ನೂತನ ಅನುಭವ ಮಂಟಪ ಕಾಮಗಾರಿ ಶೇ.80 ಪೂರ್ಣ: ಖಂಡ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

‘ಇಂದು ಧರ್ಮದ ಹೆಸರಲ್ಲಿ ಕೆಲವರು ವಿಷಬೀಜ ಬಿತ್ತುತ್ತಾ ಸಮಾಜದ ಶಾಂತಿಯನ್ನೇ ಕದಡುತ್ತಿದ್ದಾರೆ‘

ಕೆ.ಆರ್. ನಗರ

ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಅನುಭವ ಮಂಟಪದ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್​ ಬಿ ಖಂಡ್ರೆ ಬುಧವಾರ ತಿಳಿಸಿದರು.

ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಾವು 2016ರಲ್ಲಿ ಪೌರಾಡಳಿತ ಸಚಿವರಾಗಿದ್ದಾಗ ಅನುಭವ ಮಂಟಪ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಿದೆವು. ಆಗ ಅವರು ಡಾ.ಗೊ.ರು. ಚನ್ನಬಸಪ್ಪ ಅವರ ನೇತೃತ್ವದ ತಜ್ಞರ ಸಲಹಾ ಸಮಿತಿ ರಚಿಸಿ, ಬಜೆಟ್​ನಲ್ಲಿ ಘೋಷಣೆಯನ್ನೂ ಮಾಡಿದ್ದರು, ಎಂದು ಖಂಡ್ರೆ ಸ್ಮರಿಸಿದರು.

ನಂತರ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿತ್ತು. ಬಸವ ಜಯಂತಿಯಂದೇ ಅಧಿಕಾರ ಸ್ವೀಕರಿಸಿದ್ದ ಸಿದ್ದರಾಮಯ್ಯನವರು ಮತ್ತೆ 2023ರಲ್ಲಿ ಮುಖ್ಯಮಂತ್ರಿಗಳಾದಾಗ 280 ಕೋಟಿ ರೂ. ಬಿಡುಗಡೆ ಮಾಡಿದ್ದು, ಕಾಮಗಾರಿ ಭರದಿಂದ ಸಾಗಿದೆ. ಇದಕ್ಕಾಗಿ ತಾವೆಲ್ಲರೂ ಅವರಿಗೆ ಆಭಾರಿಗಳಾಗಿದ್ದೇವೆ ಎಂದು ತಿಳಿಸಿದರು.

ಆಧುನಿಕ ಅನುಭವ ಮಂಟಪ ಒಂದು ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಸಮ್ಮಿಲನದ ಕೇಂದ್ರವಾಗಿದ್ದು, ಯುವ ಪೀಳಿಗೆಯಲ್ಲಿ ಏಕಾಗ್ರತೆ, ಆತ್ಮಸ್ಥೈರ್ಯ ಹೆಚ್ಚಿಸಲಿದ್ದು, ಅನುಭವಮಂಟಪ ಲೋಕಾರ್ಪಣೆಯಾದ ಬಳಿಕ ದೇಶದ ಮಹತ್ವದ ಪ್ರವಾಸಿ ತಾಣಗಳಲ್ಲಿ ಒಂದಾಗಲಿದೆ ಎಂದರು.

ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ

ಬಸವಣ್ಣನವರು 12ನೇ ಶತಮಾನದಲ್ಲಿ ದಯೆಯೇ ಧರ್ಮದ ಮೂಲವಯ್ಯ ಎಂದು ಹೇಳುವ ಮೂಲಕ ಧರ್ಮದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ್ದರು. ಆದರೆ ಇಂದು ಧರ್ಮದ ಹೆಸರಲ್ಲಿ ಕೆಲವರು ವಿಷಬೀಜ ಬಿತ್ತುತ್ತಾ ಸಮಾಜದ ಶಾಂತಿಯನ್ನೇ ಕದಡುತ್ತಿದ್ದಾರೆ ಎಂದು ಹೇಳಿದ್ದಾರೆ,

ಬಸವಣ್ಣ ಯಾವುದೇ ಜಾತಿಗಗೆ ಸೀಮಿತವಲ್ಲ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುಭವ ಮಂಟಪದ ಪುನರ್ನಿರ್ಮಾಣಕ್ಕಾಗಿ ಗೋ.ರು. ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೆ. ಸಮಿತಿಯ ವರದಿ ಆಧರಿಸಿ ಅನುಭವ ಮಂಟಪದ ನಿರ್ಮಾಣಕ್ಕಾಗಿ ₹280 ಕೋಟಿ ಬಿಡುಗಡೆ ಮಾಡಿದ್ದೆ.

ನಮ್ಮ ಆಡಳಿತಾವಧಿಯಲ್ಲಿಯೇ ಈ ಕೆಲಸವನ್ನು ಪ್ರಾರಂಭಿಸಲಾಗಿತ್ತು. ಅನುಭವ ಮಂಟಪದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ,” ಎಂದರು.

ಬಸವಣ್ಣನವರು ಯಾವುದೇ ಒಂದು ಜಾತಿ ಅಥವಾ ಗುಂಪಿಗೆ ಸೀಮಿತವಾದವರಲ್ಲ. ಅವರು ಇಡೀ ಮನುಕುಲಕ್ಕೆ ಸೇರಿದವರು. ಎಲ್ಲ ಮನುಷ್ಯರೂ ಸಮಾನ ಗೌರವದಿಂದ ಬದುಕಬೇಕು, ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂಬುದು ಅವರ ಆಶಯವಾಗಿತ್ತು.

ಆದರೆ ಸುಮಾರು 900 ವರ್ಷಗಳ ನಂತರವೂ ಬಸವಣ್ಣನವರ ಕನಸಿನ ಸಮಾಜ ನಿರ್ಮಾಣವಾಗಿಲ್ಲ ಎನ್ನುವುದು ವಿಷಾದನೀಯ. ಇಂದಿಗೂ ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸಮಾನತೆ, ಅಸ್ಪೃಶ್ಯತೆ, ಧರ್ಮಗಳ ನಡುವೆ ಸಂಘರ್ಷ ಮತ್ತು ಜಾತಿಗಳ ನಡುವೆ ವೈಮನಸ್ಸು ಮುಂದುವರಿದಿವೆ, ಎಂದು ವಿಷಾದ ವ್ಯಕ್ತಪಡಿಸಿದರು.

ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಚಿವ ಈಶ್ವರ ಖಂಡ್ರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ರವಿಶಂಕರ್, ಗಣೇಶ್ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *