‘ಮಾನಸಿಕ ಅನುಸಂಧಾನಕ್ಕೆ ಶರಣರ ಷಟಸ್ಥಲಗಳೇ ಮಹಾಮಾರ್ಗ’

ಬಸವರಾಜ ನಂದಿಹಾಳ
ಬಸವರಾಜ ನಂದಿಹಾಳ

ಬಸವನಬಾಗೇವಾಡಿ :

ನಮ್ಮನ್ನು ಮಾನಸಿಕವಾಗಿ ಅನುಸಂಧಾನ ಮಾಡಲು ಶರಣರ ಷಟ್ ಸ್ಥಲಗಳು ಮಹಾಮಾರ್ಗಗಳಾಗಿವೆ ಎಂದು ಸವದತ್ತಿಯ ವಿಶ್ರಾಂತ ಪ್ರಾಚಾರ್ಯ, ಸಾಹಿತಿ ಡಾ.ವೈ.ಎಂ. ಯಾಕೊಳ್ಳಿ ಹೇಳಿದರು.

ಪಟ್ಟಣದ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಆವರಣದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ಬಸವ ಜಯಂತಿ ಅಂಗವಾಗಿ ಆಯೋಜಿಸಿರುವ ‘ರಾಷ್ಟ್ರೀಯ ಬಸವೇಶ್ವರ ಜಯಂತ್ಯುತ್ಸವ’ದ ಎರಡನೇ ದಿನ ಭಾನುವಾರ ಸಂಜೆ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಸಾದಿಸ್ಥಲ, ಪ್ರಾಣಲಿಂಗಸ್ಥಲ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಷಟ್ ಸ್ಥಲಗಳಲ್ಲಿ ಭಕ್ತಸ್ಥಳ ಆರಂಭ ಹಂತವಾದರೆ ಕೊನೆ ಹಂತ ಐಕ್ಯಸ್ಥಲವಾಗಿದೆ. ಆರು ಸ್ಥಲಗಳನ್ನು ಶರಣರು ಅನುಸಂಧಾನ ಮಾಡುವ ಮೂಲಕ ತಮ್ಮನ್ನು ಸಾಕ್ಷಾತ್ಕಾರ ಅನುಭವಿಸಿದ ಮೊಟ್ಟಮೊದಲ ಅನುಸಾರಣೆಗಾರರಾಗಿದ್ದಾರೆ.

ಧರ್ಮ, ಆಧ್ಯಾತ್ಮವು ಆತ್ಮವನ್ನು ಉದ್ದರಿಸುತ್ತದೆ. ಷಟ್ ಸ್ಥಲಗಳು ತಾತ್ವಿಕ ತತ್ವಗಳಾಗಿವೆ. ಶರಣರ ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲ ಸಿದ್ಧಾಂತಗಳು ಧಾರ್ಮಿಕ ತತ್ವಗಳಾಗಿವೆ. ಇವು ಬದುಕಿಗೆ ಬೇಕಾದ ತಾತ್ವಿಕ ತಳಹದಿಯಾಗಿವೆ.

ಅಂತರಂಗದ ನಿವೇದನೆ ಮಾಡಿಕೊಳ್ಳುವದೇ ಪ್ರಸಾದಿ ಸ್ಥಲ, ಆಧ್ಯಾತ್ಮಿಕತನ ಮೈಲಿಗಲ್ಲು ಪ್ರಾಣಲಿಂಗಸ್ಥಲವಾಗಿದೆ. ಭಕ್ತ ಸಾಕ್ಷಾತ್ಕಾರವಾಗಲು ಪ್ರಾಣಲಿಂಗ ಸ್ಥಲ ತುಂಬಾ ಅಗತ್ಯ. ಪ್ರಸಾದಿ ಸ್ಥಲ, ಪ್ರಾಣಲಿಂಗಸ್ಥಲದ ಕುರಿತು ಹೇಳಿದ ಅವರು, ಬಸವೇಶ್ವರರನ್ನು ಸಾಮಾಜಿಕವಾಗಿ ಚಿಂತನೆ ಮಾಡುವ ಜೊತೆಗೆ ತಾತ್ವಿಕ ಅಧ್ಯಯನ ಮಾಡುವ ಅಗತ್ಯವಿದೆ ಎಂದರು.

ಗ್ರೇಡ್-2 ತಹಸೀಲ್ದಾರ ಎಚ್.ಎಸ್. ಅರಕೇರಿ ಮಾತನಾಡಿ, ಪ್ರತಿಯೊಬ್ಬರು ಕಾಯಕಕ್ಕೆ ಮಹತ್ವ ನೀಡಬೇಕೆಂಬ ಸಂದೇಶ ಬಸವೇಶ್ವರರು ನೀಡಿದ್ದಾರೆ. ಯಾವುದೇ ಕಾಯಕವಿದ್ದರೂ ಅದನ್ನು ನಿಷ್ಠೆಯಿಂದ ಮಾಡುವಂತಾಗಬೇಕು. ಅಂದಾಗ ಕಾಯಕಕ್ಕೆ ಮಹತ್ವ ಬರುತ್ತದೆ. ಬಸವಾದಿ ಶರಣರ ತತ್ವ-ಸಂದೇಶ ಅರಿತು ಬದುಕಿನಲ್ಲಿ ಅಳವಡಿಸಿಕೊಂಡರೆ ಸುಂದರ ಜೀವನ ನಮ್ಮದಾಗಿಸಿಕೊಳ್ಳಬಹುದು ಎಂದರು.

ಅಧ್ಯಕ್ಷತೆ, ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯ ಬಹು ಮಹತ್ವವಾಗಿದೆ. ಇದರ ಬಗ್ಗೆ ಅರಿತುಕೊಳ್ಳಬೇಕು. ಬಸವ ಜಯಂತಿ ಉತ್ಸವದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತಾಗಬೇಕೆಂದರು.

ಬಸವರಾಜ ನಂದಿಹಾಳ ಸ್ವಾಗತಿಸಿದರು. ಬಸವರಾಜ ಹಂಚಲಿ ನಿರೂಪಿಸಿದರು. ಶ್ರೀಶೈಲ ಬಿಸ್ಟಗೊಂಡ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ವಿರೇಶ ವಾಲಿ, ಸಾಕ್ಷಿ ಹಿರೇಮಠ ಅವರಿಂದ ವಚನ ಗಾಯನ, ಸ್ಥಳೀಯ ಮಯೂರಿ ನಾಟ್ಯ ಕಲಾ ಅಕಾಡೆಮಿಯ ವಿದ್ಯಾರ್ಥಿಗಳ ವಚನ ನೃತ್ಯ ಜನ ಮನಸೂರೆಗೊಂಡವು. ಮಯೂರಿ ನಾಟ್ಯ ಕಲಾ ಅಕಾಡೆಮಿಯ ವಿದ್ಯಾರ್ಥಿಗಳು ಮಳೆಯಲ್ಲಿಯೇ ಉತ್ಸಾಹದಿಂದ ನೃತ್ಯ ಮಾಡಿ ಗಮನ ಸೆಳೆದರು. ನಂತರ ನಗನೂರಿನ ಭಾಗ್ಯವಂತಿ ಭಜನಾ ಮಂಡಳಿ, ಪಡಚಿಯ ಬಸವೇಶ್ವರ ಭಜನಾ ಮಂಡಳಿಯಿಂದ ಭಜನಾ ಪದಗಳು ಜರುಗಿದವು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *