ಬೆಂಗಳೂರು:
ಒಂಬತ್ತು ಶತಮಾನಗಳ ಹಿಂದೆ ಬಸವಣ್ಣ ಮತ್ತು ಶರಣರು ಬರೆದ ವಚನಗಳು ಜ್ಣಾನ ದೀವಟಿಗೆಗಳಾಗಿ ನಿರಂತರವಾಗಿ ನಡೆಯುತ್ತ ವಚನಜ್ಯೋತಿ ಬಳಗದಿಂದ ವಚನ ಬಿತ್ತನೆಯನ್ನು ಯಶಸ್ವಿಯಾಗಿ ನಡೆಸಿವೆ ಎಂದು ಬೇಲಿಮಠದ ಶಿವರುದ್ರಸ್ವಾಮಿಗಳು ಹೇಳಿದರು.
ವಚನ ಶ್ರಾವಣ ಸಮಾರೋಪದಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಮಕ್ಕಳಲ್ಲಿ ವಚನಜ್ಯೋತಿ ಬಳಗ ಬಿತ್ತಿರುವ ವಚನ ಬೀಜಗಳು ಶುದ್ದ ಭಾವನೆಗಳ ರಸಗಂಗೆಯಾಗಿ ಪವಿತ್ರ ಭಾವನೆಯ ಜಲಧಾರೆಯಾಗಿ ಹರಿಯುತ್ತಿದೆ ಎಂದು ವಿವರಿಸಿದರು.

ಮೂವತ್ತು ದಿನಗಳು ಮೂವತ್ತಾರು ಅಂಗಳಗಳಲ್ಲಿ ವಚನ ಶ್ರಾವಣ ನಡೆದಿರುವುದು ರಾಜಧಾನಿಯ ಸಾಂಸ್ಕೃತಿಕ ಇತಿಹಾಸದಲ್ಲಿ ಗುಣಾತ್ಮಕ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಸಮಾರೋಪ ನುಡಿಗಳನ್ನಾಡಿದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ, ಬುದ್ದಿಯನ್ನು ಹರಿತಗೊಳಿಸುವ, ಚಿಂತನೆಯನ್ನು ಚುರುಕುಗೊಳಿಸುವ ಮತ್ತು ಬದುಕಿಗೆ ಬೆಳಕನ್ನು ನೀಡುವ ವಚನಗಳು ಕನ್ನಡದ ಸಾಂಸ್ಜೃತಿಕ ಸಂಪತ್ತಾಗಿದ್ದು, ವಿದ್ಯಾರ್ಥಿಗಳಿಗೆ ಈ ಸಂಪತ್ತನ್ನು ಹಂಚುತ್ತಿರುವ ವಚನಜ್ಯೋತಿ ಬಳಗದ ಕಾರ್ಯ ಮಾದರಿಯಾಗಿದ್ದು ಕನ್ನಡವನ್ನು ವಚನಗಳ ಮೂಲಕ ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.
ಆಶಯ ನುಡಿಗಳನ್ನಾಡಿದ ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ಹದಿನೇಳು ವರ್ಷಗಳ ಹಿಂದೆ ಕವಿ ಕಾವ್ಯ ಶ್ರಾವಣವನ್ನು ಬಳಗ ಆರಂಭಿಸಿ, ಆದಿಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪುವರೆಗಿನ ಕನ್ನಡ ಧೀಮಂತರ ಪರಿಚಯ ಮಾಡಿಕೊಡುವ ಕಾರ್ಯದಿಂದ ಇದೀಗ ಕಾಳವ್ವೆ, ರೆಮ್ಮವ್ವೆ, ರೇಚವ್ವೆ, ಸೊಮವ್ವೆ ಅಂತಹ ಅಪ್ರಸಿದ್ದ ವಚನಕಾರರ ಅನುಭಾವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.

ನವಂಬರ್ ತಿಂಗಳಿನ ಕೊನೆಯ ವಾರ ಕಲಾಗ್ರಾಮದಲ್ಲಿ ಮಕ್ಕಳ ವಚನ ಮೇಳ ನಡೆಯಲಿದ್ದು, ಎಳೆಯ ಮನಸ್ಸುಗಳಲ್ಲಿ ವಚನ ಬಿತ್ತನೆಯನ್ನು ನಡೆಸುವ ಸಂಕಲ್ಪ ಬಳಗದ್ದಾಗಿದೆ ಎಂದು ತಿಳಿಸಿದರು.
ಎಸ್. ಪಿನಾಕಪಾಣಿ ಸಂಪಾದಕತ್ವದ ಅಪ್ರಸಿದ್ದ ವಚನಕಾರರು ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಜಯವಿಭವಸ್ವಾಮಿ ಮಾತನಾಡಿ, ಪರಿಚಯವೇ ಇಲ್ಲದ ವಚನಕಾರರನ್ನು ಪರಿಚಯಿಸುವ ಗ್ರಂಥ ಇದಾಗಿದ್ದು ಪ್ರತಿಯೊಬ್ಬ ಕನ್ನಡಿಗರು ಓದಬೇಕಾದ ಪುಸ್ತಕ ಇದಾಗಿದೆ ಎಂದು ಬಣ್ಣಿಸಿದರು.

ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷ ದೊಡ್ಡಣ್ಣನವರ ವಚನ ಶ್ರಾವಣ ದಾಸೋಹಿಗಳನ್ನು ಗೌರವಿಸಿದರು. ಕೆಆರ್ ಐಡಿಎಲ್ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಸವನಗೌಡ, ಜ್ಞಾನ ವಿಕಾಸ ಪ್ರತಿಷ್ಠಾಪನ ಅಧ್ಯಕ್ಷ ಶಿವನಂಜಪ್ಪ, ವಚನಜ್ಯೋತಿ ಬಳಗದ ಗೌರವಾಧ್ಯಕ್ಷ ಮಹೇಶ ಬೆಲ್ಲದ, ಕಾರ್ಯಾಧ್ಯಕ್ಷ ಗುರುಪ್ರಸಾದ ಕುಚ್ಚಂಗಿ, ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಮುಖ್ಯ ಕಾರ್ಯನಿರ್ವಾಹಕ ರಾಜಾ ಗುರುಪ್ರಸಾದ, ಗಾಯಕಿಯರಾದ ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಕವಯತ್ರಿ ಕೆ.ಆರ್. ಸೌಮ್ಯ ಮತ್ತಿತರರು ಪಾಲ್ಗೊಂಡಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