‘ಇವ ನಮ್ಮವ’ ವಚನ ಕಾರುಣ್ಯ ವೃದ್ಧಾಶ್ರಮದ ಸ್ಥಾಪನೆಗೆ ಪ್ರೇರಣೆ: ಚನ್ನಬಸವ ಹಿರೇಮಠ

ಸಿಂಧನೂರು :

ಇವ ನಮ್ಮವ ಇವ ನಮ್ಮವ ಬಸವಣ್ಣನವರ ಈ ವಚನವೇ ಕಾರುಣ್ಯ ವೃದ್ಧಾಶ್ರಮದ ಸ್ಥಾಪನೆಗೆ ಪ್ರೇರಣೆಯಾಗಿದೆ ಎಂದು ನಗರದ ಕಾರುಣ್ಯ ವೃದ್ಧಾಶ್ರಮದ ಸಂಸ್ಥಾಪಕ ಹಾಗೂ ಆಡಳಿತಾಧಿಕಾರಿ ಚೆನ್ನಬಸವ ಹಿರೇಮಠ, ಹರಟನೂರ ಹೇಳಿದರು.

ಅಮರೇಶ ಹಾಗೂ ಸಿದ್ದಲಿಂಗಮ್ಮ ಹಡಪದ ಶರಣ ದಂಪತಿ ತಮ್ಮ 15ನೆಯ ವಾರ್ಷಿಕ ಕಲ್ಯಾಣ ಮಹೋತ್ಸವವನ್ನು ಕಾರುಣ್ಯ ವೃದ್ಧಾಶ್ರಮದಲ್ಲಿ ಆಚರಿಸಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅವರು ಮುಂದುವರೆದು ಮಾತನಾಡುತ್ತಾ, ವಿಶ್ವಗುರು ಬಸವಣ್ಣನವರು ವಿಶ್ವ ಕುಟುಂಬ ಪರಿಕಲ್ಪನೆಯನ್ನು ಹೊಂದಿದವರಾಗಿದ್ದರು. ಹಡಪದ, ಮಡಿವಾಳ, ಕಮ್ಮಾರ, ಕುಂಬಾರ ಮುಂತಾದವರು ರೈತರಿಂದ ಆಯಾ ಅಂದರೆ ಬೆಳೆದ ದವಸ ಧಾನ್ಯಗಳನ್ನು ರಾಶಿ ಮಾಡುವಾಗಲೇ ತೆಗೆದುಕೊಂಡು ಹೋಗಿ ಜೀವಿಸುತ್ತಿದ್ದರು. ಹಾಗೆಯೇ ನಮ್ಮ ಜಂಗಮ ಸಮಾಜ ರೈತರಿಂದ ಆಯವನ್ನು ದಾನವಾಗಿ ಸ್ವೀಕರಿಸಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದರು. ಜಂಗಮ ಪದ ಜಾತಿಸೂಚಕ ಪದವಲ್ಲ ಅದು ಸಮಾಜದ ಪರಿವರ್ತನೆಗೆ ತಮ್ಮನ್ನು ತಾವು ತೊಡಗಿಸಿಕೊಂಡ ಯಾವುದೇ ವ್ಯಕ್ತಿಗೆ ಅನ್ವಯಿಸಬಹುದು ಎಂದರು.

ನಾನು ಬಸವಾದಿ ಶರಣರ ವಿಚಾರಗಳನ್ನು ಸ್ವಲ್ಪ ಮಟ್ಟಿಗಾದರೂ ಪಾಲಿಸಬೇಕು. ಬಸವ ತಂದೆ ಹೇಳಿದಂತೆ ಇವ ನಾರವ ಇವ ನಾರವ ಎನ್ನದೆ ಇವ ನಮ್ಮವ ಇವ ನಮ್ಮವ ಎಂದು, ಕುಟುಂಬದಿಂದ ಸಮಾಜದಿಂದ ತಾತ್ಸರಕ್ಕೆ ಒಳಗಾದ ಹಿರಿಯ ಜೀವಿಗಳನ್ನು ಅಪ್ಪಿಕೊಂಡು ಅವರಿಗೆ ಬಸವ ಪ್ರೀತಿಯನ್ನು ತೋರಿಸಬೇಕೆಂಬ ಉದ್ದೇಶ ಇಟ್ಟುಕೊಂಡು ಈ ಕಾರುಣ್ಯ ವೃದ್ಧಾಶ್ರಮವನ್ನು ಆರಂಭಿಸಿದ್ದೇನೆ ಎಂದರು.

ನಾವು ಎಂತಹ ಅಧಿಕಾರಿಗಳೇ ಆಗಿರಲಿ, ರಾಜಕಾರಣಿಗಳೇ ಆಗಿರಲಿ, ವ್ಯಾಪಾರಿಯೇ ಆಗಿರಲಿ ಮೊದಲು ಮಾನವೀಯತೆಯನ್ನು ಹೊಂದಿರಬೇಕು. ಮನುಷ್ಯರನ್ನು ಪ್ರೀತಿಸುವ ಗುಣವನ್ನು ಹೊಂದಬೇಕು.

ನಾನು ಕೇಳುವುದು ಇಷ್ಟೇ ನಮ್ಮ ಆಶ್ರಮಕ್ಕೆ ನೀವು ಹಣ್ಣು, ಹಣ, ದವಸಧಾನ್ಯ ಏನೇ ಕೊಡಿ, ಆದರೆ ನಿಮ್ಮ ಮನೆಯ ಹಿರಿಯ ಜೀವಿಗಳನ್ನು ನನಗೆ ಕೊಡಬೇಡಿ. ನಿಮ್ಮ ಮನೆಯ ಹಿರಿಯ ಜೀವಿಗಳು ನಿಮ್ಮಿಂದ ಬಯಸುವುದು ಪ್ರೀತಿ, ಮಮತೆ, ಅನುಕಂಪ ಒಂದಿಷ್ಟು ಶುಚಿ ರುಚಿಯಾದ ಆಹಾರ. ಇಷ್ಟನ್ನು ಬಿಟ್ಟು ಅವರು ಬೇರೆ ಏನನ್ನು ಕೇಳರು.

ತೀರಾ ಅನಿವಾರ್ಯ ಹಾಗೂ ಅನಾಥ ಹಿರಿಯ ಜೀವಿಗಳು ಮಾತ್ರ ನಮ್ಮ ಆಶ್ರಮವನ್ನು ಸೇರಿಕೊಳ್ಳಲಿ. ಅವರನ್ನು ನೋಡಿಕೊಳ್ಳುವ, ಉಪಚರಿಸುವ ಶಕ್ತಿಯನ್ನು ಬಸವಾದಿ ಶರಣರು ನನಗೆ ಕೊಡಲಿ ಎಂದರು. ನಾಡಿನಲ್ಲಿ ವೃದ್ಧಾಶ್ರಮಗಳು ಹೆಚ್ಚುವುದು ಅಭಿವೃದ್ಧಿಯ, ಪ್ರಗತಿಯ ಸಂಕೇತವಲ್ಲ. ಬದಲಾಗಿ ಮಾನವೀಯತೆಯ ಅದೋಗತಿ ಸಂಕೇತ ಎಂದು ನುಡಿದರು.

ಕಾರ್ಯಕ್ರಮದ ಅತಿಥಿಗಳಾಗಿದ್ದ ಸಾವಿತ್ರಮ್ಮ ಬಾದರ್ಲಿ ಅವರು ಮಾತನಾಡುತ್ತಾ, ಹಿರಿಯರು ಮನೆಗೆ ಭಾರ ಅಂದುಕೊಂಡಿರುವ ಈ ಕಾಲದಲ್ಲಿ 64 ಜನ ವಯೋವೃದ್ಧರು, ಮನೋವಿಕಲರನ್ನ ಚೆನ್ನಬಸವ ಹಿರೇಮಠ ಹಾಗೂ ಸುಜಾತ ಹಿರೇಮಠ ದಂಪತಿ ಮುತುವರ್ಜಿಯಿಂದ ನೋಡಿಕೊಳ್ಳುತ್ತಿರುವುದು ಸಮಾಜಕ್ಕೆ ಬಹುದೊಡ್ಡ ಮಾದರಿ. ಹಾಗೆಯೇ ಅಮರೇಶ ಹಾಗೂ ಸಿದ್ದಲಿಂಗಮ್ಮ ಶರಣ ದಂಪತಿಗಳು 15 ವರ್ಷಗಳ ದಾಂಪತ್ಯ ಜೀವನವನ್ನು ಪೂರೈಸಿ ಕಾಯಕ ದಾಸೋಹ ಮತ್ತು ಇಂತಹ ಅನುಭಾವದ ಕಾರ್ಯಕ್ರಮವನ್ನು ಈ ಆಶ್ರಮದಲ್ಲಿ ಹಮ್ಮಿಕೊಂಡಿರುವುದು ಅತ್ಯಂತ ಸಂತೋಷವೆನಿಸುತ್ತದೆ.

ನಮ್ಮ ಶರಣರು ಸಾಂಸಾರಿಕ ಬದುಕಿಗೆ ವಿಶೇಷವಾದ ಪ್ರಾಧಾನ್ಯತೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ. ನಮಗೆ ಧಾರವಾಹಿ ಚಲನಚಿತ್ರದ ಅಥವಾ ಕಾದಂಬರಿಗಳ ಗಂಡ ಹೆಂಡತಿ, ಪ್ರೇಮಿಗಳು ಆದರ್ಶವಾಗಬಾರದು. ಅದಕ್ಕೆ ಬದಲಾಗಿ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ತಾಯಿ, ಸಮಗಾರ ಹರಳಯ್ಯ ಮತ್ತು ಕಲ್ಯಾಣಮ್ಮ ತಾಯಿ, ಜೇಡರ ದಾಸಿಮಯ್ಯ ಮತ್ತು ದುಗ್ಗಳೆ, ಅಪ್ಪ ಬಸವ ತಂದೆ ಹಾಗೂ ನೀಲಾಂಬಿಕೆ ತಾಯಿ, ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹದೇವಿ, ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ಶರಣ ದಂಪತಿಗಳು ಆದರ್ಶವಾಗಬೇಕು.

ದಾಸಿಮಯ್ಯ ಅವರು ದುಗ್ಗಳೆಯ ಕುರಿತು ಹೇಳುವಂತೆ ಬಂದು ಹರಿದು ಬಳಸುವಳು, ಬಂದುದಾ ಪರಿಣಾಮಿಸುವಳು, ಬಂಧು-ಬಳಗವ ಮರೆಸುವ ಗೆಳೆಯ ತಂದು ಬದುಕಿದೆನೋ ಎನ್ನುವಂತೆ ಪ್ರತಿಯೊಬ್ಬ ಮಹಿಳೆಯರು ದುಗ್ಗಳೆಯಂತೆ ಪತಿಗೆ ಪೂರಕವಾದ ಬದುಕನ್ನು ನಡೆಸುವಂತಾಗಬೇಕು.

ಸಂಸಾರದ ಬದುಕು ಅಂದಮೇಲೆ ಏನೆಲ್ಲಾ ಕಷ್ಟ ನಷ್ಟಗಳು ಇದ್ದೇ ಇರುತ್ತವೆ. ಬಸವ ತಂದೆಯವರು ಹೇಳುವಂತೆ ಕಾಲಲ್ಲಿ ಕಟ್ಟಿದ ಗುಂಡು ಕೊರಳಲ್ಲಿ ಕಟ್ಟಿದ ಬೆಂಡು ತೇಲಲಿಯದು ಗುಂಡು ಮುಳುಗಲಿ ಅದು ಬೆಂಡು ಇಂತಪ್ಪ ಸಂಸಾರ ಶರದಿಯ ದಾಟಿಸಿ ಕಾಲಾಂತಕನೆ ಕಾಯೋ ಎಂದು ಹೇಳಿದ್ದಾರೆ.

ಇದರ ಅರ್ಥ ನಮ್ಮ ಬದುಕಿನಲ್ಲಿ ಏನೇ ಬಂದರೂ ನಮ್ಮನ್ನು ರಕ್ಷಿಸುವ ಹೊಣೆ ನಿನ್ನದು ಎಂದು ದೇವರ ಮೇಲೆ ಭಾರ ಹಾಕಿದ್ದಾರೆ ಬಸವಣ್ಣನವರು.

ನಾವು ಎಲ್ಲಿಯವರೆಗೆ ಬಸವಾದಿ ಶರಣರನ್ನು ನಂಬಿಕೊಂಡು ಅವರ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತೇವೆಯೋ ನಮಗೆ ಮತ್ತು ನಮ್ಮ ಕುಟುಂಬಗಳಿಗೆ ನೆಮ್ಮದಿ ಶಾಂತಿ ಎಲ್ಲವೂ ದೊರೆಕೊಳ್ಳುತ್ತದೆ ಎಂದು ಸಾವಿತ್ರಮ್ಮ ನುಡಿದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಬಸವ ಶ್ರೀರಕ್ಷೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಹಿರಿಯರಾದ ಹೆಚ್.ಜಿ. ಹಂಪಣ್ಣ, ಮಲ್ಲಿಕಾರ್ಜುನ, ಶರಣಪ್ಪ ಹಡಪದ, ಜಿಲ್ಲಾ ಹಡಪದ ಸಮಾಜದ ಅಧ್ಯಕ್ಷರು, ಹಿತೈಷಿಗಳು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *