ಭಸ್ಮಾಸುರ: ಯತ್ನಾಳ್ ಕಾಲಿಟ್ಟ ಕಡೆಯೆಲ್ಲಾ ಬಿಜೆಪಿಗೆ ಸೋಲು – ಭಾಗ 2

ಯತ್ನಾಳ್ ಹೋದಲೆಲ್ಲ ಜನ ಸೇರುತ್ತಾರೆ, ಆದರೆ ಮತ ಬೀಳುವುದಿಲ್ಲ

ಬೆಂಗಳೂರು

ಒಬ್ಬ ಪ್ರಬಲ ಜನನಾಯಕ ಏಕಕಾಲಕ್ಕೆ ತನ್ನ ಸಮುದಾಯದ ಬೇಷರತ್ತು ಬೆಂಬಲ ಗಟ್ಟಿಯಾಗಿ ಹಿಡಿದಿಟ್ಟುಕೊಂಡೆ ಉಳಿದೆಲ್ಲ ಸಮುದಾಯಗಳಲ್ಲಿ ಜನಾನುರಾಗಿ ವ್ಯಕ್ತಿತ್ವ ಬೆಳೆಸಿಕೊಂಡಿರುತ್ತಾರೆ. ಸಿದ್ದರಾಮಯ್ಯ ಅವರನ್ನು ಸಾಮಾನ್ಯ ಕುರುಬರು ಆಗಾಧವಾಗಿ ಇಷ್ಟ ಪಡುತ್ತಾರೆ. ಅದೇನು ಮೋಡಿ ಮಾಡಿದ್ದಾರೋ ಅವರಿಗೆ ಗೊತ್ತು. ಜೊತೆಗೆ ಉಳಿದೆಲ್ಲ ಸಮುದಾಯಗಳು ಪ್ರೀತಿ ಮತ್ತು ಗೌರವದಿಂದ ಕಾಣುತ್ತಾರೆ. ಯಡಿಯೂರಪ್ಪ, ದೇವೇಗೌಡರ ವಿಷಯದಲ್ಲೂ ಹೀಗೆಯೇ ಆಗಿದೆ.

ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಾಮಾನ್ಯ ಲಿಂಗಾಯತ ಯುವಕರು ಇಷ್ಟ ಪಡುವುದಿಲ್ಲ. ಯುವಕರು ಮಾತ್ರವಲ್ಲ ಒಟ್ಟು ಲಿಂಗಾಯತ ಸಮುದಾಯದ ಜೊತೆಗೆ ಆತ ಕನೆಕ್ಟ್ ಆಗಿಲ್ಲ. ಉಗ್ರ ಹಿಂದುತ್ವದ ನಶೆ ತಲೆಗೇರಿಸಿಕೊಂಡ ಸಾವಜಿ ಸಮುದಾಯದ ಯುವಕರು ಬಸನಗೌಡರ ಬೆನ್ನು ಹತ್ತಿದ್ದಾರೆ. ಆತ ಹೋದಲೆಲ್ಲ ಶಿಳ್ಳೆ, ಕ್ಯಾಕಿ, ಚೀರಾಟದಿಂದ ಹುಮ್ಮಸ್ಸು ತುಂಬುತ್ತಾರೆ. ವಿಜಯಪುರ ನಗರದಲ್ಲಿಯಂತೂ ಬಾಡಿಗೆ ಅಭಿಮಾನಿಗಳು ಹೆಚ್ಚಾಗಿರುತ್ತಾರೆ.

ಹಾಗಾಗಿಯೇ ಬಸನಗೌಡ ಹೋದಲೆಲ್ಲ ಜನ ಸೇರಿದ್ದಾರೆ ಎನಿಸುತ್ತದೆ. ಆದರೆ ಚುನಾವಣೆ ಫಲಿತಾಂಶ ಮಾತ್ರ ಬಿಜೆಪಿ ಅಭ್ಯರ್ಥಿಗಳ ವಿರುದ್ಧವಾಗಿರುತ್ತದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲೆಲ್ಲಿ ಸಭೆ ಸಮಾರಂಭ ನಡೆಸಿದ್ದಾರೋ ಅಲ್ಲೆಲ್ಲ ಬಿಜೆಪಿ ಅಭ್ಯರ್ಥಿ ಹೀನಾಯವಾಗಿ ಸೋತಿದ್ದಾರೆ.

ಮೃನಾಳ ಹೆಬ್ಬಾಳ್ಕರ್, ಅಣ್ಣಾಸಾಬ್ ಜೊಲ್ಲೆ

ಬೆಳಗಾವಿ ಲೋಕಸಭಾ ಚುನಾವಣಾ ಕಣದಲ್ಲಿ ಯಡಿಯೂರಪ್ಪ ಟಿಕೆಟ್ ಕೊಡಿಸಿದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಇದ್ದರು. ಅವರ ವಿರುದ್ಧ ಪಂಚಮಸಾಲಿ ಸಮುದಾಯದ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃನಾಳ ಹೆಬ್ಬಾಳ್ಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.

ಹೆಬ್ಬಾಳ್ಕರ್ ಪುತ್ರನಿಗೆ ಪಂಚಮಸಾಲಿ ಕಾರಣಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್ ಹಗಲು ರಾತ್ರಿ ಶ್ರಮಿಸಿದ್ದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ್ ಜೊಲ್ಲೆಯವರನ್ನು ಗೆಲ್ಲಿಸಲು. ಜೊಲ್ಲೆ ದಂಪತಿಗಳು ಬಿ. ಎಲ್. ಸಂತೋಷ್ ಅವರ ಅಪ್ಪಟ ಅನುಯಾಯಿಗಳು. ಅಣ್ಣಾಸಾಬ್ ಜೊಲ್ಲೆಯವರನ್ನು ಗೆಲ್ಲಿಸಲು ಬಸನಗೌಡ ಯತ್ನಾಳ್ ತಿಪ್ಪರಲಾಗ ಹಾಕಿದರೂ ಸಾಧ್ಯವಾಗಲಿಲ್ಲ.

ಸಾಮಾನ್ಯ ಮತದಾರರು ಯತ್ನಾಳ್ ಜೊತೆಗೆ ಇಲ್ಲವೇ ಇಲ್ಲ. ಆ ಮಾತು ಬಿಡಿ. ಯತ್ನಾಳ್ ಜೊತೆಗೆ ಚುನಾವಣಾ ಸಭೆ ಸಮಾರಂಭಗಳಲ್ಲಿ ಉಗ್ರ ಭಾಷಣ ಬಿಗಿದ ರಮೇಶ್ ಜಾರಕಿಹೊಳಿಯೇ ಅಣ್ಣಾಸಾಬ್ ಜೊಲ್ಲೆಯವರನ್ನು ಮನಸಾಪೂರ್ವಕವಾಗಿ ಬೆಂಬಲಿಸಲಿಲ್ಲ. ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಅವರ ಗೆಲುವಿಗಾಗಿಯೇ ರಮೇಶ್ ಮನಸು ಹಂಬಲಿಸುತಿತ್ತು. ಅಣ್ಣಾಸಾಬ್ ಜೊಲ್ಲೆ ಹೀನಾಯವಾಗಿ ಸೋತರು.

ಬಸನಗೌಡ ಪಾಟೀಲ್ ಯತ್ನಾಳ್ ಹೋದಲೆಲ್ಲಾ ಸೋಲು ಕಟ್ಟಿಟ್ಟ ಬುತ್ತಿ ಎಂಬ ಕಟು ಸತ್ಯ ಗೊತ್ತಿರುವುದರಿಂದಲೇ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಆತನನ್ನು ಪ್ರಚಾರಕ್ಕೆ ಕರೆಯಲೇ ಇಲ್ಲ.

ಉಮೇಶ್ ಜಾದವ್

ಬಸನಗೌಡ ಪಾಟೀಲ್ ಯತ್ನಾಳ್ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಪ್ರಚಾರ ಮಾಡಿದ್ದು ಕಲಬುರ್ಗಿ, ಬೀದರ್, ರಾಯಚೂರ, ಕೊಪ್ಪಳ ಮತ್ತು ಬಳ್ಳಾರಿ ಮತಕ್ಷೇತ್ರಗಳಲ್ಲಿ.

ಬಸನಗೌಡ ಯತ್ನಾಳ್ ಕಲಬುರ್ಗಿಗೆ ಹೋಗದೆ ಇದ್ದರೆ, ಉಮೇಶ್ ಜಾದವ್ ಅನಾಯಾಸವಾಗಿ ಗೆಲುವು ಸಾಧಿಸುತ್ತಿದ್ದರು. ಅಷ್ಟಕ್ಕೂ ಉಮೇಶ್ ಜಾದವ್ ಸೋತಿದ್ದು ಕೇವಲ ಮೂವತ್ತು ಸಾವಿರ ಮತಗಳ ಅಂತರದಿಂದ. ಕಲಬುರ್ಗಿ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಯತ್ನಾಳ್ ಮಾತು ಆರಂಭವಾಗುತ್ತಿದ್ದುದೆ ಯಡಿಯೂರಪ್ಪ ಅವರ ನಿಂದನೆಯೊಂದಿಗೆ. ಕಲಬುರ್ಗಿ ಜಿಲ್ಲೆಯಲ್ಲಿ ಯಡಿಯೂರಪ್ಪ ಪರ ಒಲವಿರುವ ಮತದಾರರ ಸಂಖ್ಯೆ ಹೆಚ್ಚಾಗಿದೆ. ಯತ್ನಾಳ್ ಅವರ ಯಡಿಯೂರಪ್ಪ ವಿರೋಧಿ ಭಾಷಣದಿಂದ ಬಹುಪಾಲು ಲಿಂಗಾಯತ ಮತಗಳು ಕೈ ತಪ್ಪಿದವು.

ಕಲಬುರ್ಗಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮುಸ್ಲಿಂ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿವೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಆಂದೋಲ ಸ್ವಾಮೀಜಿಯ ಮುಸ್ಲಿಂ ನಿಂದನೆಯ ಭಾಷಣಗಳು ಸಹಜವಾಗಿಯೇ ಆ ಸಮುದಾಯದ ಮತದಾರರನ್ನು ಕೆರಳಿಸಿದ್ದವು.

ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಕಲಬುರ್ಗಿ ಲೋಕಸಭಾ ಕ್ಷೇತ್ರದ ಮುಸ್ಲಿಂ ಮತದಾರರು ಖಮರುಲ್ ಇಸ್ಲಾಂ ಅವರಿಗೆ ಕಾಂಗ್ರೆಸ್ ಪಕ್ಷ ಮಂತ್ರಿ ಪದವಿಯಿಂದ ಕೈ ಬಿಟ್ಟಿದ್ದಕ್ಕೆ ನಿರಾಸಕ್ತಿ ತೋರಿದ್ದರು. ಹಾಗಾಗಿಯೇ ಉಮೇಶ್ ಜಾದವ್ ಒಂದು ಲಕ್ಷ ಅಂತರದಿಂದ ಮಲ್ಲಿಕಾರ್ಜುನ ಖರ್ಗೆಯಂಥ ಹಿರಿಯ ಕಾಂಗ್ರೆಸ್ ಮುಖಂಡರನ್ನು ಸೋಲಿಸಲು ಸಾಧ್ಯವಾಗಿತ್ತು. ಅಷ್ಟಕ್ಕೂ ಉಮೇಶ್ ಜಾದವ್ ಮುಸ್ಲಿಂ ಸಮುದಾಯದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ ಅವರ ಮುಸ್ಲಿಂ ವಿರೋಧಿ ಮತ್ತು ಯಡಿಯೂರಪ್ಪ ವಿರೋಧಿ ಭಾಷಣಗಳೇ ಜಾದವ್ ಅವರಿಗೆ ಮುಳುವಾದವು.

ಭಗವಂತ ಖುಬಾ

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೆಚ್ಚು ಸಭೆಗಳನ್ನು ನಡೆಸಿದರು. ಅಲ್ಲಿ ಭಗವಂತ ಖುಬಾ ವಿರೋಧಿ ಅಲೆ ಜೋರಾಗಿತ್ತು. ಬಿಜೆಪಿ ನಾಯಕರೇ ಖುಬಾ ವಿರುದ್ಧ ಕೆಲಸ ಮಾಡುತ್ತಿದ್ದರು. ಯತ್ನಾಳ್ ದ್ವೇಷದ ಭಾಷಣದಿಂದ ಮುಸ್ಲಿಂ ಸಮುದಾಯ ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶನ ಮಾಡಿತು.

ಯಡಿಯೂರಪ್ಪ ವೋಟ್ ಬ್ಯಾಂಕ್ ಕೈ ಕೊಟ್ಟಿತು. ಬಸನಗೌಡ ಆಯ್ದುಕೊಂಡ ಕೊಪ್ಪಳ, ರಾಯಚೂರು, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲೂ ಇದೆ ಮಾದರಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕೋಮುವಾದಿ ರಾಜಕಾರಣದ ಅಸ್ತ್ರ ನಡೆಯುವುದಿಲ್ಲ. ಆ ಭಾಗದ ಬಿಜೆಪಿ ಮುಖಂಡರು ತಕ್ಕ ಮಟ್ಟಿಗೆ ಜಾತ್ಯತೀತ ಮನಸ್ಥಿತಿ ಹೊಂದಿರುವುದರಿಂದಲೇ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿರುತ್ತಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಷ್ಟು ಸ್ಥಾನಗಳು ಬಂದಿದ್ದು ಒಂದು ಯಡಿಯೂರಪ್ಪ, ಎರಡು ಮೋದಿ, ಮೂರು ಜೆಡಿಎಸ್ ಜೊತೆಗಿನ ಮೈತ್ರಿ ಫ್ಯಾಕ್ಟರ್ ಕಾರಣ. ಬಸನಗೌಡ ಯತ್ನಾಳ್ ಚುನಾವಣಾ ಪ್ರಚಾರಕ್ಕೆ ಹೋಗದೆ ಇದ್ದಿದ್ದರೆ ಬಿಜೆಪಿಗೆ ಇನ್ನೂ ನಾಲ್ಕು ಸೀಟುಗಳು ಜಾಸ್ತಿ ಬರುತ್ತಿದ್ದವು.

ಆ ಚುನಾವಣೆಯಲ್ಲಿ ಚುನಾವಣೆಯ ತಂತ್ರಗಾರಿಕೆಯಿಂದ ಹಿಡಿದು ಎಲ್ಲದರಲ್ಲೂ ಯಡಿಯೂರಪ್ಪ ಮುಖ್ಯ ಪಾತ್ರ ವಹಿಸಿದ್ದರು.
ವಿಜಯೇಂದ್ರ ಪಾತ್ರ ಏನೇನೂ ಇರಲಿಲ್ಲ. ಒಂದೇ ಒಂದು ಸಭೆಯಲ್ಲೂ ಜನರಿಗೆ ಮನಮುಟ್ಟುವ ಹಾಗೆ ಮಾತನಾಡಲು ವಿಜಯೇಂದ್ರ ಅವರಿಗೆ ಸಾಧ್ಯವಾಗಲೇ ಇಲ್ಲ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ವಿರುದ್ಧ ಕುತಂತ್ರ ಮಾಡಲು ಸಾಧ್ಯವಾಯಿತೇ ಹೊರತು ಮತದಾರರ ಮೇಲೆ ಪ್ರಭಾವ ಬೀರಲು ಆಗಲಿಲ್ಲ. ಬಿಜೆಪಿಯಲ್ಲಿ ಕುತಂತ್ರ ಮಾಡುವವರ ಸಂಖ್ಯೆ ಜಾಸ್ತಿ ಇದೆ, ಮತಗಳನ್ನು ಸೆಳೆಯುವವರು ಇಲ್ಲ. ವಿಜಯೇಂದ್ರ -ಯತ್ನಾಳ್ ಮುಳುಗಿಸುವ ಕಲೆ ಕರಗತ ಮಾಡಿಕೊಂಡವರು.

ಭರತ್ ಬೊಮ್ಮಾಯಿ

ಶಿಗ್ಗಾವಿ ಉಪ ಚುನಾವಣೆಯಲ್ಲಿ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ. ಯಡಿಯೂರಪ್ಪ ನಾಲ್ಕು ದಿನ ಪ್ರಯತ್ನ ಮಾಡಿದ್ದರೆ ಸರಳವಾಗಿ ಗೆಲ್ಲಿಸಿಕೊಂಡು ಬರುತ್ತಿದ್ದರು.. ಆ ಮತಕ್ಷೇತ್ರದಲ್ಲಿ ಪಂಚಮಸಾಲಿ ಮತದಾರರ ಸಂಖ್ಯೆ ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಬೊಮ್ಮಾಯಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪ್ರಚಾರಕ್ಕೆ ಕರೆಸಿಕೊಂಡರು.

ಶಿಗ್ಗಾವಿಯಲ್ಲಿ ಮುಸ್ಲಿಂ ಮತದಾರರು ಗಣನೀಯ ಪ್ರಮಾಣದಲ್ಲಿದ್ದಾರೆ. ಸಾಕಷ್ಟು ಮತದಾರರು ಹಿಂದಿನ ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ಅವರಿಗೇ ಬೆಂಬಲಿಸಿದ್ದರು. ಆ ಮತ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳು ನಿರ್ಣಾಯಕ. ಕುಂದಗೋಳದ ಶಿವಳ್ಳಿ ಮತ್ತು ಬಸವರಾಜ ಬೊಮ್ಮಾಯಿಯ ಮ್ಯಾಚ್ ಫಿಕ್ಸಿಂಗ್ ರಾಜಕಾರಣದಿಂದ ಕುರುಬ ಸಮುದಾಯದ ಮತಗಳು ಬೊಮ್ಮಾಯಿ ಪಡೆದುಕೊಳ್ಳುತ್ತಿದ್ದರು.

ಶಿಗ್ಗಾವಿ ಉಪಚುನಾವಣೆಯ ಪ್ರಚಾರ ಸಭೆಗೆ ಬಸನಗೌಡ ಪಾಟೀಲ್ ಯತ್ನಾಳ್ ಕಾಲಿಡುತ್ತಿದ್ದಂತೆ ಭರತ್ ಬೊಮ್ಮಾಯಿಯ ದುರ್ದೆಸೆ ಆರಂಭವಾಯಿತು. ಮುಸ್ಲಿಂ 2ಬಿ ಮೀಸಲಾತಿ ಕಿತ್ತುಕೊಂಡಿದ್ದಕ್ಕೆ ಆ ಸಮುದಾಯ ಬಸವರಾಜ ಬೊಮ್ಮಾಯಿ ಮೇಲೆ ಮೊದಲೇ ಆಕ್ರೋಶಗೊಂಡಿತ್ತು. ಯತ್ನಾಳರ ಮುಸ್ಲಿಂ ವಿರೋಧಿ ಭಾಷಣಗಳು ಉರಿಯೋದರ ಮೇಲೆ ಉಪ್ಪು ಸುರಿದವು.

ಯತ್ನಾಳರ ಮುಖ ನೋಡಿ ಪಂಚಮಸಾಲಿ ಮತದಾರರು ಭರತ್ ಬೊಮ್ಮಾಯಿಗೆ ಮತ ಹಾಕಲಿಲ್ಲ. ಯಾಕೆಂದರೆ ಮೂರು ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ ಸುಳ್ಳು ಭರವಸೆ ಆ ಕ್ಷೇತ್ರವನ್ನು ಕಿತ್ತುಕೊಂಡಿದ್ದರು. ಭರತ್ ಬೊಮ್ಮಾಯಿಯನ್ನು ಸೋಲಿಸುವ ಪಣ ತೊಟ್ಟಿದ್ದ ಪಂಚಮಸಾಲಿ ಸಮುದಾಯವನ್ನು ಓಲೈಸುವಲ್ಲಿ ಯತ್ನಾಳ್ ಸಂಪೂರ್ಣ ವಿಫಲರಾದರು.

ಯತ್ನಾಳ್ ಪಂಚಮಸಾಲಿ ಸಮುದಾಯ ಮಾತ್ರವಲ್ಲ ಒಟ್ಟಾರೆ ಲಿಂಗಾಯತ ಸಮುದಾಯದ ಜೊತೆಗೆ ಅವಿನಾಭವ ಸಂಬಂಧ ಇಟ್ಟುಕೊಂಡಿಲ್ಲ. ಭಾವನಾತ್ಮಕ ನೆಲೆಯಲ್ಲಿ ಸಮುದಾಯದ ಜೊತೆಗೆ ಕನೆಕ್ಟ್ ಆಗಿಲ್ಲ.

ಒಂದು ಸಮುದಾಯದಲ್ಲಿ ಹುಟ್ಟಿದ ಮಾತ್ರಕ್ಕೆ ಯಾರೂ ಸಮುದಾಯದ ನಾಯಕನಾಗಿ ಹೊರ ಹೊಮ್ಮಲು ಸಾಧ್ಯವಾಗುವುದಿಲ್ಲ. ವಿಶ್ವನಾಥ್, ರೇವಣ್ಣ, ಕೆ. ಎಸ್. ಈಶ್ವರಪ್ಪ, ಬಂಡೆಪ್ಪ ಕಾಶೇಂಪುರ್, ವಿಜಯಶಂಕರ್ ಕುರುಬ ಸಮುದಾಯದಲ್ಲಿ ಹುಟ್ಟಿದರೂ ಆ ಸಮುದಾಯದ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಲು ಅವರಿಂದ ಸಾಧ್ಯವಾಗಲಿಲ್ಲ.

ಆದರೆ ಸಮಾಜವಾದಿ ಸಿದ್ದರಾಮಯ್ಯ ಕುರುಬ ಸಮುದಾಯದ ಪ್ರೀತಿ ವಿಶ್ವಾಸವನ್ನು ಖಾಯಂ ಜೊತೆಗೆ ಇಟ್ಟುಕೊಂಡಿದ್ದಾರೆ. ಬಸನಗೌಡ ಮತ್ತು ವಿಜಯೇಂದ್ರ ಅವರಿಗೆ ಸಮುದಾಯಗಳ ಸಾಮಾಜಿಕ ಮನಸ್ಥಿತಿಯೇ ಅರ್ಥವಾಗಿಲ್ಲ ಎನಿಸುತ್ತದೆ.

ಬಿಜೆಪಿಯವರು ಬಾಗಲಕೋಟ ಮತ್ತು ದಾವಣಗೆರೆ ವಿಧಾನಸಾಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ ಸೂಚಿ ಎಂದು ಹೇಳಿದ್ದಾರೆ. ಆದರೆ ಆ ಎರಡು ಉಪ ಚುನಾವಣೆಗಳನ್ನು ಗೆಲ್ಲುವ ಸಮರ್ಪಕ ತಂತ್ರಗಾರಿಕೆಯನ್ನೇ ರೂಪಿಸಿರಲಿಲ್ಲ ಎಂಬುದು ಕಣ್ಣಿಗೆ ರಾಚುತ್ತಿತ್ತು. ಈ ಉಪಚುನಾವಣೆಯಲ್ಲೂ ಬಿಜೆಪಿಯೊಳಗಿನ ವೈರುದ್ಯ ಮತ್ತು ಅಂತ:ಕಲಹವೇ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಲಿದೆ..

ದಾವಣಗೆರೆ ಉಪಚುನಾವಣೆಯಲ್ಲಿ ಶಾಮನೂರು ಕುಟುಂಬದ ವಿರುದ್ಧ ಗೆಲುವು ಸಾಧಿಸುವ ಇರಾದೆಯೇ ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರಿಗೆ ಇಲ್ಲ ಎಂಬುದು ಬಿಜೆಪಿ ಅಭ್ಯರ್ಥಿ ಹೆಸರು ನೋಡಿದರೆ ಅರ್ಥವಾಗುತ್ತದೆ.

ಜಿ. ಎಂ. ಸಿದ್ದೇಶ್ ಅಥವಾ ರವೀಂದ್ರನಾಥ ಕುಟುಂಬದ ಯಾರೇ ಅಭ್ಯರ್ಥಿಯಾಗಿದ್ದರು ಮತ ವಿಭಜನೆ ಸಾಧ್ಯವಾಗುತ್ತಿತ್ತು.ಶಾಮನೂರು ಸಮರ್ಥ ಗೆಲುವು ಕಷ್ಟವಾಗುತ್ತಿತ್ತು. ಬಿಜೆಪಿಯಿಂದ ವಾಲ್ಮೀಕಿ ಸಮುದಾಯದ ದಾಸ ಕರಿಯಪ್ಪ ಅವರನ್ನು ಕಣಕ್ಕಿಳಿಸಿದ್ದಾರೆ. ವ್ಯಕ್ತಿಯನ್ನು.

ಶಾಮನೂರು ಕುಟುಂಬದ ವಿರುದ್ಧ ಆ ಮತಕ್ಷೇತ್ರದ ಮುಸ್ಲಿಂ ಸಮುದಾಯ ಆಕ್ರೋಶಗೊಂಡಿರುವುದು ನಿಜ. ಹಾಗಂತ ಮುಸ್ಲಿಂ ಸಮುದಾಯ ಬಿಜೆಪಿ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ ಎಂದು ಭಾವಿಸಲಾಗದು. ಕೊನೆಗೆ ರಾಜಿ ಪಂಚಾಯಿತಿ ಆಗಿ ಮುಸ್ಲಿಂ ಸಮುದಾಯದ ಮತಗಳು ಹೋಗುವುದು ಅಸಮರ್ಥ ಸಮರ್ಥನಿಗೆ.
ಲಿಂಗಾಯತ ಮತಗಳು ಬಿಜೆಪಿಗೆ ಹೋಗಲು ಸಾಕಾರಣ ಇಲ್ಲ.

ಬಾಗಲಕೋಟ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಬೀಳುವುದೇ ಬಸನಗೌಡ ಪಾಟೀಲ್ ಯತ್ನಾಳ್ ಪ್ರವೇಶದಿಂದ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಜನಪ್ರಿಯ ನಾಯಕರೇನು ಅಲ್ಲ. ಸರ್ವಾಧಿಕಾರಿ ವ್ಯಕ್ತಿತ್ವದ ಚರಂತಿಮಠ ಅವರಿಗೆ ಅವರ ಸಹೋದರ ಸಂಬಂಧಿಗಳೇ ಇಷ್ಟಪಡುವುದಿಲ್ಲ..

ಮೊದಲಿಂದಲೂ ಯಡಿಯೂರಪ್ಪ ಮತ್ತು ಚರಂತಿಮಠ ಸಂಬಂಧ ಎಣ್ಣೆ ಸೀಗೆ ಕಾಯಿ ತರಹದ್ದು. ಚರಂತಿಮಠ ಅನಂತಕುಮಾರ್ ಮತ್ತು ಬಸನಗೌಡ ಯತ್ನಾಳ್ ಗೆ ಆತ್ಮೀಯ. ಅದರಲ್ಲೂ ಈ ಚುನಾವಣೆಯಲ್ಲಿ ಯತ್ನಾಳ್ ಕಾರುಬಾರು ವಹಿಸಿಕೊಂಡಿದ್ದರಿಂದ ಯಡಿಯೂರಪ್ಪ ಗೆಲ್ಲಿಸುವ ಸೋಲಿಸುವ ಗೋಜಿಗೆ ಹೋಗುವುದಿಲ್ಲ.

ಯಡಿಯೂರಪ್ಪ ತಟಸ್ತ ನಿಲುವು ತಳೆದರೂ ವೀರಣ್ಣ ಚರಂತಿಮಠ ಗೆಲ್ಲಲು ಸಾಧ್ಯವಿಲ್ಲ. ಅಷ್ಟಕ್ಕೂ ಈ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಂತ ಪ್ರತಿಷ್ಠೆಯದು. ಯಡಿಯೂರಪ್ಪ ನೆರವು ಪಡೆದಾದರೂ ಸೈ ಗೆಲುವು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಾರೆ.

ಸ್ಥಳೀಯ ಪಿ. ಎಚ್. ಪೂಜಾರ್ ಕೂಡಾ ಚರಂತಿ ಮಠ ಸೋಲಲೆಂದೆ ಹರಕೆ ಹೊತ್ತಿರುತ್ತಾರೆ. ವಿಜಯೇಂದ್ರಗೆ ಸೋಲು ಗೆಲುವಿನಲ್ಲೂ ಪಾತ್ರ ಇಲ್ಲ. ಯತ್ನಾಳ್-ವಿಜಯೇಂದ್ರ ಬಿಜೆಪಿಗೆ ಭಾರವಾಗಿದ್ದಾರೆ ಎನ್ನುವುದು ಈ ಚುನಾವಣೆಯ ಫಲಿತಾಂಶ ಸಾಕ್ಷಿ ನುಡಿಯುತ್ತದೆ.

ಕೇಂದ್ರ ಬಿಜೆಪಿ ನಾಯಕರು ಸಂತೋಷ ಕಾರಣಕ್ಕೆ ಯತ್ನಾಳ್ ಮತ್ತು ಯಡಿಯೂರಪ್ಪ ಕಾರಣಕ್ಕೆ ವಿಜಯೇಂದ್ರ ಅವರನ್ನು ಬಿಟ್ಟು ಕೊಡಲು ಸಧ್ಯಕ್ಕಂತೂ ತಯಾರಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿಯೂ ಇದೆ ತಂತ್ರ ಅನುಸರಿಸುತ್ತಾರೆ.

ಕಾಂಗ್ರೆಸ್ ವಿರೋಧಿ ಅಲೆ ಬಳಸಿಕೊಂಡು ಬಿಜೆಪಿ ಬಹುಮತ ಪಡೆದರೂ ಕರ್ನಾಟಕದ ನಾಯಕತ್ವ ಮಾತ್ರ ಈ ಇಬ್ಬರಲ್ಲಿ ಒಬ್ಬರಿಗೂ ದಕ್ಕುವುದಿಲ್ಲ. ಯಾಕೆಂದರೆ ಕೇಂದ್ರ ಬಿಜೆಪಿ ನಾಯಕತ್ವ ಬಳಸಿ ಬಿಸಾಡುವುದರಲ್ಲಿ ಎತ್ತಿದ ಕೈ. ಅಷ್ಟಕ್ಕೂ ಚುನಾವಣೆ ಗೆಲುವಿಗೆ ಯತ್ನಾಳ್ -ವಿಜಯೇಂದ್ರ ಕಾರಣ ಅಲ್ಲ ಎಂಬುದು ಬಿಜೆಪಿ ಕೇಂದ್ರ ನಾಯಕತ್ವ ಮನವರಿಕೆ ಮಾಡಿಕೊಂಡಿರುತ್ತದೆ.

ಮಧ್ಯಪ್ರದೇಶ, ಚತ್ತಿಸ್ಘಡ್, ರಾಜಸ್ತಾನ್, ದೆಹಲಿ ಚುನಾವಣೆಯ ಫಲಿತಾಂಶದ ನಂತರ ಅನುಸರಿಸಿದ ತಂತ್ರಗಾರಿಕೆಯನ್ನೇ ಕರ್ನಾಟಕದಲ್ಲೂ ಪ್ರಯೋಗ ಮಾಡುತ್ತಾರೆ. ಯತ್ನಾಳ್, ವಿಜಯೇಂದ್ರ, ಯಡಿಯೂರಪ್ಪ, ಸಂತೋಷ್ ಎಲ್ಲರನ್ನೂ ಚುನಾವಣೆಯಲ್ಲಿ ಜೊತೆಗೆ ಇಟ್ಟುಕೊಂಡು. ಫಲಿತಾಂಶ ಬಂದ ಕೂಡಲೇ ತಟಸ್ತ ಗುಂಪಿಗೆ ಸೇರಿದ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ದೆಹಲಿಯಲ್ಲಿ ರೇಖಾ ಗುಪ್ತಾ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಾರೆಂದು ಯಾರೊಬ್ಬರೂ ಊಹಿಸಿರಲಿಲ್ಲ. ಒಡೆದ ಮನೆಯಾಗಿರುವ ಬಿಜೆಪಿಗೆ ಯತ್ನಾಳ್-ವಿಜಯೇಂದ್ರ ಭಾರವಾಗಿದ್ದು ಪ್ರತಿ ಹಂತದಲ್ಲೂ ಎದ್ದು ಕಾಣುತ್ತದೆ.

ಕನಿಷ್ಠ ಪಕ್ಷ ಬಿಜೆಪಿ ರಾಜ್ಯದಲ್ಲಿ ಪರಿಣಾಮಕಾರಿ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸುವಲ್ಲಿಯೂ ವಿಫಲವಾಗಿದೆ. ವಿಜಯೇಂದ್ರ, ಆರ್. ಅಶೋಕ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ರಾಜ್ಯದ ಜನತೆ ಖಂಡಿತಾ ಕ್ಷಮಿಸಲಾರರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *