ಕಲ್ಯಾಣ ಮಹಾಮನೆ ಮಹಾಮಠದಲ್ಲಿ ಬಸವ, ಅಕ್ಕ, ಭೀಮರ ಜಯಂತ್ಯೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ವಿಶ್ವಗುರು ಬಸವಣ್ಣನವರು ಪರಿಪೂರ್ಣ ಮಾನವರು

ಬಸವಕಲ್ಯಾಣ :

ಪರಮಾತ್ಮನ ಉದ್ಧೇಶವನ್ನು ಈಡೇರಿಸಲು ಬಂದ ಕಾರಣಿಕ ಪುರುಷ ಬಸವಣ್ಣನವರು. ಅರಿವನ್ನು ಗುರುವನ್ನಾಗಿಸಿಕೊಂಡು ಈ ಇಳೆಯಲ್ಲಿ ಸತ್ಯ, ನ್ಯಾಯ, ಧರ್ಮದಿಂದ ನಡೆ ನುಡಿ ಒಂದಾಗಿಸಿಕೊಂಡು ಅರವತ್ಮೂರು ವರ್ಷಗಳ ಕಾಲ ಬದುಕಿ ಪರಿಪೂರ್ಣ ಚೇತನರಾಗಿ ಕಂಗೊಳಿಸಿದ್ದಾರೆ ಎಂದು ಬೀದರ ರಾಷ್ಟ್ರೀಯ ಬಸವದಳದ ಸಿದ್ಧವೀರ ಸಂಗಮದ ಅವರು ನುಡಿದರು.

ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆ ಮಹಾಮಠದಲ್ಲಿ 893ನೇ ಜಯಂತೋತ್ಸವ ಅಂಗವಾಗಿ ಹಮ್ಮಿಕೊಂಡ ಬಸವಣ್ಣ, ಅಕ್ಕಮಹಾದೇವಿ ಮತ್ತು ಅಂಬೇಡ್ಕರ್ ಜಯಂತಿಯಲ್ಲಿ ಅನುಭಾವ ಹಂಚಿಕೊಂಡರು.

ಕನ್ನಡ ನಾಡಿನಲ್ಲಿ ಜನಿಸಿದ ಬಸವಣ್ಣನವರು ವಿಶ್ವದ ಕಲ್ಯಾಣಕ್ಕಾಗಿ ದುಡಿದಿದ್ದಾರೆ. ‘ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಯ್ಯ’ ಎಂಬ ಜನಪದ ನುಡಿಯಂತೆ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಎಲ್ಲಾ ರಂಗದಲ್ಲಿ ನೈತಿಕತೆಯ ಸಂದೇಶವನ್ನು ಸಾರಿದ್ದಾರೆ.

ಮೂಢನಂಬಿಕೆಯನ್ನು ನಿರ್ಮೂಲನೆ ಮಾಡುವಲ್ಲಿ ಕ್ರಾಂತಿಕಾರಿ ಎನಿಸಿದರೆ, ಆಧ್ಯಾತ್ಮಿಕವಾಗಿ ಅಷ್ಟೇ ಶಾಂತಿಧೂತರು. ನೂತನ ಧರ್ಮವನ್ನು ಕೊಡುವಲ್ಲಿ ಶ್ರೇಷ್ಟ ಧಾರ್ಮಿಕರೆನಿಸಿದರೆ, ಸಾಮಾಜದಲ್ಲಿ ಅಮೂಲಾಗ್ರವಾಗಿ ಸಮಾನತೆಯನ್ನು ತಂದ ಸಮಾನತೆ ಹರಿಕಾರ ಎನಿಸಿದ್ದಾರೆ. ಶ್ರೇಷ್ಟ ವೈಚಾರಿಕರು ಅಷ್ಟೇ ವಿನಯಶೀಲರು ಆಗಿದ್ದಾರೆ. ಶ್ರೇಷ್ಟ ತಂತ್ರಜ್ಞಾನಿಯೂ ಅಷ್ಟೇ ಭಕ್ತಿ ಭಂಡಾರಿಯು ಆಗಿರುವರು. ಇಂತಹ ಬಹುಮುಖ ವ್ಯಕ್ತಿತ್ವದಿಂದ ಶೋಭಿಸಿದವರು ಬಸವಣ್ಣನವರು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಪ್ರಿಯಾಂಕ ಪರಸಂಗ ಅವರು ‘ವಿಶ್ವದ ಕವಿಕೋಗಿಲೆ ಅಕ್ಕ’ ಕುರಿತು ಅನುಭಾವ ಮಂಡಿಸುತ್ತಾ, ಅಕ್ಕಮಹಾದೇವಿಯವರು ಸವೆಸಿದ ದಾರಿ ಮುಳ್ಳು ಕಲ್ಲಿನದು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನು ಶತಶತಮಾನಗಳ ಕಾಲ ಶೋಷಿಸಿದ ಈ ಸಮಾಜಕ್ಕೆ ತನ್ನ ವೀರ ವಿರಕ್ತಿಯಿಂದ ಆಧ್ಯಾತ್ಮಿಕತೆಯನ್ನು ಸಾಧಿಸಿ ಉತ್ತರ ನೀಡಿದ್ದಾಳೆ. ಹೆಣ್ಣಿಗೆ ಅವಕಾಶ ಸಿಕ್ಕರೆ ಏನೆಲ್ಲ ಸಾಧಿಸಬಹುದೆಂಬುದಕ್ಕೆ ಅಕ್ಕಮಹಾದೇವಿಯವರು ಉದಾಹರಣೆಯಾಗಿ ನಿಂತಿದ್ದಾರೆ.

ಅಕ್ಕಮಹಾದೇವಿ ಆಧ್ಯಾತ್ಮಿಕತೆಯಲ್ಲಿ ಕಂಡುಕೊಂಡ ಸತ್ಯವನ್ನು ಶ್ರೇಷ್ಠ ಕವಿಯಾಗಿ ವಚನಗಳಲ್ಲಿ ತನ್ನ ಅನುಭಾವವನ್ನು ಕಟ್ಟಿಕೊಟ್ಟಿದ್ದಾರೆ. ತಮ್ಮ ವಚನಗಳಲ್ಲಿ ನಿಸರ್ಗ, ಸತ್ಸಂಗ, ತಂತ್ರಜ್ಞಾನ, ಅಹಿಂಸೆ, ಮಾನವೀಯತೆ, ಆಧ್ಯಾತ್ಮಿಕತೆ ಕುರಿತು ಚಿಂತನೆ ಮಾಡಿ ವಿಶ್ವದ ಕವಿಕೋಗಿಲೆ ಎನಿಸಿದ್ದಾಳೆ ಎಂದು ಮಾರ್ಮಿಕವಾಗಿ ಮಾತನಾಡಿದರು.

ಉದ್ಘಾಟನೆ ಮಾಡಿ ಮಾತನಾಡಿದ ನಿವೃತ್ತ ನ್ಯಾಯಾಧೀಶರಾದ ಎಸ್. ಎಸ್. ನಾಗರಾಳೆ ಅವರು, ಇಂದಿನ ಪ್ರಸ್ತುತ ಸಮಾಜದಲ್ಲಿ ಮಾತನಾಡುವುದೇ ಬಂಡವಾಳವಾಗಿದೆ. ಶರಣರು ನುಡಿದಂತೆ ನಡೆದು ನುಡಿ ಮತ್ತು ನಡೆಯನ್ನು ಒಂದಾಗಿಸಿಕೊಂಡರು. ಅವರಂತೆ ನಾವು ಅರಿವು ಮತ್ತು ಆಚಾರದಲ್ಲಿ ಒಂದಾದಾಗ ಶರಣರ ಜಯಂತಿ ಮಾಡಿದ್ದಕ್ಕೆ ಸಾರ್ಥಕವಾಗುವುದು. ಬಸವಣ್ಣನವರು, ಅಕ್ಕಮಹಾದೇವಿ, ಅಂಬೇಡ್ಕರರು ನೀಡಿದ ಸಂದೇಶಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತವೆ ಎಂದರಲ್ಲದೆ ಅವರ ಸಂದೇಶಕ್ಕನುಗುಣವಾಗಿ ಪೂಜ್ಯರು ನೂರಾರು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಬೇಕಾದ ಸಾಮಗ್ರಿಗಳನ್ನು ವಿತರಿಸಿ ಅರ್ಥಪೂರ್ಣವಾದ ಬಸವ ಜಯಂತಿಯನ್ನು ಆಚರಿಸಿದ್ದಾರೆ ಅವರ ಕಾರ್ಯ ಶ್ಲಾಘನೀಯ ಎಂದರು.

ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಆಶಿರ್ವಚನ ಮಾಡಿದರು. ಕಲ್ಯಾಣರಾವ ರಾಮಬಾಣ, ಚಂದ್ರಪ್ಪ ಗುಂಗೆ ಮಾತನಾಡಿದರು. ಜಗನ್ನಾಥ ಪತಂಗೆ ಷಟಸ್ಥಲ ಧ್ವಜಾರೋಹಣ ಮಾಡಿದರು.

ಸಂಜೀವ ಗಾಯಕವಾಡ, ಭೋಜಪ್ಪ, ಯಶವಂತ, ಮಹಾದೇವ ಮೇತ್ರೆ, ಗಿರಿಜಾ ಸಿದ್ದಣ್ಣ, ಶ್ರೀದೇವಿ ಉಜಳಂಬೆ, ಸುಮಿತ್ರಾದೇವಿ, ರೇಣುಕಾ ಮಾಮನೆ, ಸುರೇಖಾ, ಮಹಾದೇವಿ ಬಾಪೂರು, ಮಲ್ಲಮ್ಮ, ಸಿದ್ಧಮ್ಮ ಉಪಸ್ಥಿತರಿದ್ದರು.

ಆಳಂದ ತಾಲೂಕಿನ ಕಣಮಸ್ ಗ್ರಾಮದ ಧರ್ಮಣ್ಣ ಪೂಜಾರಿ ಅವರಿಗೆ ಸಮತಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಏಕಕಾಲದಲ್ಲಿ ನೂರಾರು ವಿದ್ಯಾರ್ಥಿಗಳು ವಚನ ಪಠಣ ಮಾಡಿ ಗಮನ ಸೆಳೆದರು. 10ನೇ ತರಗತಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಸತ್ಕರಿಸಲಾಯಿತು. ಕಲಬುರಗಿಯ ವಿಜಯಲಕ್ಷ್ಮಿ ಕೆಂಗನಾಳ ವಚನ ಸಂಗೀತ ನಡೆಸಿಕೊಟ್ಟರು. ದಾನಮ್ಮ ಬಳಗದಿಂದ ತೊಟ್ಟಿಲು ಕಾರ್ಯಕ್ರಮ ನೆರವೇರಿತು. ನಾಗೇಶ ಅವರು ಸ್ವಾಗತಿಸಿದರೆ, ಸಂಗಮೇಶ ಅವರು ನಿರೂಪಿಸಿದರು, ಪಂಡಿತ ಬಾಳೂರೆ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
1 Comment

Leave a Reply

Your email address will not be published. Required fields are marked *