ಬಸವಪರ ಸಂಘಟನೆಗಳಿಗೆ ಸುಧೀರ್ಘ ಇತಿಹಾಸವಿದೆ, ಆದರೆ ರಾಜಕೀಯ ಪ್ರಜ್ಞೆಯ ಕೊರತೆಯಿದೆ
ಹೊಸಪೇಟೆ
ಸಂಧಿಗ್ದತೆಯ ಈ ಕಾಲಘಟ್ಟದಲ್ಲಿ ಬಸವಪರ ಸಂಘಟನೆಗಳು ಏಚ್ಚೇತ್ತುಕೊಳ್ಳಬೇಕಿದೆ ಎನ್ನುವ ಉದ್ದೆಶದಿಂದಲೆ ದಿನಾಂಕ 25 ಮತ್ತು 26ರಂದು ವಿಜಯನಗರ ಜಿಲ್ಲೆಯ ಪ್ರೌಢದೇವರಾಯ ಇಂಜಿನೀಯರಿಂಗ್ ಕಾಲೇಜಿನಲ್ಲಿ ಬಸವ ಶಕ್ತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ವಿಜಯನಗರದ ವಿವಿಧ ತಾಲೂಕುಗಳಿಂದ ಭಾಗವಹಿಸಿದ್ದರು. ಬಸವಪರ ಸಂಘಟನೆಗಳು ರಾಜಕೀಯವಾಗಿ ಏಚ್ಚರಗೊಳ್ಳಬೇಕಿದೆ, ರಾಜಕಾರಣಿಗಳನ್ನು ಪ್ರಶ್ನಿಸಿ ಅವರ ಮೇಲೆ ಒತ್ತಡ ತರಬೇಕಿದೆ ಎಂಬುದು ಶಿಬಿರದ ಮುಖ್ಯ ಉದ್ದೇಶವಾಗಿತ್ತು.
ಈಗ ಈ ದೇಶದ ಚುಕ್ಕಾಣೆ ಹಿಡಿದಿರಿರುವ ಆರೆಸ್ಸೆಸ್ ಸ್ಥಾಪನೆಯಾಗಿದ್ದು 1925ರಲ್ಲಿ. ಆದರೆ ಅದರ ದೂರಗಾಮಿತ್ವವು ಇಂದು ದೇಶ ಆಳುವ ನಿಟ್ಟಿನಲ್ಲಿ ಬೆಳದಿದೆ.
ಬಸವಪರ ಸಂಘಟನೆಗಳಿಗೆ ಅದಕ್ಕಿಂತ ಸುಧೀರ್ಘವಾದ ಇತಿಹಾಸವಿದೆ. ಪ್ರಥಮವಾಗಿ ಬಸವ ಜಯಂತಿಯನ್ನು ಆಚರಿಸಿದ್ದು 1913ರಲ್ಲಿ. ಲಿಂಗಾಯತ ಸಮಾಜದಲ್ಲಿ ಮಠಗಳ ಪರಂಪರೆಗೆ ಶತಮಾನಗಳ ಇತಿಹಾಸವಿದೆ. ಅಂದಿನಿಂದ ಇಂದಿನವರೆಗೆ ಮಠಗಳಲ್ಲಿ ಬಸವತತ್ವದ ಬಗ್ಗೆ ಪ್ರಚಾರ ನಡೆಯುತ್ತಲೆ ಇದೆ.
ಐತಿಹಾಸಿಕವಾಗಿ ನೋಡಿದರೆ ಲಿಂಗಾಯತರ ಸಂಘಟನೆ ನಡೆದಿದ್ದು 12ನೇ ಶತಮಾನದಿಂದಲೆ. ಅನುಭವ ಮಂಟಪದ ಹೆಸರಿನಲ್ಲಿ ಅಂದು ಎಲ್ಲಾ ಕಾಯಕವರ್ಗದವರು ಸಾಮಾಜಿಕವಾಗಿ, ಧಾರ್ಮಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಂಘಟಿತರಾದರು. ಅನುಭವ ಮಂಟಪವೆನ್ನುವುದು ರಾಜಕೀಯ ಸಂಘಟನೆ, ಕಲ್ಯಾಣ ಕ್ರಾಂತಿವೆನ್ನುವುದು ರಾಜಕೀಯ ಕ್ರಾಂತಿ.
ಲಿಂಗಾಯತರಿಗೆ ಇಷ್ಟು ಸುಧೀರ್ಘವಾದ ರಾಜಕೀಯ ಇತಿಹಾಸವಿದ್ದರೂ, ಇಂದಿಗೂ ಆ ಸಮುದಾಯ ರಾಜಕೀಯವಾಗಿ ಜಾಗೃತವಾಗಿಲ್ಲ, ಸಂಘಟಿತವಾಗಿಲ್ಲ.
12ನೇ ಶತಮಾನದ ನಂತರ ಬಸವಾದಿ ಶರಣರ ತತ್ವಗಳು ಕೆಲಕಾಲ ಭೂಗತವಾದವು. ನಂತರ ಅವು ಮಠಮಾನ್ಯಗಳ ಕಪಿಮುಷ್ಠಿಯಲ್ಲಿ ಸಿಲುಕಿ ನೈಜವಾದ ವಿಚಾರಗಳನ್ನು ಕಳೆದುಕೊಂಡು, ಕೇವಲ ಪುರಾಣ ಪ್ರವಚನಗಳಿಗೆ ಸಿಮೀತವಾದವು. ಅದರ ಪರಿಣಾಮವಾಗಿ ಇಂದಿಗೂ ಬಸವಪರ ಸಂಘಟನೆಗಳಲ್ಲಿ ರಾಜಕೀಯ ಪ್ರಜ್ಞೆಯ ಕೊರತೆ ಏದ್ದು ಕಾಣುತ್ತೆ.
ಕರ್ನಾಟಕದಲ್ಲಿ ಸಮೀಕ್ಷೆ ಮಾಡಿದರೆ ಆರೆಸ್ಸೆಸ್ಸಿಗಿಂತಲೂ ಅತಿ ಹೆಚ್ಚು ಶಾಖೆಗಳು ಬಸವಪರ ಸಂಘಟನೆಗಳದ್ದೇ. ಆದರೆ ಅವು ರಾಜಕೀಯವಾಗಿ ಪ್ರಜ್ಞೆ ಹೊಂದದೆ ಬರಿ ಆಧ್ಯಾತ್ಮ ಪ್ರವಚನಗಳಿಗೆ ಸೀಮಿತವಾದವು.
ಬಸವಣ್ಣ ಮೂಲತಃವಾಗಿ ಒಬ್ಬ ರಾಜಕೀಯ ತತ್ವಜ್ಞಾನಿ ಎನ್ನುವುದು ಮರೆತು ಬಿಟ್ಟುವು ಹಾಗಾಗಿ ಇಂದಿನ ದುರಿತ ಕಾಲಘಟ್ಟದಲ್ಲಿ ಬಸವಪರ ಸಂಘಟನೆಗಳನ್ನು ರಾಜಕೀಯವಾಗಿ ಜಾಗೃತಿಗೊಳಿಸುವ ಅವಶ್ಯಕತೆ ಇದೆ.
ಈ ನಿಟ್ಟಿನಲ್ಲಿಯೆ ಬಸವಪರ ಸಂಘಟನೆಗಳಿಗೆ ರಾಜಕೀಯ ಪ್ರಜ್ಞೆ ಮೂಡಿಸುವ ಬಸವ ಶಕ್ತಿ ಶಿಬಿರಗಳು ವಿಜಯನಗರ ಜಿಲ್ಲೆಯಿಂದ ಆರಂಭವಾಗಿದೆ.
ಶಿಬಿರದಲ್ಲಿ ಮುಖ್ಯವಾಗಿ ಏಳು ವಿಷಯಗಳ ಮೇಲೆ ಚರ್ಚೆ ಸಂವಾದಗಳು ನಡೆದವು.
*ಬಸವಪರ ಸಂಘಟನೆಗಳಿಗೆ ರಾಜಕೀಯ ಪ್ರಜ್ಞೆ ಅವಶ್ಯವೆ?
*ಲಿಂಗಾಯತ ಧರ್ಮಕ್ಕೆ ರಾಜಕೀಯ ವಿರೋಧವೇಕೆ?
*ಚುನಾವಣೆಗಳಲ್ಲಿ ಬಸವಪರ ಸಂಘಟನೆಗಳು ಯಾವ ರೀತಿ ಸಂಘಟಿತವಾಗಬೇಕು ಮತ್ತು ಚುನಾವಣೆಯಲ್ಲಿ ಯಾವ ರೀತಿಯಾಗಿ ಪ್ರಭಾವ ಬೀರಬೇಕು?
*ಅನುಭವ ಮಂಟಪ ನಿರ್ವಾಹಣೆ ನಮ್ಮ ಹೊಣೆ .
ಎನ್ನುವ ವಿವಿಧ ವಿಷಯಗಳನ್ನಿಟ್ಟುಕೊಂಡು ಸಂವಾದ ಚರ್ಚೆಗಳನ್ನೆರ್ಪಡಿಸಿ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಶಿಬಿರಾರ್ಥಿಗಳನ್ನು ಸ್ವಯಂಸೇವಕರಾಗಿ ನೋಂದಾಯಿಸಲಾಯಿತು.
ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯ ದೊರೆಯಿತು. ಶಿಬಿರಾರ್ಥಿಗಳು ಮುಂದೆ ತಮ್ಮ ತಮ್ಮ ಊರುಗಳಲ್ಲಿ ಹೇಗೆ ಕಾರ್ಯ ಪ್ರವೃತ್ತರಾಗಬೇಕು ಎನ್ನುವುದನ್ನು ಸಹ ತಿಳಿಸಿಕೊಡಲಾಯಿತು.
ಇಂತಹ ಶಿಬಿರಗಳನ್ನು ಕರ್ನಾಟಕದ ತುಂಬೆಲ್ಲಾ ಹಮ್ಮಿಕೊಳ್ಳಲಾಗುವುದು ಎಂದು ಬಸವ ಶಕ್ತಿ ಆಯೋಜಕರು ತಿಳಿಸಿದರು.
