ಬಸವ ಸಂಘಟನೆಗಳು ಬಲಿಷ್ಠವಾದರೆ ಹೊಸ ರಾಜಕೀಯ ಪಕ್ಷವನ್ನೇ ಕಟ್ಟಬಹುದು

ಕುಮಾರಣ್ಣ ಪಾಟೀಲ್
ಕುಮಾರಣ್ಣ ಪಾಟೀಲ್

ಹುಬ್ಬಳ್ಳಿ

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ಹುಬ್ಬಳಿಯ ಗಣಾಚಾರಿ ಕುಮಾರಣ್ಣ ಪಾಟೀಲ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?

ಭಾರತದಲ್ಲಿ ರಾಜಕೀಯ ಪ್ರಭಾವವಿಲ್ಲದೆ ಸಂಘಟನೆಗಳ ಯಾವುದೇ ಸರಕಾರಿ ಕೆಲಸಗಳು ಸರಳವಾಗಿ ನಡೆಯುವುದಿಲ್ಲ. ದೇಶದಲ್ಲಿನ ಬಹುತೇಕ ಸಂಘಟನೆಗಳು ತಮ್ಮ ಕೆಲಸ ಮಾಡಿಸಿಕೊಳ್ಳಲು ಒಂದಿಲ್ಲೊಂದು ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿರುತ್ತವೆ.

ಬಸವ ಸಂಘಟನೆಗಳಿಗೆ ರಾಜಕೀಯ ಪ್ರಜ್ಞೆ ಇಲ್ಲವೆ ಇಲ್ಲ ಎಂದು ಹೇಳಬಹುದು. ಯಾವುದೇ ಪಕ್ಷ ಇರಲಿ ಕಾನೂನುಬದ್ಧವಾಗಿ ಸಂಘಟನೆಯ ಕೆಲಸಗಳನ್ನು ಮಾಡಿಸಿಕೊಳ್ಳುವಲ್ಲಿ ಅವು ಸೋತಿವೆ.

ಇವತ್ತು ಆರ್.ಎಎಸ್. ಎಸ್, ವಿ.ಎಚ್.ಪಿ, ಎ.ಬಿ.ವಿ.ಪಿ. ಮುಂತಾದ ವೈದಿಕ ಸಂಘಟನೆಗಳು ರಾಷ್ಡ್ರಮಟ್ಟದಲ್ಲಿ ಬಲಿಷ್ಠ ಆಗಿರುವುದಕ್ಕೆ ರಾಜಕೀಯ ಪ್ರಭಾವವೇ ಕಾರಣವಾಗಿದೆ.

ಸಂಘ ಪರಿವಾರ ಶಾಲೆ, ಕಾಲೇಜುಗಳು, ವಿಶ್ವವಿದ್ಯಾಲಯಗಳಿಗೆ ಹೋಗಿ ಮನುವಾದವನ್ನು ಪ್ರಚಾರ ಮಾಡ್ತಾರಂದ್ರೆ ಅವರಿಗೆ ರಾಜಕೀಯ ಪ್ರಭಾವ ಎಷ್ಟೊಂದು ಇರಬಹುದು ಯೋಚಿಸುವಂತಹದು.

ನಾವು ಕೂಡ ಬಸವಾದಿ ಶರಣರ ಸಮಾನತೆಯ ಸಿದ್ಧಾಂತವನ್ನು ಹೇಳಲು ಶಾಲೆ ಕಾಲೇಜು ವಿವಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರವೇ ಘೋಷಣೆ ಮಾಡಿದೆ. ನಮಗೆ ತತ್ವ ಪ್ರಚಾರ ಮಾಡಲು ಇದು ಇನ್ನೂ ಸುಲಭವಾಗಿದೆ.

ರಾಜಕಾರಣಿಗಳ ಸಹಾಯ ತೆಗೆದುಕೊಳ್ಳಬೇಕೆಂದರೆ ನಾವು ಮೊದಲು ತತ್ವನಿಷ್ಠರಾಗಿರಬೇಕು, ಇದರ ಕೊರತೆ ಬಹಳ ಇದೆ. ಹೆಚ್ಚಿನ ಬಸವ ಸಂಘಟನೆಗಳ ಪದಾಧಿಕಾರಿಗಳು ಅನುದಾನಕ್ಕಾಗಿ ರಾಜಕಾರಣಿಗಳ ಮನೆ ಬಾಗಿಲಿಗೆ ಹೋಗಿ ನಿಲ್ಲುತ್ತಾರೆ, ನಂತರ ಅವರು ಹೇಳಿದಂತೆ ಕೇಳುತ್ತಾರೆ.

ರಾಜಕಾರಣಿಗಳ ಒಡನಾಟ ಬಳಸಿಕೊಂಡು ಸಂಘಟಕರು ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುವಲ್ಲಿ ನಿರತರಾಗುತ್ತಾರೆ. ಬಸವ ಸಂಘಟನೆಗಳ ವೀಕ್ನೆಸ್ ಇದೇ ಆಗಿದೆ, ಇದು ನಿಲ್ಲಬೇಕು.

ಪ್ರಾಮಾಣಿಕವಾಗಿ ಸೇವೆ ಮಾಡಲು ಸಿದ್ಧರಿರುವ ಯುವಕರಿಗೆ ಸಂಘಟನೆಯ ಹುದ್ದೆಯಲ್ಲಿ ಅವಕಾಶ ಕೊಡಬೇಕು. ಇಲ್ಲಿ ಅವಕಾಶ ಇಲ್ಲದ್ದರಿಂದಲೇ ಯುವಕರು ಕೋಮುವಾದಿಗಳ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಬಸವ ಸಂಘಟನೆಗಳು ಬಲಿಷ್ಠವಾದರೆ ಹೊಸ ರಾಜಕೀಯ ಪಕ್ಷವನ್ನೇ ಹುಟ್ಟು ಹಾಕಬಹುದು.

ಬಸವ ಸಂಘಟನೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ಸಂಘಟನೆಗಳ ಪದಾಧಿಕಾರಿಗಳು ರಾಜಕೀಯ ಚಟುವಟಿಕೆಯಿಂದ ದೂರ ಇರಬೇಕು. ಸಂಘಟನೆಯ ಹುದ್ದೆಯಲ್ಲಿರುವ ವ್ಯಕ್ತಿಗಳು ರಾಜಕೀಯ ಪ್ರವೇಶ ಮಾಡುವ ಮೊದಲು ಸಂಘಟನೆಯ ಹುದ್ದೆಗೆ ರಾಜೀನಾಮೆ ಕೊಡಬೇಕು.

ಯಾವುದೇ ವ್ಯಕ್ತಿ ರಾಜಕೀಯದಲ್ಲಿ ಸಕ್ರಿಯವಾಗಿದ್ದುಕೊಂಡು ಬಸವ ಸಂಘಟನೆಯಲ್ಲಿ ಪದಾಧಿಕಾರಿ ಹುದ್ದೆಯನ್ನು ಹೊಂದಬಾರದು.

ಕೆಲವು ಲಿಂಗಾಯತ ಮಠಗಳ‌ ಪೀಠಾಧಿಪತಿಗಳು ಬಸವತತ್ವ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರನ್ನು ಪ್ರಶ್ನೆ ಮಾಡವವರು ಇಲ್ಲದ್ದರಿಂದ ಆಮೀಷ ಅಥವಾ ಒತ್ತಡಕ್ಕೆ ಅವರು ಬಲಿಯಾಗಿದ್ದಾರೆ. ಅಂಥ ಮಠಗಳ ಪೀಠಾಧಿಪತಿಗಳಿಗೆ ತಿಳುವಳಿಕೆ ನೀಡಿ ಬಸವತತ್ವ ಪ್ರಚಾರಕ್ಕೆ ಕರೆತರಲು ಸಂಘಟನೆಗಳು ಪ್ರಯತ್ನಿಸಬೇಕು. ನಾವು ಕೈಬಿಟ್ಟರೆ ಅವರನ್ನು ಇನ್ನಾರೋ ಉಪಯೋಗಿಸಿಕೊಳ್ಳುತ್ತಾರೆ.

2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?

ಬಸವ ಸಮಾವೇಶ ಮಾಡುವ ಮೊದಲು ಜನರಲ್ಲಿ ಬಸವಪ್ರಜ್ಞೆ ಮೂಡಿಸಬೇಕು. ತತ್ವನಿಷ್ಠರು ಲಿಂಗಾಯತ ಇತಿಹಾಸ ತಿಳಿದಿರುವವರು, ಸಂಘಟನಾ ಚಾತುರ್ಯ ಇರುವ ಐದು ಜನ ಹಿರಿಯರ ಕೋರ್ ಕಮಿಟಿ ರಚಿಸಬೇಕು.

ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಮಾಡುವ ಮೊದಲು ಮೂರು ದಿನದ ಕೇಡರ್ ಕ್ಯಾಂಪ್ ಏರ್ಪಡಿಸಿ, ಹಾಜರಾದವರಿಗೆ ಮಾತ್ರ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಕ್ಯಾಂಪ್‌ನಲ್ಲಿ ಲಿಂಗಾಯತ ಇತಿಹಾಸ, ಲಿಂಗಾಯತ ಧರ್ಮದ ಸಿದ್ಧಾಂತ, ರಾಜಕೀಯ, ಸಾಮಾಜಿಕ ಸಮಸ್ಯೆಗಳ ಬಗ್ಗೆ ತರಬೇತಿ ನೀಡಬೇಕು.

ಕಮೀಟಿಯವರು ಜಿಲ್ಲಾವಾರು ಪ್ರಮುಖರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಿ ಜವಾಬ್ದಾರಿಯುತ ಹುದ್ದೆಗಳನ್ನು ನೀಡಬೇಕು. ಜಿಲ್ಲೆಗಳ ಪ್ರಮುಖರನ್ನು ಆಯ್ಕೆ ಮಾಡಿದ ನಂತರ ಮೂರು ದಿನದ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶ ಏರ್ಪಡಿಸಿ ಅಲ್ಲಿ ಸಂಘಟನೆಯ ರೂಪರೇಷೆಗಳನ್ನು ಸಿದ್ಧಪಡಿಸಬೇಕು.

ಈ ಕಾರ್ಯವನ್ನು ಈಗಿನಿಂದ ಆರಂಭ ಮಾಡಿದರೆ ಐದಾರು ತಿಂಗಳಲ್ಲಿ ಒಂದು ಬಲಿಷ್ಠ ಸಂಘಟನೆ ಸಿದ್ಧವಾಗುತ್ತದೆ.

3) ಬಸವಶಕ್ತಿ ಸಮಾವೇಶದ ರೂಪುರೇಷೆಯ, ಬಗ್ಗೆ ನಿಮ್ಮ ಸಲಹೆ.

ನಮ್ಮಲ್ಲಿ ಸಾಕಷ್ಟು ಜನ ಬಸವತತ್ವ ಚಿಂತಕರಿದ್ದಾರೆ, ಅನುಭಾವಿಗಳಿದ್ದಾರೆ. ಆದರೆ ಅವರಿಗೆ ಸಂಘಟನೆ ಕಟ್ಟುವ ಅನುಭವ ಇಲ್ಲದೆ ಬರೀ ಭಾಷಣಗಳಿಗೆ ಸೀಮಿತರಾಗಿದ್ದಾರೆ, ಅವರನ್ನು ತತ್ವ ಪ್ರಚಾರಕ್ಕೆ ಬಳಸಿಕೊಳ್ಳುವಲ್ಲಿ ಸಂಘಟನೆಗಳು ವಿಫಲವಾಗಿವೆ. ಈಗಲಾದರೂ ಅಂಥವರನ್ನು ಗುರುತಿಸಿ ತರಬೇತಿ ನೀಡಿ ಗೌರವಧನ ಕೊಟ್ಟು ಸೇವೆಗೆ ಹಚ್ಚಬೇಕು.

ಬಸವತತ್ವ ಪ್ರಚಾರ ಮಾಡಲು ಲಿಂಗಾಯತ ಮಠಗಳು ಸ್ಥಾಪನೆಯಾಗಿವೆ, ಅದಕ್ಕಾಗಿಯೆ ನಮ್ಮ ಹಿರಿಯರು ಸಾಕಷ್ಟು ಸಂಪತ್ತನ್ನು ಮಠಗಳಿಗೆ ದಾಸೋಹವಾಗಿ ನೀಡಿದ್ದಾರೆ. ಆದರೆ ನಮ್ಮ‌ ನಿಷ್ಕಾಳಜಿಯಿಂದಾಗಿ ಅದರ ಪ್ರಯೋಜನವನ್ನು ಬಸವತತ್ವ ವಿರೋಧಿಗಳು ಪಡೆಯುತ್ತಿದ್ದಾರೆ.

ಲಿಂಗಾಯತ ಸಮಾಜದಲ್ಲಿ ಸಾಕಷ್ಟು ಜನ ದಾನಿಗಳಿದ್ದಾರೆ. ಒಳ್ಳೆಯ ಕೆಲಸ ನಡೆದರೆ ಅವರು ಆರ್ಥಿಕ ಸಹಾಯ ಮಾಡಲು ಮುಂದೆ ಬರುತ್ತಾರೆ.

4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತೀರಿ?

ವೈಯಕ್ತಿಕವಾಗಿ ನಾನು ನಮ್ಮ ಧರ್ಮಪತ್ನಿ ಭಾಗವಹಿಸುತ್ತೇವೆ, ಮತ್ತು ನನಗೆ ಪರಿಚಯ ಇರುವವರನ್ನು ಭಾಗವಹಿಸುವಂತೆ ವಿನಂತಿ ಮಾಡುತ್ತೇನೆ.

5) ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?

ನಾನು ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
3 Comments
  • Inclusiveness of all age groups shall be more productive for the rationalistic agenda framed in line with core concept’s of ನಾ ದೇವನಲ್ಲದೇ ನೀ ದೆವನೇ…. ಗುಹೆಶ್ವರಾ. No hankopenki shall be allowed to any individuals or a group. A strict hardliner agenda be framed for multifaceted equality. Spirituality is personal matter shall be confined to within personal promises only , not in public show businesses. If you really determined to do some thing sustainable development for Lingayat unity for community welfare to achieve politically viable option to thrives to power struggle in present vitiated atmospheric scenario.

  • Inclusiveness of all age groups shall be more productive for the rationalistic agenda framed in line with core concept’s of Na Devanallade Ne Devane…. Guheshwara. No hankopenki shall be allowed to any individuals or a group. A strict hardliner agenda be framed for multifaceted equality. Spirituality is personal matter shall be confined to within personal promises only, not in public show businesses. If you really determined to do something sustainable development for Lingayat unity for community welfare to achieve politically viable option to thrive to power struggle in present vitiated atmospheric scenario.

Leave a Reply

Your email address will not be published. Required fields are marked *