ಬೆಳಗಾವಿ:
ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ (ಡೀಮ್ಡ್ ವಿಶ್ವವಿದ್ಯಾಲಯ)ಯ ‘ಕನ್ನಡ ಬಳಗ’ ಹಾಗೂ ‘ಕೆ.ಎಲ್.ಇ. ಸಂಗೀತ ಮಹಾವಿದ್ಯಾಲಯ’ದ ಸಂಯುಕ್ತ ಆಶ್ರಯದಲ್ಲಿ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿರುವ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ “ವಚನೋತ್ಸವ-2026” ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಅದ್ಧೂರಿಯಾಗಿ ನೆರವೇರಿತು.

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯದ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಬಸವತತ್ವದ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತರಿಸುವ ಉದ್ಧೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಕೆ.ಎಲ್.ಇ. ವಿಶ್ವವಿದ್ಯಾಲಯ ಹಾಗೂ ಕೆ.ಎಲ್.ಇ. ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ 1000ಕ್ಕೂ ಅಧಿಕ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಒಂದೇ ವೇದಿಕೆಯಲ್ಲಿ ಸೇರಿ ಬಸವಣ್ಣನವರ ಆಯ್ದ 35 ವಚನಗಳನ್ನು ಸಾಮೂಹಿಕವಾಗಿ ಗಾಯನ ಮಾಡುವ ಮೂಲಕ ವಚನ ಸಾಹಿತ್ಯಕ್ಕೆ ವಿಶಿಷ್ಟ ಗೌರವ ಸಲ್ಲಿಸಿದರು.

ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ್ದ ಚಿಕ್ಕಮಗಳೂರು ಬಸವತತ್ವ ಪೀಠ ಹಾಗೂ ಶಿವಮೊಗ್ಗ ಬಸವ ಕೇಂದ್ರದ ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರು, ಬಸವಣ್ಣನವರ ವಚನಗಳು ಕೇವಲ ಸಾಹಿತ್ಯವಲ್ಲ, ಬದುಕಿನ ದಾರಿದೀಪಗಳಾಗಿವೆ ಎಂದು ಹೇಳಿದರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ವಿಶ್ವದ ಮೊದಲ ಪ್ರಜಾಪ್ರಭುತ್ವ ಚಿಂತನಾ ವೇದಿಕೆಯಾಗಿದ್ದು, ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪ್ರತಿಪಾದಿಸಿತು ಎಂದು ಅವರು ಅಭಿಪ್ರಾಯಪಟ್ಟರು. ಮೌಲ್ಯಗಳು ನಶಿಸುತ್ತಿರುವ ಈ ದಿನಮಾನದಲ್ಲಿ, ಇಂತಹ ಕಾರ್ಯಕ್ರಮಗಳು ಆಶಾಕಿರಣಗಳಾಗಿವೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆ.ಎಲ್.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಬಸವಣ್ಣನವರ ವಚನಗಳು ಸಮಾಜದಲ್ಲಿ ಸಮಾನತೆ, ಕಾಯಕ, ದಾಸೋಹ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂದರು.

ಇಂದಿನ ಯುವಜನತೆ ವಚನ ಸಾಹಿತ್ಯವನ್ನು ಅರಿತು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಸಾವಿರಾರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಒಟ್ಟಾಗಿ ವಚನ ಗಾಯನದಲ್ಲಿ ಭಾಗವಹಿಸಿರುವುದು ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಕೆ.ಎಲ್.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಡಾ. ವಿ. ಎಂ. ಪಟ್ಟಣಶೆಟ್ಟಿ ಅವರು ಮಾತನಾಡಿ, ವಚನ ಸಾಹಿತ್ಯವು ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಬಲಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಬಳಗದ ಗೌರವಾಧ್ಯಕ್ಷರು ಹಾಗೂ ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಾಜೇಶ್ ಪವಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಸಾಮೂಹಿಕ ವಚನ ಗಾಯನವು ನೆರೆದಿದ್ದ ಸಾವಿರಾರು ಜನರ ಮನಸ್ಸನ್ನು ಸ್ಪರ್ಶಿಸಿತು. ಕೆ.ಎಲ್.ಇ. ಸಂಗೀತ ಮಹಾವಿದ್ಯಾಲಯದ ಮಾರ್ಗದರ್ಶನದಲ್ಲಿ ಹಲವು ತಿಂಗಳುಗಳ ಕಾಲ ತರಬೇತಿ ಪಡೆದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಅತ್ಯಂತ ಶ್ರದ್ಧೆಯಿಂದ ವಚನಗಳನ್ನು ಪ್ರಸ್ತುತಪಡಿಸಿದರು. ವಚನ ಗಾಯನದ ಸಂದರ್ಭದಲ್ಲಿ ಇಡೀ ಆವರಣ ಬಸವತತ್ವದ ಸಂದೇಶಗಳಿಂದ ಮೊಳಗಿದ್ದು, ವಿಶಿಷ್ಟ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಾಣಗೊಂಡಿತು.

ಕನ್ನಡ ಬಳಗದ ಕಾರ್ಯಾಧ್ಯಕ್ಷರಾದ ಡಾ. ಅವಿನಾಶ್ ಕವಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಪ್ರಸ್ತುತ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರವಿದೆ ಎಂದು ತಿಳಿಸುತ್ತಾ, ವಚನ ಸಾಹಿತ್ಯದ ಉಳಿವಿಗಾಗಿ ಪ್ರಾಣಾರ್ಪಣೆ ಮಾಡಿದ ಶರಣ-ಶರಣೆಯರನ್ನು, ವಚನಗಳಿಗಾಗಿ ತಮ್ಮ ಇಡೀ ಜೀವನವನನ್ನು ಸವೆಸಿದ ಡಾ. ಫ.ಗು. ಹಳಕಟ್ಟಿ ಅವರನ್ನು ಸ್ಮರಿಸಿದರು.
ಡಾ. ನೇತ್ರಾವತಿ ಕವಿ ಹಾಗೂ ಅನುಪಮಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಸುನಿತಾ ಪಾಟೀಲ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಕೆ.ಎಲ್.ಇ. ವಿಶ್ವವಿದ್ಯಾಲಯ ಹಾಗೂ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಅಧ್ಯಾಪಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಬಸವಾಭಿಮಾನಿಗಳು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಕನ್ನಡ ಬಳಗದ ಪದಾಧಿಕಾರಿಗಳು, ಕೆ.ಎಲ್.ಇ. ಸಂಗೀತ ಮಹಾವಿದ್ಯಾಲಯದ ಶಿಕ್ಷಕರು, ಸಂಯೋಜಕರು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರನ್ನು ಗಣ್ಯರು ಅಭಿನಂದಿಸಿದರು.

ಶರಣು ಶರಣು ಕೆ. ಎಲ್. ಈ ಬಾಲ ಬಸವ ಬಳಗದ ಬಲ ಬಾಳಬೇಕು ಲೋಕ ಕಲ್ಯಾಣ ಕಾರ್ಯದಲ್ಲಿ ತೊಡಗಿಸಿ ಬೆಳಗಲಿ 💐ಧನ್ಯವಾದಗಳು 💐👏🏻👏🏻
ಎಲ್ಲರಿಗೂ ಶರಣು ಶರಣಾರ್ಥಿಗಳು 🙏
ಈ ಕಾರ್ಯಕ್ರಮದ ಬಗ್ಗೆ ತಿಳಿದು ತುಂಬ ಹೆಮ್ಮೆ ಪಡುತ್ತಿದ್ದೇನೆ. ತುಂಬಾನೇ ಖುಷಿ ಆಯ್ತು. KlE ಸಂಸ್ಥೆ ಬಗ್ಗೆ ತುಂಬಾ ಹೆಮ್ಮೆ ಪಡುತ್ತಿದ್ದೇನೆ. ನಾವು ಬೆಳೆಯುವ ಸಮಯದಲ್ಲಿ ಹಿಂತಾ ಅವಕಾಶಗಳು ಇರಲಿಲ್ಲ. ನಾನು ಅದಕ್ಕೆ ಯಾವದೇ ಅವಕಾಶವನ್ನು ಬಸವಣ್ಣನ ಬಗ್ಗೆ ತಿಳಿದು ಕೊಳ್ಳುವುದನ್ನು ತಪಿಸಲ್ಲ.