ಗದಗ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಬಸವ ಮೀಡಿಯಾದ ಸುಜಾತ ಶೆಟ್ಟರ್ ಅವರ ಜೊತೆ ಸಂವಾದದಲ್ಲಿ ಗದಗದ ಶರಣ ಸಾಹಿತಿ ಗಿರಿಜಕ್ಕ ಧರ್ಮರೆಡ್ಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?
ಚುನಾವಣೆಗೆ ಮುನ್ನ ಎಲ್ಲಾ ರಾಜಕಾರಣಿಗಳು ಬಸವಪರ ಸಂಘಟನೆಗಳಿಗೆ, ಬಸವತತ್ವಕ್ಕೆ ನಮ್ಮ ಪಕ್ಷದಿಂದ ಸಹಕಾರವನ್ನು ಕೊಡುತ್ತೇವೆ ಎನ್ನುತ್ತಾರೆ. ಆದರೆ ಚುನಾವಣೆ ಗೆದ್ದ ನಂತರ ಅವರ ಆಶ್ವಾಸನೆಗೆ ಅವರು ಬದ್ಧರಿರುವುದಿಲ್ಲ.
ಅನೇಕ ವರ್ಷಗಳಿಂದ ರಾಜಕಾರಣಿಗಳು ಇದ್ದನ್ನೇ ಮಾಡುತ್ತ ಬಂದಿದ್ದಾರೆ. ಹೀಗಿದ್ದಾಗ ನಾವು, ಅಂದರೆ ಬಸವಪರ ಸಂಘಟನೆಗಳು, ಸುಮ್ಮನೆ ಕುಳಿತರೆ ಪ್ರಯೋಜನವಿಲ್ಲ. ನಾವು ನಿಜವಾದ ಬಸವ ಧರ್ಮೀಯರಾಗಿದ್ದರೆ ಇದರ ವಿರುದ್ಧ ಧ್ವನಿ ಎತ್ತುವುದು, ಪ್ರಶ್ನಿಸುವುದು ಅನಿವಾರ್ಯ.
ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಯಾವುದೇ ತತ್ವ, ಸಿದ್ದಾಂತಗಳಡಿ ಜನರನ್ನು ಸೆಳೆಯಬೇಕಾದರೆ ಅವರಿಗೆ ಜಾಗೃತಿ ಮೂಡಿಸುವ ತರಬೇತಿ ಕೊಡಲೇಬೇಕು. ಅದರಲ್ಲೂ ರಾಜಕೀಯ, ಚುನಾವಣೆಗೆ ಸಂಬಂಧಿಸಿದ ವಿಷಯ, ಚಟುವಟಿಕೆಗಳು ಹೊಸದಾಗಿರುವುದರಿಂದ ಪರಿಣಿತರಿಂದ ಸೂಕ್ತ ತರಬೇತಿ ಶಿಬಿರಗಳನ್ನು ನಡೆಸಿದರೆ ಒಳ್ಳೆಯದು.
ಬಸವ ಶಕ್ತಿ ಶಿಬಿರ, ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ
ರಾಜಕೀಯ ಪ್ರಜ್ಞೆ ಮೂಡಿಸುವ ಶಿಬಿರಗಳನ್ನು ಪ್ರಾಥಮಿಕ ಹಂತದಲ್ಲಿ ಆಯೋಜಿಸಬೇಕಿದೆ. ಅವುಗಳಲ್ಲಿ ಬಸವ ಪ್ರಜ್ಞೆ ಗಟ್ಟಿಗೊಳಿಸುವ ಕಾರ್ಯವೂ ನಡೆಯಬೇಕು. ಬಸವ ಪ್ರಜ್ಞೆ ಮೂಡಿಸಿದರೆ ರಾಜಕೀಯ ಶಕ್ತಿಯೂ ಬೆಳೆಯುತ್ತದೆ.
ಈ ಚಟುವಟಿಕೆಗಳು ಕೇವಲ ಶಿಬಿರಗಳಿಗೆ ಸೀಮಿತವಾಗಬಾರದು. ರಾಜಕೀಯ ಪ್ರಜ್ಞೆ ಮುಖ್ಯವಾಗಿ ಬಸವ ಪ್ರಜ್ಞೆ ಮೂಡಿಸಲು ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕು.
ಪ್ರತಿ ಮನೆಗಳಲ್ಲಿ ಜೀವನ ಮೌಲ್ಯಗಳನ್ನು ತಿಳಿಸುವ ಬಸವಾದಿ ಶರಣರ ವಚನಗಳನ್ನು ಅರ್ಥವಾಗುವ ದಿನವೂ ಪಠಣ ಮಾಡಲು ಪ್ರೇರೇಪಿಸಬೇಕು. ಪ್ರಾಥಮಿಕ ಶಾಲೆಗಳಲ್ಲೇ ಶರಣರ ತತ್ವ ಮತ್ತು ಸಿದ್ಧಾಂತಗಳನ್ನು ಪರಿಚಯ ಮಾಡಿಕೊಡಬೇಕು.
ಬಸವ ಶಕ್ತಿ ಶಿಬಿರ, ಸಮಾವೇಶಗಳಿಗೆ ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತಿರಾ?
ನಮ್ಮಲ್ಲಿ ಪ್ರತಿ ಭಾನುವಾರ ವಚನ, ಶರಣರ ಜೀವನ ಶೈಲಿ ಮತ್ತು ಅವರ ವಚನಗಳಲ್ಲಿರುವ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತವೆ. ಇದರಿಂದ ಅನೇಕರು ನಮ್ಮ ಜೊತೆ ಕೈಜೋಡಿಸಿದ್ದಾರೆ.
ಇನ್ನೊಂದು ವಿಶೇಷವೆಂದರೆ ಇತ್ತೀಚಿಗೆ ಯುವಕರು ವಚನ ಅರಿವಿನ ಕಾರ್ಯಕ್ರಮಗಳಲ್ಲಿ ಹೆಚ್ಚಿಗೆ ಭಾಗವಹಿಸುತ್ತಿದ್ದಾರೆ. ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ನಾವು ನಿರಂತರವಾಗಿ ಮಾಡುತ್ತಿದ್ದೇವೆ. ಹಾಗಾಗಿ ನಮ್ಮಲ್ಲಿ ಬಸವಶಕ್ತಿ ಅಭಿಯಾನಕ್ಕೆ ಸಂಪೂರ್ಣ ಬೆಂಬಲವಿದೆ. ನಮ್ಮಲ್ಲಿ ಅನೇಕರು ಇದರಲ್ಲಿ ಭಾಗವಹಿಸುತ್ತಾರೆ.
ಬಸವ ಶಕ್ತಿ ಶಿಬಿರ, ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ಖಂಡಿತ. ಬಸವಪರ ಸಂಘಟನೆಗಳಿಗೆ ನಮ್ಮ ಕೈಲಾದಷ್ಟು ನಾವು ನೆರವಾಗುತ್ತೇವೆ. ಈ ಪ್ರಯತ್ನ ಯಾವುದೇ ಕಾರಣಕ್ಕೂ ಅರ್ಧದಲ್ಲಿ ನಿಲ್ಲಬಾರದು ಎಂಬುದಷ್ಟೆ ನನ್ನ ಕೋರಿಕೆ.

ಲಿಂಗಾಯತ ವಿರೋದಿ ಆಚರಣೆಗೆ ಮಾಡುವ ಮತ್ತು ಪ್ರೋತ್ಸಾಹಿಸುವ ಲಿಂಗಾಯತ ಮಠಾಧೀಶರನ್ನು ಏಗೆ ಸರಿದಾರಿಗೆ ತರುವುದು
ನಮ್ಮಲ್ಲಿ ರಾಜಕೀಯ ಪ್ರಜ್ಞೆ ಬೆಳೆದು ಅವರನ್ನೂ ಪ್ರಶ್ನಿಸಲು ಪ್ರಾರಂಭಿಸಿದರೆ ಅವರೂ ಜನರ ದಾರಿಗೆ ಬರುತ್ತಾರೆ.