ಬೆಂಗಳೂರು
ಬಸವ ವೇದಿಕೆ ವತಿಯಿಂದ ಗುರುರಾಜ ಕರಜಗಿ ಅವರಿಗೆ ಸೋಮವಾರ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ ‘ಗುರುರಾಜ ಕರಜಗಿ ಅವರು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಜನರನ್ನು ಜಾಗೃತಗೊಳಿಸುತ್ತಿದ್ದಾರೆ. ಕರಜಗಿ ಅವರ ಉಪನ್ಯಾಸಗಳು ರಾಜ್ಯದ ವಿವಿಧ ಭಾಗಗಳಲ್ಲಿ ಜನರನ್ನು ಸೆಳೆಯುತ್ತಿದ್ದು ಹಗಲು-ರಾತ್ರಿ ಎನ್ನದೇ ಸಮಾಜಸೇವೆಯಲ್ಲಿ ತೊಡಗಿರುವುದು ವಿಶೇಷ, ಅವರ ಜ್ಞಾನಪ್ರಚಾರ ಕಾರ್ಯದಿಂದ ಸಾವಿರಾರು ಜನರಿಗೆ ಪ್ರೇರಣೆ ದೊರಕಿದೆ ಎಂದು
ತಿಳಿಸಿದರು.
‘ವಚನ, ಭಗವದ್ಗೀತೆ, ಉಪನಿಷತ್ಗಳಿಗೆ ಕಾನೂನಿನ ಬಲ ದೊರೆತು, ಅಳವಡಿಕೆ ಕಡ್ಡಾಯವಾದರೆ ಸಮಾಜದಲ್ಲಿ ಬದಲಾವಣೆ ಆಗಲು ಸಾಧ್ಯ,’ ಎಂದರು.
ವಚನ ಸಾಹಿತ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿಕ್ಷಣ ತಜ್ಞ ಗುರುರಾಜ ಕರಜಗಿ “ಬಸವ ವೇದಿಕೆಯಿಂದ ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಿರುವುದು ನನ್ನ ಜೀವನದ ಅತ್ಯಂತ ಪ್ರಮುಖ ಕ್ಷಣಗಳಲ್ಲಿ ಒಂದು. ಈ ಪ್ರಶಸ್ತಿಯನ್ನು ನಾನು ಒಬ್ಬ ವ್ಯಕ್ತಿಯಾಗಿ ಸ್ವೀಕರಿಸುತ್ತಿಲ್ಲ, ಬದಲಿಗೆ 12ನೇ ಶತಮಾನದ ಕ್ರಾಂತಿಕಾರಿ ಶರಣರು ಬಿತ್ತಿದ ಸಮಾನತೆ ಮತ್ತು ಜ್ಞಾನದ ಪರಂಪರೆಗೆ ಸಲ್ಲುತ್ತಿರುವ ಅರ್ಪಣೆಯಾಗಿ ಸ್ವೀಕರಿಸುತ್ತೇನೆ, ಎಂದರು.
ಕೇಂದ್ರದ ಜಲಶಕ್ತಿ ಮತ್ತು ರೈಲ್ವೆಯ ರಾಜ್ಯ ಸಚಿವ ವಿ. ಸೋಮಣ್ಣ, ‘ದೇಶ–ವಿದೇಶದಲ್ಲಿ ಬಸವಣ್ಣನವರ ವಚನ, ತತ್ವಗಳನ್ನು ಪಸರಿಸುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಮಾಡುತ್ತಿದ್ದೇವೆ’ ಎಂದರು.
ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ, ‘ನಿಜವಾದ ಬಸವ ತತ್ವಗಳನ್ನು ಅಳವಡಿಸಿಕೊಳ್ಳುವುದು ಅಸಾಧ್ಯ. ಆದರೆ ಸಾಧನೆ ಬಿಡಬಾರದು. ಬಸವಣ್ಣನನ್ನು 900 ವರ್ಷಗಳಿಂದಲೂ ಅಪ್ರಸ್ತುತ ಮಾಡಲು ಪ್ರಯತ್ನಿಸಲಾಗುತ್ತಿದೆ. ಆದರೆ, ಬಸವಣ್ಣ ಶಾಶ್ವತ’ ಎಂದರು.
ಸಂದೇಶ ಕಳುಹಿಸಿದ ದೇವೇಗೌಡರು
ಬಸವಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದ ಮಾಜಿ ಪ್ರಧಾನಿ ಆರೋಗ್ಯದ ಸಮಸ್ಯೆಯಿಂದ ಕಾರ್ಯಕ್ರಮಕ್ಕೆ ಬರದೇ, ಸಂದೇಶ ಕಳಿಸಿದರು.
‘ಇಂದು ಎಲ್ಲ ಕ್ಷೇತ್ರಗಳಲ್ಲೂ ಅಧಃಪತನವನ್ನು ಕಾಣುತ್ತಿದ್ದೇವೆ. ವ್ಯವಸ್ಥೆಯ ಕೆಡುಕಿನ ಬಗ್ಗೆ ವಿವೇಕಶಾಲಿಗಳು ಸಿನಿಕರಾಗುತ್ತಿದ್ದಾರೆ. ಜನಪರ ಚಳವಳಿಗಳು ಕ್ಷೀಣವಾಗುತ್ತಿವೆ.
ಹಾಗಾಗಿ ಇಂದು ನಮಗೆ ಅಲ್ಲಮನ ತಾತ್ವಿಕತೆ, ಬಸವಣ್ಣ ಅವರ ಕ್ರೀಯಾಶೀಲತೆ, ಅಂಬಿಗರ ಚೌಡಯ್ಯನವರ ಆಕ್ರೋಶ ಬೇಕಾಗಿದೆ. ಈ ಕಾರ್ಯಕ್ರಮದಲ್ಲಿ ಗುರುರಾಜ ಕರ್ಜಗಿಯವರೂ ಸೇರಿದಂತೆ ಅನೇಕ ಶರಣರ ಸೂಳ್ನುಡಿಗಳನ್ನು ಕೇಳಲಾದರೂ ನಾನು ಬರಬೇಕೆಂದಿದ್ದೆ. ಆದರೆ ನನ್ನ ಆರೋಗ್ಯ ವ್ಯತ್ಯಯದಿಂದಾಗಿ ಬಸವಶ್ರೀ ಪ್ರಶಸ್ತಿ ಪ್ರದಾನಕ್ಕೆ ಬರಲಾಗುತ್ತಿಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಂದೇಶ ಕಳುಹಿಸಿದ್ದಾರೆ.
ಕಾರ್ಯಕ್ರಮ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯಿತು.
ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಎಸ್. ಷಡಕ್ಷರಿ, ಎಚ್.ಕೆ. ಪಾಟೀಲ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿ. ಸೋಮಶೇಖರ್, ಡಾ. ಸಿ.ಎನ್. ಮಂಜುನಾಥ್ ಉಪಸ್ಥಿತರಿದ್ದರು.
