ಸಂವಿಧಾನ ಸಂರಕ್ಷಣಾ ಸಮಾವೇಶ
ಜಗಳೂರು :
ನೈತಿಕ ನೆಲೆಗಟ್ಟಿನ ಮೇಲೆ, ಸಾರ್ವಜನಿಕ ಪ್ರಜ್ಞೆಗೆ ಮನ್ನಣೆ ನೀಡುವ ಶರಣರ ದಾಸೋಹ ಸಂಸ್ಕೃತಿಯ ಅಗತ್ಯವಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ದೊಣೆಹಳ್ಳಿ ಗ್ರಾಮದ ದಾಸೋಹ ಮಠದಲ್ಲಿ ಈಚೆಗೆ ನಡೆದ ದಾಸೋಹ ಸಂಸ್ಕೃತಿ ಉತ್ಸವದಲ್ಲಿ “ಸಂವಿಧಾನ ಸಂರಕ್ಷಣಾ ಸಮಾವೇಶ”ದ ಸಾನಿಧ್ಯ ವಹಿಸಿ ಮಾತನಾಡಿದರು.
ಸಮಾಜದಲ್ಲಿ ನಡೆಯುವ ಅನಾಚಾರ ಖಂಡಿಸದಿದ್ದರೆ ನಾವೂ ಅದರ ಪಾಲುದಾರರು ಆಗಬೇಕಾಗುತ್ತದೆ. ಕೇವಲ ವೇಷ ಭಾಷೆ ಮಾತ್ರವಲ್ಲದೆ ಅರಿವು ಆಚಾರವನ್ನು ಮನುಷ್ಯ ರೂಢಿಸಿಕೊಳ್ಳಬೇಕು. ಅರಿವು ಆಚಾರ ರೂಢಿಸಿಕೊಂಡ ವ್ಯಕ್ತಿ ಸಮಾಜಕ್ಕೆ ಶಕ್ತಿಯಾಗುತ್ತಾನೆ. ನಿಷ್ಠೆ ಮತ್ತು ನಿಷ್ಠೂರತೆಯನ್ನು ಅಳವಡಿಸಿಕೊಂಡರೆ ಕಲ್ಯಾಣ ರಾಜ್ಯ ಸಾಧ್ಯವಾಗುತ್ತದೆ. ಇಂದಿನ ಸಮಾಜದಲ್ಲಿನ ವ್ಯಾಪಕ ಭ್ರಷ್ಟಾಚಾರ, ಅಸಮಾನತೆಗಳಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿರುವ ಅಸಮರ್ಪಕ ಆಡಳಿತ ವ್ಯವಸ್ಥೆಯಿಂದಾಗಿ ಬಡವರ ಮತ್ತು ಶ್ರೀಮಂತರ ನಡುವೆ ಆರ್ಥಿಕ ಅಸಮಾನತೆ ಹೆಚ್ಚಾಗಿದೆ. ಬಂಡವಾಳಶಾಹಿಗಳ ದಬ್ಬಾಳಿಕೆಯಿಂದ ದುಡಿಯುವ ವರ್ಗದವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಸಂವಿಧಾನದಲ್ಲಿ ಹೇಳಿರುವ ಸಮಾನತೆಯ ಹಕ್ಕುಗಳು ಸಮರ್ಪಕವಾಗಿ ಅನ್ವಯಗೊಂಡು ಜಾರಿಯಾಗುತ್ತಿಲ್ಲ ಎಂದರು.
ಪ್ರಜಾಪ್ರತಿನಿಧಿಗಳು ಅಧಿಕಾರದ ದುರುಪಯೋಗದ ಬದಲು, ಪ್ರಜೆಗಳ ಸುಖ ದುಃಖಗಳಲ್ಲಿ ಭಾಗಿಯಾಗಿ ಸಮಾಜದ ಋಣ ತೀರಿಸಬೇಕು ಎಂದು ಸಲಹೆ ನೀಡಿದರು.
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಾ. ಎಚ್, ಎನ್. ನಾಗಮೋಹನದಾಸ್ ಮಾತನಾಡಿ, ದೇಶದ ಸಾಂಪ್ರದಾಯಿಕ ಸಮಾಜದ ಬದಲಿಗೆ ಕಾನೂನು ಆಧಾರಿತ ಸಮಾಜ ನಿರ್ಮಾಣವಾಗಬೇಕಿದೆ. ಸಂವಿಧಾನ ದೇಶದ ಪವಿತ್ರ ಗ್ರಂಥವಾಗಿದ್ದು, ಸಂವಿಧಾನ, ಕಾನೂನನ್ನು ಗೌರವಿಸದಿದ್ದರೆ ಸಮಾಜದ ಅಭಿವೃದ್ಧಿ ಅಸಾಧ್ಯ ಎಂದರು.
ಸಾರ್ವಜನಿಕರು ಕಾನೂನು ಹಕ್ಕುಗಳನ್ನು ಸರಿಯಾಗಿ ಬಳಸುವ ಹೊಣೆಗಾರಿಕೆಯನ್ನು ಹೊಂದಬೇಕು. ಸಂವಿಧಾನ ನೀಡಿದ ಸಮಾನ ಅವಕಾಶಗಳು ಎಲ್ಲರಿಗೂ ದೊರೆಯುವ ವ್ಯವಸ್ಥೆಯಾಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ಆಶಯದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆ ಸಾಧಿಸಬೇಕು. ದೇಶದಲ್ಲೀಗ ಅನುಕೂಲಕ್ಕೆ ತಕ್ಕಂತೆ ಕಾನೂನುಗಳನ್ನು ಮುರಿದು ಹಾಕುತ್ತಿರುವುದು ಬೇಸರದ ಸಂಗತಿ ಎಂದರು.
ಜಿ.ಬಿ. ವಿನಯಕುಮಾರ್ ಮಾತನಾಡಿ, ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ಭ್ರಾತೃತ್ವ ಎಂದರೆ ಎಲ್ಲರ ಕಷ್ಟಗಳಿಗೆ ಸ್ಪಂದಿಸುವುದು. ಸಮಾಜದಲ್ಲಿ ಅಸಮಾನತೆ ಇರುವವರೆಗೂ ರಾಜಕಾರಣದಲ್ಲಿ ಪಾಳೇಗಾರಿಕೆ ಮುಂದುವರಿಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾವೇಶದಲ್ಲಿ ದೊಣೆಹಳ್ಳಿ ದಾಸೋಹ ಮಠದ ಸಂಚಾಲಕ ಗುರುಮೂರ್ತಿ, ಕಾನಾಮಡುಗು ಮಠದ ಐಮಡಿ ಶರಣಾರ್ಯರು, ಚಿತ್ರದುರ್ಗದ ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಕಾರ್ಮಿಕ ಸಂಘಟನೆ ಮುಖಂಡ ಶಿವಶಂಕರ, ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಣ್ಣ, ವಕೀಲರ ಸಂಘದ ಜಿಲ್ಲಾ ಕಾರ್ಯದರ್ಶಿ ಎಲ್.ಎಚ್. ಅರುಣಕುಮಾರ, ದಾದಾ ಖಲಂದರ್, ರುದ್ರಮುನಿ ಆವರಗೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
