ಬೀದರ:
ಕನ್ನೇರಿ ಸ್ವಾಮಿಯವರ ನೇತೃತ್ವದ ಬಸವಕಲ್ಯಾಣ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನಿರಾಕರಿಸಿ ತಾಲೂಕು ದಂಡಾಧಿಕಾರಿ/ ತಹಶೀಲ್ದಾರರು ಆದೇಶ ಹೊರಡಿಸಿದ್ದಕ್ಕೆ ಶನಿವಾರ ಅಂಬೇಡ್ಕರ ವೃತ್ತ ಹತ್ತಿರ ವಿಜಯೋತ್ಸವ ಆಚರಿಸಲಾಯಿತು.
ಸಮಾವೇಶ ವಿರೋಧ ಬೀದರ ಜಿಲ್ಲೆಯ ಮತ್ತು ನಾಡಿನ ಹಲವಾರು ಬಸವಪರ, ಲಿಂಗಾಯತ ಸಮುದಾಯ ಮತ್ತು ದಲಿತಪರ ಸಂಘಟನೆಗಳು, ಪೂಜ್ಯ ಮಠಾಧೀಶರು ಮತ್ತು ಬಸವ ಅನುಯಾಯಿಗಳು ಪ್ರತಿಭಟನೆ ವ್ಯಕ್ತಪಡಿಸಿದರು.
ಕನ್ನೇರಿ ಸ್ವಾಮೀಜಿ ಬಸವಾದಿ ಶರಣರ ಅವಹೇಳನ ಮಾಡುವುದು, ಬಸವಾದಿ ಶರಣರ ವಚನಗಳನ್ನು ತಿರುಚಿ ಹೇಳುವ ಮುಖಾಂತರ ಸಮಾಜದಲ್ಲಿ ಪ್ರಕ್ಷುಬ್ಧ ವಾತವರಣ ನಿರ್ಮಾಣ ಮಾಡುತ್ತಿದ್ದು, ಕೋಮು ಗಲಭೆಗಳು ಸಂಭವಿಸುವ ಆತಂಕವನ್ನು ಎಲ್ಲರೂ ವ್ಯಕ್ತಪಡಿಸಿದ್ದರು.
ಈಗಾಗಲೇ ನಾವು ಮತ್ತು ಹಲವಾರು ಯುವಕರು ಬೆಂಗಳೂರಲ್ಲಿ ರಾಜ್ಯದ ಮಾನ್ಯ ಗೃಹ ಸಚಿವರಾದ ಪ್ರಿಯಾಂಕ ಖರ್ಗೆ, ಮತ್ತು ಮಾನ್ಯ ಈಶ್ವರ ಖಂಡ್ರೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ ಸಚಿವರು ಇವರ ಗಮನಕ್ಕೆ ತರಲಾಗಿತ್ತು.
ಸರಕಾರ ನಾಡಿನ ಸಮಸ್ಯೆಯನ್ನು ಅರಿತುಕೊಂಡು ಕರ್ನಾಟಕ ರಾಜ್ಯ ಸಾಂಸ್ಕೃತಿಕ ನಾಯಕರು, ವಿಶ್ವಗುರು ಬಸವಣ್ಣನವರ ಅವಮಾನ ಮತ್ತು ಬಸವಾದಿ ಶರಣರ ಅವಹೇಳನ ಪರಿಗಣನೆಗೆ ತೆಗೆದುಕೊಂಡಿದ್ದು ತಿಳಿದು ಬಂದಿದೆ.
ಲಿಂಗಾಯತ ಸಮುದಾಯದ ಮಠಾಧೀಶರಿಗೆ ಮತ್ತು ಬಸವಾದಿ ಶರಣರ ಅನುಯಾಯಿಗಳಿಗೆ ಹಿಂದೂ ಸಮಾವೇಶದ ವಿರೋಧ ಇಲ್ಲ, ಆದರೆ ಬಸವಾದಿ ಶರಣರ ಹೆಸರ ಮೇಲೆ ಹಿಂದೂ ಸಮಾವೇಶ ಮಾಡಲು ಹೊರಟಿದ್ದು ಅನುಚಿತ ಎಂದು ಆತಂಕ ಪಡಿಸಿ ಸಚಿವರಿಗೂ, ಜಿಲ್ಲಾಧಿಕಾರಿ, ಮತ್ತು ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಿಕೊಡಲಾಗಿತ್ತು.

ಆದರಿಂದ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡ ಕನ್ನೇರಿ ಸ್ವಾಮಿ ಬೇಕಂತಲೇ ಬಸವ ಭೂಮಿ, ಕ್ರಾಂತಿ ಭೂಮಿ ಬಸವಾದಿ ಶರಣರು ಸಮಾನತೆ ಸಾರಿದ ಬಸವಕಲ್ಯಾಣದಲ್ಲಿ ತನ್ನ ವೈಧಿಕ ಪರಂಪರೆ ಮೆರೆಯಲು, ಬಸವಾದಿ ಶರಣರನ್ನು ಅವಹೇಳನ ಮಾಡಲು ಬಸವಾದಿ ಶರಣರ ಹೆಸರಿನ ಮೇಲೆ ಹಿಂದೂ ಸಮಾವೇಶ ಹಮ್ಮಿಕೊಂಡಿದ್ದು, ಸಮಾಜದಲ್ಲಿ ಕೋಮು ಗಲಭೆ ಉಂಟಾಗಿ ಕಾನೂನು ಸುವ್ಯವಸ್ಥೆ ಧಕ್ಕೆ ಆಗುತ್ತದೆ ಎಂದು ಪರಿಗಣಿಸಿ, ಅನುಮತಿ ನಿರಾಕರಣೆಯ ನಿರ್ಧಾರಕ್ಕೆ ನಾವೆಲ್ಲರೂ ಸ್ವಾಗತಿಸುತ್ತೇವೆ. ಈ ನಡೆಗೆ ನಾವು ಹರ್ಷವ್ಯಕ್ತಪಡಿಸುತ್ತೇವೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರ, ಮಾನ್ಯ ಮುಖ್ಯಮಂತ್ರಿಗಳು ಡಿ.ಕೆ. ಶಿವಕುಮಾರ, ಸನ್ಮಾನ್ಯ ಸಚಿವರಾದ ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ, ಜಿಲ್ಲಾಡಳಿತ, ತಾಲೂಕು ದಂಡಾಧಿಕಾರಿ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ.
ಬೀದರ ಜಿಲ್ಲೆಯ ಮತ್ತು ನಾಡಿನ ಹಲವು ಜಿಲ್ಲೆಗಳಲ್ಲಿ ಕನ್ನೇರಿ ಸ್ವಾಮೀಜಿ ಬಸವಾದಿ ಶರಣರ ಸಮಾವೇಶಕ್ಕೆ ಆಕ್ರೋಶ ವ್ಯಕ್ತ ಮಾಡಿದ ಜಿಲ್ಲೆಯ, ನಾಡಿನ ಎಲ್ಲಾ ಪೂಜ್ಯ ಮಠಾಧೀಶರಿಗೂ, ಮಾತಾಜಿಯವರಿಗೂ, ಲಿಂಗಾಯತ ಸಮುದಾಯದ ಮುಖಂಡರಿಗೂ, ಲಿಂಗಾಯತ ಧರ್ಮದ ಮತ್ತು ಬಸವಪರ ಸಂಘಟನೆಗಳಿಗೂ, ದಲಿತ ಪರ ಮತ್ತು ಕನ್ನಡ ಪರ ಸಂಘಟನೆಗಳಿಗೆ ಧನ್ಯವಾದಗಳು ಸಲ್ಲಿಸುತ್ತೇವೆ ಎಂದು ಪೂಜ್ಯ ಡಾ. ಚೆನ್ನಬಸವಾನಂದ ಸ್ವಾಮೀಜಿ, ಪೂಜ್ಯ ಡಾ. ಸಿದ್ಧರಾಮ ಶರಣರು ಬೆಲ್ದಾಳ, ಪೂಜ್ಯ ಸತ್ಯಾದೇವಿ ಮಾತಾಜಿ, ಶ್ರೀಕಾಂತ ಸ್ವಾಮಿ, ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ ಹಾರುರಗೇರಿ ಮತ್ತಿತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
