ಬಸವತತ್ವ, ದೇಶಪ್ರೇಮದ ಸಮನ್ವಯಕಾರ ಹರ್ಡೇಕರ್ ಮಂಜಪ್ಪ

ಫೆ.18 ಹರ್ಡೇಕರ್ ಮಂಜಪ್ಪ ಜಯಂತಿ

ಶಹಾಪುರ:

ಮನುಷ್ಯನ ಹುಟ್ಟು ಆಕಸ್ಮಿಕ, ಆದರೆ ಸಾವು ಖಚಿತ. ನಾನು ಇಂತಲ್ಲೇ ಅಥವಾ ಇವರ ಹೊಟ್ಟೆಯಲ್ಲೇ ಹುಟ್ಟಬೇಕೆಂಬ ಅವಕಾಶವೇನಾದರೂ ಇದ್ದಿದ್ದರೆ, ಯಾರೂ ಬಡವರ ಮನೆಯಲ್ಲಿ ಹುಟ್ಟಲು ಬಯಸುತ್ತಿರಲಿಲ್ಲ, ಅಲ್ಲವೇ? ಆದರೆ ಅಂತಹ ಅವಕಾಶ ಯಾರಿಗೂ ಸಿಗಲು ಸಾಧ್ಯವಿಲ್ಲ.

ಹರ್ಡೇಕರ್ ಮಂಜಪ್ಪನವರು ಆಕಸ್ಮಿಕವಾಗಿ ಯಾರದ್ದೋ ತಪ್ಪಿನಿಂದ ಹುಟ್ಟಿದ್ದರೆ ಅದು ಅವರ ತಪ್ಪಲ್ಲ; ಅದಕ್ಕೆ ಕಾರಣೀಭೂತರಾದವರು ಹೊಣೆಯಾಗಬೇಕೇ ಹೊರತು ಸುಳಿಗೆ ಸಿಲುಕಿದ ವ್ಯಕ್ತಿಯಲ್ಲ.

ಬಸವತತ್ವವನ್ನೇ ಉಸಿರಾಗಿಸಿಕೊಂಡು, ಅದನ್ನು ಮನೆ-ಮನೆಗೆ ಮುಟ್ಟಿಸಲು ಅವರು ಊರೂರು ತಿರುಗುತ್ತಿದ್ದರು. ಆದರೆ ಅಂದಿನ ಕಾಲದ ಕೆಲವು ಮೇಲ್ವರ್ಗದವರು ಅವರು ಬರುತ್ತಾರೆಂದು ತಿಳಿದಾಕ್ಷಣ, ” ….ಮಗ ಬರುತ್ತಿದ್ದಾನೆ ಎಚ್ಚರಿಕೆ” ಎಂದು ಬ್ಯಾನರ್ ಕಟ್ಟಿಸುವಂತಹ ಕೀಳು ಮನಸ್ಥಿತಿಯನ್ನು ಹೊಂದಿದ್ದರು ಎಂಬುದಕ್ಕೆ ಇತಿಹಾಸದ ಈ ಘಟನೆಗಳೇ ಸಾಕ್ಷಿ. ​ಇಂತಹ ತಾರತಮ್ಯದ ವಿರುದ್ಧವೇ ಬಸವಣ್ಣನವರು ಅಂದು ಹೀಗೆ ಹಾಡಿದ್ದರು,

“ಮಾದಾರನೆಂಬೆನೆ ಚೆನ್ನಯ್ಯನ, ಡೋಹಾರನೆಂಬೆನೆ ಕಕ್ಕಯ್ಯನ…

 ಆನು ಹಾರುವನೆಂದರೆ ಕೂಡಲಸಂಗಯ್ಯ ನಗುವಯ್ಯ.”

ಇದೇ ರೀತಿಯ ಪ್ರಸಂಗ ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರ ಬದುಕಿನಲ್ಲೂ ನಡೆದಿತ್ತು. ಮಡಿವಾಳಪ್ಪನವರು ತಮ್ಮ ಗುರುಗಳ ಬಳಿ ಹೋಗಿ, “ಗುರುಗಳೇ, ಒಂದು ಪತ್ರಿಗಿಡ (ಬಿಲ್ವಪತ್ರೆ) ತಿಪ್ಪೆಯಲ್ಲಿ ಹುಟ್ಟಿದೆ, ಅದು ಪೂಜೆಗೆ ಬರುತ್ತದೆಯೋ ಇಲ್ಲವೋ?” ಎಂದು ಕೇಳಿದಾಗ, ಶರಣಬಸವೇಶ್ವರರು “ಖಂಡಿತ ಬರುತ್ತದೆ” ಎನ್ನುತ್ತಾರೆ.

ಆದರೆ ಆತನಿಗೆ ಲಿಂಗಧಾರಣೆ ಮಾಡಲು ಜಾತಿ ಜಂಗಮರು ನಿರಾಕರಿಸಿದಾಗ, ಕಲಬುರ್ಗಿಯ ಶರಣಬಸವಪ್ಪನವರು ತಾವೇ ಮುಂದೆ ನಿಂತು ಲಿಂಗ ಕಟ್ಟಿಸಿ ಪೇಚಿಗೆ ಸಿಲುಕಿ ಊರು ಬಿಡಬೇಕಾಯಿತು.

​ಅದಕ್ಕೇ ಕವಿ ಸರ್ವಜ್ಞ ಹೇಳಿದ್ದು: “ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ?” ದೇಶಪ್ರೇಮ ಮತ್ತು ಬಸವತತ್ವದ ಸಮನ್ವಯ ಕರ್ನಾಟಕದ ಗಾಂಧಿ ಅಂದಾಕ್ಷಣ ನಮ್ಮೆದುರಿಗೆ ಬಂದು ನಿಲ್ಲುವ ಚಿತ್ರ ಶರಣ ಹರ್ಡೇಕರ್ ಮಂಜಪ್ಪನವರದ್ದು. ಗಾಂಧೀಜಿಯ ಅಹಿಂಸೆ ಮತ್ತು ಬಸವಣ್ಣನವರ ತತ್ವಗಳಿಂದ ಪ್ರಭಾವಿತರಾಗಿದ್ದ ಅವರು, ದೇಶಪ್ರೇಮದ ಜೊತೆಗೆ ಮನುಷ್ಯ ಪ್ರೇಮವನ್ನೇ ಉಸಿರಾಗಿಸಿಕೊಂಡವರು. ಬದುಕಿನುದ್ದಕ್ಕೂ “ದೇಶವೇ ನನ್ನ ಕುಟುಂಬ” ಎಂದು ಬದುಕಿದ ಮಹಾನ್ ಸಂತ ಇವರು.

​ಸ್ವಾತಂತ್ರ್ಯ ಹೋರಾಟಗಾರರಾಗಿ, ಬಸವತತ್ವ ಪ್ರಸಾರಕರಾಗಿ ಹಾಗೂ ಪತ್ರಕರ್ತರಾಗಿ ಅವರು ಸಲ್ಲಿಸಿದ ಸೇವೆ ಅಗಾಧವಾದದ್ದು. ವಿಶೇಷವೆಂದರೆ, ಬಸವಣ್ಣನವರನ್ನು ಮಹಾತ್ಮಾ ಗಾಂಧೀಜಿಯವರಿಗೆ ಪರಿಚಯಿಸಿದ ಶ್ರೇಯಸ್ಸು ಹರ್ಡೇಕರ್ ಮಂಜಪ್ಪನವರಿಗೆ ಸಲ್ಲುತ್ತದೆ.

ಬರಹದ ಶಕ್ತಿ ಮತ್ತು ಸರಳ ಬದುಕು ​ಅವರ ಬರವಣಿಗೆಯ ಪ್ರಭಾವ ಎಷ್ಟಿತ್ತೆಂದರೆ, ಒಮ್ಮೆ ಲಿಂಗಣ್ಣ ಸತ್ಯಂಪೇಟೆಯವರು ತಮ್ಮ ‘ಅಗ್ನಿ ಅಂಕುರ’ ಪತ್ರಿಕೆಯಲ್ಲಿ ಮಂಜಪ್ಪನವರ ವಿಚಾರಗಳನ್ನು ಕುರಿತು “ದಾರಿ ತಪ್ಪಿಸುವ ಬಟ್ಟೆಗಳು” ಎಂಬ ಲೇಖನ ಬರೆದಿದ್ದರು. ನಾವು ತೊಟ್ಟುಕೊಳ್ಳುವ ಬಟ್ಟೆಗಳು ಹೇಗೆ ನಮ್ಮ ದಾರಿ ತಪ್ಪಿಸುತ್ತವೆ ಎಂದರೆ — ನೋಡಿದ್ದನ್ನೆಲ್ಲ ಕೊಳ್ಳಬೇಕು ಅನ್ನಿಸುವುದರಿಂದ ನಾವು ಬಟ್ಟೆಗಳನ್ನು ರಾಶಿ ಹಾಕಿಕೊಳ್ಳುತ್ತೇವೆ.

ಮನೆಯಲ್ಲಿ ನೂರು ಜೊತೆ ಬಟ್ಟೆಗಳಿದ್ದರೂ ನಾವು ಉಡುವುದು ಒಂದು ಜೊತೆಯನ್ನೇ! ಒಂದರ ಮೇಲೆ ಒಂದು ನಾಲ್ಕು ಬಟ್ಟೆ ತೊಟ್ಟರೆ ಜನ ‘ಹುಚ್ಚ’ ಎನ್ನುತ್ತಾರೆ. ಅದಕ್ಕಾಗಿ “ಉಡಲು ಎರಡು ಜೊತೆ ಬಟ್ಟೆ ಸಾಕು” ಎಂದು ಅವರು ಬರೆದಿದ್ದರು. ಆ ಲೇಖನದ ಪ್ರಭಾವದಿಂದ ನಾನು ಎರಡು ವರ್ಷ ಹೊಸ ಬಟ್ಟೆಯನ್ನೇ ಖರೀದಿಸಿರಲಿಲ್ಲ. ಬರಹದ ಶಕ್ತಿ ಎಂದರೆ ಹೀಗಿರಬೇಕು.

ತಮ್ಮ ಬದುಕಿನಲ್ಲಿ ಕಷ್ಟ-ನೋವುಗಳನ್ನುಂಡು ಜಗತ್ತಿಗೆ ವಿಚಾರದ ಸವಿಯುಣಿಸಿದ ಅಪರೂಪದ ಜೀವಿ ಅವರು. ಬಸವ ಜಯಂತಿಯನ್ನು ಕೇವಲ ಎತ್ತಿನ ಜಯಂತಿಯನ್ನಾಗಿ ನೋಡದೆ, ಕ್ರಾಂತಿಪುರುಷ ಬಸವಣ್ಣನವರ ವೈಚಾರಿಕ ಜಯಂತಿಯನ್ನಾಗಿ ಆಚರಣೆಗೆ ತಂದ ಮಹಾನ್ ಬಸವಪ್ರೇಮಿ ಮಂಜಪ್ಪನವರು. ಅವರ ಸ್ಮರಣೆ ಮತ್ತು ಬದುಕು ನಮಗೆಲ್ಲರಿಗೂ ದಾರಿದೀಪವಾಗಲಿ. ಆ ಬೆಳಕಿನಲ್ಲಿ ನಾವೆಲ್ಲರೂ ನಡೆಯೋಣ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
2 Comments
  • ಹರ್ಡೇಕರ ಮಂಜಪ್ಪನವರ ಜಯಂತಿಯ ಹಾರ್ದಿಕ ಶುಭಾಶಯಗಳು ತಮಗೆಲ್ಲರಿಗೆ. ಆ ಮಹಾನ್ ವ್ಯಕ್ತಿಯ ಜೀವನದ ಸಾಧನೆಗಳಿಗೆ. ಅವರ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು. ಎಲ್ಲರಿಗೂ ಶುಭವಾಗಲಿ, ಶರಣು ಶರಣಾರ್ಥಿ.

Leave a Reply

Your email address will not be published. Required fields are marked *