ಬಸವಾದಿ ಶರಣರು ಶ್ರಮ ಮತ್ತು ಸಮ ಸಂಸ್ಕೃತಿಯ ಪ್ರತಿಪಾದಕರು : ಚಿಂತಕ ಚಿನ್ನಸ್ವಾಮಿ ಸೋಸಲೆ
ಮುನಿರಾಬಾದ :
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಜಲವಿದ್ಯುದಾಗಾರ ಪವರ್ ಹೌಸ್ ಕಛೇರಿಯಲ್ಲಿ ಬಸವ ಜಯಂತಿಯ ಕಾರ್ಯಕ್ರಮ ನಡೆಯಿತು.
ಬಸವೇಶ್ವರರ ಭಾವಚಿತ್ರಕ್ಕೆ ಕಚೇರಿಯ ಎಲ್ಲ ಸಿಬ್ಬಂದಿ ವರ್ಗದವರು ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

‘ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ’ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಚರಿತ್ರೆ ವಿಭಾಗದ ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರು ಮಾತನಾಡಿದರು.
ಅವರು, ನಮ್ಮ ಭಾರತ ದೇಶಕ್ಕೆ ಪ್ರಾಚೀನ ಇತಿಹಾಸ ಪರಂಪರೆ ಇದೆ. ಪ್ರಾಚೀನ ಕಾಲದಿಂದಲೂ ಅನೇಕ ರಾಜ ಮನೆತನಗಳು ಆಳ್ವಿಕೆ ಮಾಡಿರುವುದನ್ನು ನೋಡಬಹುದಾಗಿದೆ. ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಬನವಾಸಿ ಕದಂಬರ ಕಾಲದಿಂದ ತಲಕಾಡಿನ ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಹೀಗೆ 12ನೇ ಶತಮಾನದವರೆಗೆ ಅನೇಕ ರಾಜ ಮನೆತನಗಳು ಆಳ್ವಿಕೆ ಮಾಡಿರುವುದು ಕಂಡುಬರುತ್ತದೆ.

ಈ ಅವಧಿಯಲ್ಲಿ ದೇವರು ಧರ್ಮದ ಹೆಸರಿನಲ್ಲಿ ದೊಡ್ಡ ದೊಡ್ಡ ದೇವಾಲಯಗಳು ಹಾಗೂ ಅಗ್ರಹಾರಗಳು ನಿರ್ಮಾಣಗೊಂಡವು. ಇವುಗಳು ದೇವರು ಮತ್ತು ಧರ್ಮದ ಹೆಸರಿನಲ್ಲಿ ಶ್ರೇಷ್ಠ-ಕನಿಷ್ಠ, ಸ್ಪೃಶ್ಯ-ಅಸ್ಪೃಶ್ಯ, ಮೇಲು-ಕೀಳು, ದೇವಾಲಯದ ಹೊರಗಿನ ಜನ-ದೇವಾಲಯದ ಒಳಗಿನ ಜನ, ಕಾಡು ಜನ-ನಾಡು ಜನ, ಪುರುಷ-ಸ್ತ್ರೀ ಹೀಗೆ ಬಹುದೊಡ್ಡ ಸಾಮಾಜಿಕ ಅಸಮಾನತೆಯನ್ನು ಸೃಷ್ಟಿ ಮಾಡಿತ್ತು.
ಹಾಗೂ ಮತ್ತೊಂದು ಕಡೆ ರೈತರ ತೆರಿಗೆಯಿಂದ ಬಂದ ಹಣವನ್ನು ರಾಜರುಗಳು ದೇವಾಲಯಗಳು ಹಾಗೂ ಅಗ್ರಹಾರಕ್ಕೆ ಅಪಾರ ಪ್ರಮಾಣದಲ್ಲಿ ದಾನ ದತ್ತಿಗಳನ್ನು ನೀಡುತ್ತಾ ಬಂದಿದ್ದರಿಂದ ಒಂದು ವರ್ಗ ಇದನ್ನು ತನ್ನ ಪಾರಂಪರಿಕ ಹಕ್ಕು ಎಂದು ಭಾವಿಸಿ ಬೆವರಿಳಿಸಿ ದುಡಿದು ತಿನ್ನದೇ ದೇವರು ಧರ್ಮದ ಹೆಸರಿನಲ್ಲಿ ಶ್ರಮಿಕರನ್ನು ತಮ್ಮ ಬಂಡವಾಳನ್ನಾಗಿ ಮಾಡಿಕೊಂಡು ಸಮಾಜದಲ್ಲಿ ಮೌಡ್ಯತೆ, ಸಾಮಾಜಿಕ, ಆರ್ಥಿಕ, ಅಸಮಾನತೆಗೆ ಕಾರಣರಾಗಿದ್ದರು.
ಈ ಕಾರಣಕ್ಕಾಗಿ ಬಸವಾದಿ ಶರಣರು 12ನೇ ಶತಮಾನದಲ್ಲಿ ಶ್ರಮ ಮತ್ತು ಸಮಸಂಸ್ಕೃತಿ ಪ್ರತಿಪಾದನೆ ಮಾಡೋದಕ್ಕಾಗಿ, ಬಸವಣ್ಣನವರ ನಾಯಕತ್ವದಲ್ಲಿ ದುಡಿಯುವ ವರ್ಗದ ಜನರನ್ನ ಒಂದುಗೂಡಿಸಿಕೊಂಡು, ಬೌದ್ಧಿಕ ಜ್ಞಾನ ಕೇಂದ್ರವಾದ ಅನುಭವ ಮಂಟಪದಲ್ಲಿ ಲಿಂಗ ತಾರತಮ್ಯ, ಜಾತಿ ತಾರತಮ್ಯ ಇಲ್ಲದೆ ಸಮಾನ ಅವಕಾಶಗಳನ್ನು ಕಲ್ಪಿಸಿ, ಎಲ್ಲ ಶರಣರಿಗೆ ಶಿಕ್ಷಣ ನೀಡುವುದರ ಮೂಲಕ ವಚನ ಸಾಹಿತ್ಯ ಸೃಷ್ಟಿಗೆ ಕಾರಣವಾಯಿತು. ಈ ವಚನ ಸಾಹಿತ್ಯ ಸರ್ವಕಾಲಕ್ಕೂ ಶ್ರೇಷ್ಠವಾದವುಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕ.ವಿ.ನಿ. ಕಾರ್ಯನಿರ್ವಾಹಕ ಅಭಿಯಂತರರಾದ ಮಹೇಶ ಮಠಪತಿ ಅವರು ಮಾತನಾಡುತ್ತ, ಬಸವಣ್ಣನವರು ಕಾಲವಾಗಿ 900 ವರ್ಷಗಳವಾದರೂ ಅವರ ವಿಚಾರಧಾರೆಗಳು ಅಂದು ಇಂದು ಮುಂದೆಂದಿಗೂ ಪ್ರಸ್ತುತವಾದವುಗಳಾಗಿವೆ, ಇಂದು ಇವುಗಳು ಜಾಗತಿಕ ಮನ್ನಣೆಯನ್ನು ಪಡೆಯುತ್ತಿವೆ, ಇದು ತುಂಬಾ ಸಂತೋಷದ ವಿಷಯ. ಇದು ನಮ್ಮ ಕನ್ನಡ ಕನ್ನಡಿಗರ ಕರ್ನಾಟಕದ ಅಸ್ಮಿತೆಯಾಗಿದೆ.
ಸಮಾಜದಲ್ಲಿ ಉತ್ತಮ ನಾಗರಿಕನಾಗಬೇಕಾದರೆ ವಚನ ಸಾಹಿತ್ಯದಲ್ಲಿರುವ ಅಂಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಿದ್ದೆ ಆದರೆ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ, ಬಸವಣ್ಣನವರು ಸಮಾನತೆಗಾಗಿ ಇಷ್ಟಲಿಂಗ ಪ್ರತಿಪಾದಿಸಿ ಕಡ್ಡಾಯ ಕಾಯಕ ದಾಸೋಹ ಪರಂಪರೆಯನ್ನು ಪರಿಚಯಿಸಿದರು ಇಂದು ಇವೆಲ್ಲವುಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ, ನಂದಿನಿ ಪ್ರಸನ್ನ, ಪೂರ್ಣಿಮಾ, ಬಸವರಾಜು, ಸಾಹಿತಿಗಳಾದ ವಿರುಪಾಕ್ಷಗೌಡರು, ಹೊಸಪೇಟೆಯ ಅಕ್ಕಿ ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ದರ್ಶನ್ ಎಂ.ಎಲ್. ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M
