ಪುಣೆ ನಗರದಲ್ಲಿ ಸಂಭ್ರಮದಿಂದ ನಡೆದ ಬಸವ ಜಯಂತಿ

ಬಸವ ಮೀಡಿಯಾ
ಬಸವ ಮೀಡಿಯಾ

ಪುಣೆ (ಮಹಾರಾಷ್ಟ್ರ) :

12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಬೋಧಿಸಿದ ವಚನ ಸಾಹಿತ್ಯದ ಚಿಂತನೆಗಳು ಕೇವಲ ಕನ್ನಡ, ಭಾರತಕ್ಕೆ ಸೀಮಿತವಾದವುಗಳಲ್ಲ ಅವು ಜಗದಗಲವಾಗಿವೆ ಎಂದು ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿಯವರು ತಿಳಿಸಿದರು.

ನಾಶಿಕ್ ರಾಷ್ಟ್ರೀಯ ಹೆದ್ದಾರಿ, ಢವಳೆ ವಸ್ತಿಯಲ್ಲಿ ಬೋಸರಿಯ ರೋಶಲ್ ಮಂಗಲ ಕಾರ್ಯಾಲಯದಲ್ಲಿ ರಾಷ್ಟ್ರೀಯ ಬಸವದಳದ ವತಿಯಿಂದ 893ನೇ ಬಸವಣ್ಣನವರ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು.

ಬಸವಣ್ಣನವರು ಬರುವುದಕ್ಕಿಂತ ಮುಂಚೆ ಅನೇಕ ಬೇಧಗಳಿಂದ ಸಮಸ್ತ ಮಾನವ ಕುಲವು ನೊಂದು ನರಳುತ್ತಿತ್ತು. ಇಂತಹ ಸಂದರ್ಭದಲ್ಲಿ ಆಕಾಶದ ದೀಪದಂತೆ ಭುವಿಗೆ ಬಂದ ಬಸವಣ್ಣನವರು ಮಾನವ ಸೃಷ್ಟಿಸಿದ ಎಲ್ಲಾ ಬೇಧಗಳನ್ನು ತೊಡೆದು ಹಾಕಿ ಸಮಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾದರು.

ಅನುಭವ ಮಂಟಪದ ಮೂಲಕ ಸಂಸ್ಕಾರ, ಸಮಾನತೆ, ಸಹೋದರತೆ, ಸಂಘಟನೆಯನ್ನು ಕಟ್ಟಿ ಪ್ರಜಾಪ್ರಭುತ್ವದ ಚಿಂತನೆಗಳಿಗೆ ಬುನಾದಿ ಹಾಕಿದರು. ತಮ್ಮ 63 ವರ್ಷದ ಜೀವಿತಾವಧಿಯಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಆಧ್ಯಾತ್ಮಿಕ, ಶೈಕ್ಷಣಿಕ, ನೈತಿಕ ಕ್ರಾಂತಿ ಮಾಡಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಇಷ್ಟಲಿಂಗದ ಮಹತ್ವ ಕುರಿತು ಅರಿವು ಮೂಡಿಸಿದರು. ರಾಷ್ಟ್ರೀಯ ಬಸವದಳದ ಶರಣರು ಪೂನಾದಲ್ಲಿ ಬಸವ ತತ್ವ ವ್ಯಾಪಕವಾಗಿ ಪ್ರಚಾರ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮರಾಠಿ ಭಾಷೆಯಲ್ಲಿ ಅನಭಾವ ನೀಡಿದ ಪ್ರೊ. ಕುಮುದಾಳೆ ಸತೀಷ ಅವರು; ಹೆಣ್ಣುಮಕ್ಕಳಿಗೆ ಮೊಟ್ಟ ಮೊದಲು ಧಾರ್ಮಿಕ ಸ್ವಾತಂತ್ರ್ಯ ಕೊಟ್ಟವರು ಮುಕ್ಕೋಟಿ ದೇವತೆಗಳಲ್ಲ, ಬದಲಿಗೆ ವಿಶ್ವಗುರು ಬಸವಣ್ಣನವರು. ಅವರು ಎಂಟನೇ ವರ್ಷದಲ್ಲಿ ಜನಿವಾರ ತ್ಯಜಿಸಿ ಮನೆ ಬಿಟ್ಟು ಹೊರಬಂದಿರುವುದೇ ಹೆಣ್ಣುಮಕ್ಕಳ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಎಂದರು.

ಲಿಂಗಾಯತರು ಗುಲಾಮಗಿರಿ ಪದ್ಧತಿಯನ್ನು ಅನುಸರಿಸುವ ವೈದಿಕ ಧರ್ಮದ ಆಚರಣೆಯನ್ನು ಬಿಟ್ಟು ಲಿಂಗಾಯತ ಧರ್ಮದ ನಿಜಾಚರಣೆಗೆ ಇಳಿದಾಗ ಮಾತ್ರ ಬಸವತತ್ವ ಬೆಳೆಯಲು ಸಾಧ್ಯ ಎಂದರು.

ವೇದಿಕೆ ಮೇಲೆ ಶಿವಲಿಂಗ ಢವಳೇಶ್ವರ, ನಗರ ಸೇವಕ ಯೋಗೇಶಬಾವು ಲಾಂಡಗೆ ಮಾತನಾಡಿದರು.

ಅಮರನಾಥ ಮಾನಾ, ಚಂದ್ರಶೇಕರ ಹೋನರಾವ್, ರಾಮುಶೇಖರ ದೇಶಿಂಗೆ, ಶಿವಕುಮಾರ ಆಗ್ರೆ ಮತ್ತು ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾವಿರಾರು ಬಸವಭಕ್ತರು ಸಮಾವೇಶಗೊಂಡಿದ್ದರು.

ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಸತೀಶಕುಮಾರ ಸ್ವಾಗತಿಸಿದರೆ, ಸತೀಷ ಮಿಠಾರೆ ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *