ಮೈಸೂರು:
ವೀರಶೈವ ಲಿಂಗಾಯತ ಮಹಾಸಭೆಯ ನಗರ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಪ್ರಕಾಶ ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಕೆ.ಪಿ. ಮಾದೇಶ ಅವರು ಕುವೆಂಪು ನಗರದಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಿ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಜೆಎಸ್‌ಎಸ್ ಸಂಸ್ಥೆಯ ಆಡಳಿತಾಧಿಕಾರಿಗಳಾದ ಜಿ.ಎಲ್. ತ್ರಿಪುರಾಂತಕ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ಅಧ್ಯಕ್ಷರ ಆಯ್ಕೆಯು ಮಹಾಸಭೆಯ ಸಂಘಟನಾ ಚಟುವಟಿಕೆಗಳಿಗೆ ಹೊಸ ಚೈತನ್ಯ ಮತ್ತು ಕ್ರಿಯಾಶೀಲತೆಯನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದುಗ್ಗಟ್ಟಿ ರಾಜೇಶ ಅವರು ಮಾತನಾಡಿ, ಪ್ರಕಾಶ ಮತ್ತು ನಾನು ಬಾಲ್ಯದ ಗೆಳೆಯರು. ವಿದ್ಯಾರ್ಥಿ ದೆಸೆಯಿಂದಲೇ ಅವರು ಉತ್ತಮ ಸಂಘಟನಾ ಚಾತುರ್ಯ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ಸಮಾಜಮುಖಿ ಚಿಂತನೆ ಮತ್ತು ಸಂಘಟನಾ ಕೌಶಲ್ಯದಿಂದ ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗುವ ಗುಣ ಅವರಲ್ಲಿದೆ. ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಕೇಂದ್ರ ಸಮಿತಿ ಸದಸ್ಯರಾದ ಎಚ್.ಎಸ್. ಮಹದೇವಸ್ವಾಮಿ (ಎನ್ ರಿಚ್) ಅವರು ಮಾತನಾಡಿ, “ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಶತಮಾನದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಪ್ರತಿಷ್ಠಿತ ಸಂಸ್ಥೆಯಾಗಿದೆ. ಮಹಾಸಭೆಯ ಆಶ್ರಯದಲ್ಲಿ ಇದುವರೆಗೆ ಸುಮಾರು 24 ಅಧಿವೇಶನಗಳು ಯಶಸ್ವಿಯಾಗಿ ನಡೆದಿದ್ದು, ಪ್ರತಿಯೊಂದು ಅಧಿವೇಶನದಲ್ಲಿಯೂ ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವ ಹಾಗೂ ಅದಕ್ಕೆ ಸಂವಿಧಾನಾತ್ಮಕ ಮಾನ್ಯತೆ ದೊರಕಬೇಕೆಂಬ ಆಶಯವನ್ನು ಪ್ರತಿಪಾದಿಸಲಾಗಿದೆ.
ಸಂವಿಧಾನಾತ್ಮಕ ಮಾನ್ಯತೆ ದೊರೆಯುವುದು ಮಾತ್ರ ಬಾಕಿಯಿದೆ”ಎಂದು ತಿಳಿಸಿದರು.

ಮುಂದುವರಿದು ಅವರು, “ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರಾದ ಸಿರಸಂಗಿ ಲಿಂಗರಾಜ ದೇಸಾಯಿಯವರಿಂದ ಹಿಡಿದು ಇಲ್ಲಿಯವರೆಗೆ ಮಹಾಸಭೆಯನ್ನು ಮುನ್ನಡೆಸಿದ ಎಲ್ಲ ಅಧ್ಯಕ್ಷರು ಲಿಂಗಾಯತ ಧರ್ಮದ ವ್ಯಾಪ್ತಿಗೆ ಬರುವ ವಿವಿಧ ಉಪಪಂಗಡಗಳನ್ನು ಒಗ್ಗೂಡಿಸಿಕೊಂಡು ಸಾಗುವ ಮಹತ್ತರ ಕಾರ್ಯವನ್ನು ನಿರ್ವಹಿಸಿದ್ದಾರೆ. ನೂತನ ಅಧ್ಯಕ್ಷರಾದ ಪ್ರಕಾಶ ಅವರು ಈ ಪರಂಪರೆಯನ್ನು ಮತ್ತಷ್ಟು ಬಲಪಡಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.
ಕನ್ನಡದ ಕಂದ ಎಂದೇ ಖ್ಯಾತರಾದ ಮೂಗೂರು ನಂಜುಂಡಸ್ವಾಮಿ ಅವರು ಮಾತನಾಡಿ, “ಶರಣ ಪ್ರಕಾಶ ಅವರು ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದು, ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಗುಣ ಹೊಂದಿದ್ದಾರೆ. ಇಂತಹ ವ್ಯಕ್ತಿ ಮಹಾಸಭೆಯ ಅಧ್ಯಕ್ಷರಾಗಿರುವುದು ಸಮುದಾಯಕ್ಕೆ ಮತ್ತು ಸಮಾಜಕ್ಕೆ ಸಂತಸದ ಸಂಗತಿಯಾಗಿದೆ”ಎಂದು ಅಭಿಪ್ರಾಯಪಟ್ಟರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಕಾಶ ಅವರು, ಮೈಸೂರು ನಗರದಾದ್ಯಂತ ವಾಸಿಸುವ ಎಲ್ಲಾ ಲಿಂಗಾಯತರನ್ನು ಮಹಾಸಭೆಯ ಸದಸ್ಯರನ್ನಾಗಿಸಲು ಸದಸ್ಯತ್ವ ಆಂದೋಲನ ಹಮ್ಮಿಕೊಳ್ಳಲಾಗುವುದು. ಮುಂಬರುವ ಚುನಾವಣೆಗಳಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಂದ ಲಿಂಗಾಯತ ಅಭ್ಯರ್ಥಿಗಳು ಸ್ಪರ್ಧಿಸುವಂಥಾಗಲು ಸರ್ವರೀತಿಯಲ್ಲೂ ಶ್ರಮಿಸುವುದಾಗಿ ತಿಳಿಸಿದರು. ನಂತರ ಇದೇ ಸಂದರ್ಭದಲ್ಲಿ ಕೇಂದ್ರ ಸಮಿತಿ ಸದಸ್ಯರಾದ ಎನ್ರಿಚ್ ಮಹದೇವಸ್ವಾಮಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಬು ಪ್ರಸಾದ್, ಮೂಗೂರು ವಿಜಯ, ಕೆ.ಜಿ.ಐ.ಡಿ. ಶಿವಕುಮಾರ, ಸುಬ್ಬಣ್ಣ, ಕೆ.ಬಿ. ಜಯಣ್ಣ, ಮಾಸ್ಟರ್ ಸುರೇಶ, ಮರಳಿ ನಟೇಶ, ವೇದಮೂರ್ತಿ, ಯೋಗೀಶ, ಕೆ.ಪಿ. ಗಿರೀಶ, ಎಂ.ಸಿ.ಎಸ್. ಮಹದೇವಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾದ ಪ್ರಕಾಶ ಅವರನ್ನು ಸನ್ಮಾನಿಸಿ, ಮಹಾಸಭೆಯ ಸಂಘಟನಾ ಬಲವರ್ಧನೆ, ಸಮಾಜದ ಏಕತೆ ಹಾಗೂ ಬಸವ ತತ್ವಗಳ ಪ್ರಸಾರಕ್ಕಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಶುಭ ಹಾರೈಸಲಾಯಿತು.
