ಬಸವನಬಾಗೇವಾಡಿ:
ನಾಡಿನಲ್ಲಿರುವ ಅನೇಕ ಮಠಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಜೊತೆಗೆ ಶಿಕ್ಷಣ, ದಾಸೋಹಕ್ಕೆ ಕೊಡುಗೆ ನೀಡಿವೆ. ಈ ಮೂಲಕ ಮಠಗಳ ಕೊಡುಗೆ ಮರೆಯುವಂತಿಲ್ಲ ಎಂದು ವಿಜಯಪುರದ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಡಾ.ವ್ಹಿ.ಡಿ. ಐಹೊಳ್ಳಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಶಿವಾನುಭವ ಸವಿನೆನಪು, ಲಿಂಗೈಕ್ಯ ಶಾಂತಾಬಾಯಿ ಮೇಟಿ, ಲಿಂಗೈಕ್ಯ ಷಣ್ಮುಖಪ್ಪ ಶೀಲವಂತ, ಲಿಂಗೈಕ್ಯ ಮನೋಹರ ದಂಡಾವತಿ ಸ್ಮರಣಾರ್ಥ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಉದ್ಘಾಟಿಸಿ ಮಠಗಳ ಪರಿಕಲ್ಪನೆ ಕುರಿತು ಮಾತನಾಡಿದರು.
ನಾಡಿನಲ್ಲಿರುವ ಮಠಗಳು ಸಾಹಿತ್ಯವನ್ನು ಬೆಳೆಸುವ ಮೂಲಕ ಸಾಂಸ್ಕ್ರತಿಕ ಜೀವನ ಸುಂದರಗೊಳಿಸುತ್ತವೆ. ಮಠಗಳು ಒಳ್ಳೆಯ ಕಾರ್ಯ ಮಾಡುತ್ತವೆ. ಶಿಕ್ಷಣ ಪ್ರಸಾರದಲ್ಲಿ ಮೊದಲಿನಿಂದಲೂ ಸೇವೆ ಸಲ್ಲಿಸುತ್ತಿವೆ. ಇಂದು ಕೆಲ ಮಠಗಳು ದೇಶ-ವಿದೇಶದಲ್ಲಿಯೂ ಸೇವೆ ಸಲ್ಲಿಸುತ್ತಿರುವದನ್ನು ಕಾಣುತ್ತೇವೆ.
ರುದ್ರಾಕ್ಷಿಮಠವು 1926ರಲ್ಲಿ ಡಾ.ಫ.ಗು.ಹಳಕಟ್ಟಿ ಅವರು ಆರಂಭಿಸಿದ್ದ ಶಿವಾನುಭವ ಪತ್ರಿಕೆಯ ಎಲ್ಲ ಪ್ರತಿಗಳನ್ನು ಬೈಂಡ್ ಮಾಡಿ ಸಂರಕ್ಷಿಸಿದ ಫಲವಾಗಿ ವಿಜಯಪುರದಲ್ಲಿ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಆರಂಭಿಸಿ ಈ ಕೇಂದ್ರದ ಮೂಲಕ ಈ ಎಲ್ಲ ಪತ್ರಿಕೆಗಳನ್ನು ಪುನರ್ ಮುದ್ರಣ ಮಾಡಲು ಸಾಧ್ಯವಾಯಿತು.
ವಚನ ಸಾಹಿತ್ಯವನ್ನು ಸಂರಕ್ಷಿಸಿ ನಾಡಿಗೆ ನೀಡುವಲ್ಲಿ ಮಠಗಳ ಕೊಡುಗೆ ಮರೆಯುವಂತಿಲ್ಲ. ನಾಲ್ಕು ಸಾವಿರ ಮಠಗಳಿವೆ. ಮಠಗಳು ನಡೆ-ನುಡಿಗಳಲ್ಲಿ ಒಂದಾಗಿ ಒಳ್ಳೆಯ ರೀತಿಯಲ್ಲಿ ಜನರನ್ನು ನಡೆಯುವಂತೆ ಮಾಡುವಲ್ಲಿ ಪಾತ್ರ ವಹಿಸುತ್ತವೆ. ಶ್ರೀಮಠಗಳು ಜನರಿಗೆ ಆಧ್ಯಾತ್ಮ ನೀಡುವ ಮೂಲಕ ನೆಮ್ಮದಿ ನೀಡುವ ತಾಣಗಳಾಗಿವೆ ಎಂದರು.
ಜಿಲ್ಲೆಯಲ್ಲಿ ಬಂಥನಾಳ ಶ್ರೀಗಳು ಅನೇಕ ಕಾಲೇಜುಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದರು. ಯಾರೂ ಎಂದಿಗೂ ನಕರಾತ್ಮಕ ವಿಚಾರಗಳನ್ನು ಮಾಡದೇ ಸಕರಾತ್ಮಕ ವಿಚಾರಗಳನ್ನು ಮಾಡುವಂತಾಗಬೇಕು. ಇದರಿಂದ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಸ್ಥಳೀಯ ಬಸವ ವಿಜ್ಞಾನ ಮತ್ತು ವಾಣಿಜ್ಯ ಪಪೂ ಕಾಲೇಜಿನ ಪ್ರಾಚಾರ್ಯ ಉಷಾಕಿರಣ ಎಂ. ಅವರು ವಚನಕಾರ ದಂಪತಿಗಳು ಕುರಿತು ಮಾತನಾಡಿದ ಅವರು, ಶರಣರ ಸನ್ಮಾರ್ಗದಲ್ಲಿ ನಡೆಯುವದೇ ಒಂದು ಪುಣ್ಯದ ಕಾರ್ಯ. 12 ನೇ ಶತಮಾನದಲ್ಲಿದ್ದ ಶರಣ ದಂಪತಿಗಳ ದಾಂಪತ್ಯ ಜೀವನ ಮಾದರಿಯಾಗಿದೆ. ಅವರ ಪ್ರಾಮಾಣಿಕತೆ, ಆತ್ಮತೃಪ್ತಿ, ಸಮನ್ವಯತೆ, ಕಾಯಕ, ದಾಸೋಹ ಪ್ರವೃತಿಯನ್ನು ಇಂದಿನ ದಂಪತಿಗಳು ಅಳವಡಿಸಿಕೊಂಡರೆ ಸುಂದರವಾದ ಸಂಸಾರ ನಿಭಾಯಿಸಬಹುದು. ಶರಣ ದಂಪತಿಗಳ ಆದರ್ಶವನ್ನು ಮೈಗೂಡಿಸಿಕೊಂಡರೆ ದಾಂಪತ್ಯ ಜೀವನದಲ್ಲಿ ಸಾಕಷ್ಟು ಸುಧಾರಣೆಯಾಗಲು ಸಾಧ್ಯ ಎಂದರು.
ಇಂದು ಆಧ್ಯಾತ್ಮ, ಸಾತ್ವಿಕ ಜೀವನ ಕಡಿಮೆಯಾಗುತ್ತಿರುವದು ವಿಷಾದನೀಯ. ಸಮಾಜದಲ್ಲಿ ಮೋಸ, ವಂಚನೆ, ಸುಳ್ಳು ಹೆಚ್ಚಾಗುತ್ತಿರುವದು ಸಾಕಷ್ಟು ಸವಾಲಾಗಿ ಪರಿಣಮಿಸುತ್ತಿರುವುದನ್ನು ನೋಡುತ್ತೇವೆ. ಇಂತಹವುಗಳ ಕಡಿಮೆಯಾಗಲು ಶರಣರ ತತ್ವಗಳು ಖಂಡಿತ ಸಹಾಯವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ, ಸಾಹಿತಿ ಜಂಬುನಾಥ ಕಂಚ್ಯಾಣಿ ಮಾತನಾಡಿ, ನಾಡಿನಲ್ಲಿ 1800 ಮಠಗಳಿದ್ದವು. ಇದರಲ್ಲಿ ಇಂದು 1200 ಮಠಗಳು ಮಾತ್ರ ಜಾಗೃತಾವಸ್ಥೆಯಲ್ಲಿವೆ. ಮಠಗಳು ನಾಡಿನಲ್ಲಿ ಧರ್ಮಪ್ರಸಾರ ಮಾಡುವ ಜೊತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿವೆ. ನಾನು ಶ್ರೀಮಠ, ಮಠಾಧೀಶರ ಕಾರ್ಯ ಕುರಿತು ವಿಸ್ತೃತವಾದ ಲೇಖನ ಬರೆದಿದ್ದೇನೆ. 12 ನೇ ಶತಮಾನದಲ್ಲಿ 10 ಶರಣ ದಂಪತಿಗಳಿದ್ದರು ಎಂದರು.
ಜಿಲ್ಲೆಯಲ್ಲಿ ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಘಟಕಗಳು ಕ್ರಿಯಾಶೀಲವಾಗಿವೆ. ಉಳಿದ ತಾಲೂಕಿನಲ್ಲಿಯೂ ತಾಲೂಕು ಘಟಕಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವ ಕಡೆಗೆ ಗಮನ ಹರಿಸಲಾಗುತ್ತಿದೆ. ಬಸವನಬಾಗೇವಾಡಿ ತಾಲೂಕಿನಲ್ಲಿ 800 ಸದಸ್ಯರು, 500 ಮಹಾಮನೆ ಸದಸ್ಯರು, 38 ದತ್ತಿಗಳು ಇರುವ ಮೂಲಕ ಜಿಲ್ಲೆಯಲ್ಲಿಯೇ ಈ ತಾಲೂಕು ಮೂಂಚೂಣಿಯಲ್ಲಿದೆ.

ಅಲ್ಲದೇ ಈ ತಾಲೂಕು ಘಟಕವು ರಾಜ್ಯಮಟ್ಟದ ವಾರ್ಷಿಕ ಸಭೆ, ಜಿಲ್ಲಾ ಸಮ್ಮೇಳನ ಆಯೋಜನೆಯನ್ನು ಅಚ್ಚುಕಟ್ಟಾಗಿ ಮಾಡುವ ರಾಜ್ಯದ ಘಟಕದ ಗಮನ ಸೆಳೆದಿದೆ. ಜಿಲ್ಲಾ ಘಟಕವು 150 ದತ್ತಿ, ಹೆಚ್ಚು ಸದಸ್ಯರನ್ನು ಹೊಂದುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ದತ್ತಿ ಉಪನ್ಯಾಸಗಳ ಮೂಲಕ ನಾಡಿನಲ್ಲಿ ಶರಣರ ಸಂದೇಶಗಳನ್ನು ಪ್ರಸಾರ ಮಾಡುವಲ್ಲಿ ಶರಣ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ ಎಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ನಿವೃತ್ತ ಶಿಕ್ಷಕ ಸಂಗಪ್ಪ ಹೂಗಾರ ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಎಸ್.ಎ. ದೇಗಿನಾಳ, ದತ್ತಿ ದಾಸೋಹಿಗಳಾದ ಎಚ್.ಎಸ್. ಬಿರಾದಾರ, ಎಫ್.ಟಿ. ಮೇಟಿ, ಬಸವರಾಜೇಶ್ವರಿ ಶೀಲವಂತ, ಅಪ್ಪು ದಂಡಾವತಿ, ಕದಳಿ ವೇದಿಕೆಯ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಯುವ ಘಟಕದ ಅಧ್ಯಕ್ಷ ಶರಣು ಬಸ್ತಾಳ ಇದ್ದರು.
ಅಂಧ ಕಲಾವಿದರಾದ ಅಶೋಕ ಜುಗತಿ, ಕಲ್ಮೇಶ ಶಿರಗೂರ ಅವರು ವಚನ ಗಾಯನ ಮಾಡಿದರು. ತಾಲೂಕು ಶಸಾಪ ಅಧ್ಯಕ್ಷ ವೀರಣ್ಣ ಮರ್ತುರ ಪ್ರಾಸ್ತವಿಕವಾಗಿ ಮಾತನಾಡಿದರು. ಆರ್.ಜಿ. ಅಳ್ಳಗಿ ಸ್ವಾಗತಿಸಿದರು. ಎಸ್.ಎ. ಮನಗೂಳಿ ನಿರೂಪಿಸಿದರು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
