ಬಸವ ಭಾಷೆ : ‘ಛಲವನಿಳಿಯದ ಭಾಷೆ’

ಕೊಪ್ಪಳ :

14.04.2026

ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು, ಲಿಂಗಾಯತ ಮಹಾಮಠ, ಬೀದರ

ಛಲ ಮತ್ತು ಹಠ ಒಂದೇ ಅರ್ಥದಲ್ಲಿ ಬಳಸಲ್ಪಡುತ್ತಿದ್ದರೂ ಎರಡರಲ್ಲಿ ಅಂತರವಿದೆ. ವ್ಯಷ್ಟಿ ಸಮಷ್ಟಿಗಳ ಕಲ್ಯಾಣಕ್ಕಾಗಿ, ಸತ್ಯ ಸಾಧನೆಗಾಗಿ ತೊಡುವ ಪ್ರತಿಜ್ಞೆ ಛಲವೆನಿಸುತ್ತದೆ. ತಾನು ಬಯಸಿದ್ದನ್ನು ಸ್ವಹಿತಾಸಕ್ತಿಗಾಗಿ ತನಗೂ ಇತರರಿಗೂ ಕೇಡಾದರೂ ಚಿಂತೆಯಿಲ್ಲ ಸಾಧಿಸಿಯೇ ತೀರುತ್ತೇನೆಂಬುದು ಹಠ. ಛಲವೊಂದು ಸದ್ಗುಣ. ಮಹತ್ಕಾರ್ಯ ಸಾಧನೆಯ ಅಡಿಪಾಯ. ಛಲವಿಲ್ಲದ ಹೇಡಿ ಮನದವರಿಂದ ಘನಕಾರ್ಯಗಳು ಸಾಧ್ಯವಾಗಲಾರವು. ಛಲವಿಲ್ಲದವರನ್ನು ದೇವರು ಮೆಚ್ಚಲಾರ.

ನುಡಿದು ಹುಸಿಯುವ, ನಡೆದು ತಪ್ಪುವ, ಬಿಟ್ಟು ಹಿಡಿಯುವ ಅಸಜ್ಜನರನ್ನು ಪರಿ ಬದಲಾಯಿಸುವ ದೇವರು ಮೆಚ್ಚಲಾರ. ಹೊತ್ತಿಗೊಂದು ಗೋಸುಂಬೆಯಂತೆ ಅವರದು ಮೋಸದ ಬದುಕು. ಕೆಲವರ ನಡೆ ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎಂಬಂತೆ ಎರಡೂ ದಡದ ಮೇಲೆ ಕೈಯಿಟ್ಟಿರುತ್ತಾರೆ. ಹಿಡಿದಂತೆ ನಡೆವ ಛಲವಂತಿಕೆ ಅವರಲ್ಲಿ ಇರದು. ಶರಣರಂತೆ ಬಾಳಬೇಕು. ಏಕದೇವೋಪಾಸಕರಾಗಬೇಕೆಂದು ಕೊಳ್ಳುತ್ತಾರೆ. ವಚನಗಳನ್ನು ಓದತೊಡಗುತ್ತಾರೆ. ಕೆಲವು ದಿನ ಆಚರಣೆಗೂ ತರುತ್ತಾರೆ. ಆದರೆ ಜೀವನದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಸಾಕು. ಅವರ ನಿಷ್ಠೆ ಸಡಿಲಗೊಳ್ಳುತ್ತದೆ. ತಮ್ಮ ನಂಬಿಕೆಯನ್ನು ತಾವೇ ಸಂದೇಹಿಸತೊಡಗುತ್ತಾರೆ. ಅನ್ಯ ದೈವಂಗಳತ್ತ ಸರಿಯತೊಡಗುತ್ತಾರೆ. ಆದರೆ ಗುರುವಚನ ಬೋಧಿಸುವ ಛಲವೆಂದರೆ ಎಂಥದೇ ಪ್ರಸಂಗದಲ್ಲಿಯೂ ಹಿಡಿದ ಪಥದಿಂದ ಹಿಂದೆ ಸರಿಯಲಾಗದು.

ಒದಗಿ ಬಂದದ್ದೆಲ್ಲ ದೇವನ ಪ್ರಸಾದವೆಂಬ ನಿಷ್ಠೆ ಅಳವಡಬೇಕು. ಗಳಿಸಿದ ಸಂಪತ್ತೆಲ್ಲ ಸೂರೆಯಾಗಿ ಹೋದರೂ ಬದುಕಿನಲ್ಲಿ ಕೋಲಾಹಲ ನಿರ್ಮಾಣವಾದರೂ, ಹುಟ್ಟಿದ ಮಕ್ಕಳೆಲ್ಲ ಕಣ್ಣೆದುರೆ ಕೈಲಾಸ ಸೇರಿದರೂ, ಚಿತ್ರ ಹಿಂಸೆಯಂಥ ಕ್ರೂರ ಶಿಕ್ಷೆಗೊಳಗಾದರೂ, ಬಂಧು ಬಳಗವೆಲ್ಲ ದಿಕ್ಕೆಟ್ಟರೂ, ಜಗತ್ತಿನ ಹಾನಿಗಳೆಲ್ಲ ಮುತ್ತಿದಾಗಲೂ ಲಿಂಗಾರ್ಚನೆಯನ್ನು ಬಿಡಲಾರೆ, ಸಮಾಜ ಸೇವೆಯಿಂದ ವಿಮುಖನಾಗಲಾರೆ, ಬಂದುದನ್ನೆಲ್ಲ ದೇವನ ಪ್ರಸಾದವೆಂದು ಪ್ರಸನ್ನ ಮುಖದಿಂದ ಸ್ವೀಕರಿಸುವೆನೆಂಬ ಛಲ ಬಸವಾದಿ ಶರಣರದು.

ಹುಟ್ಟಿದವರು ಒಮ್ಮೆ ಸಾಯಲೇಬೇಕು. ಹೆಣ್ಣು ಹೊನ್ನು ಮಣ್ಣಿಗಾಗಿ ಸತ್ತರೆ ನರಕ, ಹಿಡಿದ ಛಲ ಪೂರೈಕೆಗಾಗಿ ಸತ್ತರೆ ಅಮರ ಸುಖ. ಭಕ್ತರಾದವರ ಮನ ಹೀನವಾದರೆ ಅದೇ ಕಡೆ. ಅವರು ಇದ್ದರೂ ಸತ್ತಂತೆ. ತನುವಿದು ರುಜೆಯ ಆಗರ. ರೋಗ-ರುಜಿನ ಸಾವುಗಳು ಇದರ ಸ್ವಭಾವ. ತನುವಿಗೆ ತೊಂದರೆ ಬಂದಾಗ ವಿಚಲಿತರಾಗಬಾರದು. ಭಕ್ತಿನಿಷ್ಠೆಯಿಂದ ಹಿಂದೆ ಸರಿಯಬಾರದು.

ಹಲವು ದೇವರನ್ನು ಆರಾಧಿಸದೇ ಏಕದೇವೋಪಾಸಕರು ಆಗಿರಬೇಕು.  ಹಲವು ದೇವರುಗಳಿಗೆ ಹೋಗಿ ಬಳಲಬಾರದು. ರೋಗ-ರುಜಿನಗಳಿಂದ ದೇಹ ಒಣಗಿ ಘಣ ಘಣಲೆಂದರೂ, ದೇಹದಲ್ಲಿ ಪ್ರಾಣವಿರುವವರೆಗೆ, ದೇವಾ ನೀನೊಬ್ಬನೆ ಎಂಬ ಛಲವಿರಬೇಕು. ನಂಬಿದ ದೇವರಿಗೆ ನಂಬಿ ನಡೆಯುವಾಗ ಮರಣವುಂಟಾದರೆ ಅದು ‘ಮರಣವೇ ಮಹಾನವಮಿ’ಯ ಸಂಭ್ರಮ. ಇದು ನಿಜಭಕ್ತರ ಛಲವಂತಿಕೆ.

ಎಂಥಹ ಛಲಗಳನ್ನು ಹೊಂದಲೇಬೇಕೆಂಬುದನ್ನು ಇಲ್ಲಿ ಉಪದೇಶಿಸಿದ್ದಾರೆ. ಪರಧನ ಪರಸತಿ ಪರದೈವಂಗಳು ಇಂದು ದೇಶವನ್ನು ಅಭದ್ರಗೊಳಿಸಿ ಪ್ರಪಾತದಂಚಿಗೆ ತಳ್ಳಿವೆ. ಪರಧನವೆಂದರೆ ತನ್ನ ದುಡಿಮೆಯಿಲ್ಲದೆ, ಅನಾಯಾಸವಾಗಿ ಬಂದದ್ದು. ದುಡಿಮೆಗಿಂತ ಹೆಚ್ಚಿನ ಪ್ರತಿಫಲವೂ ಪರಧನವೆ. ಅಗತ್ಯಕ್ಕಿಂತ ಹೆಚ್ಚಿನ ಸಂಗ್ರಹವೂ ಕೂಡಾ ಪರಧನವೆನ್ನುತ್ತಾರೆ ಶರಣರು. ಪರಿಶ್ರಮವಿಲ್ಲದೆ ಬರುವ ಆದಾಯ ಅಶುದ್ಧವನ್ನು ತಿಂದಂತೆ. ಕಾಯಕದಿಂದ ಬಂದುದು ಕಾರೆಯ ಸೊಪ್ಪಾದರೂ ಪಂಚಾಮೃತ. ಶರಣರ ಪ್ರಕಾರ ಕಾಯಕ ಕಡ್ಡಾಯ. ಕಾಯಕವಿಲ್ಲದವರು ಭಕ್ತರೇ ಅಲ್ಲ. ಸತ್ಯ ಶುದ್ಧವಲ್ಲದುದು ಕಾಯಕವಲ್ಲ. ತನಗೂ ಇತರರಿಗೂ ಸಮಾಜಕ್ಕೂ ಹಿತವನ್ನುಂಟು ಮಾಡುವ ಕೆಲಸವೇ ಕಾಯಕವೆನಿಸುತ್ತದೆ.

ಬಸವಣ್ಣನವರ ಕಾಯಕ ತತ್ವ ಅಳವಡಿಸಿಕೊಂಡ ಕಲ್ಯಾಣದಲ್ಲಿ ನೀಡುವವರುಂಟು, ಬೇಡುವವರಿಲ್ಲ ಎಂಬಂಥ ಸುಭಿಕ್ಷುವಾದ ಸಮಾಜ ನಿರ್ಮಾಣವಾಗಿತ್ತು. ಇಂದು ಪ್ರಗತಿಯ ಉತ್ತುಂಗದಲ್ಲಿದ್ದೇವೆಂದು ಬೀಗುವ ಜಗತ್ತು. ಒಮ್ಮೆ ಕಲ್ಯಾಣದ ಬಸವ ಸಾಮ್ರಾಜ್ಯದತ್ತ ಚಿತ್ತ ಹರಿಸಿದರೆ, ವಿಶ್ವಕಲ್ಯಾಣವಾಗುವುದು.

ಸಾರ್ವಜನಿಕವಾಗಿ ಹುಟ್ಟುಹಬ್ಬ, ಗುಡಿ ಗುಂಡಾರಗಳ ಪೂಜೆ ಮುಂತಾದ ಸಮಾರಂಭಗಳಲ್ಲಿ ಪುಕ್ಕಟೆ ಹಂಚಲ್ಪಡುವ ಬಟ್ಟೆ-ಧನ-ಧಾನ್ಯಗಳಿಗೆ ಸಾಲುಗಟ್ಟುವ ಜನಸಂದಣಿ ನೋಡಿದರೆ, ನಾಗರಿಕ ಸಮಾಜ ತಲೆತಗ್ಗಿಸಬೇಕು. ಎಷ್ಟೋ ಸಲ ನೂಕುನುಗ್ಗಲಿನ ಕಾಲ್ತುಳಿತಕ್ಕೆ ಸಿಕ್ಕು ಸಾವಿರಾರು ಜನ ಸತ್ತ ವರದಿಗಳನ್ನು ಪತ್ರಿಕೆಯಲ್ಲಿ ಕಾಣುತ್ತೇವೆ. ಇದನ್ನೆಲ್ಲ ಗಮನಿಸಿದಾಗ ಭಾರತವಷ್ಟೇ ಅಲ್ಲ, ಇಡೀ ಪ್ರಪಂಚಕ್ಕೆ ಬಸವ ಸಿದ್ಧಾಂತವೇ ಮದ್ದಾಗಬಲ್ಲದು.

ಎಲ್ಲೆಲ್ಲಿಯೂ ಸ್ವಜನ ಪಕ್ಷಪಾತ, ಸ್ವಹಿತಾಸಕ್ತಿ ರಾರಾಜಿಸುತ್ತಿವೆ. ಒಂದೆಡೆ ಕಿತ್ತು ತಿನ್ನುವ ಬಡತನ, ಇನ್ನೊಂದೆಡೆ ವಿದೇಶದ ಬ್ಯಾಂಕುಗಳಲ್ಲಿ ಅನಾಮಿಕ ಹೆಸರಿನಲ್ಲಿ ಮಿಲಿಯನ್ ಗಟ್ಟಲೆ ಹಣ. ಪರಧನದಾಸೆಯಿಂದ ಇಂದು ಭಾರತ ಭ್ರಷ್ಟರ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ನೈತಿಕತೆ ಬೋಧನೆಯಲ್ಲಿ ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿದ್ದ ಭಾರತದಲ್ಲಿಯೂ ಪರಸತಿ ವ್ಯಾಮೋಹದ ಕಾರಣ ಏಡ್ಸ್ನಂತಹ ಹೆಮ್ಮಾರಿ ಪೀಡಿಸುತ್ತಿದೆ. ಕೋಮು ಗಲಭೆಗಳಿಗೆ ಕಡೆಯಿಲ್ಲ. ದೇವರ ಹೆಸರಲ್ಲಿ ದುಂದುವೆಚ್ಚ, ಪ್ರಾಣಿಬಲಿ, ನರಬಲಿಗಳು ರಾಜಾರೋಷವಾಗಿವೆ. ಕೆಲವರ ಕುತಂತ್ರದಿಂದ ಹಲವರ ಪಾಡು ಹೇಳಲಾರದಷ್ಟು ಭೀಕರವಾಗಿದೆ. ಹೀಗೆ ಹಲವಾರು ಸಮಸ್ಯೆಗಳ ಸರಮಾಲೆಯನ್ನೇ ಕಾಣುತ್ತೇವೆ. ಇವುಗಳಿಂದ ಮುಕ್ತಿ ಪಡೆಯಬೇಕಾದರೆ ಬಸವಣ್ಣನವರು ಬೋಧಿಸಿದ ಛಲಗಳನ್ನು ಮನದಲ್ಲಿ ಬಿತ್ತಿಕೊಂಡು ಬೆಳೆಯಬೇಕು. ಪ್ರಸ್ತುತ ಭಾರತದ ತುರ್ತು ಅಗತ್ಯವಿದು.

ಸತ್ಯದಿಂದ, ಸತ್ಯಕ್ಕಾಗಿ ಬದುಕುವ ಛಲದಿಂದ, ಎಂದೆಂದೂ ಕೆಳಗಿಳಿಯದ ಅವರ ಬಸವಣ್ಣನವರ ‘ಛಲವನಿಳಿಯದ ಭಾಷೆ’ಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸತ್ಯಮೇವ ಜಯತೆ ಸಾರ್ಥಕ ಪಡಿಸೋಣ. ‘ಆಯುಷ್ಯ ತಪ್ಪಿದರೆ ಮರಣ, ಜೊತೆಗೆ ಭಾಷೆ ತಪ್ಪಿದರೂ ಮರಣ’. ಇದು ಬಸವಾದಿ ಶರಣರ ಆತ್ಮಸಾಕ್ಷಿ ಘೋಷಣೆ. ಇಂಥ ಛಲವಂತರಿಂದಲೇ ನೀತಿಯುಕ್ತ ಶರಣ ಸಾಮ್ರಾಜ್ಯ ನಿರ್ಮಾಣ ಸಾಧ್ಯ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *