ಬಸವ ಜಯಂತಿ: ಬೆಳಗಾವಿಯಲ್ಲಿ ಸಮಾನತೆಗಾಗಿ 2,000 ಬೈಕ್​ಗಳ ರ್ಯಾಲಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ :

ಬಸವ ಜಯಂತಿ ನಿಮಿತ್ತ ಇದೇ ರವಿವಾರ, 19 ರಂದು ಸಮಾನತೆಗಾಗಿ ಬೃಹತ್ ಬೈಕ್ ರ್ಯಾಲಿಯನ್ನು ಬೆಳಗಾವಿ ಮಹಾನಗರದಲ್ಲಿ ಆಯೋಜಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ-2026 ಸಮಿತಿಯ ಸಂಚಾಲಕ ಬಸವರಾಜ ರೊಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 8ಗಂಟೆಗೆ ಶಹಾಪೂರ ಗೋವಾವೇಸ್ ಬಸವೇಶ್ವರ ವೃತ್ತದಿಂದ ಆರಂಭವಾಗುವ ಈ ರ್ಯಾಲಿಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಬೈಕ್ ಗಳು ಮತ್ತು ಕಾರುಗಳು ಭಾಗಿಯಾಗಲಿವೆ.

ಬಸವಣ್ಣನವರು ಸಾರಿದ ಸಮಾನತೆಯ ಸಂದೇಶ ಸಾರಲು ಈ ರ್ಯಾಲಿಯನ್ನು ಆಯೋಜಿಸಲಾಗಿದ್ದು, ಸಮಾಜದ ಸಮಸ್ತ ಜನ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದವರು ವಿನಂತಿಸಿದರು.

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಸ್ವಾಮೀಜಿ, ಬೆಳಗಾವಿಯ ಸಂಸದ ಜಗದೀಶ ಶೆಟ್ಟರ, ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ ಅವರುಗಳು ಚಾಲನೆ ನೀಡಲಿದ್ದಾರೆ.

ಬೆಳಗಾವಿಯ ಮಹಾಪೌರರಾದ ಪ್ರೀತಿ ಕಾಮಕರ, ಉಪಮಹಾಪೌರ ಹನುಮಂತ ಕೊಂಗಾಲಿ, ಶಾಸಕರಾದ ಅಭಯ ಪಾಟೀಲ, ರಾಜು ಸೇಠ್ ಮತ್ತು ನಗರ ಸೇವಕರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದವರು ವಿವರಿಸಿದರು.

ಬಸವೇಶ್ವರ ವೃತ್ತದಿಂದ ಆರಂಭವಾಗುವ ರ್ಯಾಲಿಯು ತಿಳಕವಾಡಿ, ಅನುಗೋಳ, ವಡಗಾವ, ಖಾಸಬಾಗ, ಶಹಪುರ, ಕಪಿಲೇಶ್ವರ ರಸ್ತೆ, ಕರ್ನಾಟಕ ಚೌಕ್, ರವಿವಾರಪೇಟೆ, ಖಡೆ ಬಜಾರ, ಮಾರುತಿ ಗಲ್ಲಿ, ರಾಮದೇವ್ ಗಲ್ಲಿ, ಕಾಲೇಜು ರಸ್ತೆ, ಚೆನ್ನಮ್ಮ ವೃತ್ತ, ಸಿವಿಲ್ ಆಸ್ಪತ್ರೆ, ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು ರಸ್ತೆ, ಲಿಂಗಾಯತ ಭವನ, ಶ್ರೀನಗರ ಗಾರ್ಡನ್, ರಾಣಿ ಚೆನ್ನಮ್ಮ ಸೊಸೈಟಿ, ಸಾಯಿ ಮಂದಿರ, ಬಾಲ ಭವನ, ಲೌಡೇಲ್ ಸ್ಕೂಲ್, ಮಹಾಂತೇಶ ನಗರ ಬಸ್ ನಿಲ್ದಾಣ, ಪಿ.ಟಿ.  ಕ್ವಾಟರ್ಸ್, ಸಿದ್ನಾಳ ಕ್ರಾಸ್ , ಕೆಎಂಎಫ್ ಡೈರಿ, ದತ್ತ ಮಂದಿರ, ಲಿಂಗಾಯತ ಸಂಘಟನೆ ಮೈದಾನದವರೆಗೆ ಬಂದು, ಫ.ಗು. ಹಳಕಟ್ಟಿ ಭವನದಲ್ಲಿ ಕೊನೆಗೊಳ್ಳಲಿದೆ‌.

ಈ ಬೃಹತ್ ರ್ಯಾಲಿಯಲ್ಲಿ ಸಮಸ್ತ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಚಾಲಕರು ಮತ್ತು ಸಮಿತಿ ಸದಸ್ಯರು ಸರ್ವರಲ್ಲಿ ವಿನಂತಿಸಿಕೊಂಡರು.

ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು, ನಾವೆಲ್ಲ ಒಂದಾಗಿದ್ದೇವೆ. ಬಸವಪರ ಸಂಘಟನೆಗಳೆಲ್ಲ ಸೇರಿ ಬಸವ ಜಯಂತಿಯನ್ನು ಅದ್ಧೂರಿ, ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಈ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಈರಣ್ಣ ದೇಯಣ್ಣವರ, ಕಿರಣ ಅಗಡಿ, ರಮೇಶ ತುಬಚಿ, ಶಂಕರ ಗುಡಸ, ಎಸ್‌.ಜಿ. ಸಿದ್ನಾಳ, ಆನಂದ ಗುಡಸ್, ಪ್ರೇಮ್ ಚೌಗಲಾ, ಮನೋಹರ ಪುಡಕಲಕಟ್ಟಿ, ಬಾಲಚಂದ್ರ ಬಾಗಿ, ಅಶೋಕ ಬೆಂಡಿಗೇರಿ, ಮುರಗೆಪ್ಪ ಬಾಳಿ, ಸಿ.ಎಂ. ಬೂದಿಹಾಳ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *