ಅಂಬೇಡ್ಕರ್ ಸಂವಿಧಾನದ ಮೂಲಕ ಬಸವಣ್ಣನವರ ಕನಸು ನನಸು: ಸುತ್ತೂರು ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಳ್ಳೇಗಾಲ

ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೂಲಕವಾಗಿ ಬಸವಣ್ಣನವರ ಕನಸುಗಳು ನನಸಾಗುತ್ತಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾನುವಾರ ಹೇಳಿದರು.

ಪಟ್ಟಣದ ಎಂ.ಜಿ.ಎಸ್.ವಿ.ಮೈದಾನದಲ್ಲಿ ಬಸವ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾತಿ, ಧರ್ಮ, ಮೇಲು– ಕೀಳು ಎಂಬ ಭಾವನೆ ಹೋಗಲಾಡಿಸಲು ಕ್ರಾಂತಿಕಾರಿ ಹೋರಾಟ ಪ್ರಾರಂಭಿಸಿದ್ದು ಬಸವಣ್ಣರವರು. ಅದೇ ರೀತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದಲ್ಲಿ ಇರುವಂತಹ ಸಾಮಾಜಿಕ ಅಸಮಾನತೆಯ ಪಿಡುಗನ್ನು ತೊಲಗಿಸಲು ಹೋರಾಡಿದರು.

ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕು ಮತ್ತು ಅಧಿಕಾರ ಕೊಟ್ಟಿದ್ದಾರೆ. ಬಸವಣ್ಣನವರ ತತ್ವ ಸಿದ್ಧಾಂತಗಳು ನಮ್ಮ ಜೀವನಕ್ಕೆ ದಾರಿದೀಪವಾಗಿವೆ. ಹಾಗಾಗಿ ಯುವ ಪೀಳಿಗೆ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಬೇಕು ಎಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಬಸವಣ್ಣನವರ ಆದರ್ಶಗಳನ್ನು ಅನುಸರಿಸಿದರೆ ಬಸವ ಜಯಂತಿ ಅರ್ಥ ಪಡೆದುಕೊಳ್ಳಲಿದೆ ಎಂದರು.

ಸಾವಿರಾರು ಬಸವ ಭಕ್ತರೊಂದಿಗೆ ಮೆರವಣಿಗೆ ಪಟ್ಟಣ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಸಾಗಿತು. ಮಂಗಳವಾದ್ಯ, ತಮಟೆ, ನಗಾರಿ, ವೀರಗಾಸೆ ಕುಣಿತ, ಮಹಿಳೆಯರ ಪೂಜಾ ಕುಣಿತ, ನಂದಿಧ್ವಜ ಕುಣಿತ ಕಲಾವಿದರೊಂದಿಗೆ ಭಕ್ತರು ಸಾಗಿದರು. ತಮಟೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಡಾ.ರಾಜ್‌ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಸಾಗಿ ಜೆಎಸ್‌ಎಸ್ ಮಹಿಳಾ ಕಾಲೇಜು ತಲುಪಿತು.

ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ 2 ಸಾವಿರ ಜನರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಜೆಎಸ್‌ಎಸ್ ಕಾಲೇಜಿನಲ್ಲಿ 8 ಸಾವಿರ ಜನರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲೆಯ ಎಲ್ಲ ತಾಲೂಕಿನ ಸಮಾಜದ ಸಂಘಟನೆಗಳ ಪದಾಧಿಕಾರಿಗಳು, ಭಕ್ತರು, ವಿವಿಧ ಕೋಮಿನ ಮುಖಂಡರು ಪಾಲ್ಗೊಂಡಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಳ್ಳೇಗಾಲ ತಾಲೂಕು ಘಟಕ, ಜಾಗತಿಕ ಲಿಂಗಾಯತ ಮಹಾಸಭಾ, ಶ್ರೀಜಗದ್ಗುರು ಪಂಚಾಚಾರ್ಯ ಸಮಾಜ, ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ, ಶ್ರಿಬಸವ ಸೇವಾ ಪತ್ತಿನ ಸಹಕಾರ ಸಂಘ, ಬಸವ ಮಹಾಮನೆ, ವೀರಶೈವ ಲಿಂಗಾಯತ ಮಹಿಳಾ ಘಟಕ, ಅಕ್ಕನ ಬಳಗ, ಕದಳಿ ವೇದಿಕೆ ವತಿಯಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ದೇವನೂರು ಶ್ರೀಗುರುಮಲ್ಲೇಶ್ವರ ದಾಸೋಹ ಮಠದ ಮಠ ಮಹಾಂತ ಸ್ವಾಮೀಜಿ, ಗುಂಡೇಗಾಲ ಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಹರಗುರು ಚರಮೂರ್ತಿಗಳು, ಶಾಸಕರಾದ ಎಂ.ಆರ್.ಮಂಜುನಾಥ್, ಎಚ್.ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕರಾದ ಆರ್.ನರೇಂದ್ರ, ಎಸ್.ಬಾಲರಾಜು, ಜಿ.ಎನ್.ನಂಜುಂಡಸ್ವಾಮಿ, ಪರಿಮಳಾ ನಾಗಪ್ಪ, ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಬೆಂಗಳೂರು ಸಿಸಿಬಿ ಎಸಿಪಿ ಮಹಾನಂದ್, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ದತ್ತೇಶ್‌ಕುಮಾರ್, ಬಿಜೆಪಿ ಮುಖಂಡರಾದ ನಿಶಾಂತ್, ಪ್ರೀತನ್ ನಾಗಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪುಟ್ಟಣ್ಣ ಹಾಗು ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳು ಇತರರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
2 Comments
  • ಈ ಭಾಗದ ಜನರಿಗೆ ವೀರಶೈವ ಸಮಾಜ , ಲಿಂಗಾಯತ ಧರ್ಮದ ಪದ್ಧತಿಗಿಂತ ಬಿನ್ನ ಇದೆ ಅಂತ ಗೊತ್ತಿಲ್ಲ, ಅಂತ ಗೊತ್ತು ಇಲ್ಲ ಅನಿಸುತ್ತದೆ

  • ಇದನ್ನೇ ಸ್ವತಃ ಸ್ವಾಮಿಗಳು ಮಹದೇಶ್ವರ ಬೆಟ್ಟದಲ್ಲಿ ರಾಜಕೀಯಮಾಡದೇ ಮಹದೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಮಹದೇಶ್ವರ ಸ್ವಾಮಿಯ ಸ್ವ ಇಚ್ಛೆಯಂತೆ ಆಚರಿಸಲು ಬಿಡಬೇಕು

Leave a Reply

Your email address will not be published. Required fields are marked *