ಬಸವಣ್ಣ ಏಕದೇವೋಪಾಸಕ ಶರಣ ಸಂಕುಲ ನಿರ್ಮಾಣ ಮಾಡಿದರು: ರಂಜಾನ್ ದರ್ಗಾ

ರಾಯಚೂರು :

12ನೇ ಶತಮಾನ ವೈದಿಕ ಪಟ್ಟಭದ್ರ ಹಿತಾಸಕ್ತಿಗಳ, ಮನುವಾದಿಗಳ ಹಿಡಿತದಲ್ಲಿತ್ತು. ಆದರೆ ಬಸವಣ್ಣ ಆ ಕಾಲದಲ್ಲಿ ವಚನ ಚಳುವಳಿ ಮೂಲಕ ಎಲ್ಲ ಕಾಯಕ ಜೀವಿಗಳ, ವಿವಿಧ ಜಾತಿಗಳನ್ನು ಒಗ್ಗೂಡಿಸಿ ಏಕದೇವೋಪಾಸಕ ಶರಣ ಸಂಕುಲವನ್ನು ನಿರ್ಮಾಣ ಮಾಡಿದರು ಎಂದು ಸಾಹಿತಿ ರಂಜಾನ್ ದರ್ಗಾ ಹೇಳಿದರು.

ಅದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಬಸವೇಶ್ವರ ಜಯಂತಿ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣ, ಸಂಘಟನೆ, ಹೋರಾಟ ಇದು ೨೦ನೇ ಶತಮಾನದ ಮಾತಾದರೂ ಈ ಚಿಂತನಾ ಕ್ರಮಗಳು ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಮೂವರ ಚಿಂತನೆಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಶಿಕ್ಷಣ ಅಂದರೆ ಜೀವನವನ್ನು ಅರಿತುಕೊಳ್ಳುವುದು, ಸಂಘಟನೆ ಎಂದರೆ ಅನ್ಯಾಯದ ವಿರುದ್ಧ ಹೇಗೆ ಸಂಘಟಿತರಾಗುವುದೆಂದು ತಿಳಿಯುವುದು, ಹೋರಾಟ ಎಂದರೆ ಅನ್ಯಾಯದ ವಿರುದ್ಧ ಪ್ರತಿಭಟಿಸುವುದು.

ಈ ಮೂರು ಚಿಂತನಾ ಕ್ರಮಗಳು ಅವೈದಿಕವಾಗಿವೆ, ಮನುವಾದಕ್ಕೆ ವಿರುದ್ಧವಾಗಿವೆ, ಜಾತಿವಾದಕ್ಕೆ ವಿರುದ್ಧವಿದೆ ಶೋಷಣೆಗೆ ವಿರುದ್ಧವಿದೆ.

19ನೇ ಶತಮಾನದವರೆಗೆ ನಮ್ಮ ಜನರಿಗೆ ವರ್ಗ ಸಂಘರ್ಷದ ಪ್ರಜ್ಞೆ ಇರಲಿಲ್ಲ ಕಾರ್ಲ್ ಮಾರ್ಕ್ಸ್, ಏಂಜಲ್ಸ್ ಬಂದಮೇಲೆ ಇದು ಅರಿವಿಗೆ ಬಂತು. ಅಲ್ಲಿ ಬಂಡವಾಳವಾದ ಇತ್ತು ಇನ್ನೊಂದೆಡೆ ಶ್ರಮಜೀವಿ ವರ್ಗವಿತ್ತು. ಬಂಡವಾಳವಾದದ ವಿರುದ್ಧ ಶ್ರಮಜೀವಿಗಳ ಒಗ್ಗೂಡಿಸುವುದು ಮಾರ್ಕ್ಸ್ ಅವರಿಗೆ ಸುಲಭ ಸಾಧ್ಯವಿತ್ತು ಆದರೆ ಬಸವಣ್ಣನವರ ಕಾಲದಲ್ಲಿ ಬಂಡವಾಳವಾದ ಇರಲಿಲ್ಲ. ವರ್ಣಾಶ್ರಮ ಪದ್ಧತಿ ಇತ್ತು. ಅಂತಹ ಕಷ್ಟ ಕಾಲದಲ್ಲಿ ಗುಡಿ-ಗುಂಡಾರಗಳ ಶೋಷಣೆಯಿಂದ ಎಲ್ಲ ಕಾಯಕ ಜೀವಿಗಳನ್ನು ಕಾಯಕ ದಾಸೋಹ ತತ್ವದಡಿಯಲ್ಲಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಆರ್ಥಿಕ, ಸಾಮಾಜಿಕವಾಗಿಯಲ್ಲದೇ ಗುರು, ಲಿಂಗ, ಜಂಗಮ ತತ್ವದಡಿ ಮಂದಿರದ ದೇವರನ್ನು ಅವರ ಅಂಗೈಯಲ್ಲಿ ಕೊಟ್ಟು ಹೊಸ ಶೋಷಣೆ ರಹಿತ, ಜಾತಿಬೇಧ, ಲಿಂಗಬೇಧದ ಹೊಸ ಲಿಂಗಾಯತ ಧರ್ಮ ಪ್ರತಿಷ್ಠಾಪಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಅಮರೇಶ ನುಗಡೋಣಿ ಅವರನ್ನು ವಾಲ್ಮೀಕಿ ವಿವಿಯ ವತಿಯಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಕಾಶಕರ ಸಂಘದ ಎಂ.ಗೊಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಗೆ ಭಾಜನರಾಗಿರುವ ಪಲ್ಲವ ಪ್ರಕಾಶನದ ಕೆ.ವೆಂಕಟೇಶ್ ಅವರನ್ನು ವಿಶ್ವವಿದ್ಯಾನಿಲಯದ ಉಪನ್ಯಾಸಕ ಬಳಗದವರು ಸನ್ಮಾನಿಸಿದರು.

ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಪಾರ್ವತಿ ಸಿ.ಎಸ್., ಪ್ರೊ.ಪಿ. ಭಾಸ್ಕರ್, ಸಹಪ್ರಾಧ್ಯಾಪಕರಾದ ಲತಾ.ಎಂ.ಎಸ್, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಜಿ.ಎಸ್. ಬಿರಾದಾರ್ ಉಪಸ್ಥಿತರಿದ್ದರು.

ಸ್ನೇಹಾ ಚವ್ಹಾಣ ವಚನಗೀತೆ ಹಾಡಿದರು. ಉಪನ್ಯಾಸಕಿ ಗೀತಮ್ಮ ಸ್ವಾಗತಿಸಿದರು. ಗೀತಾಂಜಲಿ ನಿರೂಪಿಸಿದರು. ಉಪನ್ಯಾಸಕರಾದ ರಮೇಶ್ ನಾಯಕ, ದಿವ್ಯಾ ಎಸ್. ಆರ್., ನೇಹಾ ಗಸ್ತಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಶಾಂತಾದೇವಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *