ಅದ್ದೂರಿ ಮೆರವಣಿಗೆಯೊಂದಿಗೆ ಮೈಸೂರಿನಲ್ಲಿ ಬಸವ ಜಯಂತಿ ಶುರು

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು

ನಗರದಲ್ಲಿ ಸಂಭ್ರಮದ ಬಸವ ಜಯಂತಿ ಅದ್ದೂರಿ ಮೆರವಣಿಗೆಯೊಂದಿಗೆ ಭಾನುವಾರ ಆರಂಭವಾಯಿತು.

ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಸೇರಿದಂತೆ ಹಲವಾರು ಲಿಂಗಾಯತ ಸಂಘ– ಸಂಸ್ಥೆಗಳು ಹಮ್ಮಿಕೊಂಡಿದ್ದ ಮೆರವಣಿಗೆಯು ಗನ್‌ಹೌಸ್‌ ವೃತ್ತದ ಬಸವೇಶ್ವರ ಪುತ್ಥಳಿಯಿಂದ ಆರಂಭವಾಯಿತು. ನಂತರ ಬಸವೇಶ್ವರ ವೃತ್ತ, ಸಯ್ಯಾಜಿರಾವ್‌ ರಸ್ತೆ, ಪಾಲಿಕೆ, ಕೆ.ಆರ್‌.ವೃತ್ತ, ಡಿ.ದೇವರಾಜ ಅರಸು ರಸ್ತೆ, ಮಹಾರಾಣಿ ಕಾಲೇಜು ವೃತ್ತ ಹಾಗೂ ಹುಣಸೂರು ರಸ್ತೆಯಲ್ಲಿ ಸಾಗಿ ಕಲಾಮಂದಿರ ತಲುಪಿತು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮೆರವಣಿಗೆಗೆ ಚಾಲನೆ ನೀಡಿದ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಬಸವ ಜಯಂತಿ ಆಚರಿಸುವಂತೆಯೇ ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.

“ಶರಣರ ವಚನಗಳು ಬದುಕಿನ ದಾರಿದೀಪ. ಸರಳತೆ, ಕಾಯಕ, ದಾಸೋಹ, ಮೌಲ್ಯಯುತ ತತ್ವ ಸಹಿತ ಜೀವನ ನಡೆಸಬೇಕು,” ಎಂದರು.

ಮೆರವಣಿಗೆಯಲ್ಲಿ ವಚನಕಾರರ ನುಡಿ ಸಾಲುಗಳು, ಬಸವ ಹಾಗೂ ಷಟ್‌ಸ್ಥಲ ಧ್ವಜಗಳು ಹಾರಾಡಿದವು.

ನಂದಿ ಧ್ವಜ, ವೀರಗಾಸೆ, ಯಕ್ಷಗಾನ, ಭಜನಾ ಮೇಳದ ಜೊತೆಗೆ ವಿವಿಧ ಕಲಾತಂಡಗಳು ಮಂಗಳ ವಾದ್ಯದೊಂದಿಗೆ ಸಾಗಿದವು. ಅನುಭವ ಮಂಟಪ ಸೇರಿದಂತೆ ವಿವಿಧ ಸ್ತಬ್ಧಚಿತ್ರಗಳು ಆಕರ್ಷಿಸಿದವು.

ಮೆರವಣಿಗೆಯಲ್ಲಿ ಬಸವಣ್ಣನ ವೇಷಧಾರಿಗಳು ಕುದುರೆ ಮೇಲೆ ಕುಳಿತು ಸಾಗಿದರು. ಬಸವ, ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ಶರಣರ ವೇಷ ಧರಿಸಿದ್ದ ಚಿಣ್ಣರು ಗಾಂಭೀರ್ಯದಲ್ಲಿ ಹೆಜ್ಜೆ ಹಾಕಿದರು.

ಜೆಎಸ್‌ಎಸ್‌ ವಸತಿ ಶಾಲೆಯ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ತಂಡವು ಹಾಡಿದ ವಚನ ಗಾಯನವು ಮೋಡಿ ಮಾಡಿತು.

20ಕ್ಕೂ ಹೆಚ್ಚು ಸಾರೋಟುಗಳಲ್ಲಿ ಕುಳಿತಿದ್ದ ಬಸವ ಬಳಗಗಳ ಸಮಿತಿ ಪದಾಧಿಕಾರಿಗಳು, ಹಿಮ್ಮೇಳದಲ್ಲಿ ಮೊಳಗುತ್ತಿದ್ದ ವಚನಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಜಾನಪದ ಕಲಾತಂಡಗಳು ಹಾಗೂ ಡಿಜೆ ಸದ್ದಿಗೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಗಾವಡಗೆರೆಯ ಗುರುಲಿಂಗ ಜಂಗಮದೇವರ ಮಠದ ನಟರಾಜ ಸ್ವಾಮೀಜಿ, ಕುಂದೂರು ಮಠದ ಶರತ್ಚಂದ್ರ ಸ್ವಾಮೀಜಿ, ಬೆಟ್ಟದಪುರದ ಸಲಿಲಾಖ್ಯ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಬರಡನಪುರದ ಮಹಾಂತೇಶ್ವರ ಮಠದ ಪರಶಿವಮೂರ್ತಿ ಸ್ವಾಮೀಜಿ, ಶಾಸಕ ಕೆ.ಹರೀಶ್‌ ಗೌಡ, ವಿಧಾನಪರಿಷತ್‌ ಸದಸ್ಯರಾದ ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್, ಕಾಂಗ್ರೆಸ್‌ ಮುಖಂಡ ಎ.ಕೆ.ಸೋಮಶೇಖರ್‌, ನಟಿ ಅನು ಪ್ರಭಾಕರ್‌, ನಟ ಕಾರ್ತಿಕ್ ಮಹೇಶ್‌, ಬಸವ ಜಯಂತಿ ಸಮಿತಿ ಅಧ್ಯಕ್ಷ ಎಂ.ಚಂದ್ರಶೇಖರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್‌ ಪಾಲ್ಗೊಂಡಿದ್ದರು.

ಇಂದು ಬೆಳಗ್ಗೆ ನೂತನ ಡಿಸಿ ಕಚೇರಿ ಮುಂಭಾಗ ಬಸವಣ್ಣ ಅವರ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ನಂತರ ಕಲಾ ಮಂದಿರದಲ್ಲಿ ಬಸವ ಜಯಂತಿ ಹಾಗೂ ಬಸವ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *