ಹುಬ್ಬಳ್ಳಿ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಬಸವ ಮೀಡಿಯಾದ ಸುಜಾತ ಶೆಟ್ಟರ್ ಅವರ ಜೊತೆ ಸಂವಾದದಲ್ಲಿ ಹುಬ್ಬಳ್ಳಿಯ ಗಂಗಾಂಬಿಕಾ ಬಳಗದ ಸಂಚಾಲಕಿ ಡಾ. ಸ್ನೇಹಾ ಭೂಸನೂರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?
ಹೌದು, ಬಸವ ಸಂಘಟನೆಗಳಿಗೆ ರಾಜಕೀಯ ಪ್ರಭಾವ, ಬೆಂಬಲ ಎರಡೂ ಬೇಕು. ಚುನಾವಣೆಯ ಸಮಯದಲ್ಲಿ ಮತ ಪಡೆಯಲು ಬಸವ ಕಾರ್ಯಕರ್ತರ ಮೂಗಿಗೆ ತುಪ್ಪ ಹಚ್ಚುವುದು ಉಂಟು. ನಂತರ ನಮ್ಮ ಬೇಡಿಕೆಗಳಿಗೆ ಅವರು ಸ್ಪಂದಿಸುವುದಿಲ್ಲ.
ಬಸವ ಸಂಘಟನೆಗಳನ್ನು ಬೆಂಬಲಿಸಿದರೆ ಕೆಲವು ಹಿಂದೂಗಳ ವಿರೋಧ ಕಟ್ಟಿಕೊಳ್ಳಬೇಕು ಎನ್ನುವ ಭಯವೂ ರಾಜಕಾರಣಿಗಳಿಗೆ ಇರಬಹುದು.
ಅದಕ್ಕೆ ನಾವು ಒಂದು ಶಕ್ತಿಯಾಗಿ ಎದ್ದು ನಿಂತರೆ ನಮ್ಮ ಜೊತೆ ಕೈ ಜೋಡಿಸುವುದು ಅವರಿಗೆ ಅನಿವಾರ್ಯವಾಗುತ್ತದೆ. ಬಸವಶಕ್ತಿ ಸಮಾವೇಶದಿಂದ ಈ ಪರಿವರ್ತನೆ ಸಾಧ್ಯ.
ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಬಸವ ಸಂಘಟನೆಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಬೇಕಾದರೆ ತರಬೇತಿ ಅತ್ಯಗತ್ಯ. ಬಸವ ತತ್ವದ ಸಿದ್ಧಾಂತವೇನು? ಉತ್ತಮ ಜೀವನಕ್ಕೆ ವಚನಗಳು ಹೇಗೆ ಪೂರಕವಾಗಿವೆ ಎಂಬುದನ್ನು ತರಬೇತಿಯ ಮೂಲಕ ತಿಳಿಸಲು ಸಾಧ್ಯ. ಇದರ ಜೊತೆಗೆ ರಾಜಕೀಯ ಪ್ರಜ್ಞೆಯನ್ನು ನೀಡಬಹುದು.
ಬಸವಶಕ್ತಿ ಶಿಬಿರ, ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.
ಪ್ರತೀ ಜಿಲ್ಲೆಯಲ್ಲಿ ಸಕ್ರಿಯವಾಗಿ ಬಸವ ತತ್ವದಡಿ ಕೆಲಸಮಾಡುತ್ತಿರುವ ಸಂಘಟನೆಗಳು, ವಾರದಲ್ಲಿ ಒಂದು ದಿನದಂತೆ ನಿರಂತರವಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಬೇಕು. ಈ ಸಮಾವೇಶಕ್ಕೆ ಮೊದಲು ಯುವಕರಿಗೆ ಮತ್ತು ಮಕ್ಕಳಿಗೆ ವಚನ ಅಧ್ಯಯನ ಮಾಡಿಸಬೇಕು.
ಧಾರವಾಡದಲ್ಲಿ ಯುವ ಘಟಕವನ್ನಾಗಿ ಮಾಡಲಾಗಿದೆ. ಇದರಲ್ಲಿ ಯುವಕರಲ್ಲಿ ತತ್ವ ಪ್ರಚಾರ ಮಾಡಲಾಗುತ್ತದೆ. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಮಾಡಿದರೆ ಹೊಸ ಪೀಳಿಗೆಯನ್ನು ರೂಪಿಸಿ ಬಲಿಷ್ಠರಾಗಬಹುದು.
ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತಿರಾ?
ನಮ್ಮ ಧಾರವಾಡ ಕೇಂದ್ರದಲ್ಲಿ ಅನೇಕ ಬಸವಪರ ಸಂಘಟನೆಗಳಿವೆ. ಹೀಗಾಗಿ ನಮ್ಮಲ್ಲಿಂದ 50-100 ಜನ ಈ ಭಾಗವಹಿಸುತ್ತಾರೆ.
ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ಇಂತಹ ಕಾರ್ಯಕ್ರಮಗಳು ಈಗಿನ ಸಮಾಜಕ್ಕೆ ಅಗತ್ಯವಿದೆ. ಹೀಗಾಗಿ ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
