ತಿಪಟೂರು :
ನಗರದ ಬಯಲು ಮಂದಿರದಲ್ಲಿ ಈಚೆಗೆ ತಾಲ್ಲೂಕಿನ ಬಸವ ಅಭಿಮಾನಿ ಬಳಗ ಹಾಗೂ ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದ ಶಿವ ಸಂಚಾರ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಲಾಯಿತು.

ನಾಟಕೋತ್ಸವದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಹಿರಿಯ ಕಲಾವಿದರಾದ ಶಿವರುದ್ರಪ್ಪ ರಂಗಾಪುರ, ಕರೀಕೆರೆ ಕಿರಣ, ಸಿದ್ದರಾಮಪಾಳ್ಯದ ಕುಮಾರಸ್ವಾಮಿ ಹಾಗೂ ಸಪ್ತಶ್ರೀ ಕಲಾ ಸಂಘದ ಬಸವರಾಜು ಅವರನ್ನು ಅಭಿನಂದಿಸಿ, ನಾಟಕೋತ್ಸವದ ಮೊದಲ ದಿನದ ಕಾರ್ಯಕ್ರಮವಾಗಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ರಚನೆಯಾದ “ಜಂಗಮದಡೆಗೆ”ನಾಟಕವನ್ನು ಜಗದೀಶ್ ಆರ್. ನಿರ್ದೇಶನದಲ್ಲಿ ಶಿವ ಸಂಚಾರದ ಸದಸ್ಯರು ಪ್ರದರ್ಶನ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಾರನಗೆರೆ ಸಂಗಮೇಶ, ೧೨ನೇ ಶತಮಾನದಲ್ಲಿ ಸಾಮಾಜಿಕ ಅಸಮತೋಲನವನ್ನು ನಿವಾರಿಸಲು ಬಸವಣ್ಣನವರು ವಚನಕ್ರಾಂತಿಯ ಮೂಲಕ ಅನುಭವ ಮಂಟಪವನ್ನು ಸ್ಥಾಪಿಸಿ ಮಹತ್ವದ ಸಾಮಾಜಿಕ ಕ್ರಾಂತಿಗೆ ಚಾಲನೆ ನೀಡಿದರು.
ಅದೇ ರೀತಿ ಸಾಣೇಹಳ್ಳಿಯ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಶರಣರ ವಚನಗಳು, ಪಂಥಗಳು ಮತ್ತು ಆಶಯಗಳನ್ನು ರಾಜ್ಯದ ಉದ್ದಗಲಕ್ಕೂ ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ವಿಶೇಷವಾಗಿ ಯುವಜನತೆಗೆ ನಾಟಕ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಇಂತಹ ಉತ್ಸವಗಳು ವೇದಿಕೆಯಾಗುತ್ತವೆ ಎಂದು ಹೇಳಿದರು.

ಮಾದಿಹಳ್ಳಿಯ ದಯಾನಂದ ಮಾತನಾಡಿ, ಬಸವಣ್ಣನವರು ಕಾಯಕದ ಮೂಲಕ ದೇವರನ್ನು ಕಾಣಬೇಕೆಂಬ ಸಂದೇಶ ನೀಡಿದ್ದು, ವಿವಿಧ ರೀತಿಯ ಸಾಮಾಜಿಕ ಸುಧಾರಣೆಗಳನ್ನು ಮಾಡಿದ ಕ್ರಾಂತಿವೀರರು ಎಂದರು.
ನಾಟಕಗಳ ಮೂಲಕ ವಚನಗಳ ಸಾರಾಂಶ ಹಾಗೂ ಮಹತ್ವವನ್ನು ಜನರಿಗೆ ತಲುಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಗೌಡನಕಟ್ಟೆನಿಜಗುಣ ಅವರು ಮಾತನಾಡಿ, ಶರಣ ಸಂಸ್ಕೃತಿಯನ್ನು ಬಿತ್ತರಿಸುವ ಉದ್ಧೇಶದಿಂದ ಹಾಗೂ ಜಾನಪದ ಕಲೆಗಳನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ವಚನಗಳ ಆಶಯದಂತೆ ನಾವು ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚನ್ನೇಗೌಡ, ಅಪ್ಪೇಗೌಡ, ಮಾದಿಹಳ್ಳಿ ರೇಣು, ತೇಜಮೂರ್ತಿ, ಚಂದ್ರಯ್ಯ, ಹರಿಸಮುದ್ರ ಗಂಗಾಧರ, ಮಾರನಗೆರೆ ಚಿಕ್ಕಣ್ಣ, ಸಾರ್ಥವಳ್ಳಿ ಶಿವಕುಮಾರ ಸೇರಿದಂತೆ ಅನೇಕ ಕಲಾ ಪ್ರೋತ್ಸಾಹಕರು ಉಪಸ್ಥಿತರಿದ್ದರು.
