂಗೈಕ್ಯ ಗುರುಗಳ ಪ್ರೇರಣೆ ಹಾಗೂ ಮಾರ್ಗದರ್ಶನ ಕಾರಣ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪ್ರೊ.ಎಸ್.ಎಸ್ ಪಟ್ಟಣಶೆಟ್ಟರ ನುಡಿದರು.

ಅವರು ಇತ್ತೀಚೆಗೆ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ತೋಂಟದಾರ್ಯ ಮಠದಲ್ಲಿ ಜರುಗಿದ ೨೭೦೯ನೆಯ ಶಿವಾನುಭವ ಕಾರ್ಯಕ್ರಮದಲ್ಲಿ ` ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿಕ್ಷಣ ಕೊಡುಗೆ’ ವಿಷಯ ಕುರಿತು ಉಪನ್ಯಾಸ ನೀಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಉನ್ನತ ಶಿಕ್ಷಣ ಅದರಲ್ಲೂ ಐ.ಟಿ.ಐನಂಥ ವೃತ್ತಿಪರ ತಾಂತ್ರಿಕ ಮಹಾವಿದ್ಯಾಲಯಗಳು ಸ್ಥಾಪನೆಯಾಗಬೇಕು ಎಂಬುದು ಲಿಂಗೈಕ್ಯ ಗುರುಗಳ ಕನಸಾಗಿತ್ತು, ಸದ್ಯ ತೋಂಟದಾರ್ಯ ಮಠದಿಂದ ಅನೇಕ ಐಟಿಐ ಕಾಲೇಜುಗಳು ನಡೆಯುತ್ತಿದ್ದು ಸಾವಿರಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟಿವೆ.

ಕಾಲದ ಅಗತ್ಯತೆಗೆ ತಕ್ಕಹಾಗೆ ಲಿಂಗೈಕ್ಯ ಗುರುಗಳ ಪ್ರಭಾವವನ್ನು ಬಳಸಿಕೊಂಡು ತೋಂಟದಾರ್ಯ ವಿದ್ಯಾಪೀಠದಿಂದ ಡಿಪ್ಲೋಮಾ, ಪ್ರಾಥಮಿಕ, ಪ್ರೌಢ ಶಾಲೆಗಳು, ಪದವಿ ಪೂರ್ವ, ಪದವಿ ಮಹಾವಿದ್ಯಾಲಯಗಳು, ಇಂಜೀನಿಯರಿಂಗ್, ಆಯುರ್ವೇದಿಕ್, ಶಿಕ್ಷಣ ಮಹಾವಿದ್ಯಾಲಯಗಳು, ಸಿ.ಬಿ.ಎಸ್.ಸಿ ವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಯಿತು.

ನಮ್ಮ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಬಸವಾದಿ ಶರಣರ ಅಥವಾ ನಾಡಿಗೆ ಅದ್ವಿತೀಯ ಕೊಡುಗೆ ನೀಡಿದ ಪುಣ್ಯಪುರುಷರ ಹೆಸರನ್ನೇ ನಾಮಕರಣ ಮಾಡಲು ಶ್ರೀಗಳು ಆದೇಶಿಸುತ್ತಿದ್ದರೇ ವಿನ: ತಮ್ಮ ಹೆಸರನ್ನು ನಾಮಕರಣ ಮಾಡುವ ನಮ್ಮ ಕೋರಿಕೆಗೆ ಎಂದಿಗೂ ಒಪ್ಪಿಗೆ ನೀಡುತ್ತಿರಲಿಲ್ಲ. ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರ ಕುರಿತು ಅಪಾರ ಅಭಿಮಾನ ಹೊಂದಿದ್ದ ಶ್ರೀಗಳು ಅವರ ಹೆಸರಲ್ಲಿದ್ದ ಏಕೈಕ ಟ್ರಸ್ಟನ್ನು ಎಸ್.ನಿಜಲಿಂಗಪ್ಪನವರಿಂದ ತಮ್ಮ ಸುಪರ್ದಿಗೆ ತೆಗೆದುಕೊಂಡರು, ಆಲಮಟ್ಟಿ ಜಲಾಶಯದಿಂದ ಮಂಜಪ್ಪನವರ ಸಮಾಧಿ ಸ್ಥಳಾಂತರ ಸ್ಮಾರಕಭವನ ನಿರ್ಮಾಣ ಅವರ ಹಾಗೂ ವಚನಪಿತಾಮಹ ಫ.ಗು.ಹಳಕಟ್ಟಿಯವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮೂಲಕ ಆ ಮಹಾತ್ಮರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ನೋಡಿಕೊಂಡರು.

ಇಂದು ತೋಂಟದಾರ್ಯ ವಿದ್ಯಾಪೀಠದಿಂದ ನಾಡಿನ ವಿವಿಧ ಭಾಗಗಳಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸುಮಾರು ಎರಡು ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ತೋಂಟದಾರ್ಯ ವಿದ್ಯಾಪೀಠದ ಕಾಲೇಜುಗಳಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಸ್ರೋ ಮುಂತಾದ ಪ್ರಸಿದ್ಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

‘ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಪರ್ಯಂತ ಶಿವಶರಣೆಯರ ವಚನಾನುಭಾವ’ ಈ ವಿಷಯವಾಗಿ ಶರಣೆ ಗಿರಿಜಕ್ಕ ಧರ್ಮರಡ್ಡಿಯವರ ಪ್ರವಚನ ಮಂಗಲೋತ್ಸವದೊಂದಿಗೆ ಸಂಪನ್ನವಾಯಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕುಮಾರಿ ಶ್ರದ್ದಾ ಎಸ್ ಹೂಲಿ ಧರ್ಮ ಗ್ರಂಥ ಪಠಣ, ಕುಮಾರಿ ಶ್ರೇಯಾ ಬಿ ಜಾಲಿಹಾಳ ವಚನ ಚಿಂತನ ನಡೆಸಿಕೊಟ್ಟರು.

ದಾಸೋಹ ಸೇವೆಯನ್ನು ಕಾರಟಗಿಯ ಶರಣ ಕೆ. ಸಣ್ಣಸೂಗಪ್ಪನವರು ಹಾಗೂ ಪರಿವಾರ ಮತ್ತು ಡಂಬಳದ ಶರಣ ಬಸವರಾಜ ಗಣಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಅವರ ಪರಿವಾರದವರು ವಹಿಸಿಕೊಂಡಿದ್ದರು.
ಸಂಗೀತ ಸೇವೆಯನ್ನು ಶ್ರಿ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನೆರವೇರಿಸಿದರು. ಶ್ರೀಮತಿ ವಿದ್ಯಾವತಿ ಪ್ರಭು ಗಂಜಿಹಾಳ ರವರು ಸ್ವಾಗತಿಸಿದರು. ಐ.ಬಿ. ಬೆನಕೊಪ್ಪ ಕಾರ್ಯಕ್ರಮ ನಿರೂಪಿಸಿದರು.
ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿ ಚೇರಮನ್‌ರಾದ ಐ.ಬಿ. ಬೆನಕೊಪ್ಪ, ಶಿವಾನುಭವ ಸಮಿತಿ ಸಹಚೇರಮನ್‌ರಾದ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *