ದೆಹಲಿ, ಲಂಡನ್ ಸಂಸತ್ ಬಳಿ ಬಸವ ಜಯಂತಿಯ ಸಂಭ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ನವದೆಹಲಿ/ಲಂಡನ್

12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವಕ್ಕೆ ಮುನ್ನುಡಿ ಬರೆದ ವಿಶ್ವಗುರು ಬಸವಣ್ಣನವರ ಜನ್ಮದಿನವನ್ನು ಭಾರತ ಮತ್ತು ಬ್ರಿಟನ್ ಸಂಸತ್ ಭವನದ ಬಳಿ ಸೋಮವಾರ ಆಚರಿಸಲಾಯಿತು.

ನವದೆಹಲಿ

ಸಂಸತ್ ಭವನದ ಆವರಣದಲ್ಲಿರುವ ಪ್ರೇರಣಾ ಸ್ಥಳದಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ, ಕಿರಣ್ ರಿಜಿಜು ಹಾಗೂ ವಿ.ಸೋಮಣ್ಣ ಪುಷ್ಪನಮನ ಸಲ್ಲಿಸಿದರು.

ಜಗಜ್ಯೋತಿ ಬಸವಣ್ಣನವರ ಸಂದೇಶಗಳು ಇಂದಿಗೂ ಎಂದಿಗೂ ಎಂದೆಂದಿಗೂ ನಮಗೆಲ್ಲರಿಗೂ ಅನುಕರಣೆಯ ಮತ್ತು ಪ್ರೇರಣದಾಯಕ ಆಗಿವೆ, ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

12ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಬಸವಣ್ಣನವರು ಆಲೋಚನೆ ಮಾಡಿದರು. ಅನುಭವ ಮಂಟಪದಲ್ಲಿ ಎಲ್ಲ ಸಮಾಜಗಳಿಗೆ ಸಮಾನ ಪ್ರಾತಿನಿಧ್ಯ ನೀಡಿದ್ದರು ಎಂದು ಕುಮಾರಸ್ವಾಮಿ ಹೇಳಿದರು. ಅಂತಹ ಮಹಾನ್ ಚೇತನ ಬಿಟ್ಟು ಹೋದ ಸಂದೇಶಗಳು ಮತ್ತು ಆದರ್ಶಗಳು ನಮಗೆ ದೊಡ್ಡ ಆಸ್ತಿಯಾಗಿವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಚಿವರಾದ ಕಿರಣ್ ರಿಜಿಜು ಹಾಗೂ ಸೋಮಣ್ಣ ಅವರೊಂದಿಗೆ ಭಾಗವಹಿಸಿದ್ದು ಬಹಳ ಸಂತೋಷ ಉಂಟು ಮಾಡಿದೆ, ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಮಠಾಧೀಶರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಲಂಡನ್

ವಿಶ್ವಗುರು ಬಸವಣ್ಣ ಅವರ ಜನ್ಮದಿನದ ಅಂಗವಾಗಿ ಬ್ರಿಟನ್ ಸಂಸತ್‌ ಮುಂಭಾಗದಲ್ಲಿರುವ ಬಸವಣ್ಣ ಅವರ ಪ್ರತಿಮೆ ಎದುರು ಸೋಮವಾರ ಬಸವೇಶ್ವರ ಜಯಂತಿ ಆಚರಿಸಲಾಯಿತು.

ಬ್ರಿಟನ್‌ನ ಡೆಪ್ಯೂಟಿ ಹೈಕಮಿಷನ‌ ಚಂದ್ರು ಅಯ್ಯರ್ ಅವರು ಬಸವೇಶ್ವರ ಪ್ರತಿಮೆಗೆ ಗೌರವ ಸಲ್ಲಿಸಿದರು. ಆ ಬಳಿಕ ಅವರು ಬಸವಣ್ಣನವರ ಇವನಾರವ ಇವನಾರವ ಎನ್ನುವ ವಚನವನ್ನು ಪಠಿಸಿ ಎಲ್ಲರ ಗಮನ ಸೆಳೆದರು.

‘ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನವು ಬ್ರಿಟನ್ ಮತ್ತು ಕರ್ನಾಟಕದ ನಡುವೆ ಜೀವಂತ ಸೇತುವೆಯಾಗಿ ನಿಂತಿದೆ. ಮೌಲ್ಯಗಳನ್ನು ಸಾಕಾರಗೊಳಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲಂಡನ್‌ನ ಲ್ಯಾಂಬೆತ್ ಮಾಜಿ ಮೇಯ‌ರ್ ಡಾ. ನೀರಜ್ ಪಾಟೀಲ್ ಲಾರ್ಡ್ ಉದಯ್ ನಾಗರಾಜು, ಸಂಸತ್‌ ಮಾಜಿ ಸದಸ್ಯ ವೀರೇಂದ್ರ ಶರ್ಮಾ, ಕೃಷ್ಣ ಭನ್, ಯುಕೆ ಬಸವ ಸಮಿತಿಯ ಅಭಿಜಿತ್ ಸಾಲಿಮಠ ಮತ್ತು ನಿತ್ಯಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *