ಲಿಂಗಾಯತರು ಧರ್ಮದ್ರೋಹಿಗಳಿಂದ ಎಚ್ಚರದಿಂದಿರಿ: ಶಾಂತಲಾ ಹಂಚಿನಾಳ

ಗದಗ :

ಲಿಂಗಾಯತ ಧರ್ಮವೀಗ ಸಂಕಷ್ಟದಲ್ಲಿದೆ. ಸನಾತನಿಗಳು ನಮ್ಮವರನ್ನೇ ನಮ್ಮ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಈ ಹಿಂದೆ ೧೨ನೇ ಶತಮಾನದಲ್ಲೂ ಬಸವಾದಿ ಶರಣರು ಇಂಥದ್ದೇ ಸಂಕಷ್ಟ ಅನುಭವಿಸಿದ್ದರು. ಈಗಲೂ ಅದೇ ಮಾದರಿಯಲ್ಲೇ ತಗಾದೆ ತೆಗೆಯುತ್ತಿದ್ದಾರೆ.

ಯಾವ ಬಸವಾದಿ ಶರಣರು ಅಂದು ಅಂದಿನ ಪಾರಂಪರಿಕೆ ವ್ಯವಸ್ಥೆಯ ವಿರುದ್ಧ ಬಂಡೆದ್ದು ನವಸಮಾಜ ನಿರ್ಮಾಣಗೈದಿದ್ದರೂ, ಅವರ ಸಂಸ್ಕೃತಿ, ಪರಂಪರೆ, ಆಚರಣೆ ವಿರುದ್ಧವಾಗಿ ಅದೇ ಶರಣರ ಹೆಸರಿನಲ್ಲಿ ತಮ್ಮ ಹಳೆಯ ಕಂದಾಚಾರಗಳನ್ನು ಮುಗ್ಧ ಜನರಲ್ಲಿ ಬಿತ್ತುತ್ತಿದ್ದಾರೆಂದು ಶಿಕ್ಷಕಿ ಶಾಂತಲಾ ಕೆ. ಹಂಚಿನಾಳ ಎಚ್ಚರಿಸಿದರು.

ಅವರು ಬಸವದಳದ ೧೬೯೮ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಬಸವಾದಿ ಶರಣರ ವಚನ ಸಾಹಿತ್ಯ ರಕ್ಷಣೆ ಇಂದಿನ ಅವಶ್ಯಕತೆ’ ಕುರಿತು ಉಪನ್ಯಾಸ ನೀಡುತ್ತಿದ್ದರು.

ಮುಂದುವರೆದ ಅವರು, ವೈದಿಕ ಸನಾತನಿಗಳು ಆಕ್ಟೋಪಸ್ ಇದ್ದಂತೆ. ಅವರು ಯಾವಾಗಲೂ ತಮ್ಮ ಹಿಡಿತ ಸಡಿಲು ಬಿಡಲಾರದವರು. ತಾವು ನಿರ್ಮಿಸಿದ ವ್ಯವಸ್ಥೆ ಹಾಗೇ ಇರಬೇಕು. ತುಸು ಬದಲಾವಣೆ ಕಂಡುಬಂದರೂ, ತಮ್ಮ ಹಿತಾಸಕ್ತಿಗೆ ಧಕ್ಕೆಯಾದರೂ ಸಹಿಸಲಾರರು.

ಇಂಥವರಿಂದಲೇ ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಮೇಲೆ ದೌರ್ಜನ್ಯ, ನರಮೇಧಗಳಂತಹ ಘಟನೆಗಳು ನಡೆದವು. ಇವರು ನಮ್ಮವರನ್ನೇ ನಮ್ಮ ವಿರುದ್ಧ ಎತ್ತಿಕಟ್ಟುವುದರಲ್ಲಿ ನಿಸ್ಸೀಮರು.

ಅವರ ವೈದಿಕತೆ ಕರ್ಮ ಸಿದ್ಧಾಂತ ಬೋಧಿಸುತ್ತದೆ. ಮೇಲು ವರ್ಗದವ ಮೇಲಾಗಿಯೇ ಇರಬೇಕು. ಶೂದ್ರರು ಕೆಳಮಟ್ಟದಲ್ಲಿಯೇ ಇರಬೇಕು. ದುಡಿಯುವವರು ದುಡಿಯುತ್ತಾ, ಕುಳಿತು ತಿನ್ನುವವರು ಮೆರೆಯುತ್ತಾ ಇರುವುದೇ ಅವರ ತತ್ವ.

ಆದರೆ ಬಸವಾದಿ ಶರಣರು ಕಾಯಕ ಸಿದ್ಧಾಂತ ಬೋಧಿಸುವರು. ಅವರು ದುಡಿಯುವ ಜನರು, ಶೋ಼ಷಿತರು, ಶೂದ್ರರು ಸೇರಿದಂತೆ ಸರ್ವರನ್ನು ಸಮಾನತೆಯಿಂದ ಕಂಡರು. ದೇವನಿರ್ಮಿತ ಈ ಸಮಾಜದಲ್ಲಿ ಸರ್ವರೂ ಸಮಾನರೆನ್ನುವರು.

