ಕೂಡಲಸಂಗಮದಲ್ಲಿಯೇ ಬಸವ ಜಯಂತಿ ಆಚರಿಸದ ಮಂಡಳಿ: ಬಸವ ಭಕ್ತರು ಕೆಂಡ

ಕೂಡಲಸಂಗಮ

ಬಸವಣ್ಣನ ತತ್ವ ಪ್ರಸಾರಕ್ಕೆ ಆರಂಭಗೊಂಡ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ ಬಸವ ಜಯಂತಿ ದಿನ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದೇ ಇರುವುದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಮವಾರ ಬಸವ ಜಯಂತಿ ನಿಮಿತ್ಯ ನಾಡಿನ ವಿವಿಧ ಭಾಗಗಳಿಂದ ಆಮಿಸಿದ ಬಸವ ಭಕ್ತರು ಬಸವಣ್ಣನ ಐಕ್ಯಸ್ಥಳದ ದರ್ಶನ ಪಡೆದು, ಪ್ರಾರ್ಥನೆ, ವಚನ ಪಠಣ ಮಾಡಿದರು.

ಆದರೆ ಮಂಡಳಿ ಯಾವುದೇ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳದೆ ಬಸವ ಪುತ್ಥಳಿ, ಎತ್ತುಗಳ ಮೆರವಣಿಗೆ ಮಾಡಿ ಕೆಲಸ ಮುಗಿಸಿದ್ದನ್ನು ನೋಡಿ ಬಸವ ಭಕ್ತರು ಆಶ್ಚರ್ಯ ಪಡುವುದರ ಜೋತೆಗೆ ಆಕ್ರೋಶ ವ್ಯಕ್ತಪಡಿಸಿದರು.

ಬಸವಣ್ಣನ ತತ್ವ ಪ್ರಸಾರಕ್ಕೆ ಆರಂಭಗೊಂಡ ಮಂಡಳಿಯ ಅಧಿಕಾರಿಗಳು ಎತ್ತುಗಳ ಮೆರವಣಿಗೆ ಮಾಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.

ಕೂಡಲಸಂಗಮದಲ್ಲಿ ಬಸವ ಜಯಂತಿ ಆಚರಿಸದ ಮಂಡಳಿ: ಏಪ್ರಿಲ್ 20ರ ಫೋಟೋ

ವಿವಾದದ ಬಗ್ಗೆ ವಿವರಣೆ ನೀಡಿದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ವಿಜಯಕುಮಾರ ಆಜೂರ, “ಚುನಾವಣೆ ನೀತಿಸಂಹಿತೆ ಇರುವುದರಿಂದ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿಲ್ಲ, ಪ್ರತಿ ವರ್ಷದಂತೆ ಎತ್ತಿನ ಗಾಡಿಯ ಮೇಲೆ ಬಸವ ಪುತ್ಥಳಿ ಮೆರವಣಿಗೆ ಮಾಡಿದೆ. ಮುಂದಿನ ವರ್ಷ ವಿಶೇಷ ಕಾರ್ಯಕ್ರಮ ಮಾಡಲಾಗುವುದು,” ಎಂದು ಆಶ್ವಾಸನೆ ನೀಡಿದರು.

ಈ ವಿವರಣೆ ತಿರಸ್ಕರಿಸಿದ ಗ್ರಾಮದ ಬಸವರಾಜ ಗೌಡರ “ಚುನಾವಣೆ ನೀತಿ ಸಂಹಿತೆ ಇದ್ದಾಗಲೇ ಹಿಂದೆ ಮಂಡಳಿಯ ವಿಶೇಷಾಧಿಕಾರಿಯಾಗಿದ್ದ ಶಿವಾನಂದ ಜಾಮದಾರ ಅವರು ಬಸವ ಜಯಂತಿ ನಿಮಿತ್ಯ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನೀತಿ ಸಂಹಿತೆ ಇದ್ದಾಗಲೇ ಆಯುಕ್ತರಾಗಿದ್ದ ಮಹಾದೇವ ಮುರಗಿ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದರು, ರಾಜಶ್ರೀ ಅಗಸರ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದರು,” ಎಂದು ತಿಳಿಸಿದರು.

“ಮಂಡಳಿಯಲ್ಲಿರುವ ಬಸವಣ್ಣನ ಅಂತರಂಗ ವಿರೋಧಿಗಳಿಂದ ಬಸವ ಜಯಂತಿ ಕಾರ್ಯಕ್ರಮ ನಡೆಯುತ್ತಿಲ್ಲ,” ಎಂದು ಅವರು ಆಪಾದಿಸಿದರು.

ಕೂಡಲಸಂಗಮದಲ್ಲಿ ಬಸವ ಜಯಂತಿ ಆಚರಿಸದ ಮಂಡಳಿ: ಏಪ್ರಿಲ್ 20ರ ಫೋಟೋ

ಮಂಡಳಿಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೂಡಲಸಂಗಮ ಬಸವಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ “ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳು ಬಸವ ಜಯಂತಿಯನ್ನು ನೆಪಮಾತ್ರಕ್ಕೆ ಆಚರಿಸುವುದು ಸರಿಯಲ್ಲ. ಚುನಾವಣಾ ಆಯೋಗ ದಾರ್ಶನಿಕರ ಜಯಂತಿ ಆಚರಣೆಗೆ ಸೂಕ್ತ ನಿರ್ದೇಶನವನ್ನು ಅಧಿಕಾರಿಗಳಿಗೆ ನೀಡಬೇಕು, ಎಂದು ಆಗ್ರಹಿಸಿದರು.

ಚುನಾವಣೆ ನೀತಿ ಸಂಹಿತೆ ನಡುವೆ ಸಂಗಮೇಶ್ವರ ಜಾತ್ರೆಯನ್ನು ಅದ್ದೂರಿಯಾಗಿ ಮಾಡಿದ ಅಧಿಕಾರಿಗಳು ಬಸವ ಜಯಂತಿ ಆಯೋಜಿಸದಿರಲು ನಿಜವಾದ ಕಾರಣವೇನು ಏನು ಬಸವ ಭಕ್ತರು ಕೇಳುತ್ತಿದ್ದರೆ.

ಎಪ್ರಿಲ್ ೭ರಂದು, ಚುನಾವಣೆ ನೀತಿ ಸಂಹಿತೆಯಿದ್ದಾಗಲೇ, ಅಧಿಕಾರಿಗಳು ಸಂಗಮೇಶ್ವರ ಜಾತ್ರೆಯ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

೨೦೨೫ರಲ್ಲಿ ರಾಜ್ಯ ಸರ್ಕಾರವೇ ಬಸವ ಜಯಂತಿ ನಿಮಿತ್ಯ ಬಸವಾದಿ ಶರಣರ ವೈಭವ ಅನುಭವ ಮಂಟಪ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವರ್ಷ ಲಿಂಗಾಯತ ಧರ್ಮದ ಅತಿ ಪವಿತ್ರ ಕ್ಷೇತ್ರದಲ್ಲಿ ಬಸವ ಜಯಂತಿ ಆಚರಿಸದೇ ಇರುವುದು ನಾಡಿನಾದ್ಯಂತ ನಿರಾಸೆ ಮೂಡಿಸಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
1 Comment
  • ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯಲ್ಲಿ ಇರುವ ಸದಸ್ಯರ ಹೆಸರು ಹಾಕಿ, ಇವರು ಯಾಕೆ ಅರ್ಥಪೂರ್ಣ ಬಸವ ಜಯಂತಿ ಮಾಡಿಲ್ಲ ಎಂದು ಪ್ರಶ್ನಿಸಲೇ ಬೇಕು, ಇಂತವರು ಅದು ಹೇಗೆ ಆಯಕಟ್ಟಿನ ಜಾಗದಲ್ಲಿ ಕೂತಿರುತ್ತಾರೆ ಎಂದು ಪ್ರಶ್ನಿಸುವ.

Leave a Reply

Your email address will not be published. Required fields are marked *