ತುಮಕೂರು ವಿವಿಯಲ್ಲಿ ಲಿಂಗಾಯತ ನೊಳಂಬ ಸಂಸ್ಕೃತಿ ಅಧ್ಯಯನ ಪೀಠ ಉದ್ಘಾಟನೆ

ತುಮಕೂರು :

ನೊಳಂಬ ಲಿಂಗಾಯತರ ಸಂಸ್ಕೃತಿ, ಇತಿಹಾಸ, ಸಾಹಿತ್ಯ ಮತ್ತು ಸಮುದಾಯದ ಬಗ್ಗೆ ಸಮಗ್ರ ಅಧ್ಯಯನ ನಡೆಸುವ ಸಲುವಾಗಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನೊಳಂಬ ಸಂಸ್ಕೃತಿ ಅಧ್ಯಯನ ಪೀಠವನ್ನು ಗುರುವಾರ ಉದ್ಘಾಟಿಸಲಾಯಿತು.

ಬೆಂಗಳೂರಿನ ನೊಳಂಬ ಲಿಂಗಾಯತ ಸಂಘದ ಮೂಲಕ ಪೀಠ ಸ್ಥಾಪಿಸಲಾಗಿದ್ದು, ನೊಳಂಬ ಲಿಂಗಾಯತ ಸಮುದಾಯದ ಶಾಸಕರು, ಮಾಜಿ ಮಂತ್ರಿಗಳು, ಮಾಜಿ ಸಂಸದರು, ಸಮುದಾಯದ ಮುಖಂಡರು ರಾಜ್ಯಾದಂತ ಆಗಮಿಸಿದ್ದ ಜನಾಂಗದವರು ಇದಕ್ಕೆ ಸಾಕ್ಷಿಯಾದರು.

ಉದ್ಘಾಟನೆಯ ನಂತರ ನೊಳಂಬ ಸಂಸ್ಕೃತಿ ಸಂಪದ ವಿಚಾರ ಸಂಕಿರಣ ನಡೆದು ಆ ಮೂಲಕ ಸಮುದಾಯದ ಬಗ್ಗೆ ಚಿಂತನೆ, ಇತಿಹಾಸ, ಸಂಸ್ಕೃತಿಯ ಕುರಿತು ಇತಿಹಾಸ ತಜ್ಞರಿಂದ ಪ್ರಬಂಧ ಮಂಡನೆ ನಡೆಯಿತು.

ಅಧ್ಯಯನ ಪೀಠದ ಪ್ರೇರಣಾ ಲಾಂಛನ ಬಿಡುಗಡೆ ಮಾಡಿ ಮಾಜಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಯಾರನ್ನೂ ದ್ವೇಷಿಸಲು ಸಂಘ ಮತ್ತು ಪೀಠವನ್ನು ಆರಂಭಿಸಿಲ್ಲ. ಲಿಂಗಾಯತ ಧರ್ಮ ಹಾಗೂ ಸಮಾಜಕ್ಕೆ ಶಕ್ತಿ ತುಂಬುವ ಉದ್ದೇಶ ಹೊಂದಲಾಗಿದೆ. ವಿವಿಧ ಕವಲುಗಳಾಗಿರುವ ಸಮುದಾಯ ಒಗ್ಗೂಡಿ ಬಂದು ಶಕ್ತಿಯಾಗಿ ರೂಪುಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ನೊಳಂಬರ ಇತಿಹಾಸವನ್ನು ಕೇವಲ ಕಥೆಯಾಗಿ ಕೇಳಿ, ಹೇಳುವ ಬದಲು ಇಂದಿನ ಪೀಳಿಗೆಗೆ ಅನುಗುಣವಾಗಿ ಸಂಶೋಧನೆ ನಡೆಯಬೇಕು. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿಚಾರ ಸಂಕಿರಣ, ಸಂಶೋಧನಾ ಕಾರ‍್ಯಗಳ ಮೂಲಕ ಪೀಠಕ್ಕೆ ಮೀಸಲಿಟ್ಟ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಪೀಠದಿಂದ ಆರ್ಥಿಕ ನೆರವು ನೀಡಬೇಕು. ಇತಿಹಾಸವನ್ನು ಪುನರುತ್ಥಾನ ಮಾಡಬೇಕು. ಪ್ರಚಾರೋಪನ್ಯಾಸ ಮಾಲೆ ಹಮ್ಮಿಕೊಂಡು ದಾನಿಗಳ ಸಹಕಾರವನ್ನು ಪಡೆದು ಲಘು ಕೃತಿಗಳನ್ನು ಪ್ರಕಟಿಸಬೇಕು. ಇವೆಲ್ಲ ಪೀಠದ ಗುರಿಯಾಗಬೇಕೆಂದು ಸಲಹೆ ನೀಡಿದರು.

ತುಮಕೂರು ವಿಶ್ವವಿದ್ಯಾನಿಲಯವೇನೂ ಸ್ವಯಂಪ್ರೇರಿತವಾಗಿ ಪೀಠ ಆರಂಭಿಸಲಿಲ್ಲ. ನೊಳಂಬ ಇತಿಹಾಸದ ಬಗ್ಗೆ ಅಧ್ಯಯನ ನಡೆಸಿ ಸಂಶೋಧನೆ ಮಾಡಿರುವ ಇತಿಹಾಸ ತಜ್ಞರಾದ ಡಾ. ಡಿ.ವಿ. ಪರಮಶಿವಮೂರ್ತಿ ಮತ್ತು ಡಾ. ಡಿ.ಎನ್. ಯೋಗೀಶ್ವರಪ್ಪ ಅವರಂತಹ ಶಿಕ್ಷಣತಜ್ಞರ ಕಾಳಜಿಯ ಫಲವಾಗಿ ಮತ್ತು ಸುನಿಲ್ ಪ್ರಸಾದ ಹಾಗೂ ನೊಳಂಬ ಸಂಘದವರ ಶ್ರಮಸಹಿತ ಎಲ್ಲರೂ ಒಟ್ಟುಗೂಡಿ ವಿಶ್ವವಿದ್ಯಾನಿಲಯದ ನಿಯಮಗಳಿಗೆ ಅನುಗುಣವಾಗಿ ನಿಧಿಯನ್ನು ಸ್ಥಾಪಿಸುವುದರ ಮೂಲಕ ಪೀಠವನ್ನು ಸ್ಥಾಪಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ತಿಪಟೂರಿನ ಶಾಸಕರಾದ ಕೆ. ಷಡಕ್ಷರಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ನೊಳಂಬ ಸಮುದಾಯದ ಇತಿಹಾಸದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯ ಜರೂರಾಗಿ ನಡೆಯಬೇಕು. ನೊಳಂಬ ಲಿಂಗಾಯತರಿಗೆ ತಮ್ಮ ಗತವೈಭವದ ಬಗ್ಗೆ ಅರಿವೇ ಇಲ್ಲದಿರುವುದು ವಿಷಾಧನೀಯ ಎಂದರು.

ಸಂಶೋಧನೆಗಳು ಬೆಳಕಿಗೆ ಬರಬೇಕು. ಸಂಶೋಧನೆಯ ಫಲಿತಾಂಶಗಳನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಬಳಸಿಕೊಳ್ಳಬೇಕು. ನೊಳಂಬ ಸಮುದಾಯವು ಸುಮಾರು ೩೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಬಲಿಷ್ಟ ಸಮುದಾಯವಾಗಿದೆ. ಈ ಸಮುದಾಯದಿಂದ ಹಿಂದೆ ಟಿ.ಎಂ. ಮಂಜುನಾಥ ಅವರು ಪ್ರಮುಖ ಮಂತ್ರಿಯಾಗಿದ್ದರು. ನಂತರ ಮಾಧುಸ್ವಾಮಿಯವರು ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದರೂ ಅವರು ಸಮಾಜಕ್ಕೆ ಕೊಡುಗೆ ನೀಡುವುದು ಮುಖ್ಯ ಎಂದರು.

ವಿಶ್ವವಿದ್ಯಾನಿಲಯದ ಉತ್ತಮ ಪರಿಸರದಲ್ಲಿ ಅರ್ಥಪೂರ್ಣ ಕಾರ‍್ಯಕ್ರಮಗಳು ಜರುಗುತ್ತಿರುವುದನ್ನು ಕಂಡು ಸಂತೋಷವಾಗಿದೆ ಎಂದ ಅವರು, ನೊಳಂಬ ಸಂಸ್ಕೃತಿ ಅಧ್ಯಯನ ಪೀಠಕ್ಕೆ ಐದು ಲಕ್ಷ ರೂಗಳ ದೇಣಿಗೆ ನೀಡುವುದಾಗಿ ಘೋಷಿಸಿದರು.

ತುಮಕೂರು ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ ಮಾತನಾಡಿ, ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗಾಗಿ ದಾಖಲಿಸುವ ಸಲುವಾಗಿ ಪುಸ್ತಕಗಳನ್ನು ಪ್ರಕಟಿಸುವ ಮೂಲಕವಲ್ಲದೆ ಆ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಅತ್ಯಗತ್ಯವಿದೆ.

ನೊಳಂಬರು ಕಲಾಪ್ರವೀಣರಾಗಿದ್ದು ಆ ಕಾಲದ ದೇವಾಲಯಗಳು, ಶಿಲ್ಪಗಳು, ಶಾಸನಗಳು ಹಾಳಾಗುವ ಹಂತ ತಲುಪಿದ್ದು ಅವುಗಳ ಸಂರಕ್ಷಣೆ ಆಗಬೇಕಾಗಿದೆ. ಅವುಗಳ ಛಾಯಾ ಚಿತ್ರಗಳನ್ನು ತೆಗೆದು ಅವುಗಳ ಪ್ರದರ್ಶನವನ್ನು ಏರ್ಪಡಿಸಬೇಕು. ಈ ಕಾರ‍್ಯಗಳನ್ನು ಕೈಗೆತ್ತಿಕೊಂಡು ನೊಳಂಬ ಅಧ್ಯಯನ ಪೀಠ ಕೆಲಸ ಮಾಡಬೇಕು. ಈ ಕಾರ‍್ಯಕ್ಕಾಗಿ ಐದು ಲಕ್ಷ ರೂಗಳನ್ನು ಪೀಠಕ್ಕೆ ದೇಣಿಗೆಯಾಗಿ ನೀಡುತ್ತೇನೆ ಎಂದು ಘೋಷಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಹಂಪಿ ಕನ್ನಡ ವಿ.ವಿ. ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ, ಅಧ್ಯಯನ ಪೀಠಗಳು ಕಾಲಕಾಲಕ್ಕೆ ವಿಶೇಷ ಉಪನ್ಯಾಸಗಳನ್ನು ತಜ್ಞರಿಂದ ಏರ್ಪಡಿಸಿ, ನೊಳಂಬರ ಕಾಲದ ಕೃಷಿ, ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಅಧ್ಯಯನ ನಡೆಯಬೇಕು. ತುಮಕೂರು ವಿ.ವಿ.ಯಲ್ಲಿ ನೊಳಂಬ ಅಧ್ಯಯನ ಪೀಠ ಸ್ಥಾಪಿತವಾಗಿರುವುದು ಐತಿಹಾಸಿಕ ಸಂಗತಿಯಾಗಿದ್ದು, ಚಾರಿತ್ರಿಕ ಹಿನ್ನೆಲೆಯಲ್ಲಿ ಈ ಸಮುದಾಯದ ಕಾಲಗರ್ಭದಲ್ಲಿ ಹುದುಗಿ ಹೋಗಿರುವ ಸತ್ಯ ಸಂಗತಿಗಳನ್ನು ಹೊರ ತೆಗೆಯುವ ಕಾರ‍್ಯವಾಗಬೇಕು.

ಏಳು ವರ್ಷಗಳ ಪ್ರಯತ್ನ ಇಂದು ಕಾರ‍್ಯರೂಪಕ್ಕೆ ಬಂದಿದೆ. ಕೇವಲ ತೋಳ್ಬಲ, ಕೃಷಿ ಕಾರ್ಯದಿಂದ ರಾಜ್ಯ ಕಟ್ಟಿದ ಯಾವುದಾದರೂ ಸಮುದಾಯವೊಂದಿದ್ದರೆ ಅದು ನೊಳಂಬ ಸಮುದಾಯ ಮಾತ್ರ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ ವಿ.ವಿ. ಕುಲಪತಿಗಳಾದ ವೆಂಕಟೇಶ್ವರ ಅವರು ಮಾತನಾಡಿ, ೨೦೨೨ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೀಠ ಸ್ಥಾಪನೆಗೆ ೫ ಕೋಟಿ ರೂಪಾಯಿ ಅನುದಾನ ಘೋಷಿಸಿದ್ದರು, ತಾಂತ್ರಿಕ ಕಾರಣಗಳಿಂದ ಹಣ ಬರಲಿಲ್ಲ. ಆದರೆ ಈಗ ಉದ್ದೇಶ ಸಾಕಾರಗೊಂಡಿದೆ ಎಂದ ಅವರು ನೊಳಂಬ ಸಮುದಾಯದ ಮುಖಂಡರು ೨೬ ಲಕ್ಷ ರೂ ದೇಣಿಗೆ ಸಂಗ್ರಹಿಸಿ ನೀಡಿದ್ದಾರೆ. ವಿಶ್ವವಿದ್ಯಾನಿಲಯವು ೧೫ ಲಕ್ಷ ನೀಡಿ ಒಟ್ಟು ೪೧ ಲಕ್ಷ ನಿಧಿಯೊಂದಿಗೆ ಈ ಪೀಠ ಕಾರ‍್ಯಾರಂಭ ಮಾಡಿದೆ.

ಶಾಸಕರಾದ ಷಡಕ್ಷರಿ ಕೆ. ಮತ್ತು ಜಿ.ಬಿ. ಜ್ಯೋತಿಗಣೇಶ ಅವರು ತಲಾ ಐದು ಲಕ್ಷ ರೂ. ದೇಣಿಗೆ ನೀಡುತ್ತೇವೆಂದು ಭರವಸೆ ನೀಡಿರುವುದರಿಂದ ಒಟ್ಟು ೫೧ ಲಕ್ಷ ರೂ.ಗಳಿಗೆ ನಿಧಿ ಏರಿಕೆ ಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನೊಳಂಬ ಲಿಂಗಾಯತ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಆರ್. ಪಾಟೀಲ, ಬೇಲೂರು ತಾಲ್ಲೂಕು ಮಾಜಿ ವಿಧಾನಸಭಾ ಸದಸ್ಯರಾದ ಲಿಂಗೇಶ ಉಪಸ್ಥಿತರಿದ್ದರು. ನೊಳಂಬ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ನೀಲಕಂಠ ಎನ್.ಟಿ. ಸ್ವಾಗತಿಸಿದರು. ಪೀಠದ ಸಲಹಾ ಸಮಿತಿ ಸದಸ್ಯ ಸುನೀಲ ಪ್ರಸಾದ ಎಸ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷರಾದ ಬಿ.ಕೆ. ಚಂದ್ರಶೇಖರ ವಂದಿಸಿದರು. ರವೀಂದ್ರಕುಮಾರ ಬಿ. ನಿರೂಪಿಸಿದರು.

ನಂತರ ಇತಿಹಾಸ ಸಂಶೋಧಕ ಡಾ. ಡಿ ಎನ್ ಯೋಗೀಶ್ವರಪ್ಪ ನವರ ಅಧ್ಯಕ್ಷತೆಯಲ್ಲಿ ಜರುಗಿದ ಮೊದಲನೇ ಗೋಷ್ಟಿಯಲ್ಲಿ ಡಾ. ಪವನಕುಮಾರ್ ಮೌರ್ಯ ನೊಳಂಬರ ಪ್ರಾಚೀನ ಇತಿಹಾಸ ಕುರಿತು ಮತ್ತು ಡಾ. ಸುಂಕಾ ಗೋವರ್ದನ ಅವರು ನೊಳಂಬರ ಕಲೆ ಮತು ವಾಸ್ತುಶಿಲ್ಪ ಕುರಿತು ಪ್ರಬಂಧ ಮಂಡಿಸಿದರು.

ಎರಡನೇ ಗೋಷ್ಟಿಯಲ್ಲಿ ಡಾ.ಸಿ. ಜಿ. ಶಿವಕುಮಾರ ನೊಳಂಬರ ಆಚರಣೆಗಳ ವೈಶಿಷ್ಟತೆ ಕುರಿತು ಮತ್ತು ಸಾಗರದ ನಟರಾಜ್ ಅವರು ಆಧುನಿಕ ಕಾಲದ ನೊಳಂಬರ ಸಾಧನೆಗಳ ಕುರಿತು ಪ್ರಬಂಧ ಮಂಡಿಸಿದರು. ಡಾ. ಎಲ್.ಪಿ. ರಾಜು ಅಧ್ಯಕ್ಷತೆ ವಹಿಸಿದ್ದರು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಎಂ.ಪಿ. ಪ್ರಸನ್ನಕುಮಾರ, ನರಸಿಂಹಮೂರ್ತಿ ಕೆ.ಜಿ, ಶಶಿಧರ ಬಿ. ಕುಬೇರಪ್ಪ ಭಾಗವಹಿಸಿದ್ದರು.

ಪ್ರೊ. ಎಂ. ಕೋಟ್ರೇಶ ಸಮಾರೋಪ ನುಡಿಗಳನ್ನಾಡಿದರು. ಕುಲಸಚಿವರಾದ ಪ್ರೊ. ಮೋಹನ್ ಹೆಚ್.ಎಸ್. ಅಧ್ಯಕ್ಷತೆ ವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *