ರೆ. ಉತ್ತಂಗಿ ಚೆನ್ನಪ್ಪನವರು ಕನ್ನಡ ನಾಡು ಕಂಡ ಅಪರೂಪದ ಶ್ರೇಷ್ಠ ಅನುಭಾವಿಗಳು. ತಮ್ಮ ಅಮೂಲ್ಯ ಕೃತಿಗಳ ಮೂಲಕ ಕನ್ನಡ ಸಾರಸ್ವತ ಪ್ರಪಂಚವನ್ನು ಸಿರಿವಂತಗೊಳಿಸಿದವರು. ಶರಣ ಸಾಹಿತ್ಯ, ಕ್ರೈಸ್ತಸಾಹಿತ್ಯ, ಅನುಭಾವ ಸಾಹಿತ್ಯ ಹೀಗೆ ಮೂರೂ ಆಯಾಮಗಳಲ್ಲಿ ಅವರು ಗ್ರಂಥ ರಚನೆ ಮಾಡಿದವರು.
ಲಿಂಗಾಯತ ಧರ್ಮವನ್ನು ಕುರಿತು ಅವರು ಮಾಡಿದ ಸಂಶೋಧನೆಯಂತೂ ಚೇತೋಹಾರಿ ಯಾದುದು. ೧೨ನೇ ಶತಮಾನದಲ್ಲಿ ಬಸವಣ್ಣನವರು ಅಸ್ತಿತ್ವಕ್ಕೆ ತಂದ ‘ಅನುಭವ ಮಂಟಪ’ ‘ಶೂನ್ಯಪೀಠ’, ‘ಮಹಾಮನೆ’ಗಳ ಕುರಿತಾಗಿ ಕೆಲವು ವಿದ್ವಾಂಸರು ಸಂದೇಹ ಎತ್ತಿದಾಗ, ಅವುಗಳಿಗೆಲ್ಲ ಸಮರ್ಪಕವಾದ ಉತ್ತರ ನೀಡಿ, ಅನುಭವ ಮಂಟಪದ ಅಸ್ತಿತ್ವವನ್ನು ಗಟ್ಟಿಗೊಳಿಸಿದ ಕೀರ್ತಿ ಉತ್ತಂಗಿಯವರದು.
ಸಿದ್ಧರಾಮನ ಲಿಂಗದೀಕ್ಷಾ ಪ್ರಸಂಗವನ್ನು ಸಂಶಯದೃಷ್ಟಿಯಿಂದ ನೋಡಿದವರಿಗೆ ‘ಸಿದ್ಧರಾಮ ಸಾಹಿತ್ಯ ಸಂಗ್ರಹ’ ಕೃತಿ ರಚನೆ ಮೂಲಕ, ಸಿದ್ಧರಾಮ ಶಿವಯೋಗಿಗೆ ಮತ್ತೊಮ್ಮೆ ಲಿಂಗದೀಕ್ಷೆ ಮಾಡಿದ ಶ್ರೇಯಸ್ಸು ರೆ. ಉತ್ತಂಗಿ ಚೆನ್ನಪ್ಪನವರದು. ಸಮಸ್ತ ಲಿಂಗಾಯತ ಸಮುದಾಯದ ಪಾಲಿಗೆ ಅವರ ನೆನಹೆ ಉದಯ; ಅವರ ಮರೆವೆ ಅಸ್ತಮಾನ!
ರೆ. ಉತ್ತಂಗಿ ಚೆನ್ನಪ್ಪನವರ ಅನುಭಾವದ ಒಡನಾಟದಲ್ಲಿ ಸತತ ೧೨ ವರುಷಗಳ ಕಾಲ ಕಳೆದು ತಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಂಡವರು ಡಾ. ಎಸ್. ಆರ್. ಗುಂಜಾಳ ಅವರು. ಉತ್ತಂಗಿಯವರ ಒಡನಾಟದ ಪರಿಣಾಮವಾಗಿ ಶರಣ ಸಾಹಿತ್ಯದ ಕುರಿತು ಆಳವಾಗಿ ಅಧ್ಯಯನ ಮಾಡಿದ ಡಾ. ಎಸ್. ಆರ್. ಗುಂಜಾಳ ಅವರ ತನು-ಮನ-ಭಾವಗಳಲ್ಲಿ ಆವರಿಸಿಕೊಂಡವರು ರೆ. ಉತ್ತಂಗಿಯವರು. ತಮ್ಮ ಜೀವನದುದ್ದಕ್ಕೂ ರೆ. ಉತ್ತಂಗಿ ಅವರ ನೆನಪನ್ನು ಸ್ಮರಣೀಯವಾಗಿಸಿಕೊಂಡವರು.
ಉತ್ತಂಗಿಯವರ ಜೀವನ ಮತ್ತು ಸಾಹಿತ್ಯ ಕುರಿತು ಆಳವಾದ ಸಂಶೋಧನೆ ಮಾಡಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಉತ್ತಂಗಿಯವರ ಜನ್ಮಶತಮಾನೋತ್ಸವ ನಿಮಿತ್ಯ ‘ಉತ್ತಂಗಿಯವರ ಉತ್ತುಂಗ ವಿಚಾರಗಳು’ ಎಂಬ ಮೌಲಿಕ ಗ್ರಂಥ ಪ್ರಕಟಿಸಿದರು. ಉತ್ತಂಗಿಯವರ ಜೀವನ ಚರಿತ್ರೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಿಸಿದರು. ‘ಉತ್ತಂಗಿ ಚೆನ್ನಪ್ಪನವರ ಹರಿಜನ ಸೇವೆ’, ‘ಶರಣ ಸಾಹಿತ್ಯಕ್ಕೆ ಉತ್ತಂಗಿ ಚೆನ್ನಪ್ಪನವರ ಕೊಡುಗೆ’ ಮೊದಲಾದ ಗ್ರಂಥಗಳನ್ನು ಪ್ರಕಟಿಸಿ ಉತ್ತಂಗಿಯವರ ಸಾಹಿತ್ಯದ ನೆಲೆ ಬೆಲೆಗಳನ್ನು ಕನ್ನಡಿಗರಿಗೆ ತಿಳಿಸಿಕೊಟ್ಟವರು. ಇತ್ತೀಚೆಗೆ ಉತ್ತಂಗಿಯವರ ಸಮಗ್ರ ಸಾಹಿತ್ಯವನ್ನು ಐದು ಸಂಪುಟಗಳಲ್ಲಿ ಪ್ರಧಾನ ಸಂಪಾದಕರಾಗಿ ಪ್ರಕಟಿಸಿದ್ದಾರೆ. ಉತ್ತಂಗಿಯವರು ಆರು ದಶಕಗಳ ಹಿಂದೆ ಬರೆದಿಟ್ಟಿದ್ದ ಅಪ್ರಕಟಿತವಾಗಿದ್ದ ‘ಎಲ್ಲಮ್ಮ : ದಕ್ಷಿಣ ಭಾರತದ ದೇವತೆ’ ಎಂಬ ಕೃತಿಯ ಇಂಗ್ಲಿಷ್ ಮತ್ತು ಕನ್ನಡ ಆವೃತ್ತಿಗಳು ಪ್ರಕಟವಾಗುವಂತೆ ನೋಡಿಕೊಂಡಿದ್ದಾರೆ. ಇತ್ತೀಚಿಗೆ ಶರಣೆ ಶಾಲಿನಿತಾಯಿ ದೊಡ್ಡಮನಿ ಅವರಿಂದ ‘ಉತ್ತಂಗಿ ಚೆನ್ನಪ್ಪನವರು’ ಎಂಬ ಮರಾಠಿ ಕೃತಿಯನ್ನು ಬರೆಯಿಸಿ, ಪ್ರಕಟಿಸಿದ್ದಾರೆ. ಹೀಗೆ ತಮ್ಮ ಜೀವನದುದ್ದಕ್ಕೂ ಉತ್ತಂಗಿಯವರ ಸಾಹಿತ್ಯವನ್ನು ಕುರಿತು ಅಧ್ಯಯನ ಮಾಡುತ್ತ ಬಂದಿದ್ದಾರೆ.
ಇಷ್ಟೆಲ್ಲ ಸಾಹಿತ್ಯಿಕ ಸಾಧನೆ ಮಾಡಿದರೂ, ಉತ್ತಂಗಿಯವರ ಪುತ್ಥಳಿಯೊಂದನ್ನು ಧಾರವಾಡದಲ್ಲಿ ಸ್ಥಾಪಿಸಬೇಕೆಂಬುದು ಡಾ. ಎಸ್. ಆರ್. ಗುಂಜಾಳ ಅವರ ಬಹುದಿನದ ಸಂಕಲ್ಪವಾಗಿತ್ತು. ಅದಕ್ಕಾಗಿ ಅವರು ಪಟ್ಟ ಶ್ರಮ ಅಪರಿಮಿತ. ಅವರ ಸಂಕಲ್ಪ ಈಗ ಈಡೇರಿದೆ. ಧಾರವಾಡದಲ್ಲಿ ಈಗ ಉತ್ತಂಗಿ ಚೆನ್ನಪ್ಪನವರ ಮೂರ್ತಿ ಅನಾವರಣವಾಗುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿಯಾಗಿದೆ.
ದಿನಾಂಕ ೯ ಡಿಸೆಂಬರ್ ೧೯೫೬ರಂದು ಡಾ. ಎಸ್. ಆರ್. ಗುಂಜಾಳ ಅವರು ತಮ್ಮ ಗೆಳೆಯರ ‘ಕಿಂಕರ ಬಳಗ’ದ ನೆರವಿನೊಂದಿಗೆ ಧಾರವಾಡದ ಆರ್.ಎಲ್.ಎಸ್. ಹೈಸ್ಕೂಲಿನಲ್ಲಿ ರೆ. ಉತ್ತಂಗಿಯವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ನಿವೃತ್ತ ಜಿಲ್ಲಾ ನ್ಯಾಯಾಧೀಶರಾಗಿದ್ದ ಶ್ರೀ ವೀರಭದ್ರಪ್ಪ ಹಾಲಭಾವಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ‘ಸಂಶೋಧಕ ಉತ್ತಂಗಿ’, ‘ಕವಿ ಉತ್ತಂಗಿ’, ‘ಉತ್ತಂಗಿ ಹಾಗೂ ಲಿಂಗಾಯತ ಧರ್ಮ’, ‘ನಾಗರಿಕ ಉತ್ತಂಗಿ’, ‘ಕ್ರಿಶ್ಚಿಯನ್ ಉತ್ತಂಗಿ’ ಎಂದು ಉತ್ತಂಗಿಯವರ ವಿವಿಧ ವ್ಯಕ್ತಿತ್ವಗಳನ್ನು ಕುರಿತು ಕ್ರಮವಾಗಿ ಡಾ. ಆರ್. ಸಿ. ಹಿರೇಮಠ, ಡಾ. ಡಿ.ಎಸ್.ಕರ್ಕಿ, ಶ್ರೀ ವೀ. ರು. ಕೊಪ್ಪಳ, ಶ್ರೀ ಐ.ಜಿ.ಹಿರೇಗೌಡರ ಮತ್ತು ಗ.ಶಿ. ಹುರಳಿ ಇವರು ಮಾತನಾಡಿದರು. ಇದೊಂದು ವಿಶಿಷ್ಟ ಮತ್ತು ಆತ್ಮೀಯ ಸಮಾರಂಭವಾಗಿತ್ತು. ಇದೇ ಸಂದರ್ಭದಲ್ಲಿ ಪೂಜ್ಯ ಉತ್ತಂಗಿಯವರ ಆತ್ಮಚರಿತ್ರೆಯನ್ನು ಅವರ ಕಿರು ಸಂಭಾವನಾ ಗ್ರಂಥದಲ್ಲಿ ಅಳವಡಿಸಿ ‘ಪೂಜ್ಯ ಉತ್ತಂಗಿಯವರ ಜೀವನ ಚರಿತ್ರೆ’ ಎಂಬ ಗ್ರಂಥವನ್ನು ಲೋಕಾರ್ಪಣೆ ಮಾಡಿದ್ದರು. ಈ ಕೃತಿಯಲ್ಲಿ ಅಡಕವಾಗಿದ್ದ ಉತ್ತಂಗಿಯವರ ಆತ್ಮಚರಿತ್ರೆಯನ್ನು ಈಗ ಪ್ರತ್ಯೇಕ ಕೃತಿಯಾಗಿ ಡಾ. ಎಸ್. ಆರ್. ಗುಂಜಾಳ ಅವರು ಸಂಪಾದಿಸಿದ್ದಾರೆ.
ಕರ್ನಾಟಕ ಗಾಂಧಿ ಎಂದೇ ಖ್ಯಾತರಾದ ಹರ್ಡೇಕರ ಮಂಜಪ್ಪನವರು ಬರೆದ ‘ನನ್ನ ಕಳೆದ ಮೂವತ್ತು ವರ್ಷಗಳ ಕಾಣಿಕೆ’ (೧೯೩೬) ಕೃತಿಯೇ ಕನ್ನಡದ ಮೊದಲ ಆತ್ಮಚರಿತ್ರೆಯಾಗಿದೆ. ಇಂಗ್ಲಿಷ್ನ ಅಟೋಬಯಾಗ್ರಫಿ ಪದಕ್ಕೆ ಸಂವಾದಿಯಾಗಿ ಆತ್ಮಕತೆ ಎಂಬ ಪದಪ್ರಯೋಗ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಈಗಾಗಲೇ ನೂರಾರು ಆತ್ಮಕಥೆಗಳು ಪ್ರಕಟಗೊಂಡಿವೆ. ಡಾ. ಶರಣಮ್ಮ ಗೋರೆಬಾಳ ಅವರು ‘ಕನ್ನಡ ಸಾಹಿತ್ಯದಲ್ಲಿ ಆತ್ಮಚರಿತ್ರೆ’ ಎಂಬ ಸಂಶೋಧನ ಪ್ರಬಂಧವನ್ನು ರಚಿಸಿದ್ದಾರೆ. ಡಾ. ಬಿ. ಎಂ. ಪುಟ್ಟಯ್ಯ ಅವರು ‘ಆತ್ಮಕಥೆಗಳಲ್ಲಿ ಕರ್ನಾಟಕದ ಕಥೆ’ ಎಂಬ ಕೃತಿಯನ್ನು ಹೊರತಂದಿದ್ದಾರೆ. ಡಾ. ಗುರುಪಾದ ಮರಿಗುದ್ದಿ ಅವರು ಕನ್ನಡದಲ್ಲಿ ಈ ವರೆಗೆ ಬಂದ ಸುಮಾರು ೫೦ ಆತ್ಮಕತೆಗಳ ಸಮಗ್ರ ವಿಮರ್ಶಾ ಕೃತಿ ‘ಆಲಯಗಳ ಬಯಲು’ ಎಂಬ ಅಭಿನಂದನ ಸಂಪುಟದಲ್ಲಿ ಪ್ರಕಟಿಸಿದ್ದಾರೆ. ಹೀಗೆ ಆತ್ಮಕಥೆಗಳ ಅಧ್ಯಯನ ಪರಂಪರೆಯೇ ಮುಂದುವರಿದಿದೆ.
ಪ್ರಸ್ತುತ ಕೃತಿಯಲ್ಲಿ ಉತ್ತಂಗಿ ಚೆನ್ನಪ್ಪನವರು ತಮ್ಮ ಬದುಕಿನ ಕತೆಯನ್ನು ತಾವೇ ತುಂಬ ಸರಳವಾಗಿ, ಸಂಕ್ಷಿಪ್ತವಾಗಿ, ರಸವತ್ತಾಗಿ ನಿರೂಪಿಸಿದ್ದಾರೆ. ಹೇಳಬೇಕಾದ ವಿಷಯವನ್ನು ನೇರವಾಗಿ ವಿವರಿಸುವ ಮೂಲಕ ಓದುಗರಿಗೆ ಬೇಸರವಾಗದ ರೀತಿಯಲ್ಲಿ ತಮ್ಮ ಬದುಕಿನ ಸಂಗತಿಗಳನ್ನು ಅತ್ಯಂತ ವಾಸ್ತವನೆಲೆಯಲ್ಲಿ ನಿರೂಪಿಸಿದ್ದಾರೆ. ಒಂದು ಗಂಟೆ ಅವಧಿಯಲ್ಲಿ ಓದಿ ಮುಗಿಸಬಹುದಾದ ಈ ಕೃತಿಯಲ್ಲಿ ಆ ಕಾಲ ಘಟ್ಟದ ಅವರ ಬದುಕಿನ ಕತೆಯ ಜೊತೆಗೆ, ಸಾಹಿತ್ಯಿಕ ಚಟುವಟಿಕೆಗಳ ಸಮಗ್ರ ವಿವರ ದೊರೆಯುತ್ತದೆ. ಆತ್ಮಚರಿತ್ರೆ ಸಂಕ್ಷಿಪ್ತವಾದರೂ ಸಮಗ್ರವಾದ ಒಳನೋಟಗಳನ್ನು ಹೊಂದಿದೆ. ಪ್ರಾಯಶಃ ಸಾವಿರಾರು ಪುಟಗಳಲ್ಲಿ ತಮ್ಮ ಬದುಕಿನ ಕತೆಯನ್ನು ಬರೆದು, ನಡೆ ನುಡಿಗಳಲ್ಲಿ ಶುದ್ಧವಿರದ ಸಾಹಿತಿಗಳ ನಡುವೆ, ಉತ್ತಂಗಿಯವರಂತಹ ಅಪ್ಪಟ ಪ್ರಾಮಾಣಿಕ, ಬದ್ಧತೆಯ ವಿದ್ವಜ್ಜನರು ದೊರೆಯುವದು ತುಂಬ ವಿರಳ.
ಇಂತಹ ಮೌಲಿಕ ಗ್ರಂಥವನ್ನು ರೆ. ಉತ್ತಂಗಿ ಚೆನ್ನಪ್ಪನವರ ಮೂರ್ತಿ ಅನಾವರಣ ಕಾಲಕ್ಕೆ ಮರುಮುದ್ರಣಗೊಳಿಸಿ, ಕನ್ನಡಿಗರಿಗೆ ಕೊಡುತ್ತಿರುವ ಡಾ. ಎಸ್. ಆರ್. ಗುಂಜಾಳ ಅವರಿಗೆ ವಂದನೆ-ಅಭಿನಂದನೆಗಳು.
ಸರ್ವಜ್ಞ ಕವಿಯನ್ನು ಕನ್ನಡಿಗರಿಗೆ ಪರಿಚಯಿಸಿದವರು ರೆ. ಉತ್ತಂಗಿ ಚೆನ್ನಪ್ಪನವರು, ಇಂತಹ ಹಿರಿಯರನ್ನು ಕುರಿತು ಅನೇಕ ಗ್ರಂಥಗಳನ್ನು ರಚನೆ ಮಾಡುವ ಮೂಲಕ ಉತ್ತಂಗಿಯವರ ಸಾಹಿತ್ಯ ಸಾಧನೆಗಳನ್ನು ಜೀವಂತವಾಗಿಟ್ಟವರು ಡಾ. ಎಸ್. ಆರ್. ಗುಂಜಾಳ ಅವರು.
ಡಾ. ಡಿ. ಸಿ. ಪಾವಟೆ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಉತ್ತಂಗಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಬೇಕೆಂದು ಅಪೇಕ್ಷಿಸಿದ್ದರು. ಆದರೆ ಅದು ಅನಿವಾರ್ಯ ಕಾರಣಗಳಿಂದ ಆಗಲಿಲ್ಲ. ಹೀಗಾಗಿ ಡಾ. ಎಸ್. ಆರ್. ಗುಂಜಾಳ ಅವರು ‘ರೆ. ಉತ್ತಂಗಿ ಚೆನ್ನಪ್ಪನವರು ಜೀವನ ಮತ್ತು ಕೃತಿಗಳು’ ಎಂಬ ವಿಷಯ ಕುರಿತು ಪಿಎಚ್.ಡಿ. ಮಹಾಪ್ರಬಂಧ ಬರೆದು, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದರು. ಈ ಪ್ರಬಂಧವನ್ನು ಮೌಲ್ಯಮಾಪನ ಮಾಡಿದ ಹೈದ್ರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಕೆ.ಎಂ. ಕೃಷ್ಣರಾವ್ ಅವರು ನಾಲ್ಕು ಪುಟಗಳಷ್ಟು ಉದ್ದನೆಯ ತಮ್ಮ ವಿಮರ್ಶೆಯಲ್ಲಿ ಹೇಳಿದ ಎರಡು ಮಾತುಗಳನ್ನಿಲ್ಲಿ ಉದ್ಧರಿಸಿದರೆ ಅಪ್ರಸ್ತುವಾಗಲಿಕ್ಕಿಲ್ಲ.
“ಲೇಖಕರು (ಗುಂಜಾಳರು) ಉತ್ತಂಗಿಯವರ ನಿಕಟವರ್ತಿಗಳಾಗಿದ್ದು, ಅವರ ಕೃತಿಗಳ ಮತ್ತು ವ್ಯಕ್ತಿತ್ವದ ಹಿರಿಮೆಯನ್ನು ಹತ್ತಿರದಿಂದ ಅರಿತು ಮೆಚ್ಚಿಕೊಂಡವರು ಎಂಬುದು ಪ್ರಬಂಧದಿಂದ ಸ್ಪಷ್ಟವಾಗುತ್ತದೆ. ಅವರ ಈ ನಿಕಟ ಪರಿಚಯದ ಪರಿಣಾಮವಾಗಿ ಉತ್ತಂಗಿಯವರ ‘ಎಲ್ಲ’ವೂ ಅವರಿಗೆ ದೊರಕಿದೆ. ಅದರ ಉಪಯೋಗವನ್ನೂ ಅವರು ಸಮರ್ಪಕವಾಗಿಯೇ ಮಾಡಿಕೊಂಡಿದ್ದಾರೆ. ಪ್ರಬಂಧದಲ್ಲಿ ನೀಡಿರುವದು ಸ್ವಲ್ಪ ಹೆಚ್ಚು ಎಂದೂ ಅನ್ನಿಸುವಷ್ಟು ಮಟ್ಟಿಗೆ. ಲೇಖಕರು ತುಂಬ ಶ್ರಮವಹಿಸಿ ವಿಷಯ ಸಂಗ್ರಹವನ್ನೂ ಮಾಡಿದ್ದಾರೆ. ಇತರ ಸಾಹಿತಿಗಳು, ವಿದ್ವಾಂಸರು, ಸ್ನೇಹಿತರು, ಅಧಿಕಾರಿಗಳು ಪರಿಚಯಸ್ಥ ಪತ್ರಿಕೆಗಳು ಉತ್ತಂಗಿಯವರ ವಿಚಾರದಲ್ಲಿ ಹೇಳಿರುವ, ಬರೆದಿರುವ ಎಲ್ಲವನ್ನು ಇಲ್ಲಿ ಕಲೆ ಹಾಕಲು ಶ್ರೀ ಗುಂಜಾಳರು ತುಂಬಾ ಉತ್ಸಾಹದಿಂದ ಪ್ರಯತ್ನ ಮಾಡಿದ್ದಾರೆ. ಅವರ ಜಾತಕ ಫಲ, ಕುಂಡಲಿಗಳು, ತಾತ-ತಂದೆ, ಹೆಂಡತಿ-ಮಕ್ಕಳು, ಸ್ನೇಹಿತರು ಮುಂತಾದವರ ಭಾವಚಿತ್ರಗಳು, ಶಾಲಾ ಸರ್ಟಿಫಿಕೇಟುಗಳು, ಅಂಕಪಟ್ಟಿಗಳು, ಅವರು ಇತರರಿಗೆ ಬರೆದ ಇತರರಿಂದ ಅವರಿಗೆ ಬಂದ ಆಂಗ್ಲ, ಕನ್ನಡ ಪತ್ರಗಳು, ಹೀಗೆ ಎಲ್ಲವೂ ಇಲ್ಲಿ ಸ್ಥಾನವನ್ನು ಪಡೆದಿವೆ. ಈ ಅಪಾರ ವಸ್ತು ಸಂಗ್ರಹ ಪ್ರಶಂಶನೀಯವೇ ಸರಿ”.
“ಒಟ್ಟಿನಲ್ಲಿ ಪ್ರಬಂಧವು ಕನ್ನಡಕ್ಕಾಗಿ, ಸತ್ಯಕ್ಕಾಗಿ, ನಿಷ್ಠೆಯಿಂದ ದುಡಿದ ಒಬ್ಬ ಆದರ್ಶ ಸಾಹಿತಿಯ ಸಂಶೋಧಕನ ಘನತೆಯನ್ನು ಎತ್ತಿ ತೋರಿಸುವ ಅವರ ಕೃತಿಗಳನ್ನು ಸಮೀಕ್ಷಿಸುವ ಕಾರ್ಯವನ್ನು ಚೆನ್ನಾಗಿಯೇ ಮಾಡಿದೆಯೆಂಬುದರಲ್ಲಿ ಸಂದೇಹವಿಲ್ಲ. ಏಳುನೂರು ಪುಟಗಳ ಮಹಾಪ್ರಬಂಧಕ್ಕೆ ಅಗತ್ಯವಾದ ಮಾಹಿತಿಯ ಸಂಗ್ರಹ, ಅದರ ವಿಶ್ಲೇಷಣೆ, ಜೋಡಣೆ ಮತ್ತು ಲೇಖನ ಕರ್ಯವನ್ನು ಲೇಖಕರು ತುಂಬಾ ಶ್ರಮವಹಿಸಿ ತಾಳ್ಮೆ ಉತ್ಸಾಹಗಳಿಂದ ಶ್ರದ್ಧೆಯಿಂದ ವಿದ್ವತ್ ಪೂರ್ಣವಾಗಿಯೂ ಸಾಧಿಸಿದ್ದಾರೆ ಎಂದು ಹೇಳಲು ಸಂತೋಷವಾಗುತ್ತದೆ”.
“ಉತ್ತಂಗಿ ಚೆನ್ನಪ್ಪನವರು ಸರ್ವಜ್ಞನನ್ನು ಲೋಕಕ್ಕೆ ಎತ್ತಿ ಹಿಡಿದಂತೆ, ಶ್ರೀ ಗುಂಜಾಳರು ಉತ್ತಂಗಿಯವರನ್ನು ಪ್ರಪಂಚಕ್ಕೆ ಎತ್ತಿ ತೋರಿದ್ದಾರೆ. ಶ್ರೀಮಾನ್ ಎಸ್.ಆರ್, ಗುಂಜಾಳರ ಈ ಮಹಾಪ್ರಬಂಧವನ್ನು ಪಿಎಚ್.ಡಿ ಪದವಿ ನೀಡಿಕೆಗಾಗಿ ಅಂಗೀಕರಿಸಬಹುದೆಂದು ಹೃತ್ತೂರ್ವಕವಾಗಿ ನಾನು ಶಿಫಾರಸ್ಸು ಮಾಡುತ್ತೇನೆ. ಪ್ರಬಂಧ ಪ್ರಕಟಣೆಗೂ ಅಭ್ಯಂತರವಿಲ್ಲ. ಮೌಖಿಕ ಪರೀಕ್ಷೆಯ ಅಗತ್ಯವೂ ಕಾಣಿಸುವದಿಲ್ಲ”. (೧೭-೦೮-೧೯೭೭),
ಈ ಪ್ರಬಂಧವನ್ನು ಕರ್ನಾಟಕದ ಮತ್ತೊಬ್ಬ ಸುಪ್ರಸಿದ್ಧ ಸಾಹಿತಿಗಳಾದ ಪ್ರೊ. ಜವರೇಗೌಡರು ಮೌಲ್ಯಮಾಪನ ಮಾಡಿ ಹೇಳಿದ ಮಾತುಗಳು ಸಹ ಗಮನಾರ್ಹವಾಗಿವೆ.
“ಉತ್ತಂಗಿಯವರ ಸಾಹಿತ್ಯದಲ್ಲಿ ಮತ್ತು ಅವರ ಕಾರ್ಯಕ್ಷೇತ್ರದಲ್ಲಿ ತಾವು ಕಂಡ ಉತ್ತಮಾಂಶಗಳನ್ನು ಮಾತ್ರ ನಿಬಂಧಕಾರರು ಇಲ್ಲಿ ನಿರೂಪಿಸಿದ್ದಾರೆ. ಅವರ ವಿಷಯ ಸಂಗ್ರಹದ ಉತ್ಸಾಹ ಪ್ರಾಮಾಣಿಕತೆಗಳು, ಪ್ರಮಾಣ ಪುರಾವೆಗಳನ್ನು ಒದಗಿಸುವಲ್ಲಿ ಅವರ ಶ್ರದ್ಧೆಯೂ ಉತ್ತಂಗಿಯವರ ಬಗೆಗಿನ ಅವರ ನಿಷ್ಠಾಗೌರವಗಳೂ ಈ ನಿರೂಪಣೆಯಲ್ಲಿ ಪ್ರತಿಬಿಂಬಗೊಂಡಿವೆ. ಆದರೆ ಈ ಶ್ರದ್ದಾನಿಷ್ಠೆಗಳಿಂದ ನಿಬಂಧಕಾರರ ನಿಷ್ಪಕ್ಷಪಾತ ದೃಷ್ಟಿಗೆ ಕುಂದುಂಟಾಗಿಲ್ಲ. ಶೈಲಿ ಕೃತಕತೆಯ ಅಥವಾ ಕ್ಲಿಷ್ಟತೆಯ ದೋಷಗಳಿಲ್ಲದೆ ಸಲೀಲವಾಗಿ ಸುಸ್ಪಷ್ಟವಾಗಿ ಪ್ರವಹಿಸುತ್ತದೆ (ದಿ. ೩-೯೧೯೭೭)”.
ಡಾ. ಗುಂಜಾಳ ಅವರು ರಚಿಸಿದ ಈ ಮಹಾಪ್ರಬಂಧಕ್ಕೆ ನವಕಲ್ಯಾಣಮಠದ ಗುರುಸಿದ್ಧ ಪ್ರಭುಸ್ಮಾರಕ ಬಂಗಾರದ ಪದಕವೂ ದೊರೆಯಿತು ಎಂಬುದು ಸಂತೋಷದ ಸಂಗತಿ. ಡಾ. ಡಿ. ಸಿ. ಪಾವಟೆ ಅವರ ಕನಸನ್ನು ನನಸನ್ನು ಮಾಡಿದ ಶ್ರೇಯಸ್ಸು ಡಾ. ಗುಂಜಾಳ ಗುರುಗಳಿಗೆ ಸಲ್ಲುತ್ತದೆ.
ಈ ಗುರು-ಶಿಷ್ಯರ ಅವಿನಾಭಾವ ಸಂಬಂಧ ನಿಜಕ್ಕೂ ಹೃದಯಸ್ಪರ್ಶಿ ಯಾದುದು. ಪ್ರತಿನಿತ್ಯ ಡಾ. ಗುಂಜಾಳ ಅವರು ಉತ್ತಂಗಿಯವರನ್ನು ಸ್ಮರಿಸಿಕೊಳ್ಳುತ್ತಾರೆ. ಇಂತಹ ಹಿರಿಯ ಜೀವ ಡಾ. ಎಸ್. ಆರ್. ಗುಂಜಾಳ ಅವರಿಗೆ ಈಗ ೯೨ ವರುಷ ವಯಸ್ಸು. ಈ ಇಳಿವಯಸ್ಸಿನಲ್ಲಿಯೂ ಅವರದು ಬತ್ತದ ಉತ್ಸಾಹ. ನಿಜವಾದ ಶರಣ ಜೀವನ ನಡೆಸುತ್ತಿರುವ ಡಾ. ಎಸ್. ಆರ್. ಗುಂಜಾಳ ಗುರುಗಳು ನನ್ನ ಬದುಕಿಗೆ ಒಂದು ದಿವ್ಯ ಬೆಳಕನ್ನು ನೀಡಿದ್ದಾರೆ. ಈ ದಿವ್ಯ ಬೆಳಕಿನ ಪ್ರಕಾಶದಲ್ಲಿ ನಾನು ಮುನ್ನಡೆಯುತ್ತಿದ್ದೇನೆ. ಅಂತೆಯೆ ಅವರ ನೆನಪು ಸದಾ ಕನ್ನಡ ಸಾಹಿತ್ಯ ಲೋಕದಲ್ಲಿ ಶಾಶ್ವತವಾಗಿರಲಿ ಎಂಬ ಸದುದ್ದೇಶದಿಂದ ‘ಡಾ ಎಸ್. ಆರ್. ಗುಂಜಾಳ ಸಂಶೋಧನ ಕೇಂದ್ರ’ವನ್ನು ಅಸ್ತಿತ್ವಕ್ಕೆ ತಂದಿರುವೆ. ಇಲ್ಲಿ ಹತ್ತು ಸಾವಿರ ಗ್ರಂಥಗಳನ್ನು ಸಂಗ್ರಹಿಸಿದ್ದೇನೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗದ ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳು ಡಾ. ಎಸ್. ಆರ್. ಗುಂಜಾಳ ಸಂಶೋಧನ ಕೇಂದ್ರದಿಂದ ಆಕರ ಸಾಮಗ್ರಿಯನ್ನು ಪಡೆದು, ಮಹಾಪ್ರಬಂಧ ರಚಿಸಿ, ಪಿಎಚ್.ಡಿ. ಪದವಿಗಳನ್ನು ಪಡೆದಿರುವುದು ಅತ್ಯಂತ ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ. ಅಂತೆಯೆ ಗುರುಗಳ ಮೇಲಿನ ಭಕ್ತಿಯಿಂದ ಈ ಕೃತಿಯನ್ನು ‘ಡಾ. ಎಸ್. ಆರ್. ಗುಂಜಾಳ ಸಂಶೋಧನ ಕೇಂದ್ರ’ದಿಂದಲೇ ಪ್ರಕಟಿಸುತ್ತಿರುವೆ. ಇದಕ್ಕೆ ಅನುಮತಿ ನೀಡಿದ ಡಾ. ಎಸ್. ಆರ್. ಗುಂಜಾಳ ಗುರುಗಳಿಗೆ ಅನಂತ ವಂದನೆಗಳು.