ಸಾಣೇಹಳ್ಳಿ :
ಇಲ್ಲಿನ ಶ್ರೀಮಠದ ಆವರಣದಲ್ಲಿ ಕಳೆದ ಹದಿನೆಂಟು ದಿನಗಳಿಂದ ನಡೆದ ಮಕ್ಕಳ ಹಬ್ಬ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, “ಮಕ್ಕಳಿಗೆ ಬಾಲ್ಯದಲ್ಲಿಯೇ ಸಾಹಿತ್ಯ, ಸಂಗೀತ, ಕಲೆ ಮತ್ತು ಸಂಸ್ಕೃತಿಯ ಅರಿವು ಮೂಡಿಸಿದಾಗ ಅವರು ಉತ್ತಮ ಪ್ರಜೆಗಳಾಗಿ ಬೆಳೆಯಲು ಸಾಧ್ಯ. ಕೇವಲ ಪುಸ್ತಕದ ಬದನೆಕಾಯಿಯಾಗುವ ಬದಲು, ಸಮಾಜಕ್ಕೆ ಉಪಯುಕ್ತವಾಗುವ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಮಕ್ಕಳಲ್ಲಿ ಕೇವಲ ಸೌಲಭ್ಯಗಳ ವ್ಯಾಮೋಹ ಬೆಳೆಸದೆ, ಕಷ್ಟ ಸಹಿಷ್ಣುತೆ ಮತ್ತು ಸಂಸ್ಕಾರವನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಅತಿಯಾದ ಸೌಲಭ್ಯಗಳನ್ನು ನೀಡುವ ಮೂಲಕ ಅವರನ್ನು ಮೃದುಸ್ವಭಾವದವರನ್ನಾಗಿ ಮಾಡುತ್ತಿದ್ದಾರೆ. ಆದರೆ ನಿಜವಾದ ಶಿಕ್ಷಣವು ಮಕ್ಕಳಿಗೆ ಎಂತಹ ಪರಿಸ್ಥಿತಿಯಲ್ಲೂ ಬದುಕುವ ಧೈರ್ಯ ಮತ್ತು ಸಂಸ್ಕಾರವನ್ನು ಕಲಿಸಬೇಕು. ಸೌಲಭ್ಯಕ್ಕಿಂತ ಸಂಸ್ಕಾರ ಮುಖ್ಯ.
ಮಕ್ಕಳಿಗೆ ಎಸಿ ರೂಮ್, ಐಷಾರಾಮಿ ವಾಹನ ಹಾಗೂ ಹಠ ಹಿಡಿದು ಕೇಳುವ ಆಹಾರವನ್ನೇ ನೀಡುವ ಸಂಸ್ಕೃತಿ ಅವರನ್ನು ದಾರಿ ತಪ್ಪಿಸಬಹುದು. ಅದರ ಬದಲಾಗಿ ಸಿಕ್ಕ ಆಹಾರವನ್ನು ಉಂಡು, ಸಿಕ್ಕ ಜಾಗದಲ್ಲಿ ಮಲಗುವ ಹದವನ್ನು ಮಕ್ಕಳು ರೂಢಿಸಿಕೊಳ್ಳಬೇಕು. ಆಗ ಮಾತ್ರ ಅವರು ಪೋಷಕರ ಹತೋಟಿಯಲ್ಲಿರುವರು.

ಓದಿದ ವಿದ್ಯೆ ಕೇವಲ ಹಣ ಸಂಪಾದನೆಗೆ ಸೀಮಿತವಾಗಬಾರದು. ಅದು ತಂದೆ-ತಾಯಿಯನ್ನು ಗೌರವಿಸುವ ಸಂಸ್ಕಾರವನ್ನು ನೀಡಬೇಕು. ಇತ್ತೀಚಿನ ದಿನಮಾನಗಳಲ್ಲಿ ಪ್ರಾಣಿಗಳಲ್ಲಿರುವ ನಿಷ್ಠೆ ಮತ್ತು ಪ್ರೀತಿ ಮನುಷ್ಯರಲ್ಲಿ ಮಾಯವಾಗುತ್ತಿರುವುದು ವಿಷಾದನೀಯ ಎಂದರು.
ಮಕ್ಕಳು ಶಿಬಿರದಲ್ಲಿ ‘ಯುದ್ಧ ಮತ್ತು ಶಾಂತಿ’ ಹಾಗೂ ‘ಹಕ್ಕಿಯ ಹಾಡು’ ಎಂಬ ಎರಡು ಅದ್ಭುತ ನಾಟಕಗಳನ್ನು ಪ್ರದರ್ಶಿಸಿದರು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹ ನೀಡಬೇಕು.

ಖ್ಯಾತ ನಟ ರಜನಿಕಾಂತ್ ಅವರ ಜೀವನ ಚರಿತ್ರೆಯನ್ನು ಉದಾಹರಿಸಿದ ಶ್ರೀಗಳು, ಒಬ್ಬ ಸಾಮಾನ್ಯ ಕಂಡಕ್ಟರ್ ಆಗಿದ್ದ ವ್ಯಕ್ತಿ ಕಠಿಣ ಪರಿಶ್ರಮ ಮತ್ತು ಆಸಕ್ತಿಯಿಂದ ಹೇಗೆ ವಿಶ್ವವಿಖ್ಯಾತ ನಟರಾದರು. ಹಾಗೆಯೇ ಮಕ್ಕಳಲ್ಲಿಯೂ ಅಂತಹ ಹಂಬಲವಿದ್ದರೆ ಸಾಧನೆ ಸುಲಭ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿ ರಂಗ ವಿಮರ್ಶಕ ಹೆಚ್.ಎಸ್. ನವೀನಕುಮಾರ ಮಾತನಾಡಿ, ಇಲ್ಲಿನ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಆವರಣದಲ್ಲಿ ನಡೆದ 15 ದಿನಗಳ ಮಕ್ಕಳ ಶಿಬಿರವು ಅತ್ಯಂತ ಅರ್ಥಪೂರ್ಣವಾಗಿ ಮುಕ್ತಾಯಗೊಂಡಿತು. ಈ ಶಿಬಿರದಲ್ಲಿ ಮಕ್ಕಳಿಗೆ ಕೇವಲ ಪಠ್ಯವಲ್ಲದೆ, ಪ್ರಕೃತಿ, ಕಲೆ, ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಕುರಿತು ವಿಶೇಷ ತರಬೇತಿ ನಡೆಯಿತು.

“ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜದಂತೆ ಎಂದಿಗೂ ನಿರರ್ಥಕವಾಗುವುದಿಲ್ಲ” ಎಂಬ ಆಶಯದೊಂದಿಗೆ, ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಈ ಶಿಬಿರದ ಮೂಲಕ ಯಶಸ್ವಿಯಾಗಿ ನೆರವೇರಿತು.
ಶಿಬಿರದ ವಿಶೇಷತೆಯೆಂದರೆ, ಇಲ್ಲಿನ ವಿದ್ಯಾರ್ಥಿಗಳು ಕೇವಲ ಕೆಲಸಗಾರರಾಗಿರದೆ, ಶಿಬಿರಾರ್ಥಿಗಳಿಗೆ ಆಪ್ತ ಸ್ನೇಹಿತರಂತೆ ಮತ್ತು ಪೋಷಕರಂತೆ ಬೆರೆತಿದ್ದಾರೆ. ಒಂದು ಸಂದರ್ಭದಲ್ಲಿ ಸಣ್ಣ ಮಗುವೊಂದು ಮನೆಯ ನೆನಪಾಗಿ ಅಳುತ್ತಿದ್ದಾಗ, ರಂಗಶಾಲೆಯ ವಿದ್ಯಾರ್ಥಿ ಆ ಮಗುವನ್ನು ತಮ್ಮ ಜೊತೆಯಲ್ಲೇ ಮಲಗಿಸಿಕೊಂಡು ಸಮಾಧಾನಪಡಿಸಿದ ಘಟನೆಯನ್ನು ಆಯೋಜಕರು ನೆನಪಿಸಿಕೊಂಡರು. ಈ ರೀತಿಯ ಆತ್ಮೀಯತೆ ಶಿಬಿರದ ವಾತಾವರಣವನ್ನು ಸುಂದರಗೊಳಿಸಿತ್ತು.
ಶಿಕ್ಷಕ ಅಣ್ಣಿಗೆರೆ ವಿರೂಪಾಕ್ಷಪ್ಪ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಪೂರಕವಾದ ವಾತಾವರಣ ನಿರ್ಮಿಸುವುದು ಇಂದಿನ ಅಗತ್ಯವಾಗಿದೆ.
“ಕಳೆದ 18 ದಿನಗಳಿಂದ ಮಕ್ಕಳು ತಮ್ಮ ಮನಸ್ಸಿನ ಆಳದಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಈ ವೇದಿಕೆ ಸಾಕ್ಷಿಯಾಗಿದೆ. ಇದು ಕೇವಲ ಹಬ್ಬವಲ್ಲ, ಅವರ ಭವಿಷ್ಯವನ್ನು ರೂಪಿಸುವ ಒಂದು ದೊಡ್ಡ ಶಕ್ತಿ. ಪಾಲಕರು ಕೇವಲ ಅಂಕಗಳು ಮತ್ತು ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡದೆ, ಮಕ್ಕಳ ಭಾವನಾತ್ಮಕ ಬೆಳವಣಿಗೆ ಮತ್ತು ಅವರ ಆಸಕ್ತಿಯ ಕ್ಷೇತ್ರಗಳಿಗೆ ಬೆಂಬಲ ನೀಡಬೇಕು.
“ಮಕ್ಕಳೊಂದಿಗೆ ಕಳೆದ ಕ್ಷಣಗಳು ಅತ್ಯಂತ ಭಾವನಾತ್ಮಕವಾಗಿದ್ದವು. ತಾಯಿ ವಾತ್ಸಲ್ಯ ಮತ್ತು ಕೌಟುಂಬಿಕ ಜವಾಬ್ದಾರಿಗಳ ಬಗ್ಗೆ ಮಾತನಾಡಿದಾಗ ಮಕ್ಕಳ ಕಣ್ಣಾಲಿಗಳು ತೇವವಾಗಿದ್ದವು. ಇದು ಅವರಲ್ಲಿರುವ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ.
ನಾವು ಯಾವುದೋ ದೊಡ್ಡದನ್ನು ಬಯಸುವ ಬದಲು, ಇರುವ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಉಪಯುಕ್ತವಾಗುವಂತೆ ಬದುಕಬೇಕು”.

ರಂಗನಿರ್ದೇಶಕ ಕೃಷ್ಟಮೂರ್ತಿ ಮುಳಬಾಗಿಲು ಮಾತನಾಡಿ, “೧೨ನೇ ಶತಮಾನದಲ್ಲಿ ಬಸವಾದಿ ಶರಣರು ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರೆ, ಇಂದಿನ ಕಾಲಘಟ್ಟದಲ್ಲಿ ಪೂಜ್ಯ ಪಂಡಿತಾರಾಧ್ಯ ಶ್ರೀಗಳು ನಾಟಕ ಮತ್ತು ವಚನ ಸಾಹಿತ್ಯದ ಮೂಲಕ ಸಾಂಸ್ಕೃತಿಕ ಕ್ರಾಂತಿಯನ್ನು ಮಾಡುತ್ತಿದ್ದಾರೆ.
ಮಕ್ಕಳ ಭಾವನಾ ಕೋಶ ಬೆಳೆಯಬೇಕು. “ಪೋಷಕರು ತಮ್ಮ ಮಕ್ಕಳನ್ನು ಕೇವಲ ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡಬಾರದು. ಮಕ್ಕಳು ವಿಶ್ವಮಾನವರಾಗಿ ಬೆಳೆಯಬೇಕು. ಕೇವಲ ಓದಿನ ಕಡೆಗೆ ಗಮನ ಹರಿಸದೆ, ಅವರಲ್ಲಿ ಭಾವನಾಕೋಶ ವಿಕಸನಗೊಳ್ಳಬೇಕು. ವಚನಗಳನ್ನು ಹಾಡುವುದು, ನೃತ್ಯ ಮಾಡುವುದು ಮತ್ತು ಸಮಾಜದೊಂದಿಗೆ ಬೆರೆಯುವ ಗುಣಗಳನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.”
ಹಿಂದೆ ಮಕ್ಕಳು ಅಜ್ಜ-ಅಜ್ಜಿಯರ ಜೊತೆ ಸೇರಿ ಪ್ರಕೃತಿಯೊಂದಿಗೆ ಬೆರೆಯುತ್ತಿದ್ದರು. ಆದರೆ ಇಂದು ಜೀವನ ಯಾಂತ್ರಿಕವಾಗುತ್ತಿದೆ. ಶಾಲೆಯಿಂದ ಬಂದ ತಕ್ಷಣ ಹೋಂ ವರ್ಕ್ ಎಂಬ ಒತ್ತಡದ ಬದಲು, ಮಕ್ಕಳಿಗೆ ಮುಕ್ತವಾಗಿ ಆಟವಾಡಲು ಮತ್ತು ಕಲೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಪೋಷಕರಲ್ಲಿ ವಿನಂತಿಸಿದರು.

ನಾಗರಾಜ್ ಹೆಚ್.ಎಸ್, ಶರಣ್ ವಚನಗೀತೆಗಳನ್ನು ಹಾಡಿದರು. ರಂಗಶಾಲೆಯ ಪ್ರಾಂಶುಪಾಲ ರಘು ಪುರಪ್ಪಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯ ಕೆ.ಆರ್. ಬಸವರಾಜ, ಪ್ರಸನ್ನ ಉಪಸ್ಥಿತರಿದ್ದರು.
ಯುದ್ದ ಮತ್ತು ಶಾಂತಿ, ಹಕ್ಕಿ ಹಾಡು, ಗೆಳೆಯರ ಬಳಗಕ್ಕೆ ಜೈ, ಸರಸತಿಯಾಗಲೊಲ್ಲೆ ಎನ್ನುವ ನಾಲ್ಕು ನಾಟಕಗಳನ್ನು ವಚನ ಗೀತೆ, ವಚನ ನೃತ್ಯ, ಯೋಗ ಪ್ರದರ್ಶನ ಮುಂತಾದ ಚಟುವಟಿಕೆಗಳನ್ನು ಶಿಬಿರಾರ್ಥಿಗಳು ಪ್ರದರ್ಶಿಸಿದರು. ನೂರಾರು ಪೋಷಕರು ಭಾಗವಹಿಸಿದ್ದರು.
