ಹಿಂದೂ ಸಮಾವೇಶಕ್ಕೆ ಯಶಸ್ವಿ ಪ್ರತಿರೋಧ ಒಡ್ಡಿದ ಬಸವಕಲ್ಯಾಣ ಚಲೋ

ಸಂಘಟಿಸಲು ಒಳ್ಳೇ ಅವಕಾಶ ಕಳೆದುಕೊಂಡ ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ

ಬಸವ ಕಲ್ಯಾಣ

ಬಸವಕಲ್ಯಾಣದಲ್ಲಿ ಆಯೋಜಿತವಾಗಿದ್ದ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಪ್ರತಿಯಾಗಿ ಇಂದು ಬೆಳಗ್ಗೆ ಬಸವಾನುಯಾಯಿಗಳು ಯಶಸ್ವಿ ಪ್ರತಿಭಟನೆಯನ್ನು ಕೈಗೊಂಡರು.

ಇದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಬಸವಪರ, ಮಹಿಳಾ, ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು, ಸದಸ್ಯರು ಭಾಗವಹಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಬೀದರ ಘಟಕ ಹಾಗೂ ಲಿಂಗಾಯತ ಮಠಾಧೀಶರ ಒಕ್ಕೂಟ ಪ್ರತಿಭಟನೆಯಿಂದ ಹಿಂದೆ ಸರಿದು ತಟಸ್ಥವಾಗಿದ್ದು ಎದ್ದು ಕಾಣುತ್ತಿತ್ತು.

ಆದಾಗ್ಯೂ ಬೇರೆ ಬೇರೆ ಜಿಲ್ಲೆಗಳಿಂದ ಬಸವಭಕ್ತರು ಸ್ವಯಂಪ್ರೇರಿತವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದೂ ಸಮಾವೇಶದ ವಿರುದ್ಧ ಹೋರಾಟದಲ್ಲಿ ಭಾಗವಹಿಸಿದರು. ಸಾಕಷ್ಟು ಯುವಕರು, ಮಹಿಳೆಯರು ಈ ಹೋರಾಟದಲ್ಲಿ ಭಾಗವಹಿಸಿದ್ದರು.

ಜನವಾದಿ ಮಹಿಳಾ ಸಂಘದ ಪ್ರಮುಖರು, ಶರಣ ಚಿಂತಕಿ ಮೀನಾಕ್ಷಿ ಬಾಳಿ ಹಾಗೂ ಕೆ. ನೀಲಾ ಮೊದಲು ಕಾರ್ಯಕ್ರಮದ ಕುರಿತು ಮಾತನಾಡಿ, ವಿಶ್ವಗುರು ಬಸವಣ್ಣನವರ ಭವ್ಯ ಮೂರ್ತಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿದ ಬಸವಭಕ್ತರ ಉತ್ಸಾಹ ಹಾಗೂ ಪ್ರಗತಿಪರ ವಿಚಾರಗಳನ್ನು ಸೂಕ್ಷ್ಮವಾಗಿ ನೋಡಿದಾಗ ಮುಂದಿನ ದಿನಮಾನಗಳಲ್ಲಿ ಬಸವತತ್ವಕ್ಕೆ ಉಜ್ವಲವಾದ ಭೂಮಿಕೆ ಸಿದ್ಧವಾಗಲಿದೆ ಹಾಗೂ ಬಸವತತ್ವ ಪ್ರಖರವಾಗಿ ಬೆಳೆಯಲು ಯಾವುದೇ ಅನುಮಾನವಿಲ್ಲ ಎಂಬ ಸಂದೇಶ ಸ್ಪಷ್ಟವಾಗಿ ಗೋಚರಿಸಿತು.

ಹಿಂದೂ ಸಂಘಟನೆಗಳ ಹಿಡನ್ ಅಜೆಂಡಾದ ಕುರಿತು ಭಾಗವಹಿಸಿದ ಪ್ರಮುಖರು ಬಹಿರಂಗವಾಗಿ ಕಿಡಿಕಾರಿದ್ದು ಕಂಡುಬಂದಿತು. ಬಸವಾದಿ ಶಿವಶರಣರು ಎನ್ನುವ ಪದವನ್ನು ಚಿಕ್ಕದಾಗಿ ಬಳಸಿ ಬೃಹತ್ ಹಿಂದೂ ಸಮಾವೇಶ ಎನ್ನುವ ಪದವನ್ನು ದೊಡ್ಡ ಅಕ್ಷರದಲ್ಲಿ ಬಳಸಿರುವುದು ಸಂಘಟಕರ ಉದ್ದೇಶ ಸ್ಪಷ್ಟವಾಗಿ ಬಹಿರಂಗವಾಯಿತು.

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿರುವುದು ಹಿಂದೂಪರ ಸಂಘಟನೆಯವರಿಗೆ ನುಂಗಲಾಗದ ತುತ್ತಾಗಿದೆ. ಹಾಗೂ ಬಸವ ಕಲ್ಯಾಣದಲ್ಲಿ ತಲೆ ಎತ್ತಲಿರುವ ಅನುಭವ ಮಂಟಪ ಜಗತ್ತಿಗೆ ಬಸವ ತತ್ವ ಸಾರಿದ್ದಾದರೆ ತಮಗೆ ಉಳಿಗಾಲವಿಲ್ಲ ಎಂಬ ಆತಂಕವು ಇವರಿಗಿದೆ.

ಬಸವಪರ ಸಂಘಟನೆಗಳ ಈ ಪ್ರತಿರೋಧ ಕಾರ್ಯಕ್ರಮ ಇಡೀ ನಾಡಿಗೆ ಸಮಾನತೆಯ, ಪ್ರಗತಿಯ ಚಿಂತನೆ ಕುರಿತು ಸಂದೇಶ ರವಾನಿಸಿತು. ಈ ನಾಡಿನಲ್ಲಿ ಜರುಗಿದ ಇತ್ತೀಚಿನ ಮರ್ಯಾದೆ ಹತ್ಯೆ ಅಂತಹ ಘಟನೆಗಳು ಕೂಡ ಚರ್ಚೆಗೆ ಬಂದವು.

ಒಟ್ಟಾರೆ, ಈ ಕಾರ್ಯಕ್ರಮದ ಮೂಲಕ ಹಿಂದೂ ಸಮಾವೇಶದ ಹಿಂದೆ ಇರುವ ಕಾಣದ ಕೈಗಳಿಗೆ ಎಚ್ಚರಿಕೆಯ ಸಂದೇಶ ರವಾನೆಯಾಯಿತು. ಬಸವಪರ ಹಾಗೂ ಪ್ರಗತಿಪರ ಸಂಘಟನೆಗಳು ಹಿಂದುತ್ವದ ಸಂಘಟನೆಗಳ ದಾಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದವು.

ಸಮಾವೇಶದ ನಿರ್ಣಯಗಳು:

ಮುಂದಿನ ದಿನಮಾನಗಳಲ್ಲಿ ಆರ್.ಎಸ್.ಎಸ್. ಹಾಗೂ ಹಿಂದೂಪರ ಸಂಘಟನೆಗಳು ಬಸವದಿ ಶಿವಶರಣರ ಹೆಸರು ಎಲ್ಲೂ ಬಳಸಿಕೊಳ್ಳದಂತೆ ಸಮಾವೇಶ ಮಾಡತಕ್ಕದ್ದು.

ಹಿಂದೂಪರ ಸಂಘಟನೆಯವರು ಸಮಾವೇಶ ಮಾಡುವುದಾದರೆ ಬೃಹತ್ ಹಿಂದು ಸಮಾವೇಶಗಳನ್ನೇ ಮಾಡಲಿ ಬಸವಾದಿ ಶರಣರ ಹೆಸರನ್ನು ತಳಕು ಹಾಕುವಂತಿಲ್ಲ.

2027ರಲ್ಲಿ ಜರುಗಲಿರುವ ಉದ್ದೇಶಿತ ಆರೆಸ್ಸೆಸ್ ಬಸವ ಭಾರತ ಉತ್ಸವಕ್ಕೆ ಪ್ರತಿರೋಧ ಒಡ್ಡಲೇಬೇಕು.

ಬಸವಕಲ್ಯಾಣದಲ್ಲಿ ಜರಗುತ್ತಲಿರುವ ಇಂದಿನ ಹಿಂದೂ ಸಮಾವೇಶವು ಇದೇ ಕೊನೆಯಾಗಬೇಕು. ಆರ್ ಎಸ್ ಎಸ್ ಹಾಗೂ ಬಿಜೆಪಿಯವರು ಮುಂದಿನ ದಿನಮಾನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ.

ಪರಸ್ಥಿತಿ ಶಾಂತವಾಗಿತ್ತು. ಯಾವುದೇ ಭಯಭೀತಿಯ ವಾತಾವರಣ ಇರಲಿಲ್ಲ. ಹಿಂದೂ ಸಮಾವೇಶವನ್ನು ಹಣೆಯಲಿಕ್ಕೆ ಒಳ್ಳೆಯ ಅವಕಾಶ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಮಠಾಧೀಶರ ಒಕ್ಕೂಟಕ್ಕೆ ಇತ್ತು. ಸಾವಿರಾರು ಜನ ಸಂಖ್ಯೆಯಲ್ಲಿ ಸ್ವಯಂಪ್ರೇರಿತವಾಗಿ ಬಂದು ಸೇರುತ್ತಿದ್ದರು ಆ ಅವಕಾಶ ಕಳೆದುಕೊಂಡಿತು.

ಯಾವುದೇ ಕರ್ಫ್ಯು, ನಿಷೇಧಾಜ್ಞೆ ಜಾರಿಯಲ್ಲಿ ಇರಲಿಲ್ಲ. ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಪ್ರತಿರೋಧ ಯಶಸ್ವಿಯಾಗಿಯೇ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
1 Comment
  • Payment & Suitcasr ಗಿರಾಕಿಗಳ ಬಣ್ಣ ಬಯಲಾಗಿದ್ದು ಲಿಂಗಾಯತರ ಪರ ಯಾರಿದ್ದಾರೆ ಎನ್ನುವುದು ಸ್ಪಷ್ಟವಾಯಿತು. ಇದೂ ಒಂದು ರೀತಿಯಲ್ಲಿ ಲಿಂಗಾಯತರ ಕಣ್ಣು ತೆರೆಸಿದೆ. ಮೂಹ್ ಮೆ ಬಸವಾ ಬಸವಾ ಬಗಲ್ ಮೇ ಚೂರಿ ಅನ್ನೋರು ಯಾರು ಅನ್ನೋದು ಇಡೀ ಪ್ರಪಂಚಕ್ಕೆ ತಿಳಿಯಿತು.

Leave a Reply

Your email address will not be published. Required fields are marked *