ಮೌಢ್ಯವನ್ನು ನಿರಾಕರಿಸಿ ಸಹಜ ಬದುಕು ಕಟ್ಟಿಕೊಳ್ಳಬೇಕಾಗಿದೆ
ಕಲಬುರಗಿ
ಮಾನವನಿಗೆ ತನ್ನ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸೆಯನ್ನು ಸಹಜವಾಗಿ ಜ್ಯೋತಿಷಿಗಳಿಂದ ನಿರ್ಮಿಸಲ್ಪಟ್ಟಿದೆ. ಮುಂದೆ ಏನೋ ಎಂತೋ ಎಂಬ ಅನಿಶ್ಚಿತತೆಯ ಮಧ್ಯೆ ಬದುಕುತ್ತಿರುವವರಿಗೆ “ನಾಳೆ ಹೇಗಿರಬಹುದು?” ಎಂಬ ಪ್ರಶ್ನೆ ಸದಾ ಕಾಡುತ್ತಿರುತ್ತದೆ. ಈ ಆತಂಕದ ಹಿನ್ನೆಲೆಯಲ್ಲಿ ಜಾತಕ, ಕುಂಡಲಿ, ಭವಿಷ್ಯವಾಣಿ ಇತ್ಯಾದಿ ವಿಷಯಗಳು ಸಾಮಾನ್ಯ ಜನರ ಬದುಕಿನಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಆದರೆ, ಈ ನಂಬಿಕೆಗಳ ಅಡಿಯಲ್ಲಿ ಒಂದು ಗಂಭೀರವಾದ ತಾತ್ತ್ವಿಕ ಪ್ರಶ್ನೆ ಮೂಡುವುದು. ಅದೇನೆಂದರೆ ಕುಂಡಲಿ ನೋಡಿ ಭವಿಷ್ಯವನ್ನು ಹೇಳುವ ಜ್ಯೋತಿಷಿ ಪುರೋಹಿತರ ಬದುಕೇ ಏಕೆ ಅನಿಶ್ಚಿತತೆಯಿಂದ ಕೂಡಿದೆ?
ಒಬ್ಬ ಪುರೋಹಿತನು ಅಥವಾ ಜ್ಯೋತಿಷಿ ಇತರರ ಭವಿಷ್ಯವನ್ನು ಹೇಳುತ್ತಾನೆ. ಆದರೆ ಅವನ ಮನೆಯಲ್ಲಿಯೇ ಬಡತನ ಇರುತ್ತೆ, ಅನಾರೋಗ್ಯ ಇರುತ್ತೆ, ಅಸಮಾಧಾನ ಇರುತ್ತೆ, ವಿಧವತ್ವ / ವಿಧುರತ್ವ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತವೆ. ಇದರಿಂದ ಸ್ಪಷ್ಟವಾಗುವುದು ಏನೆಂದರೆ ಜನರನ್ನು ಅಜ್ಞಾನದಲ್ಲಿಟ್ಟು ಈ ಮುಖೇನ ದುಡ್ಡು ಮಾಡುವ ಜ್ಯೋತಿಷಿಗಳ ಒಂದು ವಿಧಾನ ಅಷ್ಟೇ ಎನ್ನಬಹುದು.
ಜಾತಕವು ಜಗತ್ತಿನ ಅನೇಕ ಸಂಸ್ಕೃತಿಗಳ ಭಾಗವಾಗಿರಬಹುದು, ಆದರೆ ಅದನ್ನು ಪ್ರಸ್ತುತ ಸತ್ಯವೆಂದು ಒಪ್ಪಿಕೊಳ್ಳುವುದು ಅಜ್ಞಾನಕ್ಕೆ ದಾರಿ ಮಾಡಿಕೊಡುತ್ತದೆ. ಯಾವುದೇ ಮಾನವನ ಜೀವನವನ್ನು ನಿರ್ಧರಿಸುವುದು ಅವನ ಚಿಂತನೆ, ಪರಿಶ್ರಮ, ನಿರ್ಧಾರಗಳು ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ. ಇಲ್ಲದ ನವಗ್ರಹಗಳು ಮತ್ತು ನಕ್ಷತ್ರಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ ಎಂಬ ಮೌಢ್ಯವನ್ನು ನಾವು ನಿರಾಕರಿಸಿ ಸಹಜ ಬದುಕು ಕಟ್ಟಿಕೊಳ್ಳಬೇಕಾಗಿದೆ.
ಜನಸಾಮಾನ್ಯರು ತಮ್ಮ ಅಸಹಾಯಕ ಸ್ಥಿತಿಯಲ್ಲಿ, ಭಯದಿಂದ ಅಥವಾ ನಿರೀಕ್ಷೆಯಿಂದ ಜ್ಯೋತಿಷಿಗಳ ಬಳಿ ಹೋಗುತ್ತಾರೆ. ಇದು ಮಾನವೀಯವಾಗಿಯೇ ಅರ್ಥವಾಗುವ ವಿಷಯ. ಆದರೆ, ಈ ಅವಲಂಬನೆ ಹೆಚ್ಚಾದಾಗ ಅದು ಸ್ವತಂತ್ರ ಚಿಂತನೆಗೆ ಅಡ್ಡಿಯಾಗುತ್ತದೆ. ವ್ಯಕ್ತಿ ತನ್ನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ಬದಲು, ಜ್ಯೋತಿಷಿಯ ಹೇಳಿಕೆ ಮೇಲೆ ಅವಲಂಬಿಸಿಕೊಳ್ಳಲು ಆರಂಭಿಸುತ್ತಾನೆ. ಇದು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.
ತತ್ತ್ವಶಾಸ್ತ್ರದ ದೃಷ್ಟಿಯಿಂದ ನೋಡಿದರೆ, “ಭವಿಷ್ಯ” ಎಂಬುದು ಪೂರ್ವನಿರ್ಧಾರಿತವಲ್ಲ; ಅದು ಪ್ರತಿದಿನ ನಾವು ತೆಗೆದುಕೊಳ್ಳುವ ಸಣ್ಣ ಸಣ್ಣ ನಿರ್ಧಾರಗಳ ಫಲಿತಾಂಶ. ಇಂದಿನ ಕ್ರಿಯೆಗಳು ನಾಳೆಯ ಸ್ಥಿತಿಯನ್ನು ರೂಪಿಸುತ್ತವೆ. ಆದ್ದರಿಂದ, ಭವಿಷ್ಯವನ್ನು ತಿಳಿಯಲು ಹೊರಗಿನವರನ್ನು ಕೇಳುವುದಕ್ಕಿಂತ, ನಮ್ಮ ಒಳಗಿನ ಸಾಮರ್ಥ್ಯವನ್ನು ಅರಿಯುವುದು ಹೆಚ್ಚು ಮುಖ್ಯ. ಇದನ್ನೇ ಬಸವಾದಿ ಶರಣರು, ಸರ್ವಜ್ಞ ಮುಂತಾದ ವೈಚಾರಿಕ ಮತ್ತು ಆಧ್ಯಾತ್ಮಿಕ ಸತ್ಯ ಶೋಧಕ ಚಿಂತಕರು, ದಾರ್ಶನಿಕರು ರಾಮಾಯಣ ಮತ್ತು ಮಹಾಭಾರತದಲ್ಲಿನ ಜ್ಯೋತಿಷಿಗಳ ಅಸಂಗತಗಳ ಬಗ್ಗೆ ಉಲ್ಲೇಖಿಸಿ ಖಂಡಿಸುತ್ತಾರೆ. ಆದ್ದರಿಂದ ನಿಜವಾದ ಮಾರ್ಗದರ್ಶನ ನಮ್ಮ ಜ್ಞಾನ, ಅನುಭವ ಮತ್ತು ವಿವೇಕದಿಂದಲೇ ಬರಬೇಕು.
ಅಜ್ಞಾನದಿಂದ ಹುಟ್ಟುವ ಭಯವು ನಮಗೆ ಜ್ಯೋತಿಷಿಗಳನ್ನು ಹುಡುಕುವಂತೆ ಮಾಡುತ್ತದೆ. ಆದರೆ ಜ್ಞಾನದಿಂದ ಹುಟ್ಟುವ ಧೈರ್ಯವು ನಮ್ಮನ್ನು ಸ್ವತಂತ್ರವಾಗಿ ಬದುಕಲು ಪ್ರೇರೇಪಿಸುತ್ತದೆ. ಜೀವನವನ್ನು ರೂಪಿಸುವ ಶಕ್ತಿ ನಮ್ಮೊಳಗೇ ಇದೆ. ಅದನ್ನು ಅರಿತುಕೊಳ್ಳುವುದೇ ನಿಜವಾದ ಜ್ಯೋತಿಷ್ಯ.
