‘ಬಸವ ಸಂಘಟನೆಗಳು ಲಂಕೇಶ್ ಕೆಲಸ ಮುಂದುವರೆಸಬೇಕು’

ಬಸವ ಮೀಡಿಯಾ
ಬಸವ ಮೀಡಿಯಾ

ಮೊದಲು ಜಿಲ್ಲಾ, ತಾಲೂಕು ಮಟ್ಟದಲ್ಲಿ ತರಬೇತಿ ಶಿಬಿರಗಳು ನಡೆಯಲಿ

ಬಾಗಲಕೋಟೆ

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ಶರಣ ತತ್ವ ಚಿಂತಕ ಅಶೋಕ ಬರಗುಂಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೆ? ಯಾಕೆ?

ಬಸವ ಧರ್ಮಕ್ಕೆ ವಿರೋಧವಾಗಿರುವ ರಾಜಕಾರಣಿಗಳನ್ನು ನಾವೂ ವಿರೋಧಿಸಿದ್ದೇವೆ, ಸುದ್ದಿಘೋಷ್ಟಿಯನ್ನೂ ಮಾಡಿದ್ದೇವೆ.

ಇಂದು ನಮ್ಮ ಮುಂದಿರುವ ಅನೇಕ ಸವಾಲುಗಳನ್ನು ಎದುರಿಸಲು ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಳ್ಳುವ ಅನಿವಾರ್ಯತೆಯಿದೆ.

ಉದಾಹರಣೆಗೆ ಈಗ ನಡೆಯುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಬಗ್ಗೆ ತೀವ್ರ ಆತಂಕಗಳಿವೆ. ಇವುಗಳ ಬಗ್ಗೆಯೂ ನಾವು ಗಮನ ಕೊಡಬೇಕು.

ನಾವು ಯಾವುದೇ ಪಕ್ಷವನ್ನು ಬೆಂಬಲಿಸುವ ಮೊದಲು ಅದರ ಪ್ರಣಾಳಿಕೆಯನ್ನು ನೋಡಿ, ಸಂವಿಧಾನದ ಮತ್ತು ಬಸವ ತತ್ವದ ಪರವಾಗಿರುವ ಪಕ್ಷಗಳನ್ನು, ಅಭ್ಯರ್ಥಿಗಳನ್ನು ಬೆಂಬಲಿಸಬೇಕು.

ನಮ್ಮ ರಾಷ್ಟ್ರ ರೂಪಿಸಿದ್ದು ಸ್ವಾತಂತ್ರ್ಯ ಚಳುವಳಿಗಾರರು. ಆದರೆ ಈ ರಾಷ್ಟ್ರ ಒಂದು ಧರ್ಮದ ಸೃಷ್ಟಿಯೆಂದು ಬಿಂಬಿಸಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಒಡಕುಂಟಾಗುತ್ತಿದೆ. ಒಂದು ಪಕ್ಷ ಈ ಕೆಲಸ ಮಾಡುತ್ತಿದೆ, ಮಿಕ್ಕ ಪಕ್ಷಗಳಲ್ಲಿ ಬರಿ ಅವಕಾಶವಾದಿಗಳೇ ಕಾಣಿಸುತ್ತಾರೆ. ಅವುಗಳಲ್ಲೂ ಅಂತಹ ಬಸವ ನಿಷ್ಠೆ ಕಾಣುವುದಿಲ್ಲ. ಈ ಸೂಕ್ಷ್ಮತೆಗಳನ್ನೂ ನಾವು ಅರ್ಥ ಮಾಡಿಕೊಳ್ಳಬೇಕು.

ಬಸವಶಕ್ತಿಯ ವ್ಯಾಖ್ಯಾನದ ಬಗ್ಗೆ ಸ್ಪಷ್ಟತೆಯಿರಬೇಕು. ಬಸವಶಕ್ತಿ ಏನನ್ನು ಪ್ರತಿಪಾದಿಸುತ್ತದೆ, ಅದಕ್ಕಿಂತ ಮುಖ್ಯವಾಗಿ ಯಾವುದನ್ನು ವಿರೋಧಿಸುತ್ತದೆ ಅನ್ನುವುದರ ಬಗ್ಗೆ ಸಾತ್ವಿಕ ತಿಳುವಳಿಕೆಯಿರಬೇಕು. ನಮ್ಮ ವೈರಿಗಳು ಯಾರು, ಅವರಿಗಿಂತ ನಾವೆಷ್ಟು ಭಿನ್ನ ಎಂದು ಗುರುತಿಸುವುದೂ ಮುಖ್ಯ.

