ಬಸವ ಸೇವಾ ಸಮಿತಿಯಿಂದ ಬಸವ ಜಯಂತಿ ಉತ್ಸವ
ಬೆಂಗಳೂರು:
ಬಸವನಗರ ಬಸವ ಸೇವಾ ಸಮಿತಿ ವತಿಯಿಂದ ಜಗಜ್ಯೋತಿ ಬಸವೇಶ್ವರರ ೮೯೩ ನೇ ಜಯಂತೋತ್ಸವ ಆಚರಣೆ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ೯ ಘಂಟೆಗೆ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಎಸ್.ಜಿ. ನಾಗರಾಜರವರು ಷಟಸ್ಥಲ ಧ್ವಜಾರೋಹಣ ಮಾಡಿ, ಬಸ್ ನಿಲ್ದಾಣದಲ್ಲಿರುವ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಮಕ್ಕಳಿಗಾಗಿ ಏರ್ಪಡಿಸಿದ್ದ ಅಂತರ ಶಾಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಯನ್ನು ಉದ್ಘಾಟಿಸಿದರು.
ಪ್ರಿ ಪ್ರೈಮರಿ, ಪ್ರೈಮರಿ, ಮಾಧ್ಯಮಿಕ ಮತ್ತು ಹೈಸ್ಕೂಲ್ ವಿಭಾಗಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಯಿತು. ೨೧ ಮಕ್ಕಳು ಭಾಗವಹಿಸಿದರು.

ಇನ್ನೋರ್ವ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶರಣ ಶ್ರೀ ಸಿದ್ದಲಿಂಗಯ್ಯನವರು, ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಣ್ಣೇಗೌಡರು ಮತ್ತು ರಾಣಿ ಚೆನ್ನಮ್ಮ ಮಹಿಳಾ ಸಂಘದ ಅಧ್ಯಕ್ಷರಾದ ವಿಶಾಲಮ್ಮನವರು ಮತ್ತು ನೂರಾರು ಬಸವಾಭಿಮಾನಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಗರಾಜರವರು ಮತ್ತು ಸಿದ್ದಲಿಂಗಯ್ಯನವರು ಸಮಸ್ತ ಬಸವಾಭಿಮಾನಿಗಳಿಗೆ ಬಸವ ಜಯಂತಿಯ ಶುಭಾಶಯಗಳನ್ನು ಕೋರುತ್ತಾ, ಬಸವಾದಿ ಶರಣರ ಸಂದೇಶಗಳ ಮಹತ್ವವನ್ನು ಕೊಂಡಾಡಿದರು. ಏರ್ಪಡಿಸಿದ್ದ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿದ ಮಕ್ಕಳಿಗೆ ಈ ಸದಾವಕಾಶದ ಉಪಯೋಗ ಮಾಡಿಕೊಳ್ಳಲು ತಿಳಿಸಿದರು.

೧೧ ಘಂಟೆಗೆ ಕೆ.ಆರ್. ಪುರದ ಶಾಸಕರಾದ ಭೈರತಿ ಬಸವರಾಜ ಅವರು ಆಗಮಿಸಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳನ್ನು ತಿಳಿಸುತ್ತಾ, ಬಸವತತ್ವಗಳನ್ನು ಕೊಂಡಾಡಿದರು.
ಸಾಯಂಕಾಲ ೭ ಘಂಟೆಗೆ ಈ ಭಾಗದ ಕಾಂಗ್ರೆಸ್ ಮುಖಂಡರಾದ ಮನೋಜಕುಮಾರ ಮತ್ತು ಗಿರಿಜಮ್ಮನವರು ಆಗಮಿಸಿ, ಬಸವೇಶ್ವರ ಮೂರ್ತಿಗೆ ಪುಷ್ಪ ನಮನ ಮಾಡಿ, ಅಂತರ ಶಾಲಾ ಸ್ಪರ್ಧೆಯಲ್ಲಿ ವಿಜಯಿಯಾದ ಮಕ್ಕಳಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನ, ವಚನಗಳನ್ನೊಳಗೊಂಡ ಪುಸ್ತಕ ಮತ್ತು ಪೆನ್, ನೋಟ್ ಬುಕ್ ವಿತರಿಸಿದರು.
ಭಾಗವಹಿಸಿದ ಮಕ್ಕಳಿಗೆ ಸಮಾಧಾನಕರ ಬಹುಮಾನ ವಿತರಿಸಿದರು.

ಸಮಿತಿಯ ಅಧ್ಯಕ್ಷರಾದ ಶರಣ ಡಾ. ಮಲ್ಲಿಕಾರ್ಜುನ ಹಂಜಿ ಗಣ್ಯರನ್ನು ಅಂಗವಸ್ತ್ರದೊಂದಿಗೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಎ.ಎಸ್. ಓಂಕಾರಪ್ಪನವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶಕುಂತಲಾ ಸಾಲಿಮಠ, ರಾಜೇಶ್ವರಿ ಪಾಟೀಲ, ಲೀಲಾವತಿ ನಾಗನಗೌಡರ ಮತ್ತು ಪದ್ಮಾವತಿ ವಚನ ಪ್ರಾರ್ಥನೆ ಹೇಳಿದರು. ಶರಣು ಸಮರ್ಪಣೆ ಸಲ್ಲಿಸಿದ ನಂತರ ಪ್ರಸಾದ ವಿತರಣೆ ನಡೆಯಿತು.
