ವಚನ ನಿರ್ವಚನ: ಎಚ್ಚು ಬಾಲಿಯ ಕೊಂದ ಕಟ್ಟಿದನು ಶರಧಿಯನು

ಅರ್ಧ ವಚನದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವ ಕನ್ನೇರಿ ಸ್ವಾಮಿ

ಗುಳೇದಗುಡ್ಡ:

ವಿಶ್ವನಾಥ ಶಿವಪ್ಪ ಅಂಗಡಿ ಅವರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವು ಬಸವಕೇಂದ್ರದ ವತಿಯಿಂದ ನಡೆಯಿತು.

ಧರ್ಮಗುರು ಬಸವ ತಂದೆಗಳ ವಚನವನ್ನು ವಿಶ್ಲೇಷಣೆಗಾಗಿ ಆಯ್ದುಕೊಳ್ಳಲಾಗಿತ್ತು.

ಎಚ್ಚು ಬಾಲಿಯ ಕೊಂದ ಕಟ್ಟಿದನು ಶರಧಿಯನು
ಹತ್ತು ತಲೆಯ ರಾವಳನ ಒಂದೇ ಅಂಬಿನಲ್ಲಿ ಮಡಿಹಿದ
ಛಲದಿ ಲಂಕಾದ್ವೀಪವ ನೆಲಸಮ ಮಾಡಿದ
ಕಲಿ ವಿಭೀಷಣಂಗೆ ಪಟ್ಟವ ಕಟ್ಟಿದ ರಾಮನ ತೋರ
ಮಾಯದ ಸಂಸಾರವನ್ನು ಕೆಟ್ಟು ಬರುದೊರೆವೊಗಬೇಡ.
ಕರ್ತೃ ಕೂಡಲಸಂಗಂಗೆ ಶರಣೆನ್ನಿರಯ್ಯ.

ಪ್ರೊ. ಶ್ರೀಕಾಂತ್ ಗಡೇದವರು 12ನೇ ಶತಮಾನದ ಕ್ರಾಂತಿಯ ಹಿನ್ನೆಲೆಯನ್ನು ತಿಳಿಸುತ್ತಾ, ಸರ್ವ ಸಮಾನತೆಗಾಗಿ ಹೊಸಯುಗ ಒಂದನ್ನು ಕಟ್ಟ ಬಯಸಿದರು. ಅದು ಹೇಗಿರಬೇಕೆಂದು ತಿಳಿಸುತ್ತಾ, ನಮಗೆ ಮಾಯದ ಸಂಸಾರವ ನೆಚ್ಚದಿರುವˌ ಸರ್ವವು ಶಿವಮಯವಾಗಿರುವ ಶರಣರು ನಮಗೆ ಆದರ್ಶವಾಗಿರಬೇಕು. ಎಂಥ ವೀರನೇ ಆಗಲಿ, ಮಹಾನುಭಾವ ಎಂದು ಜನ ನುಡಿಯುತ್ತಿರಲಿˌ ಅವರು ನಮಗೆ ಆದರ್ಶರಲ್ಲ.

ಈ ವಚನದಲ್ಲಿ ಉದಾಹರಿಸಿದಂತೆ ಶ್ರೀರಾಮನು ಸಹಿತ ಸಂಸಾರ ಮಾಯೆಗೆ ಒಳಗಾಗಿ, ಕೋಪ, ದ್ವೇಷ ಹಾಗೂ ಛಲಂಗಳಿಂದಾಗಿ ಸಾಮಾನ್ಯ ಮಾನವರಂತೆ ವರ್ತಿಸಿದ.  ಕಾರಣ ಅವಗುಣವನ್ನು ಕಳೆವ ಮಾರ್ಗವಾದ ಇಷ್ಟಲಿಂಗವನ್ನು ಧರಿಸಬೇಕು. ವೇದ ಪುರಾಣಗಳನ್ನೊಪ್ಪದ ಬಸವಣ್ಣನವರು ಅಂದೇ ಜನಿವಾರವನ್ನು ಕಿತ್ತೆಸೆದವರಾಗಿದ್ದರು. ನಮಗೆ ಘನಕ್ಕೆ ಘನವಾದ ಶರಣರೆ ಮಾದರಿ ವ್ಯಕ್ತಿಗಳು ಎಂದು ತಿಳಿಸಿದರು.

ಹಿರಿಯರಾದ ಮಹಾಲಿಂಗಪ್ಪ ಕರನಂದಿಯವರು, ಪುರಾಣಕ್ಕಿಂತ ಚರಿತ್ರೆ ಭಿನ್ನವಾದದು. ಅಂತೆ ಕಂಥೆಗಳ ಕಥೆಯನ್ನು ಸರಿಯಾಗಿ ಗ್ರಹಿಸಬೇಕು. ಕೊಲ್ಲಬೇಕಾದದ್ದು ಮನುಷ್ಯರನ್ನು, ಪ್ರಾಣಿಗಳನ್ನಲ್ಲ. ನಮ್ಮೊಳಗಿನ ಅವಗುಣಗಳನ್ನು ನಾಶಪಡಿಸಬೇಕು.

ಎಂತಹ ವೀರಾಧಿವೀರನಾದರೂ ಸಾಮಾನ್ಯ ಮಾನವನಂತೆ ವರ್ತಿಸಿದ ರಾಮನು ಮಾಡಿದ 5 ಸಾಹಸಗಳ ಪಟ್ಟಿ ಈ ವಚನದಲ್ಲಿದೆ. ಇದೆಲ್ಲ ವ್ಯರ್ಥವೇ ಸರಿ. ಶರಣೆಂದವಗೆ ಮರಣವಿಲ್ಲ ಎಂಬ ಗಾದೆ ಮಾತಿನಂತೆ ನಾವು ಬದುಕಲು ಸಾಕ್ಷಾತ್ ಕೂಡಲಸಂಗಮ ದೇವನೆ ಆಗಿರುವ ಅಂಗೈ ಲಿಂಗದ ಮೂಲಕ ಬದುಕನ್ನು ಸವೆಯಿಸಬೇಕು ಎಂದರು.

ಡಾ. ಗಿರೀಶ ನೀಲಕಂಠಮಠವರು ಈ ವಚನದ ವಿಶ್ಲೇಷಣೆಯನ್ನು ಮಾಡುತ್ತಾ, ಬಸವಣ್ಣನವರು ಮುಖ್ಯವಾಗಿ ಜನಸಾಮಾನ್ಯರನ್ನು ತಮ್ಮ ಸುತ್ತಮುತ್ತಲು ಇರಿಸಿಕೊಂಡಿದ್ದರು.  ಮುಖ್ಯವಾಗಿ ಶರಣ ಸಮ್ಮತ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಅವರ ಗುರಿಯಾಗಿತ್ತು.  ಮೇಲ್ನೋಟಕ್ಕೆ ಈ ವಚನ ರಾಮನ ಪಾರಮ್ಯವನ್ನು ಎತ್ತಿ ಹೇಳುವಂತೆ ಕಂಡರೂ, ರಾಮ ಸಿಲುಕಿದ ಸಂಸಾರ ಬಲೆಯಲ್ಲಿ ಒದ್ದಾಡಿರುವುದನ್ನು ಈ ವಚನ ತಿಳಿಸಿಕೊಡುತ್ತದೆ.

ಮರೆಯಾದ ಪುರುಷೋತ್ತಮನಾದ ರಾಮನು ಸಂಸಾರ ಒಂದು ಮಾಯೆ ಎಂಬುದನ್ನು ತಿಳಿಯದೆ ಹೋದ. ಜಿಂಕೆ ಯಾವಾಗಲಾದರೂ ಬಂಗಾರದ್ದಿರಬಹುದೇ ಎಂಬ ಕಲ್ಪನೆಯನ್ನು ಮಾಡಲಿಲ್ಲ. ಇಂದು ಧರ್ಮವನ್ನೇ ದಾರಿ ತಪ್ಪಿಸುವಂತಹ ಕೆಲಸಗಳು ನಡೆಯುತ್ತಿವೆ. ವಚನದ ಅರ್ಧ ಭಾಗವನ್ನು ಮಾತ್ರ ಎತ್ತಿಕೊಂಡು ಅರ್ಥ ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕಾರ್ಯವು ನಡೆಯುತ್ತಲಿದೆ.

ಅದೇನೆ ಇರಲಿˌ ಬಹುತೇಕರು ಒಪ್ಪುವಂತೆ ಸಂಸಾರ ಒಂದು ಮಾಯೆ. ಅದೊಂದು ಬಂಧನ.  ಆ ಮಾಯಾ ಆವರಣದಲ್ಲಿ ರಾಮನು ಸಿಲುಕಿಹೋದ. ವಿವೇಚನೆಯನ್ನು ಕಳೆದುಕೊಂಡ. ಆದರೆ ಶರಣರದು ವೇದ, ಶಾಸ್ತ್ರ, ಆಗಮಗಳನ್ನು ಮೀರಿದ ನಿಲುವು. ಈ ಕಾರಣವಾಗಿ ರಾಮನಂತೆ ವರ್ತಿಸಿ, ಮಾಯಾ ಆವರಣಕ್ಕೆ ಒಳಗಾಗುವುದಕ್ಕಿಂತ, ಅದಕ್ಕೂ ಮಿಗಿಲಾದ ಸಮರಸ ಭಾವದ ಲಿಂಗ ತತ್ವದ ಕಡೆಗೆ ಜನರು ಹೊರಳುವಂತೆ ವೈಚಾರಿಕವಾದ ಈ ವಚನವನ್ನು ವಿಶ್ವಗುರು ಬಸವಣ್ಣನವರು ಹೇಳಿದ್ದಾರೆ ಎಂದರು.

ಕೊನೆಯಲ್ಲಿ ವಚನದ ಸಮಾರೋಪವನ್ನು ನಿವೃತ್ತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿಯವರು ಮಾತನಾಡುತ್ತಾ, ಈ ವರೆಗಿನ ಎಲ್ಲಾ ಅನುಭಾವಿಗಳ ನುಡಿಗಳು ಸತ್ಯ ಇವೆ. ಪುರಾಣದ ರಾಮಚಂದ್ರನು ದೇವರೇ ಆಗಿರಬಹುದು, ˌಮಹಾಬಲಶಾಲಿಯೂ ಆಗಿರಬಹುದು, ಆ ಬಗ್ಗೆ ಆಕ್ಷೇಪವಿಲ್ಲ. ಒಬ್ಬ ಮಹಾವೀರ ಮಾಡುವ ಕಾರ್ಯವನ್ನು ರಾಮ ಮಾಡಿದ್ದಾನೆ. ಮಹಾಬಲಶಾಲಿಗಳಾದ ವಾಲಿ, ರಾವಣರನ್ನು ಕೊಂದಿದ್ದಾನೆ. ಹಠಕ್ಕೆ ಬಿದ್ದು ಬಂಗಾರದಿಂದ ಕಟ್ಟಿದ ಲಂಕೆಯನ್ನು ನೆಲಸಮ ಮಾಡಿದ. ಸೇತುವೆಯನ್ನು ಕಟ್ಟಿದ್ದು ಮತ್ತೆ ವಿಭೀಷಣಂಗೆ ಪಟ್ಟಗಟ್ಟಿದ್ದು ಇವೆಲ್ಲ ವೈರುಧ್ಯಗಳಿಂದಲೇ ತುಂಬಿವೆ.

ಮಹಾನ್ ಶಕ್ತಿಶಾಲಿಯಾದ ರಾಮಚಂದ್ರˌ ಕೊಲ್ಲುವ ಸುಡುವ ಹಾಳು ಕಾರ್ಯಗಳನ್ನು ಮಾಡಿದ. ಆತನ ಪರಾಕ್ರಮವನ್ನು ಉತ್ತಮ ರಚನಾತ್ಮಕ ಕಾರ್ಯಗಳನ್ನು ಮಾಡಬಹುದಾಗಿತ್ತು. ಹಿಂಸೆಯನ್ನು ವಿಜೃಂಭಿಸದೆ ದಯೆ ಕರುಣೆ ಅನುಕಂಪಗಳಿಂದ ಈ ಕಾರ್ಯ ಸಾಧಿಸಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ಇವೆಲ್ಲದರ ಹಿಂದೆ ಸ್ವಾರ್ಥದ ಲೇಪನವಿದೆ.  ಕೇವಲ ಜಯಕ್ಕಾಗಿ ಮೋಸ ಮಾಡುವ ಕುಕಾರ್ಯವಿದೆ. ಇವು ಆದರ್ಶನೀಯವಲ್ಲ.

ಇದಕ್ಕೆ ಹೊರತಾಗಿ ಸತ್ಯದ ಮೇಲಿನ ಪ್ರತೀಕವಾದ ಕೂಡಲಸಂಗಮದೇವನನ್ನು ಒಪ್ಪಿಕೊಳ್ಳುವ ಅವಶ್ಯಕತೆ ಇದೆ. ಸರ್ವ ಸಮಭಾವದ ಮಹಾಲಿಂಗ ಸಮರತಿ ಸಮಸುಖ ಸಮಕಳೆಯನ್ನು ಹೊಂದಿದೆ. ಅಲ್ಲದೆ ನಾವು ಲಿಂಗಾಯತರು ವೇದಮಾರ್ಗಕ್ಕಿಂತ ಭಿನ್ನರು ಎಂಬುದನ್ನು ಇಲ್ಲಿ ಈ ವಚನ ಸೂಚವಾಗಿ ತಿಳಿಸುತ್ತದೆ ಎಂದು ಬರಗುಂಡಿಯವರು ಹೇಳುತ್ತಾ, ಇದೇ ಸಂದರ್ಭದಲ್ಲಿ ಅಪೂರ್ಣ ವಚನ ಉತ್ತರಿಸಿ ಅರ್ಥ ವ್ಯತ್ಯಾಸವಾಗುವಂತೆ ಮಾತನಾಡುತ್ತಿರುವ ಕನೇರಿ ಶ್ರೀಗಳ ಮಾತನ್ನು ಖಂಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಜಯಶ್ರೀ ಬರಗುಂಡಿ, ಶ್ರೀದೇವಿ ಶೇಖಾ ಅವರಿಂದ ವಚನ ಪ್ರಾರ್ಥನೆ, ಕುಮಾರಿ ಲಕ್ಷ್ಮಿ ನಾಯನೇಗಲಿ ಅವರಿಂದ ವಚನ ಗೀತೆಯಾಗಿ ಮುರುಗೇಶ ಶೇಖಾವರಿಂದ ಶರಣು ಸಮರ್ಪಣೆ ಆಯಿತು.

ಕಾರ್ಯಕ್ರಮದಲ್ಲಿ ಬಸಲಿಂಗಯ್ಯ ಕಂಬಾಳಿಮಠ, ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ರಾಚಪ್ಪ ಯಂಡಿಗೇರಿ, ರಾಚಣ್ಣ ಕೆರೂರ, ವಿಶ್ವನಾಥ ಅಂಗಡಿ, ಮಂಜುನಾಥ ಅಂಗಡಿ, ಬಸವರಾಜ ಖಂಡಿ, ದಾಕ್ಷಾಯಿಣಿ ತೆಗ್ಗಿ, ಬಸಮ್ಮ ಇಂಜಿನವಾರಿ, ಗೀತಾ ತಿಪ್ಪಾ ಮೊದಲಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *