ಕರ್ನಾಟಕರತ್ನ, ನಡೆದಾಡಿದ ದೇವರು, ತ್ರಿವಿಧ ದಾಸೋಹಮೂರ್ತಿ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಮಹಾಶಿವಯೋಗಿಗಳು ಕಾಯಕ ಮತ್ತು ದಾಸೋಹವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಂತ ಎಂದು ನಗರಸಭೆ ಅಧ್ಯಕ್ಷ ಎಂ.ಪಿ.ಪ್ರಕಾಶ್ (ನಾಗೇಶ್) ಬಣ್ಣಿಸಿದರು.
ನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಸಿದ್ದಗಂಗಾಶ್ರೀಗಳ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್ ಹಾಗೂ ಸಿದ್ದಗಂಗಾಶ್ರೀ ಸೇವಾ ಸಮಿತಿ ವತಿಯಿಂದ ಪ್ರತಿತಿಂಗಳು ನಡೆಸುವ `ದಾಸೋಹ ಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಸಿದು ಬಂದವರಿಗೆ ಅನ್ನ ನೀಡುವುದೇ ಧರ್ಮ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿದ್ದ ಸಿದ್ದಗಂಗಾಶ್ರೀಗಳು ಯಾವುದೇ ಜಾತಿ, ಧರ್ಮ, ವರ್ಣ, ಬೇಧಗಳೆನ್ನದೆ ಸರ್ವರಿಗೂ ಉಚಿತವಾಗಿ ಶಿಕ್ಷಣ, ಆಸರೆ, ದಾಸೋಹದಂತಹ ಮಹತ್ತರವಾದ ಸೇವೆಯನ್ನು ತಮ್ಮ ೧೧೧ವರ್ಷಗಳ ಕಾಲ ನಡೆಸಿದ ಮೇರುಪರ್ವತವಾಗಿದ್ದಾರೆ. ಸ್ವಾಮೀಜಿಯವರ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಬೇಕಿದೆ ಎಂದರು.

ಮಂಡ್ಯ ನಗರದಲ್ಲಿ ಸ್ವಾಮೀಜಿಯವರ ಹೆಸರು ಹಸಿರಿನಿಂದ ಕಂಗೊಳಿಸುವAತೆ ಉದ್ಯಾನವನ್ನು ನಿರ್ಮಾಣ ಮಾಡಿ ನಿರ್ವಹಣೆ ಮಾಡುತ್ತಿರುವ ಕಾಯಕಯೋಗಿ ಫೌಂಡೇಶನ್ ಪ್ರತಿ ತಿಂಗಳ ಹುಣ್ಣಿಮೆಯ ದಿವಸದಂದು ದಾಸೋಹವನ್ನು ನಡೆಸಿ ಸ್ವಚ್ಚತೆ ಹಾಗೂ ಹಸಿರೀಕರಣದ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ನಗರಸಭೆ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್ ಮಾತನಾಡಿ, ತ್ರಿವಿಧ ದಾಸೋಹ ಎಂದರೆ ಸ್ವಾಮೀಜಿ ಎನ್ನುವಷ್ಟರ ಮಟ್ಟಿಗೆ ಸಿದ್ದಗಂಗಾಶ್ರೀಗಳು ಸರ್ವ ಜನಾಂಗದವರಿಗೂ ಶಿಕ್ಷಣದ ಜೊತೆಯಲ್ಲೇ ಸಂಸ್ಕಾರವನ್ನು ಕಲಿಸಿಕೊಟ್ಟ ರಾಷ್ಟçಸಂತರಾಗಿದ್ದಾರೆ. ಕೋಟ್ಯಾಂತರ ಜನರ ಭಾವಕೋಶದಲ್ಲಿ ನೆಲೆಯಾಗಿರುವ ಪರಮಪೂಜ್ಯರು ಕಾಯಕದ ಮೂಲಕ ದುಡಿಮೆ ಹಾಗೂ ದಾಸೋಹದಿಂದ ಅನ್ನದ ಮಹತ್ವವನ್ನು ತಿಳಿಸಿಕೊಟ್ಟ ಮಾತೃಹೃದಯಿ ಎಂದು ಬಣ್ಣಿಸಿದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಪರಮಪೂಜ್ಯರ ಉದ್ಯಾನವನದಲ್ಲಿ ಎಲ್ಲಾ ಬಗೆಯ ಔಷಧೀಯ ಸಸಿಗಳು, ಅಲಂಕಾರಿಕ ಹಾಗೂ ಅರಣ್ಯದ ವಿವಿಧ ಬಗೆಯ ಮರಗಳನ್ನು ಪೋಷಣೆ ಮಾಡಿ ಹಿರಿಯ ನಾಗರೀಕರು ಹಾಗೂ ಸಾರ್ವಜನಿಕರಿಗೆ ನೆಮ್ಮದಿಯ ಹಸಿರಿನ ತಾಣವನ್ನಾಗಿಸಿದ್ದು ವಾಯುವಿಹಾರಿಗಳಿಗೆ ಅಗತ್ಯವಾಗಿರುವ ಧ್ಯಾನಮಂಟಪವನ್ನು ನಿರ್ಮಾಣ ಮಾಡಿಕೊಟ್ಟಲ್ಲಿ ಯೋಗಾಸನ ಅಭ್ಯಾಸ ಮಾಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷರು ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ದಾಸೋಹ ದಾನಿಗಳಾದ ವೀರಾಜಿಪುರದ ಮಹದೇವಪ್ಪ, ಕುಮಾರ್, ಸಮಾಜಸೇವಕ ರವಿತೇಜ್ ಅವರನ್ನು ಅಭಿನಂದಿಸಲಾಯಿತು.
ಸಿದ್ದಗಂಗಾಶ್ರೀ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್. ಮಂಜುನಾಥ್, ವೀರಶೈವ ವಿದ್ಯಾರ್ಥಿನಿಲಯದ ಟ್ರಸ್ಟಿ ಮಲ್ಲಿಕಾರ್ಜುನಯ್ಯ, ಹಿಂದುಳಿದ ವರ್ಗಗಳ ಮುಖಂಡ ಎಲ್.ಸಂದೇಶ್, ಜಿ.ಮಹಾಂತಪ್ಪ, ಬಿ.ಎಸ್.ಅನುಪಮಾ, ಶಿವರುದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
🙏🙏