ಶಹಾಪುರದಲ್ಲಿ ‘ಬಸವಾದಿ ಶರಣರ ಜಾಗೃತಿ ಸಮಾವೇಶ’ದ ಪೂರ್ವಭಾವಿ ಸಭೆ

ಬಸವ ಮೀಡಿಯಾ
ಬಸವ ಮೀಡಿಯಾ

ಯುವಜನತೆಗೆ ಬಸವತತ್ವ ಮುಟ್ಟಿಸಲು ಕರೆ

ಶಹಾಪುರ :

ಬಸವಾದಿ ಶರಣರ ವಚನಗಳನ್ನು ತಮ್ಮ ರಾಜಕೀಯ ಮತ್ತು ವೈಯಕ್ತಿಕ ಉದ್ಧೇಶಗಳಿಗೆ ಬಳಸಿಕೊಳ್ಳುವ ಕೆಲವು ಸ್ಥಾಪಿತ ಶಕ್ತಿಗಳ ವಿರುದ್ಧ ಜನರಲ್ಲಿ ಜಾಗೃತಿ ಉಂಟುಮಾಡಬೇಕಾಗಿದೆ ಎಂದು ಶರಣತತ್ವ ಚಿಂತಕಿ, ಸೌಹಾರ್ದ ಕರ್ನಾಟಕ ಸಂಘಟನೆಯ ಮುಖ್ಯಸ್ಥೆ ಮೀನಾಕ್ಷಿ ಬಾಳಿ ಅವರು ಅಭಿಪ್ರಾಯಪಟ್ಟರು.

ನಗರದ ಸಿಪಿಎಸ್‌ ಶಾಲಾ ಮೈದಾನದಲ್ಲಿ ಮೇ 15ರಂದು ಆಯೋಜಿಸಿರುವ ‘ಬಸವಾದಿ ಶರಣರ ಜಾಗೃತಿ ಸಮಾವೇಶ’ವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಚೆಗೆ ನಗರದ ಅತಿಥಿಗೃಹದಲ್ಲಿ ಅಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮ ಹಾಗೂ ದ್ವೇಷದ ರಾಜಕಾರಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಸವಣ್ಣನವರ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಸಂದೇಶವನ್ನು ಜನರಿಗೆ ತಲುಪಿಸುವ ಅಗತ್ಯತೆ ಹೆಚ್ಚಾಗಿದೆ ಎಂದು ತಿಳಿಸಿದರು.

ಬೀದರ, ಕಲಬುರಗಿ, ರಾಯಚೂರು, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಿಂದ ಅನೇಕ ಬಸವಪರ ಸ್ವಾಮೀಜಿಗಳು, ಸಂಘಟನೆಗಳ ಪ್ರಮುಖರು ಮತ್ತು ಚಿಂತಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಧರ್ಮದ ಹೆಸರಿನಲ್ಲಿ ಸಾಮಾನ್ಯ ಜನರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಸಮಾಜದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬಾಳಿ ಹೇಳಿದರು.

ಸಭೆಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ, ಬಸವಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಹಾಗೂ ಸಮಾಜಮುಖಿ ಚಿಂತಕರು ಭಾಗವಹಿಸಿ, ಸಮಾವೇಶದ ಉದ್ದೇಶ ಹಾಗೂ ಅಗತ್ಯತೆ ಕುರಿತು ಮಾತನಾಡಿ, ಸಮಾವೇಶ ಯಶಸ್ವಿಗೊಳಿಸುವುದಾಗಿ ಹೇಳಿದರು.

ಚಿಂತಕಿ, ಹೋರಾಟಗಾರ್ತಿ ಕೆ. ನೀಲಾ ಮಾತನಾಡಿ, ಬಸವಾದಿ ಶರಣರ ಚಿಂತನೆಗಳು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾದವುಗಳಲ್ಲ. ಅವರ ತತ್ವಗಳು ಸಮಸ್ತ ಮಾನವಕುಲಕ್ಕೆ ಬೆಳಕಿನ ದಾರಿ ತೋರಿಸುವಂತಿವೆ. ಜಾತಿ ವ್ಯವಸ್ಥೆ ವಿರುದ್ಧ ಬಸವಣ್ಣನವರು ನಡೆಸಿದ ಹೋರಾಟ ಇಂದಿಗೂ ಪ್ರಸ್ತುತವಾಗಿದ್ದು, ಯುವಜನತೆ ಬಸವಾದಿ ಶರಣರ ಚಿಂತನೆಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದರು.

ಕೆಲವು ಸಂಘಟನೆಗಳು ರೈತರ ಹೆಸರಿನಲ್ಲಿ ತಮ್ಮ ಧಾರ್ಮಿಕ ಮತ್ತು ರಾಜಕೀಯ ಉದ್ದೇಶಗಳನ್ನು ಸಾಧಿಸುವ ಸಲುವಾಗಿ ಸಮಾಜದಲ್ಲಿ ವಿಭಜನೆ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಇಂತಹ ಬೆಳವಣಿಗೆಗಳ ವಿರುದ್ದ ಜನತೆ ಎಚ್ಚರಗೊಳ್ಳಬೇಕಾಗಿದೆ. ಸಮಾಜದಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗದಂತೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ನೀಲಾ ಕರೆ ನೀಡಿದರು.

ಸಭೆಯಲ್ಲಿ ಸೌಹಾರ್ದ ಕರ್ನಾಟಕದ ಮುಖಂಡರಾದ ಚನ್ನಪ್ಪ ಆನೇಗುಂದಿ, ರೈತ ಸಂಘದ ಮಲ್ಲಿಕಾರ್ಜುನ ಸತ್ಯಂಪೇಟೆ, ಶಿವಣ್ಣ ಇಜೇರಿ, ಗಿರಿಯಪ್ಪಗೌಡ ಬಾಣತಿಹಾಳ, ಅಯ್ಯಣ್ಣ ಕನ್ಯಾಕೊಳ್ಳೂರ, ಚೆನ್ನಬಸು ವನದುರ್ಗ, ಡಾ. ರವೀಂದ್ರ ಹೊಸಮನಿ, ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ, ಶ್ರೀಶೈಲ ಹೊಸಮನಿ, ಸಯ್ಯದ್ ಸೈಯುದ್ದೀನಸಾಬ, ಶೇಖರ ದೊರೆ, ಗೌತಮ ಸದಲಾಪುರ, ಮಹಾದೇವ ದಿಗ್ಗಿ, ರಾಯಪ್ಪ ಸಾಲಿಮನಿ, ಹೊನ್ನಪ್ಪ ಗಂಗನಾಳ, ರಾಮು ಸಗರ, ರಮೇಶ ಗುರಿಕಾರ, ಅಮರೇಶ ಇಟಗಿ, ಬಸವರಾಜ ವನದುರ್ಗ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *