‘ಕಾಯಕ, ದಾಸೋಹ, ಇಷ್ಟಲಿಂಗ ಬಗ್ಗೆ ಜನರಲ್ಲಿ ಅರಿವು ಮೂಡಿಸಿ’

ಇಂಡಿ:

ಬಸವಣ್ಣನವರು ಹೇಳಿದ ಅದರಂತೆ ನಡೆದು ತೋರಿಸಿದ ಕಾಯಕ, ದಾಸೋಹ ಮತ್ತು ಇಷ್ಟಲಿಂಗ ಈ ಮೂರರ ಮಹತ್ವವನ್ನು ತಿಳಿದು ಪ್ರಚಾರ ಮಾಡಬೇಕು. ಜನರಿಗೆ ಜೀವನದಲ್ಲಿ ಅವನ್ನು ಅಳವಡಿಸಿಕೊಳ್ಳಲು ತಿಳಿಸಬೇಕಾಗಿದೆ ಎಂದು ಉಪನ್ಯಾಸಕ ಹಾಗೂ ಸಾಹಿತಿಗಳಾದ ಅಶೋಕ ಹಂಚಲಿ ಅವರು ಹೇಳಿದರು.

ಅವರು ಇಂಡಿ ನಗರದ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿಯ 105ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದಲ್ಲಿ ‘ಶರಣರ ವಚನಗಳ ವಿಚಾರಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು.

12ನೇ ಶತಮಾನದಲ್ಲಿ ಬಸವಣ್ಣವರ ನೇತೃತ್ವದಲ್ಲಿ ಹಲವಾರು ಶರಣರು ತಮ್ಮ ಕಾಯಕದ ಜೊತೆಗೆ ವಚನಗಳನ್ನು ರಚಿಸಿ, ಅವುಗಳನ್ನು ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡು, ಗಮನ ಸೆಳೆದಿದ್ದರು. ಬಸವಣ್ಣನವರು ತಮ್ಮ ವಚನಗಳಲ್ಲಿ ಸಮಸಮಾಜ ನಿರ್ಮಾಣ ಮಾಡುವ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಸಾಮಾನ್ಯ ಜನರ ಬಾಯಲ್ಲಿ ಶರಣರ ವಚನಗಳು ಪ್ರತಿನಿತ್ಯ ಪ್ರಸಾರವಾಗುತ್ತಿವೆ ಆದರೆ, ಉಳ್ಳವರ ಬಾಯಲ್ಲಿ ಬರುತ್ತಿಲ್ಲ. ಈ ವಚನಗಳ ಸಾರವನ್ನು ಅರಿತು ಅವರು ಅಳವಡಿಸಿಕೊಳ್ಳಲು ಪ್ರಚಾರ ಮಾಡಬೇಕಾಗಿದೆ ಎಂದರು.

ಬಸವಣ್ಣನವರ ಹಾಗೂ ಅವರ ಸಮಕಾಲಿನ ಶರಣರ ಪ್ರಾಮಾಣಿಕ ಚಿಂತನೆಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಇಂದಿನ ಯುವಕರಲ್ಲಿ ಒಳ್ಳೆಯದನ್ನು ನೋಡುವ ಮನಸ್ಸಿಲ್ಲ. ಕೆಟ್ಟದ್ದನ್ನು ನೋಡುವ ಮನಸ್ಸು ಹೆಚ್ಚಾಗುತ್ತಿರುವುದು ವಿಷಾದನೀಯ.

ನಾವು ದೊಡ್ಡವರೆಂದೆನಿಸಿಕೊಳ್ಳಬೇಕಾದರೆ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಶರಣರ ಚಿಂತನೆಗಳನ್ನು ಸತ್ಯಶುದ್ಧ ಮನಸ್ಸಿನಿಂದ ಆಚರಣೆಯಲ್ಲಿ ತರಬೇಕೆಂದು ವಿನಂತಿಸಿದರು.

ಭಾರತ ದೇಶವು ಹಿಂದೊಂದು ಕಾಲದಲ್ಲಿ ಆಧ್ಯಾತ್ಮಿಕ ಲೋಕದ ನೆಲೆವೀಡಾಗಿತ್ತು. ಇಲ್ಲಿ ಹಲವಾರು ಶರಣರು, ಸಂತರು, ಧಾರ್ಮಿಕ ಮುಖಂಡರು ಆಧ್ಯಾತ್ಮಿಕ ಲೋಕಕ್ಕೆ ತಮ್ಮದೇ ಆದ ಕಾಣಿಕೆಯನ್ನು ಸಲ್ಲಿಸಿ, ತಮ್ಮ ಹೆಸರನ್ನು ಈ ನಾಡಿನಲ್ಲಿ ಅಜರಾಮರವಾಗಿ ಉಳಿಯುವಂತೆ ಮಾಡಿ ಹೋಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾಗಿ ಬಡ್ತಿ ಪಡೆದು ನಿವೃತ್ತಿ ಹೊಂದಿದ ಹಿರೇಬೇವನೂರ ಗ್ರಾಮದ ಆರ್.ವಿ. ಪಾಟೀಲ ಹಾಗೂ ಕೆ.ಜಿ. ನಾಟೀಕಾರ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ. ಅಭಿನವ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ವೇದಿಕೆ ಮೇಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ. ಎಸ್. ವಾಲಿ, ಪ್ರಾಯೋಜಕತ್ವ ವಹಿಸಿಕೊಂಡಿದ್ದ ಶರಣಪ್ಪ ಅಪ್ಪಾಸಾಹೇಬ ಲಬ್ಬಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸತ್ಸಂಗ ಸಮಿತಿ ಅಧ್ಯಕ್ಷ ಪ್ರೊ. ಐ.ಬಿ. ಸುರಪುರ, ಪ್ರೊ. ಎಂ.ಜೆ. ಪಾಟೀಲ, ಪ್ರೊ. ಎ.ಎಸ್. ಗಾಣಿಗೇರ, ಸಿ.ಎಂ. ಉಪ್ಪಿನ, ಎಸ್.ವಿ. ಹೂಗಾರ, ಎಸ್. ಎಸ್. ಈರನಕೇರಿ, ಬಿ.ಎಸ್. ಪಾಟೀಲ, ಎಚ್.ಎಸ್. ಎಳೆಗಾಂವ, ಎಂ.ಎನ್. ಬುರುಕುಲೆ, ಎನ್.ಎಲ್. ಹಚಡದ, ಎಸ್ ಸಿ ಗಿಡಗಂಟಿ, ಎಸ್.ಎಸ್. ಅಂದೇವಾಡಿ, ಎನ್. ಟಿ. ಸಂಗಾ, ಜಯಶ್ರೀ ಪತ್ತಾರ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *