ಬಸವ ಧರ್ಮ ಮನೆ ಮನೆಗೆ ಮುಟ್ಟಿಸಿದ ಲಿಂಗಾನಂದ ಸ್ವಾಮೀಜಿ, ಮಾತಾಜಿ

ಕಟ್ಟಾ ಬಸವಭಕ್ತರ ಬೃಹತ್ ಪಡೆ ಕಟ್ಟಿದ ಮಾತಾಜಿ

ಕೊಪ್ಪಳ :

ಬಸವ ಧರ್ಮವನ್ನು ತಮ್ಮ ಪ್ರಾಣಕ್ಕೂ ಮಿಗಿಲಾಗಿ ಅರ್ಚಿಸಿ, ಅರ್ಪಿಸಿ, ಅನುಭವಿಸಿ ನಿಜ ಬಸವಧರ್ಮ ಸಿದ್ಧಾಂತವನ್ನು ಎಲ್ಲರ ಮನೆ ಮನಕ್ಕೂ ತಲುಪಿಸಿದಂಥವರು ಡಾ.ಮಾತೆ ಮಹಾದೇವಿ ಅವರು ಎಂದು ಕಲ್ಯಾಣ ಕರ್ನಾಟಕ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಬಸವಕುಮಾರ ಪಾಟೀಲ ಅವರು ನುಡಿದರು.

ತಾಲೂಕಿನ ಟಣಕನಕಲ್ಲ ಗ್ರಾಮದಲ್ಲಿ ಈಚೆಗೆ ರಾಷ್ಟ್ರೀಯ ಬಸವದಳವು ಹಮ್ಮಿಕೊಂಡಿದ್ದ 34 ನೇ ಶರಣಸಂಗಮದ ಅರಿವು ಆಚಾರ ಅನುಭಾವ ಕಾರ್ಯಕ್ರಮದಲ್ಲಿ ಅಲ್ಲಮಪ್ರಭುದೇವರ ಜಯಂತಿ ಮತ್ತು ಪ್ರಥಮ ಮಹಿಳಾ ಮಹಾಜಗದ್ಗುರು ಶ್ರೀ ಮಾತೆ ಮಹಾದೇವಿ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡುತ್ತ, ಲಿಂಗಾಯತರ ಬಹುದೊಡ್ಡ ಶಕ್ತಿಯಾಗಿದ್ದ ಮಾತಾಜಿಯವರು ಬೃಹತ್ ಪ್ರಮಾಣದ ಕಟ್ಟಾ ಬಸವಭಕ್ತರ ಪಡೆಯನ್ನೇ ಕಟ್ಟಿದರು. “ಸ್ವತಂತ್ರ ಧರ್ಮ ಆಂದೋಲನದ” ಪ್ರಪ್ರಥಮ ಕತೃತ್ವಶಕ್ತಿಯಾಗಿದ್ದವರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ಒಟ್ಟಾಗಿ ಸ್ವತಂತ್ರ ಧರ್ಮ ಮಾನ್ಯತೆ ಸಿಗುವವರೆಗೆ ವಿಶ್ರಮಿಸಬಾರದೆಂದು ಕರೆ ಕೊಟ್ಟರು.

ಇನ್ನೊಬ್ಬ ಅತಿಥಿಯಾಗಿದ್ದ ಕಲಬುರ್ಗಿಯ ನಾಗೇಂದ್ರಪ್ಪಾ ನಿಂಬರಗಿಯವರು, ಮಾತಾಜಿಯವರು ಅತ್ಯದ್ಭುತ ಸಂಘಟನಾ ಶಕ್ತಿಮಾತೆ ಎಂದು ನುಡಿದರು. ಅಮೇರಿಕಾ, ಕೆನಡಾ ಅನೇಕ ವಿದೇಶಗಳಲ್ಲಿ ಕೂಡ ಧರ್ಮಪ್ರಸಾರ ಮಾಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಸೃಷ್ಟಿಸಿದ್ದಾರೆ.

ಜಗತ್ತಿನಾದ್ಯಂತ 1200 ಕ್ಕೂ ಹೆಚ್ಚು ರಾಷ್ಟ್ರೀಯ ಬಸವ ದಳಗಳ ಸ್ಥಾಪನೆ, ನಿರಂತರ ಬೃಹತ್ ಶರಣ ಮೇಳಗಳು, ಕಲ್ಯಾಣ ಪರ್ವಗಳು, ದೆಹಲಿಯಲ್ಲಿ ದಿವ್ಯಜ್ಞಾನ ವಿದ್ಯಾಲಯ, ಮಹಾರಾಷ್ಟ್ರದಲ್ಲಿ ಅಲ್ಲಮಪ್ರಭು ಯೋಗಪೀಠ, ಬಸವಕಲ್ಯಾಣದಲ್ಲಿ ಶೂನ್ಯಪೀಠ, ಮತ್ತು ಬೆಂಗಳೂರು ಕುಂಬಳಗೋಡುನಲ್ಲಿ ಬಸವಣ್ಣನವರ 108 ಅಡಿ ಎತ್ತರದ ಮೂರ್ತಿ ಸ್ಥಾಪನೆ, ಮಿಶನರಿ ಮಾದರಿಯಲ್ಲಿ ಮನೆ ಮನೆಗೆ ಬಸವತತ್ವ ಪ್ರಸಾರ, ಪಂಗಡರಹಿತ ಏಕತ್ರ ಲಿಂಗಾಯತರ ಸಂಘಟನೆ, ಹೀಗೆ ನೂರಾರು ಸಾಧನೆಗಳನ್ನು ಮಾಡಿ ಅಮರರಾಗಿದ್ದಾರೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಹನಮೇಶ ಕಲ್ಮಂಗಿಯವರು ಅಲ್ಲಮಪ್ರಭುದೇವರ ಸ್ಮರಣೆ ಮಾಡಿದರು. ಅಲ್ಲಮಪ್ರಭುದೇವರು ಕಲ್ಯಾಣದ ‘ಅನುಭವ ಮಂಟಪ’ದ ಶೂನ್ಯ ಸಿಂಹಾಸನಾಧೀಶ್ವರರಾಗಿದ್ದರು. ಅವರು ಜ್ಞಾನದ ಪರಮೋಚ್ಚ ಸ್ಥಿತಿಯನ್ನು ತಲುಪಿದವರಾಗಿದ್ದರಿಂದ, ಬಸವಾದಿ ಎಲ್ಲಾ ಶರಣರಿಗೆ ಮಾರ್ಗದರ್ಶಕರಾಗಿದ್ದರು.

ಅಂತರಂಗದ ಅರಿವನ್ನು ಜಾಗೃತಗೊಳಿಸುವುದೇ ಜೀವನದ ಪರಮ ಗುರಿ ಎಂದು ಅವರು ಸಾರಿದರು. ಸಮಾಜದ ಮತ್ತು ಧರ್ಮದ ಡಾಂಭಿಕತೆಯನ್ನು ಕಟುವಾಗಿ ವಿಮರ್ಶಿಸುತ್ತಿದ್ದರು. ಭಕ್ತಿ ಎನ್ನುವುದು ಪ್ರದರ್ಶನದ ವಸ್ತುವಾಗಬಾರದು, ಅದು ಅಂತರಂಗದ ಶುದ್ಧತೆಯಾಗಿರಬೇಕು ಎಂಬುದು ಅವರ ನಿಲುವಾಗಿತ್ತು.

ಅಹಂಕಾರ ಮತ್ತು ಲೌಕಿಕ ಮೋಹವನ್ನು (ಮಾಯೆ) ಗೆಲ್ಲದ ಹೊರತು ದೈವತ್ವ ಸಾಧ್ಯವಿಲ್ಲ ಎಂಬುದನ್ನು ಅವರು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟರು ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶರಣತತ್ವ ಚಿಂತಕರು ಮತ್ತು ಅನುಭಾವಿಗಳಾದ ಡಾ.ಸಂಗಮೇಶ ಕಲಹಾಳ ಅವರು ಮಾತನಾಡುತ್ತ, ಬಸವಣ್ಣನವರು, ಲಿಂಗಾನಂದಶ್ರೀಗಳು ಮತ್ತು ಮಾತೆ ಮಹಾದೇವಿಯವರು ಮಾಡಿದ ಬಸವತತ್ವದ ಸಾಧನೆಯನ್ನು ಹೋಲಿಕೆ ಮಾಡಿ ತಿಳಿಸಿದರು.

ಬಸವಣ್ಣನವರು ಇಷ್ಟಲಿಂಗ ಜನಕರಾದರೆ, ಲಿಂಗಾನಂದ ಅಪ್ಪಾಜಿಯವರು ಇಷ್ಟಲಿಂಗ ಶಿಕ್ಷಣ ನೀಡಿದರು. ಮಾತಾಜಿಯವರು ಇಷ್ಟಲಿಂಗ ಆಚರಣೆಯನ್ನು ಸಾರ್ವತ್ರಿಕಗೊಳಿಸಿದರು. ಬಸವಣ್ಣನವರು ಲಿಂಗಾಯತ ತತ್ವ ಕಟ್ಟಿಕೊಟ್ಟರೆ, ಲಿಂಗಾನಂದ ಶ್ರೀಗಳು ಲಿಂಗಾಯತ ತತ್ವವನ್ನು ನದಿಯಂತೆ ಹರಿಸಿದರು. ಮಾತಾಜಿಯವರು ಸಾಗರದಂತೆ ಪ್ರಸಾರ ಮಾಡಿದರು. ಬಸವಣ್ಣನವರು ವಚನಸಾಹಿತ್ಯ ಕೊಟ್ಟರೆ, ಲಿಂಗಾನಂದಶ್ರೀಗಳು ವಚನಸಾಹಿತ್ಯ ಬಿಡಿಸಿ ತಿಳಿಸಿ ಕೊಟ್ಟರು. ಮಾತಾಜಿಯವರು ವಚನ ಸಾಹಿತ್ಯವನ್ನು ಎಲ್ಲರ ಬದುಕಿನಲ್ಲಿ ಅಳವಡಿಸಿದರು. ಬಸವಣ್ಣನವರು ಲಿಂಗಾಯತ ದರ್ಶನ ಕೊಟ್ಟರೆ, ಲಿಂಗಾನಂದ ಶ್ರೀಗಳು ಲಿಂಗಾಯತ ಧರ್ಮದ ಚೌಕಟ್ಟು ಕೊಟ್ಟರು. ಮಾತಾಜಿಯವರು ಸ್ವತಂತ್ರ ಧರ್ಮ ಚಳುವಳಿ ಪ್ರವರ್ತಕರಾದರು.

ಬಸವಣ್ಣನವರು ವಿಶ್ವಧರ್ಮ ನಿರೂಪಿಸಿದರೆ, ಲಿಂಗಾನಂದ ಶ್ರೀಗಳು ವಿಶ್ವಧರ್ಮ ಪ್ರವಚನ ಪಿತಾಮಹರಾದರು. ಮಾತಾಜಿಯವರು ವಿಶ್ವಧರ್ಮವನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿದರು. ಬಸವಣ್ಣನವರು ವಿಶ್ವಗುರುವಾದರೆ, ಲಿಂಗಾನಂದ ಶ್ರೀಗಳು ಸಿದ್ಧ ಪ್ರಸಿದ್ಧ ಗುರುವಾದರು. ಮಾತಾಜಿಯವರು ಸಮಾಜದ ಬಹುದೊಡ್ಡ ಶಕ್ತಿಯಾದರು. ಬಸವಣ್ಣನವರು ಲಿಂಗಾಯತ ತತ್ವದ ವಿಶ್ವರೂಪ ದರ್ಶನ ಮಾಡಿಸಿದರೆ, ಲಿಂಗಾನಂದ ಶ್ರೀಗಳು ಲಿಂಗಾಯತ ತತ್ವದ ವಿರಾಟರೂಪ ದರ್ಶನ ಮಾಡಿಸಿದರು. ಮಾತಾಜಿಯವರು ನಿಜಶರಣರ ಸಾಗರ ದರ್ಶನ ಮಾಡಿಸಿದರು ಎಂದು ಹೇಳುತ್ತ ; ಇವೆಲ್ಲ ವಿಷಯಗಳನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು, ನಾವೆಲ್ಲರೂ ದೊಡ್ಡ ಪ್ರಮಾಣದಲ್ಲಿ ಅವರು ಮಾಡಿದ  ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆಯೆಂದರು.

ಕೊಪ್ಪಳ ನವಪ್ರಗತಿ ಮಹಿಳಾ ಮಂಡಳದ ಅಧ್ಯಕ್ಷೆಯಾದ ಸುಜಾತಾ ಗುರುರಾಜ ಹಲಗೇರಿಯವರು ಶರಣ ಶರಣೆಯರ ಬದುಕು ಮತ್ತು ಬದುಕಿನ ಮೌಲ್ಯಗಳು ಮಾದರಿಯಾಗಿವೆ. ಬಸವಾದಿ ಶರಣರು ಹಾಕಿಕೊಟ್ಟ ಶರಣಸಂಸ್ಕೃತಿ ಮತ್ತು ಶರಣಮಾರ್ಗದಲ್ಲಿ ನಾವೆಲ್ಲಾ ನಡೆದು ಸಾರ್ಥಕ ಬದುಕು ಸಾಗಿಸೋಣವೆಂದರು.

ಬಸವಕಲ್ಯಾಣ ಸುಕ್ಷೇತ್ರ ಗುಣತೀರ್ಥವಾಡಿಯ ಶ್ರೀ ಬಸವಪ್ರಭು ಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವದಿಸಿದರು. ಕೊಪ್ಪಳದ ಬಸನಗೌಡ ಪಾಟೀಲ ವಣಗೇರಿ ಹಿರಿಯ ಶರಣರು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಅಧ್ಯಕ್ಷೆ ಅರ್ಚನಾ ಗವೀಶ ಸಸಿಮಠರವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹಿರಿಯ ಶರಣರಾದ ಕೊಟ್ರಪ್ಪ ಶೇಡದರವರು ಪ್ರಸಾದ ದಾಸೋಹಗೈದರು.

ಅತಿಥಿಗಳಾಗಿ ಕೊಪ್ಪಳ ನಗರಸಭಾ ಸದಸ್ಯರಾದ ಗುರು ಹಲಗೇರಿ, ಹಿರಿಯರಾದ ಈರಮ್ಮ ಕೊಳ್ಳಿ, ಟಣಕನಕಲ್ಲ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಪರಪ್ಪ ಗೊಂದಿಹೊಸಳ್ಳಿ, ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷರಾದ ವೀರಭದ್ರಪ್ಪ ನಂದ್ಯಾಲ, ಕೊಪ್ಪಳದ ಗಾಣದ ಕಣ್ಣಪ್ಪ ಶಿವಾನುಭವ ಸಮಿತಿ ಅಧ್ಯಕ್ಷರಾದ ಶಿವಸಂಗಪ್ಪ ವಣಗೇರಿ, ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಾಪೂಗೌಡ ಪಾಟೀಲ, ಕೊಪ್ಪಳ ಜಿಲ್ಲಾ ಟೈಲರ್ಸ್ ಅಸೋಶಿಯೇಶನ್ ಅಧ್ಯಕ್ಷರಾದ ರಮೇಶ ಆವಜಿಯವರು, ವಣಗೇರಿ ಗ್ರಾಮ ಪಂಚಾಯತಿ ಸದಸ್ಯರಾದ ಗುರುಸಿದ್ದಯ್ಯ ಹಿರೇಮಠ ಇತ್ಯಾದಿ ಗಣ್ಯರು ಅತಿಥಿಗಳಾಗಿ ಉಪಸ್ಥಿತರಿದ್ದರು.

ಇತ್ತೀಚೆಗೆ ಕೊಪ್ಪಳ ಜಿಲ್ಲಾ ಸ್ತ್ರೀರತ್ನ ಪ್ರಶಸ್ತಿ ವಿಜೇತರಾದ ಶ್ರೀದೇವಿ ಶೇಖರ ಇಂಗಳದಾಳ, ಟಣಕನಕಲ್ಲ ಗ್ರಾಮದ ರೈತರು ಮತ್ತು ಮಕ್ಕಳ ಪ್ರೇರಕರಾದ ಮಂಜುನಾಥ ಹಂದ್ರಾಳರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಪ್ರತಿ ಮಾಸಿಕ ಶರಣಸಂಗಮ ಕಾರ್ಯಕ್ರಮದಲ್ಲಿ ನಡೆಯುವ ವಚನ ಕಂಠಪಾಠ ಸ್ಪರ್ಧೆ, ವಚನ ವಿಶ್ಲೇಷಣೆ, ಶರಣ ಶರಣೆಯರ ಜೀವನ ಪರಿಚಯ ಸ್ಪರ್ಧೆಗಳಲ್ಲಿ ವಿಜೇತ 38 ಮಕ್ಕಳಿಗೆ ನಗದು ಮತ್ತು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ವಚನಶ್ರೀ ಶಿವಬಸಯ್ಯ ವೀರಾಪೂರ ಪ್ರಾರ್ಥನೆಗೈದರು. ಗವಿಸಿದ್ದಮ್ಮ ದೇವಪ್ಪ ಪೋಲೀಸಪಾಟೀಲ ಸ್ವಾಗತಿಸಿದರು. ಶರಣ ಬಾಪೂಗೌಡ ಪಾಟೀಲ ಶರಣು ಸಮರ್ಪಣೆ ಮಾಡಿದರು. ಕೊಪ್ಪಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ಬಸವಪರ ಸಂಘಟನೆಗಳ ಸದಸ್ಯರು ಮತ್ತು ಟಣಕನಕಲ್ಲ ಗ್ರಾಮದ ಗುರು ಹಿರಿಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಟಣಕನಕಲ್ಲ ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಶಿವಬಸಯ್ಯ ವೀರಾಪೂರ ಕಾರ್ಯಕ್ರಮ ನಿರ್ವಹಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *