ವಿಜಯಪುರ: ಕನ್ನೇರಿ ಸ್ವಾಮಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯಪುರ:

ಬಸವಕಲ್ಯಾಣದಲ್ಲಿ ಜೂನ್ 28ರಂದು ಆಯೋಜಿಸಲು ಉದ್ಧೇಶಿಸಿರುವ “ಬಸವಾದಿ ಶರಣರ ಹಿಂದೂ ಸಮಾವೇಶ”ಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ಬಸವಪರ ಸಂಘಟನೆಗಳ ಮುಖಂಡರು, ಕನ್ನೇರಿ ಸ್ವಾಮಿ ಅವರಿಗೆ ರಾಜ್ಯದಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಅಧ್ಯಕ್ಷ ಹಾಗೂ ಬಸವಾದಿ ಚಿಂತಕ ಬಸನಗೌಡ ಹರನಾಳ ಅವರು, ಸುಪ್ರೀಂಕೋರ್ಟ್‌ನಿಂದ ಟೀಕೆಗೆ ಒಳಗಾದ ಬಳಿಕವೂ ಕನ್ನೇರಿ ಸ್ವಾಮಿ ಬಸವಾದಿ ಶರಣರ ವಚನಗಳ ಅರ್ಥವನ್ನು ಅಪಾರ್ಥಗೊಳಿಸುತ್ತಿದ್ದು, ಲಿಂಗಾಯತ ಮಠಾಧೀಶರು, ಬಸವ ಅನುಯಾಯಿಗಳನ್ನು “ಬಸವ ತಾಲಿಬಾನಿಗಳು”ಎಂದು ಕರೆಯುವ ಮೂಲಕ ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಸವಾದಿ ಶರಣರ ಹೆಸರಿನಲ್ಲಿ “ಹಿಂದೂ ಸಮಾವೇಶ”ಆಯೋಜಿಸುವುದು ಬಸವಣ್ಣನವರ ತತ್ವ, ಸಿದ್ಧಾಂತ ಹಾಗೂ ಶರಣರ ಚಿಂತನೆಗಳಿಗೆ ವಿರುದ್ಧವಾದ ನಡೆ ಎಂದು ಅವರು ಹೇಳಿದರು. ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಿದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕನ್ನೇರಿ ಸ್ವಾಮಿ ಕಾರ್ಯಕ್ರಮಗಳಿಗೆ ಅವಕಾಶ ನೀಡದಂತೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಗಳಿಗೆ ಮನವಿ ಸಲ್ಲಿಸಲಾಗುವುದು. ಅಗತ್ಯವಿದ್ದರೆ ರಾಜ್ಯ ಪ್ರವೇಶಕ್ಕೆ ನಿರ್ಬಂಧ ಹೇರಬೇಕೆಂಬ ಬೇಡಿಕೆಯನ್ನೂ ಸರ್ಕಾರದ ಮುಂದೆ ಇಡಲಾಗುವುದು ಎಂದು ಬಸನಗೌಡ ಹರನಾಳ ತಿಳಿಸಿದರು.

ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷ ಡಾ. ರವಿಕುಮಾರ ಬಿರಾದಾರ ಮಾತನಾಡಿ, ಬಸವಣ್ಣ ಹಿಂದೂ ಧರ್ಮದ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಲಿಂಗಾಯತ ಧರ್ಮದ ಚಿಂತನೆಗಳನ್ನು ಪ್ರತಿಪಾದಿಸಿದರು. ಇಂತಹ ಸಂದರ್ಭದಲ್ಲಿ “ಬಸವಾದಿ ಶರಣರ ಹಿಂದೂ ಸಮಾವೇಶ”ಎಂಬ ಹೆಸರಿನ ಕಾರ್ಯಕ್ರಮವು ಕಲಬೆರಕೆ ಸಮಾವೇಶವಾಗಿದ್ದು, ಸಮಾಜದಲ್ಲಿ ಬೇಕಂತಲೆ ಗೊಂದಲ ಸೃಷ್ಟಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು.

ಹಿಂದೂ ಸಮಾವೇಶ ನಡೆಸಬೇಕಿದ್ದರೆ ಪ್ರತ್ಯೇಕವಾಗಿ ನಡೆಸಲಿ ಅಥವಾ ಶಿವಶರಣರ ಸಮಾವೇಶವನ್ನಾದರೂ ಪ್ರತ್ಯೇಕವಾಗಿ ಆಯೋಜಿಸಲಿ. ಎರಡನ್ನೂ ಒಟ್ಟುಗೂಡಿಸಿ ನಡೆಸುವುದು ಸರಿಯಲ್ಲ. ಅದು ಶರಣರಿಗೆ ಮಾಡುವ ಅಪಚಾರ ಎಂದು ಹೇಳಿದರು.

ಕನ್ನೇರಿ ಸ್ವಾಮಿಯನ್ನು ಬಿಜೆಪಿ ಹಾಗೂ ಸಂಘ ಪರಿವಾರದ ಶಕ್ತಿಗಳು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ ಡಾ. ಬಿರಾದಾರ, ಇಷ್ಟು ವರ್ಷಗಳ ಕಾಲ ಮೌನವಾಗಿದ್ದ ಸ್ವಾಮಿ ಈಗ ಏಕಾಏಕಿ ಬಸವಣ್ಣ, ಲಿಂಗಾಯತ ಮತ್ತು ಶರಣರ ವಿಚಾರಗಳನ್ನು ಮಾತನಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದರ ಹಿಂದೆ ದ್ವೇಷದ ರಾಜಕೀಯ ಅಡಗಿದೆ ಎಂದು ಹೇಳಿದರು.

ಕನ್ನೇರಿ ಮಠದಲ್ಲಿ ಬಸವ ಜಯಂತಿಯನ್ನು ಆಚರಿಸಿಲ್ಲ, ಬಸವಣ್ಣನ ಚಿತ್ರವನ್ನೂ ಪ್ರಮುಖವಾಗಿ ಪ್ರತಿಷ್ಠಾಪಿಸಿಲ್ಲ. ಆದರೂ ಈಗ ಬಸವಣ್ಣನ ಹೆಸರಿನಲ್ಲಿ ಸಮಾವೇಶ ನಡೆಸುತ್ತಿರುವುದು ಖಂಡನೀಯ ಎಂದು ಮುಖಂಡರು ಆರೋಪಿಸಿದರು.

“ಶರಣರು ಹಿಂದೂಗಳೇ ಆಗಿದ್ದರೆ ಕೊಲೆ ಮಾಡಿದವರು ಯಾರು?”

ಬಸವಣ್ಣನ ಚಿಂತನೆ ಇಂದು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಬಸವಣ್ಣ ಹಿಂದೂ ಧರ್ಮದ ಜಾತಿ ಆಧಾರಿತ ವ್ಯವಸ್ಥೆಯನ್ನು ತಿರಸ್ಕರಿಸಿ ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸಿದರು.

ಬಸವಣ್ಣ ಹಿಂದೂ ಧರ್ಮವನ್ನೇ ಪ್ರತಿಪಾದಿಸಿದ್ದರೆ ಶರಣರ ಲಕ್ಷಾಂತರ ವಚನಗಳನ್ನು ಸುಟ್ಟದ್ದು ಯಾಕೆ? ನೂರಾರು ಶರಣರನ್ನು ಹತ್ಯೆ ಮಾಡಿದವರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಡಾ. ರವಿಕುಮಾರ ಬಿರಾದಾರ ಪ್ರಶ್ನಿಸಿದರು.

ಕನ್ನೇರಿ ಸ್ವಾಮಿ ಬಸವಾದಿ ಶರಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಭುಗೌಡ ಪಾಟೀಲ (ಬಿರಾದಾರ), ಚೆನ್ನು ಕಟ್ಟಿಮನಿ, ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *