ಬೀದರ :
ಪೂಜ್ಯ ಡಾ. ಸಿದ್ಧರಾಮ ಶರಣರು ಬೆಲ್ದಾಳ ಅವರನ್ನು ಕರ್ನಾಟಕ ಸರಕಾರ ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದಕ್ಕೆ ಬೀದರ ಜಿಲ್ಲೆ, ತಾಲ್ಲೂಕು ಕನ್ನಡ ಮತ್ತು ಬಸವಪರ ಸಂಘಟನೆಗಳು ಸಂತಸ ವ್ಯಕ್ತಪಡಿಸಿವೆ.
ಪುರಸ್ಕಾರಕ್ಕೆ ಬಾಜನರಾದವರ ಬಸವ, ಕನ್ನಡ ಸಾಹಿತ್ಯ ಸೇವೆ ಮರೆಯಲಾಗದು. ಪೂಜ್ಯರ ಅಪರೂಪದ ಸೇವೆಗೆ ಸಂದ ಗೌರವಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವ ಕೇಂದ್ರ ಸಂಸ್ಥೆ ಅಭಿಮಾನ ಪೂರ್ವಕ ಶುಭಾಷಯಗಳು ಹೇಳಿ, ಸರಕಾರಕ್ಕೆ ಅಭಿಮಾನ ಪೂರ್ವಕವಾದ ಕೃತಜ್ಞತೆಯನ್ನು ಸಲ್ಲಿಸಿವೆ.
ಡಾಕ್ಟರೇಟ್ ಗೌರವಪದವಿಯನ್ನು ಗುಲಬರ್ಗಾ ವಿ.ವಿ.ನಿಂದ ಸ್ವೀಕರಿಸಿದ ಔರಾದ ತಾಲೂಕಿನ ಬೆಲ್ದಾಳ ಗ್ರಾಮದ ಲಕ್ಷ್ಮಿದೇವಿ ಲಾಲಪ್ಪನವರ ಮಗ ವಿಠಲರು ಮೂರನೆ ತನಕ ಓದಿ, ಅಕ್ಕನಾಗಮ್ಮನವರ ಕೈಹಿಡಿದು ಮಹಾದೇವಿ, ಶಿವಕುಮಾರ ಮಕ್ಕಳನ್ನು ಪಡೆದು, ಅಪ್ರತಿಮ ಶಿವಯೋಗ ಸಾಧನೆ ಮಾಡಿ ಶೂನ್ಯ ಸಂಪಾದನೆ, ಷಟ್ಥ್ಸಲ ಸಂಪತ್ತು, ಶರಣರ ಬೆಡಗಿನ ಬೆಳಕು, ಇಷ್ಟಲಿಂಗ ವಿಧಾನ, ಕರುಳಿನ ಕಲೆ, ಭಗವಾನ ಬುದ್ಧರು, ಚನ್ನಬಸವಣ್ಣನವರ ವಚನ ವ್ಯಾಖ್ಯಾನ, ವಚನ ತತ್ವ್ತಾನುಭವ, ಶಿವಯೋಗ ಸುಖ, ಯೋಗಾಂಗ ತ್ರಿವಿಧಿಯ ಗ್ರಂಥಕರ್ತರಾದ ಪರಮ ಪೂಜ್ಯರಿವರು.
ಸಿದ್ಧ ಪುರುಷ, ಸಿದ್ಧವಾಣಿ, ಸ್ವಾಭಿಮಾನಿ, ಸ್ವಾವಲಂಬನೆಯ ಸಂಕಷ್ಟದ ಬದುಕಿನ ಮಧ್ಯೆ ತುಕಾರಾಮ, ಏಕನಾಥ, ಜ್ಞಾನೇಶ್ವರ ಅಭಂಗದ ಭಜನೆ ಹಾಡುತ್ತ, ಶುಭ್ರ ವಸ್ತ್ರ, ಶುದ್ಧ ಮನಸ್ಸಿನವರು, ಡಾ. ಚೆನ್ನಬಸವಪಟ್ಟದ್ದೇವರ ಕೃಪಾ ಆಶೀರ್ವಾದ ಪಡೆದು ಮಾನಸಿಕ ಸಿದ್ಧರಾಮ ಸುಪುತ್ರರು, ಅನುಭಾವ ವಾಗ್ಝರಿಯಿಂದ ಇಲಕಲ್ಲ, ದಾವಣಗೆರೆ, ಗದಗ, ಮೈಸೂರು, ಹುಬ್ಬಳ್ಳಿ, ಭಾಲ್ಕಿ, ಬೀದರನಲ್ಲಿ ಅನುಭಾವದ ಅಮೃತಧಾರೆ ಎರೆದ ೨೧ ನೇ ಶತಮಾನದ ನಿಜ ಜಂಗಮರಿವರು.
ಧರ್ಮದ ನಿಜವಾದ ತಿರಳನ್ನರಿಯಲು ವೇದ, ಉಪನಿಷತ್ತು, ಆಗಮ, ಪುರಾಣ, ಕುರಾನ್, ಬೈಬಲ್ ಅಲ್ಲದೇ ಜಗತ್ತಿನ ೧೫ ಧರ್ಮಗ್ರಂಥಗಳ ಆಧ್ಯಾತ್ಮಿಕ ಅಧ್ಯಯನ ನಡೆಸಿ ನಡೆದಾಡುವ ವಚನ ವಿಶ್ವವಿದ್ಯಾಲಯ ಎನಿಸಿದ ಮಾನವ ಕುಲದ ಆಸ್ತಿಯಾದವರು, ರಾಮಾಯಣ, ಮಹಾಭಾರತ ಅಧ್ಯಯನ ಶೀಲರಾಗಿ ಜ್ಞಾನ, ಅನುಭಾವ ಸಂಪತ್ತು ಪಡೆದು, ನಡೆ ನುಡಿ ತನು ಭಾವ ಶುಚಿಯಾಗಿರಿಸಿಕೊಂಡು ವಚನ ವಿದ್ವಾಂಸರಾಗಿ ಮಹಾಮನೆ ಟ್ರಸ್ಟ್ ಸ್ಥಾಪಿಸಿದ ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದವರು ಬಸವ ಬೆಳಗು ಅಭಿನಂದನಾ ಗ್ರಂಥದ ಸಚೇತಕ ಶಕ್ತಿಯಾದವರು.
ಮನೆಯನ್ನೆ ಮಹಾ ಮಠವಾಗಿ ಪರಿವರ್ತಿಸಿ, ಕೌಠಾ ಬಿ.ಯಲ್ಲಿ ಬಸವ ಆಶ್ರಮ, ಮಾದಾರ ಚನ್ನಯ್ಯ ವಿದ್ಯಾರ್ಥಿ ನಿಲಯ, ಹರಳಯ್ಯ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಪ್ರಾರಂಭಿಸಿ, ಸಾಧಕರ ಬದುಕಿಗೆ ಸತ್ಪಥ ತೋರಿಸುತ್ತ ಬೆಡಗಿನ ವಚನಗಳು ಭೇಧಿಸಿದ ಮಹಾ ಮೇಧಾವಿ ಶೈಕ್ಷಣಿಕ ಅನುಭಾವಿ ಸಂತರು,
ಶರಣರ ಆಚಾರ ವಿಚಾರ ಪರಿಪೂರ್ಣವಾಗಿ ಮೈಗೂಡಿಸಿಕೊಂಡು ಪೂಜ್ಯ ಸತ್ಯದೇವಿ, ಪೂಜ್ಯ ಗಾಯತ್ರಿ ತಾಯಿಯವರಿಗೆ ಶಿವಯೋಗ ಸಾಧಕರನ್ನಾಗಿಸಿ ಸಮಾಜಕ್ಕೆ ಅರ್ಪಿಸಿದವರು. ಕಲ್ಯಾಣ ನಾಡಿನ ಶರಣ ಪರಿಷತ್ ಅಧ್ಯಕ್ಷರಾಗಿ ಬೀದರ, ಜಹೀರಾಬಾದ, ಉದಗೀರ, ಸೇಡಂ, ಕಲಬುರಗಿ, ದೆಹಲಿಯಲ್ಲಿ ಬಸವತತ್ವ್ತ ಸಮ್ಮೇಳನ ಆಯೋಜಿಸಿದ ರೂವಾರಿಗಳಿವರು.
ರಸ ಘಳಿಗೆಯಲ್ಲಿ ೭೫ನೇ ವಯಸ್ಸಿನಲ್ಲು ದಣಿವರೆಯದೆ ದೇದಿಪ್ಯಮಾನವಾಗಿ ಕಂಗೊಳಿಸುತ್ತ, ಬುದ್ಧ, ಬಸವ, ಅಂಬೇಡ್ಕರ್ ವಿಚಾರದ ಭಾವನೆಯ ಬೀಜ ಬಿತ್ತುತ್ತ, ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ ಎನ್ನುವ ಗಾಂಭೀರ್ಯ ವ್ಯಕ್ತಿತ್ವ ಉಳ್ಳವರು, ಕಕ್ಕಯ್ಯ, ಕಂಬಳಿಬಾಬಾ, ರಾಜ್ಯೋತ್ಸವ, ಬಸವ ಸಾಧಕ, ಹಳಕಟ್ಟಿ ಶ್ರೀ, ಮೃತ್ಯುಂಜಯ, ರಮಣಶ್ರೀ ಪ್ರಶಸ್ತಿಗಳು ಪಡೆದವರು, (ಣ)ನವದ್ವಾರಗಳ ಮಧ್ಯೆ ಶಿವಧ್ಯಾನದಲ್ಲಿ ತಲ್ಲೀನರಾಗಿ, ಸದುವಿನಯದ ಸಾಕಾರ ಮೂರ್ತಿಗಳಾಗಿ, ವಚನಗಳ ತೋರುವಾರ್ಥ, ಗೂಢಾರ್ಥ, ಭಾವಾರ್ಥವನ್ನು ಅಮೇರಿಕಾದ ವೈಟ ಲಾರಾ, ಮಲೇಷಿಯಾ, ಶ್ರೀಲಂಕಾ, ಸಿಂಗಾಪೂರದವರಿಗೆ ಇಷ್ಟಲಿಂಗದ ವೈಜ್ಞಾನಿಕ ಕಲ್ಪನೆ ಪ್ರಾತ್ಯಕ್ಷಿಕೆಯನ್ನು ತೋರಿಸಿದ ಶಿವಯೋಗಿಗಳು. ಪೂನಾ ಲಿಂಗಾಯತ ಸಮಾಜ ವೆಲಫೇರ್ ಟ್ರಸ್ಟ್ ವತಿಯಿಂದ ಬಸವ ಭೂಷಣ ಪ್ರಶಸ್ತಿ ಪುರಸ್ಕೃತರು.
ರುಣಾತ್ಮಕ ಭಾವನೆಗಳು ಹೊಡೆದು ಹಾಕಿ ಧನಾತ್ಮಕ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ನಿರಂತರವಾಗಿ ವಚನ ಸಾಹಿತ್ಯದ ತಿರುಳನ್ನು ಕನ್ನಡ ನಾಡಿನ ಜನ ಮನಕ್ಕೆ ತಲುಪಿಸುತ್ತಿರುವ ಅಪರೂಪದ ಪ್ರಗತಿಪರ ಚಿಂತಕರು ಬಸವ ಪ್ರಶಸ್ತಿಗೆ ಭಾಜನರಾದವರು, ಅಪ್ಪಗಳಿಗೆ ಅಭಿಮಾನದ ಶರಣು ಶರಣಾರ್ಥಿಗಳು ಎಂದು ಸಂಘಟನೆಗಳು ಪ್ರಮುಖರಾದ ಡಾ. ಶಿವಶಂಕರ ಟೋಕರೆ, ಸುರೇಶ ಚನ್ನಶೆಟ್ಟಿ, ಎಮ್.ಎಸ್. ಮನೋಹರ, ಶರಣಪ್ಪ ಮಿಠಾರೆ, ಡಾ. ವಿದ್ಯಾವತಿ ಬಲ್ಲೂರ, ಭಾಗ್ಯವತಿ ಮುದ್ದ, ಸೋಮನಾಥ ಕಂದಗೂಳೆ, ಟಿ.ಎಮ್. ಮಚ್ಚೆ, ಜಗನ್ನಾಥ ಶಿವಯೋಗಿ, ಶಿವಕುಮಾರ ಕಟ್ಟೆ, ಪ್ರಭುರಾವ ವಾಸಮತೆ, ಡಾ. ಶಿವಶಂಕರ ಟೋಕರೆ ಮತ್ತಿತರರು ಅಭಿನಂದಿಸಿದ್ದಾರೆ.