ಈ ಹಿಂದೆ ತಮಿಳುನಾಡಿನಲ್ಲಿ ಪೆರಿಯಾರ ರಾಮಸ್ವಾಮಿ ಅವರು ಈ ಸನಾತನಿಗಳ ಮೇಲು-ಕೀಳು, ತಾರತಮ್ಯ, ಶೂದ್ರರನ್ನು ಪಶುಗಳಂತೆ ನಡೆಸಿಕೊಳ್ಳುವಿಕೆಯ ವಿರುದ್ಧ ಅಲ್ಲಿ ದ್ರಾವಿಡ ಚಳುವಳಿಯನ್ನು ಹುಟ್ಟುಹಾಕಿದರು. ಆ ಚಳುವಳಿಯ ಮೂಲಕ ತಮಿಳರಲ್ಲಿ ದ್ರಾವಿಡತ್ವ, ವೈದಿಕವಿರೋಧಿ ತತ್ವಗಳು ಮೈಗೂಡಿದವು.

ಬಸವಾದಿ ಶರಣರ ಪರಂಪರೆಯ ನಮ್ಮ ನಾಡಿನಲ್ಲಿ ಅಂತಹ ಮರು ಚಳುವಳಿ ಹುಟ್ಟಲೇ ಇಲ್ಲ. ಬಸವತತ್ವ ಮುಸುಕಿನಲ್ಲಿ ಉಳಿಯುವಂತೆ ಮಾಡುವಲ್ಲಿ ಈ ಸನಾತನಿಗಳು ಯಶಸ್ವಿಯಾದರು. ಆದರೆ ನಂತರದ ದಿನಮಾನಗಳಲ್ಲಿ ಹಲವು ಮಹಿಮರ ಪ್ರಯತ್ನದ ಪರಿಣಾಮ ವಚನ ಸಾಹಿತ್ಯ ಮತ್ತೆ ಪುನರುತ್ಥಾನಗೊಂಡಿತು.

ಆ ಮೂಲಕ ಶರಣ ಸಾಹಿತ್ಯ ಅಧ್ಯಯನಿಸುತ್ತಿರುವವರು ಹೆಚ್ಚುತ್ತಿದ್ದು, ವೈದಿಕರನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುತ್ತಿರುವುದೇ ಸದ್ಯ ನಡೆಯುತ್ತಿರುವ ಸಂಘರ್ಷದ ಮೂಲವಾಗಿದೆ. ಇದೇ ಸನಾತನಿಗಳನ್ನು ಕೆರಳಿಸಿದೆ.

ಸದ್ಯದ ದಿನಮಾನದಲ್ಲಿ ನಡೆಯುತ್ತಿರುವ ಘಟನೆಗಳು ವೈದಿಕಶಕ್ತಿಗಳ ಕುಮ್ಮಕ್ಕಿನಿಂದಲೇ ನಡೆಯುತ್ತಿವೆ ಎಂದರು. ದುರಂತವೆಂದರೆ ಬಸವಾದಿ ಶರಣರ ಕನಸಿನ ಸಾಮ್ರಾಜ್ಯ ನಾಶಪಡಿಸಿದವರೇ ಇಂದು ಅದೇ ಬಸವಾದಿ ಶರಣರ ಹೆಸರಿನಲ್ಲಿ ಅವರ ತತ್ವ, ಸಿದ್ಧಾಂತಗಳಿಗೆ ತೀರಾ ವ್ಯತಿರಿಕ್ತವಾಗುವ, ಅವಮಾನಕಾರಿಯಾಗುವ ತೆರದಲ್ಲಿ ಬೋಧಿಸುತ್ತಿದ್ದು, ಸಮಾನತೆಯ ಅವೈದಿಕ ಲಿಂಗಾಯತ ಸಮಾಜವನ್ನು ಮರು ವೈದಿಕಿಕರಣಗೊಳಿಸುವದು ಈ ಯತ್ನದ ಹಿಂದಿರುವ ಉದ್ದೇಶವಾಗಿದೆ.

ಶರಣರು ಬರೆದಂತಹ ವಚನಗಳು ಕಾಲ್ಪನಿಕವಲ್ಲ. ಅವರು ಗಾಢ ಬದುಕಿನಲ್ಲಿ ಕಂಡ ವಾಸ್ತವ ಸಂಗತಿಗಳಾಗಿವೆ. ಶರಣರು ಶ್ರೇಣಿಕೃತ ಜಾತಿವ್ಯವಸ್ಥೆ, ಅರ್ಚಕ ಸಂಸ್ಕೃತಿಯ ಮೂರ್ತಿಪೂಜೆ, ಜನರನ್ನು ಮತ್ತಷ್ಟು ಮೌಢ್ಯತೆಯಲ್ಲಿ ಕೊಂಡ್ಯೋಯ್ಯುವ ಹಲವಾರು ವೈದಿಕ ವ್ಯವಸ್ಥೆಗಳನ್ನು ಖಂಡತುಂಡವಾಗಿ ವಿರೋಧಿಸಿದರು.

ಏಕದೇವೋಪಾಸನೆಗಾಗಿಯೇ ಇಷ್ಟಲಿಂಗ ನೀಡಿದ್ದರು. ಆದರೆ ಇಂದು ನಡೆಯುತ್ತಿರುವ ವಿದ್ಯಮಾನಗಳು ಬಸವಾದಿ ಶರಣರ ಹೆಸರಿನಲ್ಲಿ ಅದೇ ಶರಣರು ವಿರೋಧಿಸಿದ ಪದ್ದತಿಗಳನ್ನು ಸಮರ್ಥಿಸುವಂತಹ ನೀಚತನ ನಡೆಯುತ್ತಿದೆ.

ಸಂಕಟದ ವಿಷಯವೆಂದರೆ ಯಾವ ಶರಣತತ್ವದ ಪರಂಪರೆಯ ಮಠವೋ, ಆ ಮಠದ ವ್ಯಕ್ತಿಯೇ ಇದರಲ್ಲಿ ಮುಂಚೂಣಿಯಲ್ಲಿದ್ದಾರೆ. ಇದನ್ನು ನಮ್ಮವರು ಎಚ್ಚರದಿಂದ ಗಮನಿಸಬೇಕೆಂದರು.

ಬಸವದಳ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಅಧ್ಯಕ್ಷತೆ ವಹಿಸಿ, ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಇಂದು ನಮ್ಮಲ್ಲಿ ನಡೆಯುತ್ತಿರುವ ಘಟನೆಗಳು ಬಸವಾಭಿಮಾನಿಗಳಲ್ಲಿ ಒಂದು ತರಹದ ಆತಂಕವನ್ನುಂಟು ಮಾಡಿವೆ. ಅಂದು ಶರಣರು ವೈದಿಕಶಾಹಿ ವ್ಯವಸ್ಥೆಯ ವಿರುದ್ಧ ಸವಾಲು ಹಾಕಿ ಮುನ್ನಡೆದವರು. ವಚನ ಸಾಹಿತ್ಯ ನಮ್ಮ ಸಂಪತ್ತು. ಅದಕ್ಕೆ ಕುಂದುಂಟಾದರೆ ನಾವು ಸಹಿಸೆವು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಅವಿರತ ಎಂದರು. ನಮ್ಮವರು ಅನ್ಯದರತ್ತ ಆಕರ್ಷಿತರಾಗುತ್ತಿದ್ದು, ಇದು ನಿಲ್ಲಬೇಕೆಂದರು.

ಶರಣಪ್ಪಗೌಡ ಪಾಟೀಲ ಸಹ ಮಾತನಾಡಿದರು. ಶರಣಗೌಡ ಅ. ಪಾಟೀಲ, ಕೆ.ಎಚ್. ಬೇಲೂರ, ನಿರ್ಮಲಾ ಗುರುಲಿಂಗನಗೌಡ ಪಾಟೀಲ ಅತಿಥಿಗಳಾಗಿದ್ದರು.

ನಿರ್ಮಲಾ ಗುರುಲಿಂಗನಗೌಡ ಪಾಟೀಲ ದಂಪತಿಗಳು ಬಸವದಳಕ್ಕೆ ತಮ್ಮ ವಿವಾಹ ವಾರ್ಷಿಕೋತ್ಸವದ ನಿಮಿತ್ಯ ದೊಡ್ಡ ವಾಲ್‌ಕ್ಲಾಕ್ ದಾಸೋಹವಾಗಿ ನೀಡಿದರು.

ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಂಗಮ್ಮಾ ಹೂಗಾರ ಪ್ರಾರ್ಥಿಸಿದರು.  ಪ್ರಕಾಶ ಅಸುಂಡಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತವನ್ನು ನಿರ್ಮಲಾ ಜಿ. ಪಾಟೀಲ ಮಾಡಿದರು. ಶರಣು ಸಮರ್ಪಣೆಯನ್ನು ಗಿರಿಜಕ್ಕ ಧರ್ಮರಡ್ಡಿ ಅವರು ನೆರವೇರಿಸಿದರು. ಪ್ರಸಾದದ ವ್ಯವಸ್ಥೆಯನ್ನು ನಿರ್ಮಲಾ ಗುರುಲಿಂಗನಗೌಡ ಅಯ್ಯನಗೌಡ ಪಾಟೀಲ ಕುಟುಂಬ ವರ್ಗದವರು ವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *