ಬೆಳಗಾವಿ
ಕೃತಕ ಬುದ್ಧಿಮತ್ತೆ (AI) ಬಳಸಿ ಬಸವಣ್ಣನವರ ೪೦೯ ವಚನಗಳಿಗೆ ಸಂಗೀತ ಸಂಯೋಜನೆ ಮಾಡಿದ ಫಕೀರಗೌಡ ಎಂ. ಹಾದಿಮನಿ ಅವರಿಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಮಾನ್ಯತೆ ದೊರೆತಿದೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಹಾದಿಮನಿ ಡಿಸೆಂಬರ್ ೨೮, ೨೦೨೫ ರಿಂದ ಜನವರಿ ೨೧, ೨೦೨೬ರವರೆಗೆ, ಅಂದರೆ ಕೇವಲ ೨೫ ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಒಟ್ಟು 432 ವಚನಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದರಲ್ಲಿ ಇಂಡಿಯಾ ಬುಕ್ ಆಫ್ ರೆಕಾಡ್ಸ್ ಸಂಸ್ಥೆ ಅವರು 409 ವಚನಗಳನ್ನು ಆಯ್ಕೆ ಮಾಡಿದ್ದಾರೆ.
ಎಂಕಾಂ ಪದವೀಧರರಾದ ಇವರಿಗೆ ಯಾವುದೇ ಸಂಗೀತ ಅಥವಾ ತಂತ್ರಜ್ಞಾನದ ಹಿನ್ನಲೆಯಿಲ್ಲ. ಆದರೂ ಸ್ವಂತ ಆಸಕ್ತಿಯಿಂದ ಎರಡು ವರ್ಷಗಳಿಂದಲೇ ಏಐ ಬಳಸುತ್ತಿದ್ದಾರೆ.
ವಚನಗಳಿಗೆ ಸಂಗೀತ ಜೋಡಿಸಲು ‘ಸುನೋ’ ಏಐ ಸಾಫ್ಟ್ವೇರ್ ಬಳಸಿಕೊಂಡಿದ್ದಾರೆ. ಈ ಸಾಫ್ಟ್ವೇರ್ ನಲ್ಲಿ ಮೊದಲು ಕನ್ನಡದ ಲಿಪಿಯಲ್ಲಿರುವ ವಚನಗಳನ್ನು ಇಂಗ್ಲಿಷ್ ಲಿಪಿಯಲ್ಲಿ ಮೂಲ ಪದಗಳ ಉಚ್ಚಾರ ಕೆಡದಂತೆ ಬರೆಯಬೇಕು.
ಇಂಗ್ಲಿಷ್ ಮಾತ್ರ ಗೊತ್ತಿರುವ ಸಾಫ್ಟ್ವೇರಿಗೆ ಕನ್ನಡದ ಒತ್ತಕ್ಷರಗಳನ್ನು ತಿಳಿಸಿಕೊಡುವುದು ಸ್ವಲ್ಪ ಕಷ್ಟದ ಕೆಲಸ. ರಾಗ ಸಂಯೋಜನೆಗೆ ಹೊಂದುವಂತೆ ಸಾಲುಗಳನ್ನು ವಿಂಗಡಿಸುವುದು ಇನ್ನೊಂದು ಸವಾಲು.
ವಚನಕ್ಕೆ ಸೂಕ್ತವಾದ ರಾಗಗಳನ್ನು ಆಯ್ಕೆಮಾಡಿ, ಅದನ್ನು ಕೇಳಿ ಪರಿಷ್ಕರಿಸಬೇಕು. ನಂತರ ಎಡಿಟ್ ಮಾಡಿ, visualise ಮಾಡಬೇಕು.

ಮೊದಲಿನಿಂದಲೂ ಬಸವ ತತ್ವ ಹಾಗೂ ವಚನಗಳ ಬಗ್ಗೆ ಆಸಕ್ತಿಯಿರುವ ಹಾದಿಮನಿ ಅವರ ಕವನ ಬಸವ ಸಮಿತಿ ಪ್ರಕಟಿಸಿರುವ ‘ಸಂಗಮ’ ಪುಸ್ತಕದಲ್ಲೂ ಪ್ರಕಟವಾಗಿದೆ. ಇವರು ಗುರುಬಸವ ಬಳಗದ ಸಕ್ರಿಯ ಸದಸ್ಯರು.
ಕಡು ಬಡತನದಲ್ಲಿ ಹುಟ್ಟಿದ್ದ ಹಾದಿಮನಿ ಮಾಡದಿರುವ ಕಾಯಕವಿಲ್ಲ. ಗಾರೆ ಕೆಲಸ, ಲಾರಿಗೆ ಲೋಡಿಂಗ್ ಮಾಡುವುದು, ಜಮೀನಿನಲ್ಲಿ ದುಡಿಯುವುದು ಎಲ್ಲಾ ಮಾಡಿದ್ದಾರೆ.
ಕಷ್ಟದ ನಡುವೆಯೇ ಓದು ಮುಗಿಸಿ ಈಗ ಸೈಬರ್ ಸೆಂಟರ್ ನಡೆಸುತ್ತಿದ್ದಾರೆ.
‘ಬಸವ ತತ್ವವನ್ನು ಪ್ರಚಾರ ಮಾಡಲು AI ಬಳಕೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಕಡಿಮೆ ಖರ್ಚಿನಲ್ಲಿ ಬೇರೆ ಬೇರೆ ರೀತಿ ಕೆಲಸ ಮಾಡಬಹುದು,” ಎನ್ನುತ್ತಾರೆ ಹಾದಿಮನಿ. ನಾನೂರಕ್ಕೂ ಹೆಚ್ಚಿನ ವಚನಗಳಿಗೆ ಸಂಗೀತ ನೀಡಲು ಅವರಿಗೆ ಆಗಿರುವ ಖರ್ಚು 20,000 ರೂಪಾಯಿ.
ಆಸಕ್ತರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳಲು ಸಿದ್ಧರಿದ್ದಾರೆ.
ಹಾದಿಮನಿಯವರ ಯೂ ಟ್ಯೂಬ್ ಚಾನಲ್
https://www.youtube.com/@GoudrusarkarAiBeats
