ಬಸವ ಕಲ್ಯಾಣ
ಐತಿಹಾಸಿಕ ಮತ್ತು ವೈಭವದ ಬಸವ ಕಲ್ಯಾಣದ ದಕ್ಷಿಣ ದಿಕ್ಕಿಗೆ ಸಾಗಿದರೆ “ಬಂದವರ ಓಣಿ” ಸಿಗುತ್ತದೆ. ಮುಂದೆ ಪುರಾತನ ತ್ರಿಪುರಾಂತಕ ಕೆರೆಯ ಪ್ರದೇಶವು ನಮ್ಮನ್ನು ಸೆಳೆದೊಯ್ಯುತ್ತದೆ.
ಅದರ ಮಾರ್ಗವಾಗಿ ಸಂಚರಿಸಿದರೆ ಶಿವಪುರ ಮತ್ತು ನಾರಾಯಣಪುರ ಎಂಬರೆಡು ಪ್ರಕೃತಿಯಿಂದ ರಮಣೀಯವಾದ ಸ್ಥಳಗಳು ಗೋಚರಿಸುತ್ತವೆ. ಅವು ದೊರೆ ಬಿಜ್ಜಳನ ಕಾಲದಲ್ಲಿ ಅತ್ಯಂತ ಪ್ರಶಾಂತವಾದ, ಸುಂದರ ನಿಸರ್ಗದತ್ತ ಪ್ರದೇಶಗಳೆಂದು ಹೇಳಲಾಗುತ್ತಿತ್ತು.
ರಾಜ ದರ್ಭಾರದ ಗೌಜು ಗದ್ದಲದಿಂದ ದೂರವಿದ್ದ ಈ ತಾಣಗಳು ಕ್ರಮೇಣ ಬಸವಾದಿ ಶರಣರ ತಪೋ ಭೂಮಿಗಳಾದವು ಎಂದು ಹೇಳಲಾಗುತ್ತದೆ.
ಆ ಶಿವಪುರದಲ್ಲಿ ಮುಗ್ಧ ಸಂಗಯ್ಯನೆಂಬ ಶರಣನೋರ್ವ ಇದ್ದನು. ಅದುವೆ ಅವನ ಜನ್ಮಸ್ಥಳವಾಗಿದ್ದಕ್ಕೆ, ಅಲ್ಲಿಯೇ ಅವರ ಗದ್ದುಗೆ ನಿರ್ಮಿಸಲಾಗಿತ್ತು. ಈಗದು ಶಿಥಿಲಗೊಂಡಿದ್ದು ಗುರುತಿಸಲು ಅಸಾದ್ಯವಾಗಿದೆ.
ಮುಗ್ಧ ಸಂಗಯ್ಯನವರು ಶಿವಪುರದ ಗವಿಯ ಒಳಗಿನ ಜಲಮಾರ್ಗದ ಮೂಲಕ ಸಂಚರಿಸಿ, ಮಠದ ಮುಂದಿನ ಕಲ್ಲಿನ ಭಾವಿಯಲ್ಲಿ ಪವಿತ್ರ ಜಲವನ್ನು ತುಂಬಿಕೊಂಡು ನಿತ್ಯ ಇಷ್ಟಲಿಂಗ ಪೂಜೆಗಾಗಿ ಒಯ್ಯುತ್ತಿದ್ದರೆಂದು ಜಾನಪದರ ಕಥೆಗಳಿವೆ. ಕಾಲ ಕಳೆದಂತೆ ಆ ಭಾವಿಯು ಸಹ ಮಚ್ಚಿ ಹೊಗಿದೆ.
ಒಮ್ಮೆ ಮುಗ್ಧ ಸಂಗಯ್ಯನವರ ಮನೆ ಮುಂದೆ ಹಸುವಿನ ಸಾವಿನ ಪ್ರಕರಣ ಸಂಭವಿಸಿತ್ತು. ಹಂತಕನೋರ್ವ ತನ್ನ ಹೊಲದಲ್ಲಿ ಅನಾಮಧೆಯ ಹಸುವೊಂದು ಬೆಳೆ ನಾಶ ಮಾಡಿದೆ ಎಂದು ಕೋಪಗೊಂಡು ಆ ಮುಗ್ಧ ಹಸುವನ್ನು ಕೊಂದು ಸಂಗಯ್ಯನವರ ಮನೆ ಮುಂದೆ ಹಾಕಿದ್ದನು.
ಸಂಗಯ್ಯನವರೇ ಹತ್ಯೆ ಮಾಡಿದ್ದಾರೆಂದು ಅಪವಾದ ಕಲ್ಪಿಸಿದ್ದನು. ಆಗ ಸಂಗಯ್ಯನವರು ವಿಚಲಿತರಾಗಲಿಲ್ಲ. ಎದೆಗುಂದದೆ ಶಾಂತ ಚಿತ್ತರಾಗಿ ಅಪವಾದ ಸ್ವೀಕರಿಸಿದ್ದರು. ಸ್ವಲ್ಪು ಹೊತ್ತಿನ ಬಳಿಕ ಬೆತ್ತದಿಂದ ಸತ್ತ ಆಕಳಿಗೆ ಸ್ಪರ್ಶಿಸಿ ಬದುಕಿಸಿ, ಮರು ಜನ್ಮ ನೀಡಿದ್ದರು.
“ಕೊಂದವರ ಮನೆ ಮುಂದೆ ಹೋಗು, ನಿನಗೆ ಹುಲ್ಲು ನೀಡುತ್ತೇನೆ” ಎಂದರು. ಆಗ ಎದ್ದು ಸಾಗಿದ ಆಕಳು, ಕೊಂದವರ ಮನೆ ಮುಂದೆ ನಿಂತಿತು. ಆಗ ಊರಿನ ಜನರ ನಿಂದೆಯಿಂದ ಮುಕ್ತರಾದ ಸಂಗಯ್ಯನವರು ಎಲ್ಲರಿಗೂ ಮುಗ್ಧರೆನಿಸಿದರು. ಹೀಗಾಗಿ ಚರಿತ್ರೆಯಲ್ಲಿ ಅವರಿಗೆ ಮುಗ್ಧ ಸಂಗಯ್ಯ ಎಂದು ಕರೆಯಲಾಯ್ತು.
ಆ ಅಪವಾದದ ಘಟನೆಯಿಂದ ಸಂಗಯ್ಯನವರು ಮನನೊಂದು ಶಿವಪುರ ತೊರೆದು ನಾರಾಯಣಪುರದಲ್ಲಿ ನೆಲೆಸಿದರು. ಕೆಲವು ದಿನಗಳಾದ ಬಳಿಕ ಅಲ್ಲಿಯೇ ಸಮಾದಿಯಾದರೆಂದು ಹೇಳಲಾಗುತ್ತದೆ.
ಸದಾ ಸಂಚಾರಿಯಾಗಿದ್ದ ಮುಗ್ಧ ಸಂಗಯ್ಯನವರು ಅನೇಕ ಶರಣರೊಂದಿಗೆ ಅನುಭವ ಮಂಟಪದ ಸದಸ್ಯರಾಗಿದ್ದರೆಂದು ತಿಳಿದು ಬರುತ್ತದೆ. ಆದರೆ ಅವರ ಯಾವುದೇ ವಚನಗಳು ಇಲ್ಲಿಯವರೆಗೆ ಲಭ್ಯವಾಗಿಲ್ಲ.
ಅವರು ಸಮಾದಿಸ್ಥರಾದ ನಾರಾಯಣಪುರದಲ್ಲಿ ಪ್ರಾಚೀನ ಶಿವದೇವಾಲಯ ಇತ್ತು. ಅಲ್ಲಿಯೇ ಮುಗ್ಧ ಸಂಗಯ್ಯನವರ ಹೆಸರಿನಲ್ಲಿ ಮಠವೊಂದು ಸ್ಥಾಪಿಸಲಾಗಿತ್ತು.
ಅವರಿಗೆ ಶರಣ ಚೌಡಯ್ಯನೆಂಬ ನಂಬಿಕಸ್ಥ ಭಕ್ತನೋರ್ವನಿದ್ದ. ಅವನು ಮುಗ್ಧ ಸಂಗಯ್ಯನವರ ಗದ್ದುಗೆ ಮತ್ತು ಮಠ ಸ್ಥಾಪನೆಗೆ ಕಾರಣನಾಗಿದ್ದನೆಂದು ಹೇಳಲಾಗುತ್ತದೆ. ತನ್ನ ಗುರುವಿನ ಉಪದೇಶದಂತೆ ನಿತ್ಯ ಇಷ್ಟಲಿಂಗದ ಪೂಜೆಯ ಬಳಿಕ, ಪರಶಿವನ ಸಾಕ್ಷಾತ್ಕಾರ ಆಗುವವರಗೆ ಅನ್ನ, ನೀರು ಸೇವಿಸುತ್ತಿದ್ದಲ್ಲವಂತೆ.
ನಂತರ ಚೌಡಯ್ಯನ ಹೆಸರಿನಲ್ಲೂ ಬೃಹತ್ತಾದ ಶಿಲಾ ಭಾವಿ, ಹಾಗೂ ಗವಿ ಇತ್ತಂತೆ. ಈಗ ಅದೂ ಸಹ ಮುಚ್ಚಿ ಹೋಗಿದೆ. ಅಲ್ಲಿನ ಕಲ್ಲು ಮತ್ತು ಪುರಾತನ ಶಿಲೆಗಳನ್ನು ಸ್ಥಳೀಯರು ಕಳ್ಳತನದಿಂದ ತಮ್ಮ ಮನೆಗೆ ಬಳಸುತ್ತಿದ್ದಾರೆಂದು ಸ್ಥಳೀಯ ಬಸವ ಭಕ್ತರು ನಿವೇದಿಸುತ್ತಿದ್ದಾರೆ.
