ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ವ್ಯಾಪಕ ಖಂಡನೆ
ಕಲಬುರಗಿ :
ಶಹಾಪುರದಲ್ಲಿ ಮೇ 15 ನಡೆಯಲಿರುವ ‘ಬಸವಾದಿ ಶರಣರ ಜಾಗೃತಿ ಸಮಾವೇಶ’ಕ್ಕೆ ಎಲ್ಲಾ ಪ್ರಗತಿಪರ ಸಂಘಟನೆಗಳ ಬೆಂಬಲ ದೊರೆತಿದೆ.
ನಗರದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ, ಸೌಹಾರ್ದ ಕರ್ನಾಟಕ, ಬಸವಪರ ಸಂಘಟನೆಗಳ ಒಕ್ಕೂಟ, ದಲಿತಪರ ಸಂಘಟನೆಗಳು, ಕಾಯಕ ಜೀವಿಗಳ ಒಕ್ಕೂಟ, ರೈತ, ಮಹಿಳಾ, ವಿದ್ಯಾರ್ಥಿ, ಯುವಜನ, ಕಾರ್ಮಿಕ ಸಂಘಟನೆಗಳ ಪರವಾಗಿ ಸುದ್ದಿಗೋಷ್ಠಿ ನಡೆಯಿತು.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಮೇ 19ರಂದು ‘ಬಸವಾದಿ ಶರಣರ ಹಿಂದೂ ಸಮಾವೇಶ’ ಎಂಬ ಕೋಮುವಾದಿ ಸಮಾವೇಶ ನಡೆಸುತ್ತಿರುವುದು ಖಂಡನೀಯವಾಗಿದೆ ಎಂದು ಡಾ. ಮೀನಾಕ್ಷಿ ಬಾಳಿ, ಪ್ರೊ. ಆರ್.ಕೆ. ಹುಡಗಿ, ಆರ್.ಜಿ. ಶೆಟಗಾರ ಮಾಧ್ಯಮಗಳಿಗೆ ತಿಳಿಸಿದರು.
ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಸರ್ಕಾರವೇ ಇಂತಹ ಕೋಮು ಸಂಘರ್ಷ ಉಂಟುಮಾಡುವ ಸಮಾವೇಶವನ್ನು ತಡೆಯುವ ಕೆಲಸ ಮಾಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಮೊದಲು ಹಿಂದೂ ವಿರಾಟ ಸಮಾವೇಶ ಅಥವಾ ಸನಾತನ ಸಮಾವೇಶ ಮಾಡುತ್ತಿದ್ದ ಆರೆಸ್ಸೆಸ್ ನವರು ಈ ನಾಡಿನ ಬಹುತ್ವ ಮತ್ತು ಸಂಸ್ಕೃತಿ ನಾಶ ಮಾಡಲಿಕ್ಕಾಗಿ ಇದೀಗ ಬಸವಣ್ಣನ ಹೆಸರಿನಲ್ಲಿ ಸಮಾವೇಶ ಮಾಡುವ ನವೀನ ಮಾರ್ಗ ಕಂಡುಕೊಂಡಿದ್ದಾರೆ ಎಂದು ಆರೋಪಿಸಿದರು.
ಸಮಾಜದಲ್ಲಿ ಕಾಯಕ ಮತ್ತು ದಾಸೋಹ ತತ್ವ ನೆಲೆಗೊಳಿಸುವ ಮೂಲಕ ಸರ್ವರಿಗೆ ಸಮಬಾಳು, ಸಮಪಾಲು ಬಯಸಿದ್ದ ಬಸವಾದಿ ಶರಣರ ಬದುಕು ಹಾಗೂ ಬೋಧನೆಗಳ ಮೇಲೆ ನಿರಂತರ ದಾಳಿ ಮಾಡುವ ವ್ಯವಸ್ಥಿತ ಷಢ್ಯಂತ್ರ ಕಳೆದ 900 ವರ್ಷಗಳಿಂದಲೂ ನಡೆಯುತ್ತಿದೆ. ಆದರೆ ಶರಣರ ವಿಚಾರಧಾರೆ ಹಿಂದೆ, ಮುಂದೆ ಮತ್ತು ಎಂದೆಂದಿಗೂ ಪ್ರಸ್ತುತವಾಗಿವೆ ಎಂದರು.
ಸೌಹಾರ್ದತೆಯ ಬೀಡಾಗಿರುವ ಸಗರನಾಡಿನ ಶಹಾಪುರದಲ್ಲಿ ಕೋಮುವಾದ ಬಿತ್ತುವ ಹುನ್ನಾರವನ್ನು ಖಂಡಿಸಿ ಮೇ. 15ರಂದು ‘ಬಸವಾದಿ ಶರಣರ ಜಾಗೃತಿ ಸಮಾವೇಶ’ ಹಮ್ಮಿಕೊಳ್ಳಲಾಗುತ್ತಿದೆ.

ಈ ಸಮಾವೇಶದಲ್ಲಿ ಯಾದಗಿರಿ, ಕಲಬುರಗಿ, ವಿಜಯಪುರ, ರಾಯಚೂರು, ಬೀದರ ಜಿಲ್ಲೆಗಳಿಂದ ಸುಮಾರು ಐದಾರು ಸಾವಿರ ಜನ ಸೇರಿ ವಚನ ಗಾಯನದೊಂದಿಗೆ ಮೆರವಣಿಗೆ ಹೊರಟು, ಸಂಜೆ 5 ಗಂಟೆಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಮಾವೇಶ ನಡೆಸಲಾಗುವುದು.
ಈ ಸಮಾವೇಶದಲ್ಲಿ ನಾಡಿನ ಅನೇಕ ಬಸವಪರ ಸ್ವಾಮೀಜಿಗಳು, ಚಿಂತಕರು, ವಿಚಾರವಾದಿಗಳು ಭಾಗವಹಿಸಿ ಮಾತನಾಡಲಿದ್ದಾರೆ ಎಂದು ವಿವರಿಸಿದರು.
ಅಶೋಕ ಘೂಳಿ, ರಾಜಶೇಖರ ಯಂಕಂಚಿ, ರವೀಂದ್ರ ಶಾಬಾದಿ, ಶಿವಶರಣಪ್ಪ ದೇಗಾಂವ, ಶಾಂತಪ್ಪ ಪಾಟೀಲ, ಹಣಮಂತರಾಯ ಪಾಟೀಲ, ಲವಿತ್ರ ವಸ್ತ್ರದ, ಚಂದಮ್ಮ ಗೋಳಾ, ಸುಧಾಮ ಧನ್ನಿ, ಭೀಮಣ್ಣ ಬೋನಾಳ, ಬಸವರಾಜ ಕೋಣಿನ, ಚಂದಮ್ಮ ಗೋಳಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಒಳ್ಳೆ ನಡೆ ನಿಮ್ಮ ಹಿಂದೆ ನಮ್ಮ ಬಸವ ಪಡೆ ಸಾಗಿ ಬಸವ ಧರ್ಮ ಸಾಗಲಿ 👏🏻👏🏻ಶರಣು 👏🏻👏🏻