ಮಹಾಶರಣ ಉರಿಲಿಂಗಪೆದ್ದಿ ಅವರ ವಚನ ನಿರ್ವಚನ
ಗುಳೇದಗುಡ್ಡ :
ಬಸವ ಕೇಂದ್ರದ ವತಿಯಿಂದ ಶನಿವಾರ ಶರಣರಾದ ಸಿದ್ದಪ್ಪ ಅರಕಾಲಚಿಟ್ಟಿ ಅವರ ಮನೆಯಲ್ಲಿ ‘ಮಹಾಮನೆ ಕಾರ್ಯಕ್ರಮ’ ನಡೆಯಿತು.
ಅಂದು ಶರಣ ಉರಿಲಿಂಗಪೆದ್ದಿಗಳ ವಚನವನ್ನು ಚಿಂತನೆಗಾಗಿ ಆಯ್ದುಕೊಳ್ಳಲಾಗಿತ್ತು. ಆ ವಚನ ಹೀಗಿದೆ,
ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು.
ಅದೆಂತೆಂದಡೆ
ಫಲ ಭೋಗಂಗಳ ಬಯಸುವನಾಗಿ
ಫಲವನುಂಡು ಮರಳಿ ಭವಕ್ಕೆ ಬಹನಾಗಿ;
ಇದು ಕಾರಣ
ಅರಿದು ಮುಕ್ತಿಯ ಹಡೆವಡೆ
ಅನುಭವವೇ ಬೇಕು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ಸದರಿ ವಚನದ ಚಿಂತನೆಯನ್ನು ಪ್ರೊ. ಶ್ರೀಕಾಂತ ಮಲ್ಲಪ್ಪ ಗಡೇದ ಅವರು ಮಾಡುತ್ತಾ, “ಪೆದ್ದಣ್ಣ ಎಂಬುವರು ಪೂರ್ವಾಶ್ರಮದಲ್ಲಿ ಕಳ್ಳತನ ಮಾಡುವವನಾಗಿದ್ದು, ˌಉರಿಲಿಂಗದೇವ ಎಂಬ ಗುರುವಿನ ಕಾರುಣ್ಯದಿಂದಾಗಿ ಶರಣಾಗಿ ಪರಿವರ್ತನೆಯಾದರು. ಮತ್ತು ತಮ್ಮ ಗುರುವಿನ ಹೆಸರಿನೊಂದಿಗೆ ವಚನಾಂಕಿತವನ್ನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಎಂದಿಟ್ಟುಕೊಂಡು ರಚಿಸಿದ 366 ವಚನಗಳು ಈಗ ಲಭ್ಯ ಇವೆ. ತಮ್ಮ ವಚನದಲ್ಲಿ ಅವರು ಸಂಸ್ಕೃತದ ಶ್ಲೋಕಗಳನ್ನು ಯಥೇಚ್ಛ ಬಳಸಿಕೊಂಡಿದ್ದಾರೆ. ಲೋಕಾನುಭವ ಮತ್ತು ಶಿವಾನುಭವಗಳು ಅವರ ವಚನಗಳಲ್ಲಿ ಸಮ್ಮಿಳಿತ ಗೊಂಡಿವೆ.”
ಅವರು ಲಿಂಗಾಯತ ತತ್ವಗಳನ್ನು ಎಷ್ಟು ಅರಗಿಸಿಕೊಂಡಿದ್ದರು ಎಂಬುದಕ್ಕೆ ಅವರ ಈ ವಚನವೇ ಸಾಕ್ಷಿಯಾಗುತ್ತದೆ. ಭಕ್ತಿಯನ್ನು ಅರಿತು ಮಾಡಬೇಕು. ನಾವು ಮಾಡುವ ಭಕ್ತಿ ಗಾಣದ ಎತ್ತಿನಂತೆ ಅರ್ಥವಿಲ್ಲದ ಆಚರಣೆಯಾಗಬಾರದು; ಅದು ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾಗಬೇಕು. ಭಕ್ತಿ ಮಾಡಿ ಫಲಕ್ಕಾಗಿ ಆಶಿಸಿದರೆ ಅದು ಶರಣರ ದೃಷ್ಟಿಯಲ್ಲಿ ಕೈಕೂಲಿಯಾಗುತ್ತದೆ. ಹಾಗಾಗದೆ ಲಿಂಗ ತನ್ನ ಮೂಲಸ್ವರೂಪವೆಂದು ಅರಿತರೆ ಬದುಕು ಸಾರ್ಥಕವಾಗುತ್ತದೆ. ತನ್ನ ಬದಲಾವಣೆಯಿಂದಲೇ ಸಮಾಜ ಬದಲಾವಣೆಯಾಗುತ್ತದೆ ” ಎಂದು ಹೇಳಿದರು.
ರಂಗ ಕರ್ಮಿಗಳಾದ ಮಹಲಿಂಗಪ್ಪ ಕರನಂದಿ ಅವರು ಇದೇ ವಚನವನ್ನು ಕುರಿತು ಮಾತನಾಡುತ್ತಾ, “ವ್ಯಕ್ತಿ ಹುಟ್ಟು ಸಾವಿನಿಂದ ಅತೀತನಾಗಬೇಕಾದರೆ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು.ಇದು ಇಷ್ಟಲಿಂಗದಿಂದ ಸಾಧ್ಯವಾಗುತ್ತದೆ. ಸಾಗರ ತರಂಗದಂತೆ ಲಿಂಗದಲ್ಲೇ ಉದ್ಭವವಾಗಿ ಅಲ್ಲಿಯೇ ಲೀನವಾಗುವುದೇ ಮುಕ್ತಿ; ವಿನಹ ಇದಕ್ಕಿಂತ ಬೇರೇನಿಲ್ಲ. ಶರಣರ ವಿಚಾರಗಳನ್ನು ಶ್ರವಣ ಮಾಡಿದರೆ ಭವ ಬಂಧನ ನಾಶವಾಗುತ್ತದೆ” ಎಂದು ಹೇಳಿದರು.
ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಮಹಾದೇವಯ್ಯ ನೀಲಕಂಠಮಠ ಅವರು ಮಾತನಾಡುತ್ತಾ, “ಆವರೆಗೆ ಉದರಂಬರಣಕ್ಕಾಗಿ ಮಾಡುವ ಕೆಲಸವನ್ನು ಕಾಯಕವನ್ನಾಗಿಸಿˌ ಬದುಕು ಮತ್ತು ಕೆಲಸಕ್ಕೊಂದು ಅರ್ಥವನ್ನು ಕೊಟ್ಟವರು ಶರಣರು. ಭಕ್ತಿಯ ಹೆಸರಿನಲ್ಲಿ ಬೆಳೆಸಿಕೊಳ್ಳುವ ಅಂಧಶ್ರದ್ಧೆ ಖಂಡನೀಯ. ಭಕ್ತಿಯು ನಮ್ಮ ಅರಿವಿನ ಕಣ್ಣನ್ನು ತೆರೆಯಿಸಿ ಮನುಷ್ಯ ಮಾತ್ರರಾದ ನಮ್ಮನ್ನು ದೇವತ್ವಕ್ಕೇರಿಸಿ ಮಹಾಲಿಂಗವನ್ನಾಗಿ ಪರಿವರ್ತಿಸುವ ಸಾಧನವಾಗಿದೆ. ಅರಿವು ಆಚಾರಗಳ ಸಮಾಗಮವೇ ಅನುಭಾವ. ಕಾರಣ ಭಕ್ತಿಯನ್ನು ಸಾರಾಸಾರ ವಿಚಾರ ಮಾಡಿ ಆಚರಿಸಬೇಕು.”

“ಮುಕ್ತಿಯನ್ನು ಪಡೆಯುವುದೇ ಮಹದುದ್ದೇಶವಾಗಿದ್ದರೆ ಮೊದಲು ಅನುಭಾವಿಗಳಾಗಬೇಕು. ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಭಕ್ತಿ ಮಾಡುತ್ತಾ ಹೋಗಬೇಕು. ಅಂದಾಗ ವ್ಯಕ್ತಿ ಶರಣನಾಗಿ ಲಿಂಗಾಂಗ ಸಮರಸ ಸುಖದಿಂದ ಇರುತ್ತಾನೆ. ಇಲ್ಲಿ ಉರಿಲಿಂಗ ಪೆದ್ದಿಗಳು ಗಳಿಸಿದ್ದು ಇದನ್ನೇ ˌಎಂಬುದನ್ನು ಅರಿಯಬೇಕು” ಎಂದು ವಿವರಿಸಿದರು.
ವಚನ ಚಿಂತನದ ಕೊನೆಯಲ್ಲಿ ನಿವೃತ್ತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿ ಅವರು, “ಪೆದ್ದಣ್ಣನೆಂಬಾತ ಕೇವಲ ಹೊಟ್ಟೆ ಹೊರೆಯುವುದಕ್ಕಾಗಿ ಕಳ್ಳತನ ಮಾಡುವ ವೃತ್ತಿಯನ್ನು ಕೈಕೊಂಡು ಅದೇ ತನ್ನ ಜೀವನದ ಪರಮಾನಂದವೆಂದು ನಂಬಿಕೊಂಡಿದ್ದ. ಯಾವಾಗ ಗುರುವನ್ನು ಕಂಡು ಅರಿವನ್ನಾಗಿಸಿಕೊಂಡು ಕೈಯೊಳಗಿನ ಕಲ್ಲನ್ನೇ ಲಿಂಗವೆಂದು ಬಗೆದನೋˌ ಅದರಲ್ಲಿ ವಿಶ್ವಾಸವಿಟ್ಟು ಹೀನವೃತ್ತಿಯ ತೊರೆದು ಲಿಂಗ ವ್ಯಸನಿಯಾಗಿ ಬಾಳಿದನೋ ಆಗ ಅದೇ ಪೆದ್ದಣ್ಣ ಉರಿಲಿಂಗ ಪೆದ್ದಣ್ಣನಾದ. ಇದು ಕೇವಲ ಹೆಸರಿನ ಬದಲಾವಣೆಯಲ್ಲ ˌ ತನು-ಮನ ಭಾವಗಳ ಬದಲಾವಣೆ.”
“ಅಂಗಸಂಗಿಯಾದಾತ ˌಲಿಂಗಸಂಗಿಯಾದ ಹೀಗಾಗಿ ˌಭಕ್ತಿ ಎಂದರೆ ಲಿಂಗದ ಮೇಲಿನ ಶ್ರದ್ಧೆ ಅಥವಾ ವಿಶ್ವಾಸವೇ ಭಕ್ತಿ ಎಂಬ ನಿಲುವಿಗೆ ಬಂದರು. ಭಕ್ತಿಯನ್ನು ತಿಳಿದು ಮಾಡಬೇಕು. ಇಷ್ಟಲಿಂಗ ತನ್ನ ಅರುವಿನ ಕುರುಹು ಅದುವೇ ಪ್ರಾಣ ಲಿಂಗವಾಗಿ ಭಾವಲಿಂಗವಾಗಿ ತನ್ನನ್ನು ಆವರಿಸಬೇಕು ; ಇಲ್ಲದಿದ್ದರೆ ಲಿಂಗಕ್ಕೆ ಮಾಡುವ ಭಕ್ತಿಯು ವ್ಯರ್ಥವಾಗಿ ಮತ್ತೆ ಭವಾಂತರಕ್ಕೆ ಈಡು ಮಾಡುತ್ತದೆ.”
“ಯಾವಯಾವುದೋ ಫಲಕ್ಕಾಗಿ ಮಾಡುವ ಭಕ್ತಿಯು ಭಿಕ್ಷೆಯಲ್ಲದೆ ಬೇರೇನೂ ಅಲ್ಲ ˌಎನ್ನುವ ಮೂಲಕ ಈ ಹಿಂದಿನ ಕರ್ಮಫಲಭೋಗ ಸಿದ್ಧಾಂತವನ್ನೇ ತಿರಸ್ಕರಿಸುತ್ತಾರೆ. ಹೆಣ್ಣು, ಗಂಡು, ಹೊನ್ನು, ಮಣ್ಣು ಮೊದಲಾದ ಐಹಿಕ ಫಲಕ್ಕಾಗಿ ಹಾತೊರೆದರೆ ಅದು ಮತ್ತೆ ಭವಕ್ಕೆ ಬರಿಸುತ್ತದೆ. ಪುಣ್ಯ ಪಾಪಗಳ ಆಚೆಗೆ ಶುದ್ಧವಾದ ಲಿಂಗಭಕ್ತಿ ಇದೆ. ವಿವಿಧ ಕರ್ಮಫಲ ಹೋಗ ಬಯಸಿ ಮಾಡಿದ ಭಕ್ತಿ ಆಯಾ ಫಲ ಸಂಚಯ ತೀರಿದೊಡನೆ ಮತ್ತೆ ಭವಕ್ಕೆ ಬರಿಸುತ್ತದೆ. ಇಂತಹ ಮುಕ್ತಿಯನ್ನು ಶರಣರು ಬಯಸಲಿಲ್ಲ; ಅವರು ವಿಶ್ವಾಸ ಭಕ್ತಿಯಿಂದ ಸಮರಸ ಭಕ್ತಿಯ ಕಡೆಗೆ ಸಾಗುವದೇ ನಿಜವಾದ ಐಕ್ಯವೆಂದರು.”
“ಶರೀರದ ಮೇಲೆ ಧರಿಸಿದ ಇಷ್ಟಲಿಂಗ ಆಚಾರಲಿಂಗದಿಂದ ಸಾಗಿ ಮಹಾಲಿಂಗವಾಗುತ್ತದೆ. ಇದನ್ನು ಶೃದ್ದೆಯಿಂದ ಸೇವಿಸುವುದೇ ನಿಜವಾದ ಭಕ್ತಿ ಎನಿಸಿಕೊಳ್ಳುತ್ತದೆ. ಹೀಗಾಗಿ ಅರಿವು ಆಚಾರಗಳಿಂದ ಅನುಭಾವಿಗಳಾದ ಲಿಂಗಾಂಗಿಗೆ ಈ ಐಕ್ಯಸ್ಥಳ ಸಿದ್ದಿಸುತ್ತದೆ. ಇಂಥ ಭಕ್ತಿಯನ್ನು ಆಚರಿಸುವುದೇ ಲಿಂಗವಂತರ ನಡೆಯಾಗಬೇಕು ಹಾಗೂ ಗುರಿಯಾಗಬೇಕು” ಎಂದು ಬರಗುಂಡಿಯವರು ಈ ವಚನದ ಅರ್ಥವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಕಳ್ಳಿಗುಡ್ಡ ಗ್ರಾಮದ ನಿವೃತ್ತ ಶಿಕ್ಷಕರಾದ ಮೆಣಸಗಿ ಅವರು ಸುಶ್ರಾವ್ಯವಾಗಿ ವಚನಗೀತೆಯನ್ನು ಪ್ರಸ್ತುತಪಡಿಸಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ಬಸವಂತಪ್ಪ ದೇವರ ಅವರು ಜೇಡರದಾಸಿಮಯ್ಯ ಅವರ ವಚನವನ್ನು ಅರ್ಥೈಸಿದರು. ಹಾಗೆಯೇ ಕಾರ್ಯಕ್ರಮದ ಪ್ರಾರಂಭದಲ್ಲಿ ಸಿದ್ದಣ್ಣ ಅರಕಾಲಚಿಟ್ಟಿ ಅವರು ಸ್ವಾಗತಿಸಿದರು. ಜಯಶ್ರೀ ಬರಗುಂಡಿ, ಶ್ರೀದೇವಿ ಶೇಖಾ, ವಿಶಾಲಾಕ್ಷಿ ಗಾಳಿ ಅವರು ವಚನ ಪ್ರಾರ್ಥನೆ ಮಾಡಿದರು. ಮುರುಗೇಶ ಶೇಖಾ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ಬರಗುಂಡಿ ವಚನ ಮಂಗಳ ಮಾಡಿದರು.

ಮಹಾಗುಂಡಪ್ಪ ಅರಕಾಲಚಿಟ್ಟಿ, ಸಂಗಪ್ಪ ಬೆನಕಟ್ಟಿ, ರಾಚಪ್ಪ ಎಂಡಿಗೇರಿ, ಬಸಲಿಂಗಯ್ಯ ಕಂಬಾಳಿಮಠ, ದಾನಪ್ಪ ಬಂಡಿ, ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಪ್ರೊ. ಸುರೇಶ ರಾಜನಾಳ, ಸುರೇಖಾ ಗೆದ್ದಲಮರಿ, ಗೀತಾ ಕೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಮಂಟಪ ಹಾಗೂ ಮಹತ್ವದ ವಿಷಯಗಳ ಬಗ್ಗೆ ಮಾಹಿತಿ ನೀಡಿದರಿ ಜೈ ಬಸವ ಶರಣು ಶರಣಾರ್ಥಿ