ನೂತನ ಅನುಭವ ಮಂಟಪವನ್ನು ಯಾವುದೇ ಮಠಕ್ಕೆ ನೀಡಬಾರದು: ಜಾಮದಾರ್

ಸಿ.ಎಂ. ಬೂದಿಹಾಳ
ಸಿ.ಎಂ. ಬೂದಿಹಾಳ

ಬೆಳಗಾವಿ

ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪವನ್ನು ಸರ್ಕಾರವು ತನ್ನ ಅಧೀನದಲ್ಲಿಯೇ ಇರಿಸಿಕೊಳ್ಳಬೇಕು. ಯಾವುದೇ ಖಾಸಗಿ ಸಂಸ್ಥೆ ಅಥವಾ ಮಠಕ್ಕೆ ನೀಡಬಾರದು, ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಬುಧವಾರ ಹೇಳಿದರು.

ನಗರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಅನುಭವ ಮಂಟಪದ ದೈನಂದಿನ ನಿರ್ವಹಣೆ ಹಾಗೂ ವಿಶೇಷ ಕಾರ್ಯಕ್ರಮಗಳ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಲು ಸರ್ಕಾರದ ಮತ್ತು ಕೆಲವು ಲಿಂಗಾಯತ ಮಠಗಳ ಹಾಗೂ ಲಿಂಗಾಯತ ಸಂಸ್ಥೆಗಳ ಪ್ರತಿನಿಧಿಗಳುಳ್ಳ ಒಂದು ವಿಶೇಷ ಸಮಿತಿಯನ್ನು ರಚಿಸುವುದು ಸೂಕ್ತ.

ಆ ಸಮಿತಿಯ ಮೂಲಕ ಅಲ್ಲಿಗೆ ಬರುವ ಹತ್ತಾರು ಸಾವಿರ ಜನರಿಗೆ ನಿತ್ಯ ದಾಸೋಹ ಸೇವೆ, ವಚನ ಅಧ್ಯಯನ ಶಿಬಿರಗಳು, ಪ್ರಜಾತಾಂತ್ರಿಕ ಶಿಕ್ಷಣ, ಕಾರ್ಯಾಗಾರ, ಕಾಯಕ ತತ್ವ, ಸ್ತ್ರೀ ಸಮಾನತೆ ಕಾರ್ಯಕ್ರಮಗಳು, ಪ್ರವಾಸಿ ಮಾರ್ಗದರ್ಶಕರಿಗೆ (ಟೂರಿಸ್ಟ ಗೈಡ್) ತರಬೇತಿ, ಇತ್ಯಾದಿ ಜವಾಬ್ದಾರಿಗಳನ್ನು ನಿರ್ವಹಿಸಬಹುದೆಂದು ತಿಳಿಸಿದರು.

ಈಗ ನಿರ್ಮಾಣವಾಗುತ್ತಿರುವ ಅನುಭವ ಮಂಟಪದ ಕಟ್ಟಡವನ್ನು 2027ರ ಮಾರ್ಚ ತಿಂಗಳಲ್ಲಿ ಉದ್ಘಾಟಿಸುವುದಾಗಿ ರಾಜ್ಯದ ಸಚಿವ ಈಶ್ವರ ಖಂಡ್ರೆಯವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಆದರೆ ಆ ಸಮಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲದಿರುವುದರಿಂದ ರಾಜಕೀಯ ಉದ್ದೇಶಗಳಿಗಾಗಿ ಅರ್ಧ ಮರ್ಧ ಕೆಲಸ ಮಾಡಿ ಉದ್ಘಾಟನೆ ಮಾಡುವುದು ಸರಿಯಲ್ಲ. ಆದ್ದರಿಂದ ಅನುಭವ ಮಂಟಪದ ಉದ್ಘಾಟನೆಯನ್ನು ಜನೆವರಿ 2028ರ ವರೆಗೆ ಮುನ್ನೂಡುವಂತೆ ವಿನಂತಿಸಿದರು.

ಇಲ್ಲಿಯವರೆಗೆ ಕಟ್ಟಡದ ವೆಚ್ಚ 640 ಕೋಟಿ ರೂಪಾಯಿಗಳಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ನೀಡಿದ 200 ಕೋಟಿ ಅನುದಾನ ಮತ್ತು ಕಳೆದ ಎರಡೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಈ ವರೆಗೆ ನೀಡಿದ 250 ಕೋಟಿ ರೂಪಾಯಿ ಸೇರಿಸಿ ಒಟ್ಟು ಹಣ 450 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ.

ಮೂಲ ಕೆಲಸಗಳನ್ನು ಮುಗಿಸಲು ಒಟ್ಟು 450 ಕೋಟಿ ಸಂದಾಯವಾಗಬೇಕಿದೆ. ಪ್ರಮುಖವಾದ ದಾಸೋಹ ಭವನ, ಯಾತ್ರಿ ನಿವಾಸ, ಪಾರ್ಕಿಂಗ್ ಪ್ರದೇಶ ಕೆಲಸಗಳನ್ನು ಈ ವರೆಗೂ ಅನುಮೋದಿಸಿಲ್ಲ. ಟೆಂಡರ ಕರೆದಿಲ್ಲ. ಆ ಕೆಲಸಗಳು ಪ್ರಾರಂಭವಾಗಲು ಇನ್ನೂ ಮೂರು ನಾಲ್ಕು ತಿಂಗಳಾದರೂ ಬೇಕು. ಅವುಗಳಿಗೆ 100 ಕೋಟಿ ರೂಪಾಯಿ ಬೇಕೆಂದು ಅಂದಾಜಿಸಲಾಗಿದೆ. ಇದೂ ಸೇರಿದರೆ ಒಟ್ಟು ಬೇಕಾದ ಹಣ 550 ಕೋಟಿ ಆಗುತ್ತದೆ.

ಈ ಮಧ್ಯದಲ್ಲಿ ಈಗಿರುವ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಒಟ್ಟಾರೆ ಉಳಿದ 550 ಕೋಟಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಅನುಭವ ಮಂಟಪಕ್ಕೆ ಮುಖ್ಯ ಸಂಪರ್ಕ ರಸ್ತೆ ಕೆಲಸ ನಿಂತುಹೋಗಿದೆ. ಅದಕ್ಕೆ ಬೇಕಾದ ಜಮೀನಿನ ಅಕ್ವಿಜಿಶನ್ ಕಾರ್ಯಕ್ಕೆ ಹೈಕೊರ್ಟಿನ ತಡೆಯಾಜ್ಞೆ ಬಂದು ಎರಡು ವರ್ಷವಾಗಿದೆ. ಸೂಕ್ತ ಮಾಹಿತಿ ನೀಡಿದ್ದರೂ ಸಂಬಂಧಿಸಿದ ಸರ್ಕಾರಿ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿಲ್ಲ. ಪ್ರತಿವಾದಿಗಳೊಂದಿಗೆ ಶಾಮೀಲಾಗಿದ್ದಾರೆಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕಾಗಿದೆ, ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೆಪ್ಟೆಂಬರ್ 19, 20 ನಡೆದ ರಾಷ್ಟ್ರೀಯ ವಾರ್ಷಿಕ ಸರ್ವಸಾಮಾನ್ಯ ಸದಸ್ಯರ ಸಭೆಯ ನಿರ್ಣಯಗಳನ್ನು ವಿವರಿಸಲಾಯಿತು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ. ಜಾಮದಾರ ಜೊತೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಕಾರ್ಯದರ್ಶಿ ಅಶೋಕ ಮಳಗಲಿ, ಪ್ರವೀಣಕುಮಾರ ಚಿಕಲಿ ಹಾಗೂ ಮುರಿಗೆಪ್ಪ ಬಾಳಿ ಅವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
4 Comments
  • ಕೊಡುವುದಾದರೆ ಜಾಗತಿಕ ಲಿಂಗಾಯತ ಮಹಾಸಭೆ ಗೆ ಕೊಡಿರಿ ಅಂತ ಕೇಳಿರಿ.
    ಬಸವ ತತ್ವದ ಸಂಘಟನೆಗೆ ಕೊಡಲು ಕೇಳಿರಿ.
    ಸರಕಾರಿ ಹಿಡಿತದಲ್ಲಿ ಇದ್ದರೆ ನೌಕರರು, ಅಧಿಕಾರಿಗಳು, ಕೆಲಸಗಾರರಲ್ಲಿ ಹೆಚ್ಚಾಗಿ ಹಿಂದೂಗಳನ್ನೇ ನೇಮಕ ಮಾಡುತ್ತಾರೆ. ಇದರಿಂದ ಅವರಿಗೆ ಬಸವ ತತ್ವದಲ್ಲಿ ಭಕ್ತಿ ಇಲ್ಲದೆ, ಲಿಂಗಾಯತ ಧರ್ಮಕ್ಕೆ ಗೌರವ ಇಲ್ಲದೆ ಅನುಭವ ಮಂಟಪ ಗೌರವ ಕಳೆದು ಕೊಳ್ಳುತ್ತದೆ.

    ನೀವೆಲ್ಲ ಕಲೆತವರೆ, ನೀವು ಕಲಿವುವಾಗ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಯಾವ ಕಳೆ ಇತ್ತು, ಈಗ ಸರಕಾರಿ ಹಿಂದೂ ನೌಕರರ ಕೈಯಲ್ಲಿ ಸಿಕ್ಕು ಹೇಗೆ ಆಗಿದೆ ನೋಡಿರಿ. ನಿಮ್ಮ ಹೊಟ್ಟೆಯಲ್ಲಿ ಸಂಕಟ ಆಗುತ್ತದೆ.
    ಅದೇ ಪರಿಸ್ಥಿತಿ ನಮ್ಮ ಅನುಭವ ಮಂಟಪಕ್ಕೆ ಬರುತ್ತದೆ.

  • ಮಾನ್ಯ ಶ್ರೀ ಶಿವಾನಂದ ಜಾಮದಾರರವರು ಅನುಭವ ಮಂಟಪದ ವಿಷಯದಲ್ಲಿ ಕಾರ್ಯಯೋಜನೆಗಳನ್ನು ರೂಪಿಸಬೇಕು. ಇತ್ತೀಚೆಗೆ ಕನೇರಿಮಠದ ಸ್ವಾಮಿಯ ಅವನಹಿಂದೆ ನಿಂತು ಕೆಲಸಮಾಡುವ RSS ವಿಷಯದಲ್ಲಿ ತಾವುಗಳು ಸೂಕ್ತ ಕ್ರಮವನ್ನು ಕೖಕೊಳ್ಳಬೇಕು. ಜನರಲ್ಲಿ ಗೊಂದಲವನ್ನು ಉಂಟುಮಾಡುವ ಇವರಕೆಲಸಕ್ಕೆ ತಡೆಯೋಕೇ ಯೋಜನೆ ರೂಊಪಿಸಬಬೇಕು.

  • ವಿರುಪಾಕ್ಷ ಬೇವೂರ ಶರಣರ ಮಾತು ನಿಜ ಸರ್. ನಿಮ್ಮಂತ ದಕ್ಷ ಪ್ರಾಮಾಣಿಕ ಅಧಿಕಾರಿಗಳು ಈಗಿಲ್ಲರಿ. ಯುಕೆಪಿ ಆಯುಕ್ತರಾಗಿ ತಾವು ಸಲ್ಲಿಸಿದ ಅಮೋಘ ಸೇವೆಯನ್ನು ಮುಳುಗಡೆ ಸವದಿ ಗ್ರಾಮದ ಸಂತ್ರಸ್ತನಾದ ನಾನು ಬಲ್ಲೆ .
    ಸರ್ಕಾರದ ಹಣ ವ್ಯರ್ಥ ಪೋಲಾಗದಂತೆ ಯೋಜನೆಗಳನ್ನು ಸುಸಂಬದ್ಧವಾಗಿ ಕಾರ್ಯರೂಪಕ್ಕೆ ತಂದವರು ನೀವು.
    ಇನ್ನು , ” ಅನುಭವ ಮಂಟಪ ಕಟ್ಟಡ ಮುಗಿದ ನಂತರ ಮುಂದೇನು ” ? ಈ ಪ್ರಶ್ನೆಗೆ ನನ್ನ ಸದಭಿಪ್ರಾಯದ ,
    ಉತ್ತರ:- ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಬಸವತತ್ವ ಪ್ರಸಾರ ಸಮಿತಿ, ಬಸವ ಸಮಿತಿ, ಬಸವ ಕೇಂದ್ರ ,‌ ಬಸವಾದಿ ಶರಣರ ಹೆಸರಿನಲ್ಲಿರುವ ಸಂಘಟನೆಗಳ , ಲಿಂಗಾಯತ ಧರ್ಮದ ಒಳಪಂಗಡಗಳ, ಬಸವ ಪರ ನೂರಾರು ಸಂಘಟನೆಗಳ ಸದಸ್ಯರು ಕಾರ್ಯಕರ್ತರು, ಪದಾಧಿಕಾರಿಗಳು ಯಾರೇ ಆಗಿರಲಿ ಅವರು ಉಚಿತ ಸೇವೆ ಸಲ್ಲಿಸಲು ಸಿದ್ಧರಿರಬೇಕು.
    ಸೇವೆ ಸಲ್ಲಿಸುವುದು 1) ತನು , ಮನ ಗಳಿಂದ 2) ತನು, ಮನ, ಧನ ಗಳಿಂದ. ಇವರಿಬ್ಬರೂ ಸಮಾನ ಶ್ರೇಷ್ಠರೆ , ವರ್ಗೀಕರಣವಲ್ಲ.
    ಇವರಿಗೆ ವಸತಿ, ಊಟೋಪಚಾರ ಅನುಭವ ಮಂಟಪದ ಆಡಳಿತದಿಂದ ವ್ಯವಸ್ಥೆಗೊಳ್ಳಬೇಕು .
    ನೀಲಮ್ಮನವರ(ನೀಲಾಂಬಿಕಾ ತಾಯಿ)ಹೆಸರಿನಲ್ಲಿ ದಾಸೋಹ ನಿಧಿ ಸ್ಥಾಪಿಸಬೇಕು. ಅದನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಫಿಕ್ಸ್ ಡಿಪಾಸಿಟ್ ಇಡಬೇಕು. ಅಥವಾ ಅಂಚೆ ಕಚೇರಿ ಬ್ಯಾಂಕ್ ಬಡ್ಡಿ ಹೆಚ್ಚು ಇರುವುದರಿಂದ ಅಲ್ಲಿಡಿ . ಬಂದ ಬಡ್ಡಿ ಹಣದಿಂದ ವರ್ಷಕ್ಕೊಮ್ಮೆ ಬರುವ ದಾಸೋಹಿ ಶರಣರ ಲಿಂ|| ತಂದೆ ಅಥವಾ ತಾಯಿ ಸ್ಮರಣಾರ್ಥ ನಿಗದಿತ ದಿನದಂದು ಬೋರ್ಡ್ ಮೇಲೆ ಲಿಂಗೈಕ್ಯ ಹಿರಿಯರ ಹೆಸರು ಬರೆಯುವುದು. ದಾಸೋಹ ನಿಧಿಗೆ ಇಡುವ ಮೊತ್ತ ಕನಿಷ್ಠವೂ ಇರಬಾರದು, ಗರಿಷ್ಠವೂ ಇರಬಾರದು.
    ಅಲ್ಲಿ ಸೇವೆಗೆ ಬರುವವರಿಗೆ (ಕಿರಿಯರು, ಹಿರಿಯರು,ತಾಯಂದಿರು)ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾಯಕವನ್ನು ಆಡಳಿತ ಮಂಡಳಿಯವರು ವಹಿಸಿಕೊಡಬೇಕು. ಅದೊಂದು ಅನಾಥಾಶ್ರಮವೂ ಆಗಬಾರದು.
    ಎಲ್ಲರಿಗೂ ಇಷ್ಟಲಿಂಗ ಸಂಸ್ಕಾರ ಕಡ್ಡಾಯವಾಗಬೇಕು.
    ಎಲ್ಲರೂ ಬಿಳಿ ವಸ್ತ್ರಧಾರಿಗಳಾಗಿರಬೇಕು. ಇವು ನನ್ನ ಅಭಿಪ್ರಾಯಗಳು.
    ಲಿಂಗಾಯತ ಧರ್ಮದ ಆಗು ಹೋಗುಗಳ ಕುರಿತು , ಬಸವಾದಿ ಶರಣರ ಸ್ಮಾರಕಗಳ ಕುರಿತು, ತತ್ಕಾಲಕ್ಕೆ ತೆಗೆದುಕೊಳ್ಳವ ನಿರ್ಧಾರ ಮತ್ತು ಆಡಳಿತದ ಕುರಿತು ಅನುಭವ ಹೊಂದಿರುವ ಡಾ. ಎಸ್ ಎಂ ಜಾಮದಾರ ಸರ್ ಮತ್ತು ಎಲ್ಲಾ ಸಂಘಟನೆಗಳ ಮುಖಂಡರು ಸೇರಿ ನೀತಿ ನೀಯಮಾದಿಗಳನ್ನು ರೂಪಿಸಲು ಪ್ರಾರ್ಥಿಸುತ್ತೇನೆ.
    ಶರಣು ಶರಣಾರ್ಥಿಗಳು ಸರ್ವ ಶರಣರಿಗೆ.🙏🙏.

Leave a Reply

Your email address will not be published. Required fields are marked *