ಬಸವ ಸಂಘಟನೆಗಳು ಲಂಕೇಶ್ ಮಾದರಿ ಕೆಲಸ ಮಾಡಬೇಕು. ಪಾಳೆಗಾರಿಕೆ ಬುದ್ದಿಯ ರಾಜಕಾರಣಿಗಳನ್ನು ಖಂಡಿಸುವ ಕೆಲಸ ಶುರು ಮಾಡಿದ್ದು ಅವರೇ. ಸಾಹಿತಿ, ಚಿಂತಕರು, ಹೋರಾಟಗಾರರು, ಜನ ಸಾಮಾನ್ಯರನ್ನು ಇಟ್ಟುಕೊಂಡು ಒಂದು ಚಳುವಳಿ ರೂಪಿಸಿದರು. ಇವತ್ತು ಲಂಕೇಶ್ ಇಲ್ಲ ಆದರೆ ಪಾಳೆಗಾರಿಕೆ ಮುಂದುವರೆದಿದೆ. ಅವರ ಕೆಲಸ ಮುಂದುವರಿಸಬೇಕು. ಪರಿವರ್ತನೆಯ ರಾಜಕೀಯದ ಅಗತ್ಯವಿದೆ.

2) ಯಾವ ರೀತಿಯ ಪರಿವರ್ತನೆಯ ರಾಜಕೀಯದ ಅಗತ್ಯವಿದೆ?

ಬಸವ ಪ್ರಜ್ಞೆ ಇರುವವರು ಯಾರೂ ಕೆಟ್ಟ ಅಭ್ಯರ್ಥಿಗಳಿಗೆ ಮತ ಹಾಕುವುದಿಲ್ಲ.

ಆದರೆ ಜನರಿಗೆ ಆಮಿಷ ತೋರಿಸಿ ಮತ ಖರೀದಿಸಲಾಗುತ್ತಿದೆ. ಅಂತವರಲ್ಲಿ ವೈಚಾರಿಕತೆ ಮೂಡಿಸಬೇಕಾಗಿದೆ. ದೇವರು, ಧರ್ಮದ ಬಗ್ಗೆ ಬಸವ ಧರ್ಮದ ತತ್ವ ವಿಚಾರಗಳನ್ನು ತಿಳಿಸಬೇಕಾಗಿದೆ.

ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಬಿಕ್ಷುಕನಿಂದ ರಾಷ್ಟ್ರಪತಿಯವರೆಗೆ ಒಂದೇ ಮತ. ಅದೇ ರೀತಿ ವ್ಯಕ್ತಿ ಸಮಾನತೆ, ಗೌರವ ಪ್ರತಿಪಾದಿಸಿದ ಕಾಯಕ ಸಿದ್ದಾಂತದ ಧರ್ಮ ಬಸವ ಧರ್ಮ.

ಇವುಗಳ ಬಗ್ಗೆ ಬಸವ ಸಂಘಟನೆಗಳು ಜಾಗೃತಿ ಮೂಡಿಸಿದರೆ ಮತ ಹಾಕುವ ರೀತಿಯೂ ಬದಲಾಗುತ್ತದೆ. ಆದರೆ ಇದು ಎಚ್ಚರಿಕೆಯಿಂದ ಮಾಡಬೇಕಾಗಿರುವ ಕೆಲಸ. ಜಾತಿ ಪ್ರಜ್ಞೆಯಿಂದ ಮತ ಹಾಕುವ ಕೆಲವರು ಇದಕ್ಕೆ ವಿರೋಧವನ್ನೂ ಮಾಡಬಹುದು.

3) ಈ ಪರಿವರ್ತನೆ ತರುವ ಸಾಮರ್ಥ್ಯ ಬಸವ ಸಂಘಟನೆಗಳಿಗಿದೆಯೇ?

ರಾಜ್ಯಮಟ್ಟದಲ್ಲಿ ಈ ಪರಿವರ್ತನೆ ತರುವ ಸಾಮರ್ಥ್ಯ ಬಸವ ಸಂಘಟನೆಗಳಿಗಿದೆ. ಇಂದು ಅವುಗಳ ಸಂಖ್ಯೆ ಹೆಚ್ಚಾಗಿದೆ ಆದರೆ ಅವಕಾಶವಾದಿತನವೂ ಹೆಚ್ಚಾಗಿದೆ. ಯೋಗ್ಯ ವ್ಯಕ್ತಿಗಳಿಂದ ಯೋಗ್ಯ ಮಾರ್ಗದರ್ಶನದ ಅಗತ್ಯವಿದೆ.

ಇದು ಒಂದು ದಿವಸದಲ್ಲಿ ಆಗುವ ಪರಿವರ್ತನೆಯಲ್ಲ. ಕಳೆದ 40-50 ವರ್ಷಗಳಲ್ಲಿ ಹಲವಾರು ಹಿರಿಯರ ಪ್ರಯತ್ನದಿಂದ, ಜಾಗೃತಿ, ಸಂಘಟನೆ ಹೆಚ್ಚುತ್ತಿದೆ. ಆ ಕೆಲಸ ನಾವು ಮುಂದುವರೆಸಬೇಕು.

3) ಈ ಕೆಲಸಕ್ಕೆ ತರಬೇತಿಯ ಅಗತ್ಯವಿದೆಯೆ?

ಎದ್ದೇಳು ಕರ್ನಾಟಕದವರು ಮಾಡಿರುವ ಕೆಲಸ ನಾನು ನೋಡಿದ್ದೇನೆ. ಅದೇ ರೀತಿ ಬೂತ್ ಮಟ್ಟದಲ್ಲಿ ಕೆಲಸ ಮಾಡಲು, ಸರಿಯಾದ ಬೇಡಿಕೆಗಳನ್ನು ರೂಪಿಸಲು, ಅಭ್ಯರ್ಥಿಗಳ ಮೇಲೆ ಒತ್ತಡ ತರಲು, ಜನರಲ್ಲಿ ಜಾಗೃತಿ ಮೂಡಿಸಲು, ಚುನಾವಣೆಯ ಮೇಲೆ ಪ್ರಭಾವ ಬೀರಲು ತರಬೇತಿಯ ಅಗತ್ಯವಿದೆ.

4) ಬಸವಶಕ್ತಿ ಸಮಾವೇಶದ ರೂಪು಼ರೇಷೆಯ ಬಗ್ಗೆ ನಿಮ್ಮ ಸಲಹೆ?

ಘೋಷಣೆ ಕೂಗಿ ಮನೆಗೆ ಹೋಗವ ಸಮಾವೇಶವಾಗಬಾರದು. ಜಿಲ್ಲೆ, ತಾಲೂಕುಗಳಲ್ಲಿ ಬಸವ ಶಕ್ತಿ ಶಿಬಿರಗಳು ಮೊದಲು ಶುರುವಾಗಲಿ. ಎದ್ದೇಳು ಕರ್ನಾಟಕ ದಲಿತ, ಪ್ರಗತಿಪರ ಸಂಘಟನೆಗಳಿಗೆ ನೀಡಿದ ತರಬೇತಿಯನ್ನು ನಾವೂ ನೀಡಬೇಕು.

5) ಈ ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿವಿದೆಯೇ?

ಬಸವ ಶಕ್ತಿ ಶಿಬಿರ, ಸಮಾವೇಶಕ್ಕೆ ನಮ್ಮ ಎಲ್ಲಾ ರೀತಿಯ ಬೆಂಬಲವಿದೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
1 Comment
  • ಬಸವ ಶಕ್ತಿಗೆ ಮೂಲ ಬಸವ ಪ್ರಜ್ಞೆ. ಅದು ನಮ್ಮ ಲಿಂಗಾತರಲ್ಲಿದೆಯೇ? ಪ್ರಜ್ಞೆ ಇಲ್ಲದೆ ಅದರ ಶಕ್ತಿ ಹೊರಹೊಮ್ಮಲು ಏಗೆ ಸಾಧ್ಯ? ಯಾವುದೇ ಒಂದು ವಿಷಯ ಮುಂದು ಮಾಡಿ ಸಭೆ,ಮೆರವಣಿಗೆ, ಪ್ರತಿಭಟನೆ ಮಾಡಿದರೆ ಪ್ರಜ್ಞೆ ಇಲ್ಲದ‌ಶಕ್ತಿ ಏಗೆ ಬರಲು ಸಾಧ್ಯ? ಇದಕ್ಕೆ ಪರಿಹಾರ ೧೨ ನೇ ಶತಮಾನದ ಬಸವಾದಿ ಶರಣರ ಗಣಾಚಾರಿ ಪಡೆಯ ತಾಂತ್ರಿಕ ಆತ್ಮವನ್ನು ಇಂದಿನ ಕಾಲಕ್ಕೆ ತಕ್ಕಂತೆ ಪುನರುಜ್ಜೀವನಗೊಳಿಸುವುದು.

Leave a Reply

Your email address will not be published. Required fields are marked *