ಹಗರಿಬೊಮ್ಮನಹಳ್ಳಿ :
“ಬಸವತತ್ವದ ಅಡಿಯಲ್ಲಿ ನಡೆಯುವ ಸಾಮೂಹಿಕ ವಿವಾಹ ಸರಳತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಆಧರಿಸುತ್ತವೆ,” ಎಂದು ಗದಗ ಯಡಿಯೂರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ತಾಲೂಕಿನ ಬಾಚಿಗೊಂಡನಹಳ್ಳಿ ಜಗದ್ಗುರು ಕೌದಿ ಮಹಾಂತೇಶ್ವರ ಸ್ವಾಮೀಜಿ ಪರ್ವ ಕಾರ್ಯಕ್ರಮದ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಬಸವತತ್ವ ಅನುಸಾರ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಬಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

“ಬಸವ ತತ್ವದ ವಿವಾಹಗಳು ಯಾವುದೇ ಆಡಂಬರವಿಲ್ಲದೆ ಸತ್ಯ ಮತ್ತು ಸಂಸ್ಕಾರದೊಂದಿಗೆ ನಡೆಯಬೇಕು. ನೂತನ ಬದುಕಿಗೆ ಕಾಲಿಟ್ಟ 9 ನೂತನ ದಂಪತಿಗಳು ಹೊಂದಾಣಿಕೆ ಸ್ವಭಾವದಿಂದ ಉತ್ತಮ ಬದುಕು ಕಟ್ಟಿಕೊಳ್ಳಬೇಕು,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಕೆ. ನೇಮರಾಜ ನಾಯ್ಕ ಮಾತನಾಡಿ, “ಬಸವಾದಿ ಶರಣರು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದ್ದರು. ಆದರೆ, ಲೋಕಸಭೆಯಲ್ಲಿ ಶೇ.33ರಷ್ಟು ಮೀಸಲು ಜಾರಿಗೆ ಬರದಿರುವುದು ವಿಷಾದದ ಸಂಗತಿ,” ಎಂದರು.

ಸಂಡೂರು ವಿರಕ್ತಮಠದ ಪೂಜ್ಯ ಪ್ರಭುಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸೌಹಾರ್ದತೆ, ಸರಳತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಲು ಬಸವತತ್ವ ಅಡಿಪಾಯವಾಗಿದೆ. ಪರಸ್ಪರ ಸಾಮರಸ್ಯವೇ ಸುಖಿ ಕುಟುಂಬಕ್ಕೆ ಭದ್ರ ಬುನಾದಿಯಾಗಿದೆ. ಬಸವತತ್ವದಡಿಯ ಮದುವೆ ಸಮಾನತೆ ಹಾದಿಯ ಮಹತ್ವದ ಹೆಜ್ಜೆಯಾಗಿದೆ,” ಎಂದು ತಿಳಿಸಿದರು.
ಬಾಚಿಗೊಂಡನಹಳ್ಳಿ ಜಗದ್ಗುರು ತೋಂಟದಾರ್ಯ ಶಾಖಾಮಠದ ಶಿವಮಹಾಂತ ಸ್ವಾಮೀಜಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅಕ್ಕಿ ತೋಟೇಶ ಅವರು ಮಾತನಾಡಿ ನೂತನ ದಂಪತಿಗಳಿಗೆ ಶುಭ ಕೋರಿದರು.
ಯಶವಂತಪುರದ ಪೂಜ್ಯ ಗಂಗಾಧರ ಸ್ವಾಮೀಜಿ, ಕಡಲಬಾಳು ಮರಿಶಾಂತವೀರ ಸ್ವಾಮೀಜಿ, ಗದ್ದಿಕೇರಿ ವಿರಕ್ತಮಠದ ಇಮ್ಮಡಿ ಮಹಾಂತ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಹೆಗ್ಡಾಳ್ ರಾಮಣ್ಣ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬದಾಮಿ ಮೃತ್ಯುಂಜಯ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗುರುಬಸವರಾಜ ಸೊನ್ನದ, ಮುಖಂಡರಾದ ಬಡಿಗೇರ ಸಿದ್ದರಾಜು, ಕಿನ್ನಾಳ ಸುಭಾಷ, ಪುರಸಭೆ ಸದಸ್ಯ ದೀಪಕ, ಶೆಟ್ಟರ ಭರತೇಶ, ಮೇಘರಾಜ ಒಂಟಿ, ಕರಿಬಸಪ್ಪ ಹಡಗಲಿ, ಹೊಸೂರು ಭರಮಪ್ಪ, ಮೋಹನ, ವಿರೂಪಾಕ್ಷ, ವೀರಬಸಪ್ಪ, ಸಿದ್ದನಗೌಡ, ವೀರೇಶ ಗಾಳೆಮ್ಮನಗುಡಿ, ಸುರೇಶ ಯಲ್ಲಾಪುರ ಮತ್ತಿತರರು ಇದ್ದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ರೋಹಿತ್, ಚನ್ನಬಸಪ್ಪ, ಶೈಲಜಾ ಅಡೂರಶೆಟ್ಟರ ಕಾರ್ಯಕ್ರಮ ನಿರ್ವಹಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M
